ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಸ್ಟಾರ್ ರಜನಿಗೆ ಸಿಇಟಿ ಪರೀಕ್ಷೆ

By Staff
|
Google Oneindia Kannada News

Its exam time for Rajaniಚೆನ್ನೈ, ಏ. 2 : ಬರುವ ಗುರುವಾರ ಏಪ್ರಿಲ್ 4 ರಂದು ತಮಿಳು ಚಿತ್ರರಂಗ ಚೆನ್ನೈನಲ್ಲಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸುತ್ತಾರಾ? ಅಥವಾ ಕುಂಟುನೆಪ ಹೇಳಿ ಮತ್ತೆ ತಪ್ಪಿಸಿಕೊಳ್ಳುತ್ತಾರಾ ? ವಿಶಾಲ ತಮಿಳುನಾಡಿನಾದ್ಯಂತ ಅತ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಪ್ರಶ್ನೆ ಇದು.

ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಮತ್ತು ತಮಿಳು ಚಿತ್ರೋದ್ಯಮದ ವ್ಯವಹಾರಗಳ ಅವಿಭಾಜ್ಯ ಅಂಗವೇ ಆಗಿರುವ ರಜನಿಯ ಅಸಲಿ ಒಲವು ನಿಲವುಗಳೇನು ಎಂಬ ಬಗ್ಗೆ ಕೊಡಂಬಾಕಂನಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣ, ರಜನಿ ತಮಿಳು ತೆರೆಯ ದೊರೆಯಾಗಿದ್ದರೂ ಕೂಡ ಅಂತರಂಗದಲ್ಲಿ ಅವರು ಕರ್ನಾಟಕದ ಪಕ್ಷಪಾತಿ ಎಂಬ ಆರೋಪ ಅವರ ಮೇಲಿದೆ.

ಚಿತ್ರರಂಗದ ಪ್ರತಿಯೊಬ್ಬರೂ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ನಿರ್ಮಾಪಕರ ಸಂಘ ಕರೆಕೊಟ್ಟದ್ದು ನಿಜ. ಆದರೆ, ರಜನಿಕಾಂತ್ ಭಾಗವಹಿಸಲೇಬೇಕು ಎಂದು ಕಟ್ಟಪ್ಪಣೆ ಹೊರಡಿಸಿರುವುದು ಸುಪರ್ ಸ್ಟಾರ್ ನ ನಾಡಪ್ರೇಮವನ್ನು ಪರೀಕ್ಷೆಗೆ ಒಡ್ಡುವುದರ ಚಿಹ್ನೆಯಾಗಿದೆ. ರಜನಿ ಅಷ್ಟೇ ಅಲ್ಲದೆ, ತಮಿಳು ಚಿತ್ರರಂಗದಲ್ಲಿರುವ ಇತರ ಕನ್ನಡ ಚಿತ್ರಕರ್ಮಿಗಳಾದ ನಟ ಅರ್ಜುನ್ , ನಿರ್ದೇಶಕ ಪ್ರಭುದೇವ, ಪ್ರಕಾಶ್ ರಾಜ್, ಮುರಳಿ, ರಾಜು ಸುಂದರಂ ಮತ್ತು ಅವರ ತಂದೆ ಸುಂದರಂ ಮಾಸ್ಟರ್ ಮುಂತಾದವರು ಮುಷ್ಕರದಲ್ಲಿ ತಪ್ಪದೆ ಭಾಗವಹಿಸಬೇಕೇಂದು ಆದೇಶ ಹೊರಡಿಸಲಾಗಿದೆ.

ನಡಿಗರ ಸಂಘಂ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗೆ ಹೇಳಲಾಗಿದೆ : "ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೆ ಮತ್ತು ತಮಿಳು ಜನಸಮುದಾಯಕ್ಕೆ ಆಪತ್ತು ಬಂದಿದೆ. ಇದರ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬ ತಮಿಳು ಚಿತ್ರಕರ್ಮಿಯ ಧರ್ಮ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅನಪಕೂಲವಾಗುವಂತೆ ಆ ದಿನ ( ಏಪ್ರಿಲ್ 4) ಉದ್ಯಮಕ್ಕೆ ರಜಾ ಘೋಷಿಸಲಾಗಿದೆ. ಕರ್ನಾಟಕ ಮೂಲದ ನಟರು, ನಿರ್ದೇಶಕರು ಮತ್ತೆಲ್ಲ ತಂತ್ರಜ್ಞರು ಈ ಸತ್ಯಾಗ್ರಹದಲ್ಲಿ ತಪ್ಪದೆ ಭಾಗವಹಿಸಬೇಕು. ತಪ್ಪಿಸಿಕೊಂಡಲ್ಲಿ ಮುಂದೆ ಅವರು ತಮಿಳು ಚಿತ್ರೋದ್ಯಮದಿಂದ ಅಸಹಕಾರ ಎದುರಿಸಬೇಕಾಗುತ್ತದೆ".

