ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇರವಾಗಿ ಕೈಸುಟ್ಟುಕೊಂಡ ಡಿಟಿಎಚ್ ಕಂಪನಿಗಳು

By Staff
|
Google Oneindia Kannada News

ನವದೆಹಲಿ, ಏ.9: ಭಾರತದಲ್ಲಿ ಡಿಟಿಎಚ್ ಸೇವೆ ಒದಗಿಸುತ್ತಿರುವಡಿಷ್ ಟಿವಿ ಮತ್ತು ಟಾಟಾ ಸ್ಕೈ ಕಂಪನಿಗಳು 2007-08ರ ಕೊನೆಗೆ 1,400ಕೋಟಿ ರೂ.ಗಳ ನಷ್ಟ ಅನುಭವಿಸಲಿವೆ ಎಂದು ಅಂದಾಜಿಸಲಾಗಿದೆ. ದೇಶದಾದ್ಯಂತ ಒಟ್ಟಾರೆಯಾಗಿ 50 ಲಕ್ಷ ಗ್ರಾಹಕರ ಮನೆಗೆ ನೇರವಾಗಿ ದಾಂಗುಡಿ ಇಟ್ಟ ಈ ಎರಡು ಕಂಪನಿಗಳು ಮಾರುಕಟ್ಟೆ ವೃದ್ಧಿಸಿಕೊಳ್ಳಲು ರಿಯಾಯಿತಿ ದರದಲ್ಲಿ ಸೆಟ್‌ಟಾಪ್ ಬಾಕ್ಸ್‌ಗಳನ್ನು ಮಾರಿ ಸಂಕಷ್ಟಕ್ಕೆ ಸಿಲುಕಿವೆ.

ಡಿಟಿಎಚ್ ಉದ್ಯಮದ ಮೂಲಗಳ ಪ್ರಕಾರ, ಅತಿದೊಡ್ಡ ಡಿಟಿಎಚ್ ಕಂಪನಿ ಡಿಷ್ ಟಿವಿ 300ರಿಂದ 350 ಕೋಟಿ ರೂ. ಹಾಗೂ ಟಾಟಾ ಸ್ಕೈ 1,100 ಕೋಟಿ ರೂ.ಗಳಿಗೂ ಅಧಿಕ ನಷ್ಟ ಅನುಭವಿಸಿವೆ. ಟಾಟಾ ಸ್ಕೈ ಈ ಪಾಟಿ ನಷ್ಟ ಅನುಭವಿಸಿರುವುದರಿಂದ ಅದರ ಮುಂದಿನ ಯೋಜನೆಗಳ ಕುರಿತು ತುಟಿ ಪಿಟಕ್ಕೆನ್ನುತ್ತಿಲ್ಲ. ಸಾಲದಕ್ಕೆ ಈ ವರ್ಷ ನವೀನ ತಂತ್ರಜ್ಞಾನದೊಂದಿಗೆ ರಿಲಯನ್ಸ್‌ನ ಬಿಗ್ ಟಿವಿ(ರಿಲಯನ್ಸ್ ADAG), ಭಾರತಿ ಮತ್ತು ಸನ್ ಡೈರೆಕ್ಟ್ ಕಂಪನಿಗಳು ಡಿಟಿಎಚ್ ಸೇವಾ ಕ್ಷೇತ್ರಕ್ಕೆ ಲಗ್ಗೆ ಹಾಕಲಿವೆ. ಇವು ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುವ ಭರವಸೆಯನ್ನು ಗ್ರಾಹಕರಿಗೆ ಕೊಟ್ಟಿದೆ.

ಪ್ರಸ್ತುತ ಡಿಟಿಎಚ್ ಕಂಪನಿಗಳು ಪ್ರತಿಯೊಬ್ಬ ಹೊಸ ಗ್ರಾಹಕನನ್ನು ಪಡೆಯಲು 1,600ರಿಂದ 2,300 ರೂ.ಗಳ ನಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿವೆ. ಸಾಲದಕ್ಕೆ ಎಂಪಿಇಜಿ2 ಸೆಟ್ ಟಾಪ್ ಬಾಕ್ಸ್, ಇತರೆ ಹಾರ್ಡ್‌ವೇರ್ ಮತ್ತು ಸ್ಥಾಪನೆ ವೆಚ್ಚಗಳ ರೂಪದಲ್ಲಿ ಮತ್ತಷ್ಟು ಹಣ ಕೈಜಾರುತ್ತಿದೆ.

