ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ ಕಾಂಗ್ರೆಸ್ ಕಾರ್ಯಕರ್ತರ ಕಮರಿದ ಕನಸುಗಳು

By Staff
|
Google Oneindia Kannada News

ಬೆಂಗಳೂರು, ಮಾ.31 : ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸೌಧದ ಮೆಟ್ಟಿಲು ಹತ್ತಬೇಕೆಂದು ಕನಸು ಕಾಣುತ್ತಿದ್ದ ಬಡ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಆಶಾಗೋಪುರವನ್ನು ದುಬಾರಿ ಶುಲ್ಕ ಕುಸಿಯುವಂತೆ ಮಾಡಿದೆ.

ಚುನಾವಣಾ ಕಣಕ್ಕೆ ಧುಮುಕಲು ಪ್ರದೇಶ ಕಾಂಗ್ರೆಸ್ ಸಮಿತಿಗೆ 10 ಸಾವಿರ ರುಪಾಯಿ ಕಟ್ಟಬೇಕಾಗಿರುವುದು ಬಡತನ ರೇಖೆಗಿಂತ ಕೆಳಗಿರುವ ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರೆರಚಿದೆ. ಅಖಾಡದಲ್ಲಿ ಸೋತರೆ ಆ ಹಣವನ್ನೂ ಹಿಂತಿರುಗಿಸಲಾಗದಿರುವುದು ತುತ್ತು ಕೈಗೆ ಬಂದರೂ ಬಾಯಿಗೆ ಬರದಂಥ ಪರಿಸ್ಥಿತಿಯನ್ನು ತಂದಿಟ್ಟಿದೆ.

ಭಾನುವಾರ ತಂದಿರುವ ಈ ನಿಯಮದಿಂದಾಗಿ ರಾಜಕೀಯದಾಸೆಯ ಕನಸು ಕಮರಿದಂತೆಯೇ ಎಂದು ಅನೇಕ ಬಡ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯ ಎದಿರು ತೊಳಲಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಎಐಸಿಸಿ ವೀಕ್ಷಕ ಮತ್ತು ರಾಜ್ಯದ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌಹಾಣ್ ಮತ್ತು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿದ ಬಳಿಕೆ ಈ ನಿರ್ಧಾರಕ್ಕೆ ಕಾಂಗ್ರೆಸ್ ಉನ್ನತ ಸಮಿತಿ ಬಂದಿದೆ. ಏಪ್ರಿಲ್ ನಾಲ್ಕರೊಳಗಾಗಿ ನಿಗದಿಪಡಿಸಿದ ಶುಲ್ಕದೊಂದಿಗೆ ಅರ್ಜಿ ಕೆಪಿಸಿಸಿಗೆ ತಲುಪಬೇಕೆಂದು ಜಿಲ್ಲಾ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.

ನಾಳೆಯ ಊಟಕ್ಕೂ ತತ್ವಾರವಿರುವಂಥ ಸ್ಥಿತಿಯಿರುವಾಗ ಬಡತನ ರೇಖೆಗಿಂತ ಕೆಳಗಿರುವ ನಮ್ಮಂಥ ಕಾರ್ಮಿಕರು ಕಾಂಗ್ರೆಸ್ ಲಾಂಛನದಡಿ ಚುನಾವಣೆಗೆ ಸ್ಪರ್ಧಿಸುವುದಾದರೂ ಹೇಗೆ ಎಂದು ಕಲಬುರ್ಗಿ ಜಿಲ್ಲೆಯ ಭೀಮಪ್ಪ ದೊಡ್ಡಮನಿ ತಮ್ಮ ಅಳಲನ್ನು ತೋಡಿಕೊಂಡರು. ಪೂರ್ವಜರ ಕಾಲದಿಂದಲೂ ಕಾಂಗ್ರೆಸ್ಸನ್ನು ಬೆಂಬಲಿಸಿಕೊಂಡು ಬಂದಂಥವರು ನಾವು. ಇನ್ನು ಮುಂದೆ ಮತದಾರರಾಗಿ ಮಾತ್ರ ತೃಪ್ತಿಪಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ, ಈ ಶುಲ್ಕವನ್ನು 15 ಸಾವಿರ ರು.ದಿಂದ 10 ಸಾವಿರ ರು.ಗೆ ಇಳಿಸಲಾಗಿದೆ ಎಂದು ಖರ್ಗೆ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಜನಾರ್ಧನ ಪೂಜಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಶುಲ್ಕವನ್ನು ಸಾಮಾನ್ಯರಿಗೆ 15 ಸಾವಿರ ರು. ನಿಗದಿಪಡಿಸಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮಹಿಳೆಯರಿಗೆ 5 ಸಾವಿರ ರು. ನಿಗದಿಪಡಿಸಲಾಗಿತ್ತು.

ಈ ಬಗೆಯ ಶುಲ್ಕವನ್ನು ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಮೇಲೆ ಹೇರಿಲ್ಲ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X