ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ,ಅಮೆರಿಕ ಅಣು ಒಪ್ಪಂದಕ್ಕೆ ಮುದ್ರೆ?

By Staff
|
Google Oneindia Kannada News

AEC chief confident of clinching nuke deal with USಬೆಂಗಳೂರು, ಫೆ.19 : ನಾಗರಿಕ ಅಣು ಒಪ್ಪಂದಕ್ಕೆ ಸದ್ಯದಲ್ಲಿಯೇ ಭಾರತ ಮತ್ತು ಅಮೆರಿಕ ಅಂಕಿತ ಹಾಕಲಿವೆ ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡುತ್ತಿದ್ದ ಅವರು, ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು ಹಂತಹಂತವಾಗಿ ವ್ಯವಹರಿಸಬೇಕು. ಈ ಜಿಜ್ಞಾಸೆ ಸಮಯ ನುಂಗುತ್ತಿದ್ದರೂ ಸಹ ಈ ನಿಟ್ಟಿಲ್ಲಿ ಪರಸ್ಪರ ದೇಶಗಳು ಸಾಕಷ್ಟು ಮುಂದೆ ಕ್ರಮಿಸಿವೆ. ಆದಷ್ಟು ಬೇಗ ಒಡಂಬಡಿಕೆ ಕೈಗೂಡುವುದೆಂಬ ಆಶಾವಾದವಿದೆ ಎಂದರು.

ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯಲು ಈ ಒಪ್ಪಂದಕ್ಕೆ ಅಂಕಿತ ಹಾಕುವುದು ಅತಿ ಅವಶ್ಯವಾಗಿದೆ. ರಾಜಕೀಯ ಪಕ್ಷಗಳೂ ಇದಕ್ಕೆ ಒಕ್ಕೊರಲಿನ ಸಮ್ಮತಿ ನೀಡಿವೆ ಎಂದು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಖಗೋಳ ವಿಜ್ಞಾನಿ ಮತ್ತು ರಾಜ್ಯಸಭಾ ಸದಸ್ಯ ಡಾ.ಕೆ.ಕಸ್ತೂರಿರಂಗನ್ ನುಡಿದರು.

ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಒಪ್ಪಂದಕ್ಕೆ ಯುಪಿಎ ಸರಕಾರದ ಅಂಗಪಕ್ಷವಾಗಿರುವ ಎಡಪಕ್ಷಗಳು ಆರಂಭದಿಂದಲೂ ತಡೆಯೊಡ್ಡಿದ್ದವು. ಅದಲ್ಲದೇ, ಈ ಒಪ್ಪಂದ ಕಾರ್ಯಾಚರಣೆಗೆ ಬರಲು ಇನ್ನೂ ಮೂರು ತೊಡರುಗಳನ್ನು ದಾಟಿ ಬರಬೇಕಿದೆ. ಅವೆಂದರೆ, ಅಂತಾರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ ಜೊತೆ ಭಾರತದ ರಕ್ಷಣೆಗೆ ಸಂಬಂಧಿಸಿದಂತೆ ಒಪ್ಪಂದವಾಗಬೇಕು, 45 ರಾಷ್ಟ್ರಗಳ ಪರಮಾಣು ಪೂರೈಕೆ ಗ್ರುಪ್‌ನಿಂದ ಅನುಮತಿ ದೊರೆಯಬೇಕು ಮತ್ತು ಅಮೆರಿಕ ಕಾಂಗ್ರೆಸ್‌ನಿಂದ ಬೆಂಬಲ ದೊರೆಯಬೇಕು.

ಎಡಪಕ್ಷಗಳು ಜಿಗುಟು ವರ್ತನೆಯಿಂದ ಹಿಂದೆಸರಿದು ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯೊಡನೆ ಮಾತುಕತೆ ನಡೆಸಲು ಯುಪಿಎ ಸರಕಾರಕ್ಕೆ ಒಪ್ಪಿಗೆ ನೀಡಿರುವುದು ಗಮನಾರ್ಹ ಮತ್ತು ಅಣು ಒಪ್ಪಂದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

ಆದರೆ, ಈ ಒಪ್ಪಂದ ಕುರಿತಂತೆ ವೈಜ್ಞಾನಿಕ ವಲಯದಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿರುವ ಹಿರಿಯ ವಿಜ್ಞಾನಿ ಡಿ.ಪಿ. ಸೇನ್ ಗುಪ್ತಾ ಅವರು, ಒಪ್ಪಂದಕ್ಕಾಗಿ ಭಾರತದ ಭದ್ರತೆಯನ್ನು ಅಡವಿಡಬಾರದು ಎಂದು ಎಚ್ಚರಿಸಿದ್ದಾರೆ.

ಅಣು ಒಪ್ಪಂದ ಜಾರಿಗೆ ಬಂದರೆ ಅಮೆರಿಕದ ಅಣು ಇಂಧನ ಮತ್ತು ರಿಯಾಕ್ಟರ್‌ಗಳಲ್ಲಿ ಕಾರ್ಯನಿರ್ವಹಿಸಲು ಭಾರತಕ್ಕೆ ಪ್ರವೇಶ ದೊರೆಯಲಿದೆ. ಇದರಿಂದಾಗಿ, ಭಾರತ ಎದುರಿಸುತ್ತಿರುವ ಇಂಧನ ಕೊರತೆ ನೀಗಲಿದೆ.

(ಎಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X