ಡಿಟಿಎಚ್ ಮಾರುಕಟ್ಟೆಗೆ ಅಡಿಯಿಡುತ್ತಿರುವ ಹೊಸ ಕಂಪನಿಗಳು ಎಂಪಿಇಜಿ 4 ಸೆಟ್ ಟಾಪ್ ಬಾಕ್ಸ್‌, ಜೊತೆಗೆ ಗ್ರಾಹಕರಿಗೆ ಹಲವಾರು ಆಮಿಷಗಳನ್ನು ಒಡ್ಡಿ ಬುಟ್ಟಿಗೆ ಹಾಕಿಕೊಳ್ಳುತ್ತಿವೆ. ಈ ಬೆಳವಣಿಗೆಯಿಂದ ಟಾಟಾ ಸ್ಕೈ ಮತ್ತು ಡಿಷ್ ಟಿವಿಗಳು ಹೊಸ ಗ್ರಾಹಕರನ್ನು ಪಡೆಯಲು ಶೇ.30ರಷ್ಟ ಹೆಚ್ಚಿನ ನಷ್ಟ ಅನುಭವಿಸಲಿವೆ. ಹಳೆ ಸೆಟ್ ಟಾಪ್ ಬಾಕ್ಸ್‌ಗಳ ಜಾಗದಲ್ಲಿ ನವೀನ ತಂತ್ರಜ್ಞಾನದ ಹೊಸ ಸೆಟ್‌ಟಾಪ್ ಬಾಕ್ಸ್‌ಗಳನ್ನು ತರಲು ಮತ್ತಷ್ಟು ಹಣ ಕೈ ತಪ್ಪಲಿದೆ.ಗ್ರಾಹಕರಿಗೆ ಹೊಸ ತಂತ್ರಜ್ಞಾನ ಒದಗಿಸಬೇಕೆಂದರೆ ಟಾಟಾ ಸ್ಕೈ ಮತ್ತು ಡಿಷ್ ಟಿವಿಗಳ ಬುಡ ಅಡಿ ಮೇಲಾಗುವುದರಲ್ಲಿ ಅನುಮಾನವಿಲ್ಲ.

ಹೆಚ್ಚು ಹೆಚ್ಚು ಡಿಟಿಎಚ್ ಕಂಪನಿಗಳು ಮಾರುಕಟ್ಟೆಗೆ ಬಂದಷ್ಟು ಮತ್ತಷ್ಟು ಉತ್ತಮ ಸೇವೆಗಳು ಕಡಿಮೆ ಖರ್ಚಿನಲ್ಲಿ ಲಭಿಸಲಿವೆ ಎಂಬುದು ಗ್ರಾಹಕರ ಲೆಕ್ಕಾಚಾರ.ಆದರೆ ಕಂಪನಿಗಳ ಲೆಕ್ಕಾಚಾರವೇ ಬೇರೆ, ಕಡಿಮೆ ವೆಚ್ಚದಲ್ಲಿ ಉತ್ತಮ ಡಿಟಿಎಚ್ ಸೇವೆಗಳನ್ನು ಒದಗಿಸಬೇಕಾದರೆ ಹೊಸ ಕಂಪನಿಗಳ ಗಲ್ಲಾಪೆಟ್ಟಿಗೆ ಬರಿದು ಮಾಡಬೇಕಾಗುತ್ತದೆ. ಈ ಆರ್ಥಿಕ ವರ್ಷದ ಕೊನೆಗೆ 10 ದಶಲಕ್ಷ ಗ್ರಾಹಕರಿಗೆ ಸೇವೆ ಒದಗಿಸಬೇಕೆಂದು ಡಿಟಿಎಚ್ ಉದ್ಯಮ ನಿರ್ಧರಿಸಿದೆ. ಆದರೆ ಈ ದಾಖಲೆ ಸಂಖ್ಯೆಯನ್ನು ಮುಟ್ಟಲು ಡಿಟಿಎಚ್ ಕಂಪನಿಗಳಿಗೆ ಏನಿಲ್ಲಾ ಎಂದರೂ 5ರಿಂದ 6 ವರ್ಷಗಳ ಸಮಯ ಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ.

