ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ಅಂತ್ಯದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಖಚಿತ

By Staff
|
Google Oneindia Kannada News

CEC N.Gopalaswamyಬೆಂಗಳೂರು, ಮಾ.20 : ರಾಜ್ಯದಲ್ಲಿ ಕ್ಷೇತ್ರ ಮರುವಿಂಗಡನಾ ಕಾರ್ಯ ಪೂರ್ಣಗೊಂಡಿದ್ದು ಶೀಘ್ರದಲ್ಲೇ ವಿಧಾನಸಭೆಗೆ ಚುನಾವಣೆ ದಿನಾಂಕ ಪ್ರಕಟಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಗುರುವಾರ ಹೇಳಿ ಎಲ್ಲ ರಾಜಕೀಯ ಪಕ್ಷಗಳಿಗೆ ಚುರುಕು ಮುಟ್ಟಿಸಿದೆ.

ಕ್ಷೇತ್ರ ಪುನರ್‌ವಿಂಗಡನೆಯಂತೆ ಮೇ ಕೊನೆಯ ವಾರದಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರದ ಮುಖ್ಯ ಚುನಾವಣಾಯುಕ್ತ ಎನ್. ಗೋಪಾಲಸ್ವಾಮಿ ಪ್ರಕಟಿಸಿದ್ದಾರೆ. ಮೇ 22ರ ನಂತರ ಮತ್ತು 28ರೊಳಗೆ ಚುನಾವಣೆ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಮೇ 28ರಂದು ರಾಷ್ಟ್ರಪತಿ ಆಡಳಿತ ಕೊನೆಗೊಳ್ಳಲಿದ್ದು ಅದರೊಳಗೆ ಚುನಾವಣೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿತ್ತು. ಆದರೆ ಮತದಾರರ ಪಟ್ಟಿಯಲ್ಲಿ ಅನೇಕ ನ್ಯೂನತೆಗಳಿವೆಯೆಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಕಾಂಗ್ರೆಸ್‌ನ ಮನವಿಯನ್ನು ಮರುಪರಿಶೀಲಿಸಿದ ಬಳಿಕ ಕೇಂದ್ರ ಆಯೋಗ ಈ ನಿರ್ಧಾರಕ್ಕೆ ಬಂದಿದೆ.

ಕ್ಷೇತ್ರ ಮರುವಿಂಗಡನೆಗೆ ಕನಿಷ್ಠ ಆರು ತಿಂಗಳು ಬೇಕಾಗಿದ್ದರಿಂದ ಅಕ್ಟೋಬರ್‌ನಲ್ಲಿ ಚುನಾವಣೆ ಘೋಷಣೆಯಾಗಬಹುದೆಂದು ನಿರೀಕ್ಷಿಸಿದ್ದ ರಾಜಕೀಯ ಪಕ್ಷಗಳಿಗೆ ಈ ಪ್ರಕಟಣೆ ಆಶ್ಚರ್ಯವನ್ನುಂಟು ಮಾಡಿದೆ. ಮುಖ್ಯ ಚುನಾವಣಾಯುಕ್ತ ರಾಮಶೇಷನ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗ ಕೂಡ ಕ್ಷೇತ್ರ ಮರುವಿಂಗಡನೆ ಮತ್ತು ಮತದಾರರ ಪರಿಷ್ಕೃತ ಪಟ್ಟಿಯನ್ನು ಹಗಲಿರುಳು ಕೆಲಸ ಮಾಡಿ ಅಂತಿಮ ಹಂತಕ್ಕೆ ತಂದು ಮುಟ್ಟಿಸಿದೆ.

ಬಿಜೆಪಿಯಲ್ಲಿ ಹರ್ಷದ ವಾತಾವರಣ : ಮೇನಲ್ಲಿಯೇ ಚುನಾವಣೆ ನಡೆಯುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಮೇ ಅಂತ್ಯದ ಚುನಾವಣೆ ಪ್ರಕಟಣೆಯಿಂದ ಹರ್ಷ ವ್ಯಕ್ತಪಡಿಸಿದೆ.

ಬಿಜೆಪಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇದು ಪಕ್ಷದ ಹೋರಾಟಕ್ಕೆ ಸಂದ ಜಯ, ಪಕ್ಷದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಬಣ್ಣಿಸಿದ್ದಾರೆ. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಕಾರಣ ಒಡ್ಡಿ ಚುನಾವಣೆ ಮುಂದೂಡಬೇಕೆಂದು ಕುಂಟುನೆಪ ಒಡ್ಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಇದರಿಂದ ಮುಖಭಂಗವಾದಂತಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಆಯೋಗದ ಪ್ರಕಟಣೆ ಸ್ವಾಗತಾರ್ಹವಾಗಿದ್ದು, ಸ್ವಸಾರ್ಥ್ಯದಿಂದ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಹೇಳಿದ್ದಾರೆ.

ಕೃಷ್ಣ ಪ್ರತಿಕ್ರಿಯೆ : ಮೂರು ದಿನಗಳ ಹಿಂದೆಯಷ್ಟೇ ಸಕ್ರಿಯ ರಾಜಕಾರಣಕ್ಕೆ ಕಾಲಿರಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಎಂ.ಕೃಷ್ಣ ಕೂಡ ಆಯೋಗದ ಪ್ರಕಟಣೆಯನ್ನು ಸ್ವಾಗತಿಸಿದ್ದಾರೆ. ಚುನಾವಣೆ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಹೆದರಿಕೆಯಿಲ್ಲ. ಆದಷ್ಟು ಬೇಗನೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ನುಡಿದರು. ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ದಿನಾಂಕ ಪ್ರಕಟಣೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಮತದಾರರ ಪಟ್ಟಿಯಲ್ಲಿರುವ 58 ಲಕ್ಷ ನಕಲಿ ಮತದಾರರನ್ನು ಕೈಬಿಡುವಂತೆ ಮನವಿ ಮಾಡಿದ್ದೆವು. ಆದರೆ, ಮೇ ಅಂತ್ಯದಲ್ಲಿಯೇ ಚುನಾವಣೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹವೇ ಎಂದಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X