ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಸರೋಜಾದೇವಿ ಪ್ರಣಯಪ್ರಸಂಗದ 'ವಿಶ್ವ'ರೂಪ

By Staff
|
Google Oneindia Kannada News

SMK and B. Sarojadevi had an affairಬೆಂಗಳೂರು, ಜ. 28 : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಎಸ್. ಎಂ. ಕೃಷ್ಣ ಮತ್ತು ಚಲನಚಿತ್ರ ಅಭಿನೇತ್ರಿ ಬಿ. ಸರೋಜಾದೇವಿ ನಡುವೆ "ಅಮರಾಮಧುರಾ ಪ್ರೇಮ, ನೀ ಬಾಬೇಗ ಚಂದಮಾಮ" ಎನ್ನುವಂಥ ಸಂಬಂಧಗಳು ಚಿಗುರೊಡೆದಿದ್ದವು. ಅವರಿಬ್ಬರ ಕೋಮಲ ಮನಸ್ಸುಗಳು ಪರಸ್ಪರ ಅನುರಾಗದ ತೆಕ್ಕೆಗೆ ಬಿದ್ದಿದ್ದವು ಎಂದು ಮಾಜಿ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ.

ಇದು ಒಂದು ಕಾಲಘಟ್ಟದ ಕಥೆ ಅಷ್ಟೆ. ಕೃಷ್ಣ ಅವರನ್ನು ಹತ್ತಿರದಿಂದ ಬಲ್ಲವನಾಗಿ ಅವರ ವೈಯಕ್ತಿಕ ಜೀವನವನ್ನು ಕಂಡವನಾಗಿ ಈ ಒಲವಿನ ಕಥೆಯ ಒಂದು ಎಲೆಯನ್ನು ತೆರೆದಿಟ್ಟಿದ್ದೇನೆ ಎನ್ನುತ್ತಾರೆ ವಿಶ್ವನಾಥ್. ವಿಶ್ವನಾಥ್ ಅವರು ರಚಿಸಿರುವ ಆತ್ಮ ಕಥನದಲ್ಲಿ ಕೃಷ್ಣ ಮತ್ತು ಸರೋಜಾದೇವಿಯವರ ಸಂಬಂಧಗಳನ್ನು ಕುರಿತಂತೆ ಅವರು ಹಲವಾರು ವಿವರಗಳನ್ನು ಬಿಚ್ಚಿಟ್ಟಿದ್ದಾರೆ.

ವಿಷ್ವನಾಥ್ ಅವರ ಆತ್ಮಕಥನ "ಹಳ್ಳಿ ಹಕ್ಕಿಯ ಹಾಡು" ಕೃತಿಯು ಇಂದು, ಸೋಮಮಾರ ಸಂಜೆ ಮೈಸೂರಿನಲ್ಲಿ ಬಿಡುಗಡೆ ಆಗುತ್ತಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಕೃತಿಯಲ್ಲಿ ಅಡಗಿರುವ ರೋಚಕ ಮಾಹಿತಿಗಳು ಈಗಾಗಲೇ ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿದೆ. ಕೃಷ್ಣ ಅವರು ತಮ್ಮ ಖಾಸಗಿ ಬದುಕಿನ ಈ ಅಂಶವನ್ನು ತಮ್ಮ ಬಳಿ ಮುದ್ದಾಂ ಹೇಳಿಕೊಂಡಿದ್ದರೆಂದೂ ವಿಶ್ವನಾಥ್ ಪುಸ್ತಕದಲ್ಲಿ ಬರೆದಿದ್ದಾರೆ. ಕೃಷ್ಣ ಅವರ ವೈಯಕ್ತಿಯ ಜೀವನವಲ್ಲದೆ, ರಾಜ್ಯದಲ್ಲಿರುವ ಮಠಗಳು, ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಬದುಕು ಕುರಿತ ಅನೇಕಾರು ಸಂಗತಿಗಳನ್ನು ಸ್ಫೋಟಿಸುವ ಅಂಶಗಳೂ ಆತ್ಮಕಥನದಲ್ಲಿ ಅಡಕವಾಗಿವೆ.

