ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಯಿಂದ ಕ್ಷಮೆ : ಕನ್ನಡಪರ ಸಂಘಟನೆಗಳ ಬಿಗಿಪಟ್ಟು

By Staff
|
Google Oneindia Kannada News

T.A. Narayana Gowdaಬೆಂಗಳೂರು, ಏ.8 : ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರನ್ನು ಅವಮಾನಿಸಿಲ್ಲ ಎಂದು ತಮಿಳು ನಟ ರಜನಿಕಾಂತ್ ನೀಡಿರುವ ಸಮಜಾಯಿಷಿಯನ್ನು ಕನ್ನಡಪರ ಸಂಘಟನೆಗಳು ಸಾರಾಸಗಟಾಗಿ ತಿರಸ್ಕರಿಸಿದ್ದು ರಜನಿ ಕನ್ನಡಿಗರನ್ನು ಬೇಷರತ್ತಾಗಿ ಕ್ಷಮೆ ಕೇಳಬೇಕೆಂದು ಪಟ್ಟುಹಿಡಿದಿವೆ.

ಈ ಕುರಿತಂತೆ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ, ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ವಾಟಾಳ್ ಪಕ್ಷದ ನಾಯಕ ವಾಟಾಳ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಬಿಜೆಪಿ ನಾಯಕ ಮುಖ್ಯಮಂತ್ರಿ ಚಂದ್ರು ಅವರು ಮಂಗಳವಾರ ನೀಡಿರುವ ಹೇಳಿಕೆಯಲ್ಲಿ ತಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ವಿಷ್ಣು, ಅಂಬಿ, ಕಾರ್ನಾಡ್ ಅಂಥವರು ಮಾತ್ರ ಕೇಳಿಕೊಂಡರೆ ಕ್ಷಮೆ ಕೇಳುವುದಾಗಿ ರಜನಿ ಹೇಳಿರುವ ಹೇಳಿಕೆಯಿಂದ ಸಂಘಟನೆಗಳು ಮತ್ತಷ್ಟು ಕೆರಳಿವೆ.

ರಜನಿಕಾಂತ್ ಅವರೊಡನೆ ಎರಡು ತಮಿಳು ಮತ್ತು ಒಂದು ಹಿಂದಿ ಚಿತ್ರ ಮಾಡಿರುವ ಅವರ ಆತ್ಮೀಯ ಸ್ನೇಹಿತರಾದ ನಟ, ನಿರ್ದೇಶಕ ದ್ವಾರಕೀಶ್ ಕೂಡ ರಜನಿಕಾಂತ್ ಅವರು ಕ್ಷಮೆ ಕೇಳಿದರೆ ಅವರ ಘನತೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.

ಕನ್ನಡಪರ ಸಂಘಟನೆಗಳ ನೇತೃತ್ವವಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು, ರಜನಿಕಾಂತ್ ಆಡಿರುವ ಮಾತುಗಳು ಹೊಗೇನಕಲ್‌ಗಾಗಿ ಹೋರಾಡುತ್ತಿರುವ ಸಂಘಟನೆಗಳನ್ನು ಮಾತ್ರವಲ್ಲ ಇಡೀ ರಾಜ್ಯದ ಕನ್ನಡಿಗರನ್ನು ಅವಮಾನಿಸಿವೆ. ಅವರು ಕ್ಷಮೆ ಕೇಳಲೇಬೇಕು. ನಂತರವಷ್ಟೇ ಅವರ ಚಿತ್ರಗಳನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಮತ್ತು ಅವರಿಗೆ ಚಿತ್ರೀಕರಣವನ್ನು ನಡೆಸಲು ಅವಕಾಶ ನೀಡುತ್ತೇವೆ. ಕ್ಷಮೆ ಕೇಳಿದ ನಂತರವಷ್ಟೇ ಅವರು ರಾಜ್ಯದಲ್ಲಿ ಕಾಲಿಡಬೇಕು ಎಂದು ಆರ್ಭಟಿಸಿದ್ದಾರೆ. ಇದೇ ಅಭಿಪ್ರಾಯವನ್ನು ವಾಟಾಳ್ ನಾಗರಾಜ್ ಪ್ರತಿಧ್ವನಿಸಿದ್ದಾರೆ.

ರಜನಿಯನ್ನು ತರಾಟೆಗೆ ತೆಗೆದುಕೊಂಡಿರುವ ಚಂಪಾ, ತಮಿಳುನಾಡಿನಲ್ಲಿ ಪ್ರತಿಭಟನೆಯಲ್ಲಿ ಅನೇಕ ನಟರು ಮಾತನಾಡಿದರು. ಆದರೆ, ರಜನಿಯ ಮಾತುಗಳು ಮಾತ್ರ ಉದ್ರೇಕಿಸುವಂತಿದ್ದವು. ಅವರು ಕರ್ನಾಟಕದ ಕನ್ನಡಿಗರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ. ಅವರೇ ಮಾಡಿದ ತಪ್ಪಿಗಾಗಿ ಅವರು ಕ್ಷಮೆ ಕೇಳಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.

ಕನ್ನಡ ಚಿತ್ರರಂಗ ನಡೆಸಿದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಾರಾ ಗೋವಿಂದು ಅವರು, ಕರ್ನಾಟಕಕ್ಕಿಂತ ತಮಿಳುನಾಡಿನಲ್ಲೇ ಹೆಚ್ಚಿನ ಹಿಂಸಾಚಾರ ನಡೆದಿದೆ. ಕನ್ನಡದವರ ಹೊಟೇಲುಗಳ ಮೇಲೆ ದಾಳಿ ನಡೆದಿದೆ, ಇಲ್ಲಿಗಿಂತ ಹೆಚ್ಚಿನ ವಾಹನಗಳನ್ನು ಸುಟ್ಟುಹಾಕಲಾಗಿದೆ. ಸ್ಪಷ್ಟೀಕರಣ ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ. ಅವರು ಕನ್ನಡಿಗರ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ.

(ಐಎಎನ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X