ಡಿಟಿಎಚ್ ಸೇವೆ ಒದಗಿಸಲು ಇಷ್ಟೆಲ್ಲಾ ನಷ್ಟದ ಬಾಬತ್ತಿದ್ದರೂ ಬಿಗ್ ಟಿವಿ ಮತ್ತು ಭಾರತಿ ಕಂಪನಿಗಳು ಮೌಲ್ಯಾಧಾರಿತ ಸೇವೆಯ ಜೊತೆಗೆ ಗ್ರಾಹಕರ ಕೋರಿಕೆಯ ಮೇರೆಗೆ ಚಲನಚಿತ್ರ, ಕ್ರೀಡೆಗಳು, ಅಂತರ್ಜಾಲ ಮತ್ತು ದೂರವಾಣಿ ವ್ಯವಸ್ಥೆಗಳನ್ನು ಒದಗಿಸಲು ಮುಂದಾಗುತ್ತಿರುವುದು ಡಿಟಿಎಚ್ ಉದ್ಯಮದ ಹುಬ್ಬೇರಿಸುವಂತೆ ಮಾಡಿದೆ. ಹೊಸಬರನ್ನು ಹಿಂದಿಕ್ಕಿ ನಾವು ಮುನ್ನುಗ್ಗಬೇಕಾದರೆ ದಿನ ಒಂದಕ್ಕೆ 80ರಿಂದ 90 ಲಕ್ಷ ರೂ.ಗಳು ಕೈಜಾರುತ್ತವೆ. ಡಿಟಿಎಚ್ ಗ್ರಾಹಕರ ಸಂಖ್ಯೆ 7ರಿಂದ 8 ದಶಲಕ್ಷ ತಲುಪಿದರೆ ನಷ್ಟದ ಪ್ರಮಾಣ ಕಡಿಮೆಯಾಗಲಿದೆ ಎಂಬ ಅಭಿಪ್ರಾಯವನ್ನು ಡಿಶ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಜವಾಹರ್ ಗೋಲ್ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ ಟಾಟಾ ಸ್ಕೈ 20 ಲಕ್ಷ ಗ್ರಾಹಕರ ಸಂಖ್ಯೆಯನ್ನು ದಾಟಲಿದೆ. ಡಿಷ್ ಟಿವಿ ಈಗಾಗಲೇ 30 ಲಕ್ಷ ಗ್ರಾಹಕರ ಮನೆಗೆ ನೇರವಾಗಿ ಪ್ರವೇಶಿಸಿದೆ. ಒಟ್ಟಾರೆಯಾಗಿ 2008-09ರ ವೇಳೆಗೆ 80 ಲಕ್ಷ ಗ್ರಾಹಕರು ಡಿಟಿಎಚ್ ಸೇವೆ ಪಡೆಯಲಿದ್ದಾರೆ.ಡಿಟಿಎಚ್ ಮಾರುಕಟ್ಟೆಗೆ ಅಡಿಯಿಟ್ಟಿರುವ ಹೊಸ ಪ್ರತಿಸ್ಪರ್ಧಿಗಳು ಜಾಹೀರಾತು, ಹೊಸ ಸೆಟ್‌ಟಾಪ್ ಬಾಕ್ಸ್‌ಗಳಿಗಾಗಿ, ತೆರಿಗೆ, ಮಾರುಕಟ್ಟೆ ವೆಚ್ಚ ಮಣ್ಣು ಮಸಿ ಎಂದು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ ಎಂಬುದು ಡಿಟಿಎಚ್ ಉದ್ಯಮದಅಭಿಪ್ರಾಯ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X