ಈ ಪುಸ್ತಕದ ಮೂಲಕ ಮುಕ್ತವಾದ ರಾಜಕೀಯ ಒಳ ಹೊರಗನ್ನು ಹೊರಗೆಡುವುದಾಗಿ ಹೆಚ್.ವಿಶ್ವನಾಥ್ ಒಮ್ಮೆ ಹೇಳಿದ್ದರು. ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸಭಾ ಸದಸ್ಯರಾಗಿದ್ದ ವಿಶ್ವನಾಥ್ ಎಸ್. ಎಂ. ಕೃಷ್ಣ ಅವರ ಸಂಪುಟದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದರು. ಇತ್ತೀಚೆಗೆ ಪಕ್ಷ ಬಿಟ್ಟು ಜೆಡಿಎಸ್ ಸೇರಲು ಹವಣಿಸುತ್ತಿದ್ದಾರೆಂಬ ವರದಿಗಳೂ ವಿಶ್ವನಾಥ್ ಅವರ ಸುತ್ತ ಇದ್ದವು.

ರಾಜ್ಯದಲ್ಲಿ ಹಲ್ಲಗುಲ್ಲವಾಗಿರುವ ಈ ಪ್ರಸಂಗ ಮಾಧ್ಯಮಗಳ ನಾಲಗೆಗಳಲ್ಲಿ ರಸಗುಲ್ಲದಂತೆ ಹರಿದಾಡುತ್ತಿದೆ. ಆದರೆ, ಕೃಷ್ಣ ಅವರ ಸಹೋದರರಾದ ಹಿರೀಕ ಎಸ್.ಎಂ.ಶಂಕರ್ ಅವರು ಈ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದು, ಕೃಷ್ಣ ಮತ್ತು ಸರೋಜಾದೇವಿ ನಡುವೆ ವಿವಾಹದ ಪ್ರಸ್ತಾಪ ಎಂದೋ ಇತ್ತು. ಅದು ದಶಕಗಳ ಹಿಂದಿನ ಮಾತು. ಈಗ ಅದನ್ನು ಪುಸ್ತಕದಲ್ಲಿ ಬರೆಯುವ ಅಗತ್ಯವಿರಲಿಲ್ಲ ಎಂದಿದ್ದಾರೆ.

ಮದ್ದೂರಿನ ಮುದ್ದುಕೃಷ್ಣ ಮತ್ತು ಕಿತ್ತೂರಿನ ರಾಣಿ ಸರೋಜಾದೇವಿ ಅವರ ಸಂಬಂಧಗಳನ್ನು ಕುರಿತು ತಾವು ದಾಖಲಿಸಿರುವ ಸಂಗತಿಗಳು ಮನುಷ್ಯ ಸ್ವಭಾವದ ಚಿತ್ರಣಗಳಾಗಿವೆಯೇ ವಿನಾ ಯಾರೊಬ್ಬರನ್ನೂ ಟೀಕಿಸುವ ಅಥವಾ ರೋಚಕತೆಯನ್ನು ತುಂಬುವ ಉದ್ದೇಶ ತಮಗಿಲ್ಲ ಎಂದಿದ್ದಾರೆ ವಿಶ್ವನಾಥ್. ಇದಕ್ಕೆ ಏನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ದಟ್ಸಕನ್ನಡಕ್ಕೆ ತಿಳಿಸಿದ್ದಾರೆ. ಈ ಕೃತಿಯಿಂದಾಗಿ ಕೃಷ್ಣ ಅವರ ರಾಜಕೀಯ ಭವಿಷ್ಯದ ಮೇಲೆ ಯಾವರೀತಿಯ ಪ್ರಭಾವವೂ ಉಂಟಾಗುವುದಿಲ್ಲ ಎಂದು ಅವರು ವಿನಮ್ರವಾಗಿ ನುಡಿದಿದ್ದಾರೆ.

ಕೃತಿಯ ಹೆಸರು : ಹಳ್ಳಿ ಹಕ್ಕಿಯ ಹಾಡು
ಪ್ರಕಾಶನ : ಅಂಕಿತ ಪ್ರಕಾಶನ, ಬೆಂಗಳೂರು
ಪುಟಗಳು :180

ಬಿಡುಗಡೆ ಸ್ಥಳ : ರಾಣಿ ಬಹಾದ್ದೂರ್ ಆಡಿಟೋರಿಯಂ, ಮಾನಸಗಂಗೋತ್ರಿ, ಹುಣಸೂರು ರಸ್ತೆ, ಮೈಸೂರು
ಸಮಯ ಸಂಜೆ : 5.30

ಬಿಡುಗಡೆ : ಡಾ. ಯು. ಆರ್. ಅನಂತಮೂರ್ತಿ, ಸಾಹಿತಿ
ಅಧ್ಯಕ್ಷತೆ : ಶ್ರೀನಿವಾಸ್ ಪ್ರಸಾದ್, ಲೋಕಸಭಾ ಸದಸ್ಯ
ಮುಖ್ಯ ಅತಿಥಿ : ವಿಶ್ವೇಶ್ವರ ಭಟ್, ಪತ್ರಕರ್ತ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X