ತಮಿಳರು ಕನ್ನಡ ಮೂಲದ ಚಿತ್ರಕರ್ಮಿಗಳಿಗೆ, ವಿಶೇಷವಾಗಿ ರಜನಿಕಾಂತ್ ಗೆ ಈ ರೀತಿ ಬೆದರಿಕೆ ಹಾಕುವುದಕ್ಕೆ ಹಿನ್ನೆಲೆ ಇದೆ. ಕಾವೇರಿ ಜಲವಿವಾದದ ಸಮಯದಲ್ಲಿ ತಮಿಳು ಸಿನಿಮಾದವರು 2002 ಅಕ್ಟೋಬರ್ 12 ರಂದು ನೈಯ್ ವೇಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅದರಲ್ಲಿ ಎಲ್ಲ ಪ್ರಮುಖ ನಟ ನಟಿಯರು ಪಾಲ್ಗೊಂಡರೆ ರಜನಿಕಾಂತ್ ಭಾಗವಹಿಸಿರಲಿಲ್ಲ. ಆ ಮೆರವಣಿಗೆಯ ನೇತೃತ್ವವನ್ನು ನಟ ವಿಜಯಕಾಂತ್ ವಹಿಸಿದ್ದರು. ಆಗಲೇ ತಮಿಳು ಚಿತ್ರರಂಗ ರಜನಿಕಾಂತ್ ಅವರ ನಿಯತ್ತನ್ನು ಅನುಮಾನಿಸಿತ್ತು, ಪ್ರಶ್ನಿಸಿತ್ತು.

ಅದಕ್ಕೆ ರಜನಿ ಪ್ರತಿಕ್ರಿಯೆ ನೀಡಿದ್ದರು. "ದೇಶದ ಅತ್ಯಂತ ದೊಡ್ಡ ನ್ಯಾಯಾಲಯವೇ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಾಧ್ಯವಾಗದಿರುವಾಗ ನಾವು ಮೆರವಣಿಗೆ ಮಾಡಿ ಸಾಧಿಸುವುದೇನಿದೆ ?" ಎಂದು ಮರು ಪ್ರಶ್ನೆ ಹಾಕಿದ್ದರು. ಅಲ್ಲದೆ, ನದಿಗಳ ರಾಷ್ಟ್ರೀಕರಣವೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದೂ ಹೇಳಿದ್ದರು. ಅವರ ಈ ಮಾತಿಗೆ ಯಾರೂ ಮಾರುತ್ತರ ಕೊಡಲಾಗದೆ ಸುಮ್ಮನೆ ಅಂಡೂ ಬಾಯಿ ಮುಚ್ಚಿಕೊಂಡಿದ್ದರು. ಆನಂತರ, ಕನ್ನಡಿಗರು ಮತ್ತು ತಮಿಳರ ಶಾಂತಿ ಸಹಬಾಳ್ವೆಗಾಗಿ ಪ್ರಾರ್ಥಿಸುವ ಸಲುವಾಗಿ ಅವರೊಬ್ಬರೆ ಮರೀನಾ ಬೀಚಿನಲ್ಲಿ ಒಂದು ದಿವಸದ ಉಪವಾಸ ಸತ್ಯಾಗ್ರಹ ಮಾಡಿದ್ದರು.

ರಜನಿಯವರ ಈ ನಿಲುವು ಸರಿಯೆ ತಪ್ಪೆ ಎಂದು ನಿರ್ಧರಿಸುವ ಒಂದು ಸಮೀಕ್ಷೆಯನ್ನು ಚೆನ್ನೈನ ಲೊಯೊಲಾ ಕಾಲೇಜು ನಡೆಸಿತು. ರಜನಿಯ ನಡೆ ನುಡಿಯನ್ನು ಬಹುಸಂಖ್ಯಾತ ಜನರು ಮೆಚ್ಚಿಕೊಂಡರು. ಆನಂತರ ರಜನಿಯ ಜನಪ್ರಿಯತೆಯ ಮೀಟರ್ ಮೇಲಕ್ಕೆ ಹೋಗಿದ್ದು ಇತಿಹಾಸ. ಆ ಪ್ರಕರಣ, ಈ ಸಂದರ್ಭ ಒಂದು ರೀತಿ ಎರಡನೆ ಪಿಯೂಸಿ ಪರೀಕ್ಷೆ ಇದ್ದಹಾಗೆ. ಈಗ ರಜನಿಕಾಂತ್ ಒಂದು ದಿವಸದ ಸಿಇಟಿ ಪರೀಕ್ಷೆ ಎದುರಿಸಬೇಕಾಗಿದೆ. ಏನು ಮಾಡುತ್ತಾರೆ? ಕಾದು ನೋಡುವಾ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X