• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನವ ಹಕ್ಕುಗಳ ಆಯೋಗದ ತನಿಖಾ ವರದಿ

By Staff
|

ಮಾನವ ಹಕ್ಕುಗಳ ಆಯೋಗವು ಇತ್ತೀಚೆಗೆ ಗದಗ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಆಯೋಗದ ಮಧ್ಯಂತರ ತನಿಖಾ ವರದಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರ ಸಾರಾಂಶ.

ಮುಖ್ಯ ಕಾರ್ಯದರ್ಶಿಗಳಿಗೆ

ಕರ್ನಾಟಕ ಸರ್ಕಾರ,

ಬೆಂಗಳೂರು.

ದಿನಾಂಕ 20.12.2007ರಂದು ಆಯೋಗದ ಸದಸ್ಯರುಗಳಾದ ಆರ್.ಹೆಚ್. ರೆಡ್ಡಿ ಹಾಗೂ ಬಿ. ಪಾರ್ಥಸಾರಥಿರವರು ಗದಗ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಕೂಡಲೇ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನೀಡಿರುವ ಸೂಚನೆಗಳನ್ನು ಈ ಪತ್ರಕ್ಕೆ ಲಗತ್ತಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಇದರ ಮೇಲೆ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಬೇಕೆಂದು ಸೂಚಿಸಲು ನಿರ್ದೇಶಿತನಾಗಿದ್ದೇನೆ.

ಪೂರ್ಣಪೀಠ ತನ್ನ ಆದೇಶದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಆಯೋಗದ ಸದಸ್ಯರಾದ ಆರ್.ಹೆಚ್. ರೆಡ್ಡಿ ಮತ್ತು ಬಿ. ಪಾರ್ಥಸಾರಥಿ ಅವರುಗಳು ಗದಗ ಜಿಲ್ಲೆಯಲ್ಲಿನ ಕುರ್ಲಗೇರಿ, ಮೆಣಸಗಿ, ಹೊಳೆ ಮಣ್ಣೂರು, ಗಾಡಗೋಳಿ ಮತ್ತು ಹೊಳೆ ಆಲೂರು ಗ್ರಾಮಗಳಿಗೆ ಭೇಟಿ ನೀಡಿದರು.ಭೇಟಿಯ ಸಂದರ್ಭದಲ್ಲಿ ಗದಗ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ತಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಗದಗ ಉಪ ವಿಭಾಗಾಧಿಕಾರಿಗಳು, ಸಂಬಂಧಪಟ್ಟ ತಹಶೀಲ್ದಾರ್‌ಗಳು ಮತ್ತಿತರರು ಹಾಜರಿದ್ದರು. ಇವರುಗಳಲ್ಲದೆ, ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ್ ಹಾಗೂ ನರಗುಂದದ ಮಾಜಿ ಶಾಸಕ ಸಿ.ಸಿ. ಪಾಟೀಲ್, ಗದಗ ಜಿಲ್ಲಾ ಜನತಾದಳ(ಜಾತ್ಯಾತೀತ)ದ ಕಾರ್ಯಾಧ್ಯಕ್ಷ ಬಿ.ವಿ. ಸೋಮಾಪೂರ ಮತ್ತಿತರ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಿರಿಯ ನಾಗರೀಕರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ತಿನ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.

ಈ ವೇಳೆ ಭಾರಿ ಮಳೆಯಿಂದ ಹಾನಿಗೆ ಒಳಗಾದ ಸಂತ್ರಸ್ಥರು ತಮ್ಮ ತಮ್ಮ ಗ್ರಾಮದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಸ್ಥಳ ಪರಿಶೀಲನೆ ಮಾಡಿದ ಮೇಲೆ ಕೆಲವೊಂದು ವಿಚಾರಗಳ ಬಗ್ಗೆ ಏನೇನು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮತ್ತಿತರ ಅಧಿಕಾರಿಗಳ ಜೊತೆ ಚರ್ಚಿಸಿದ ಮೇಲೆ ಆಯೋಗವೇ ಸಿದ್ಧಪಡಿಸಿದ ನಮೂನೆಯಲ್ಲಿಯ ಜೊತೆಗೆ ಹೆಚ್ಚಿನ ವಿವರಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೂರ್ಣ ಪೀಠದ ಮುಂದೆ ಪರಿಶೀಲನೆಯಲ್ಲಿರುವುದರಿಂದ ಆ ಎಲ್ಲಾ ವಿವರಗಳನ್ನು ನೀಡಿದ ಮನವಿಗಳು, ಅವುಗಳೆಲ್ಲವನ್ನೂ ಪೂರ್ಣಪೀಠ ಸಭೆ ಸೇರುವಾಗ ಪರಿಶೀಲಿಸಲಾಗುವುದು.

ಆದರೆ ನಾವು ವಸ್ತು ಸ್ಥಿತಿಯನ್ನು ಗಮನಿಸಿದಾಗ ಜರೂರಾಗಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ನಮಗೆ ಮನವರಿಕೆಯಾಗಿದೆ. ಸಂತ್ರಸ್ಥರಿಗೆ ನಾವು ಭೇಟಿ ನೀಡಿದ ಗ್ರಾಮಗಳಲ್ಲಿ ತಾತ್ಕಾಲಿಕವಾದ ಷೆಡ್ ಗಳನ್ನು ನಿರ್ಮಿಸಲಾಗಿದೆ. ಆದರೆ ಕುರ್ಲಗೇರಿ ಮತ್ತು ಮೆಣಸಗಿಯಲ್ಲಿ ಮುಖ್ಯವಾಗಿ 10 ಅಡಿ ಉದ್ದ 10 ಅಡಿ ಅಗಲದಲ್ಲಿರುವ ಷೆಡ್ ಗಳಲ್ಲಿ5ರಿಂದ 6 ಕುಟುಂಬಗಳು ವಾಸ ಮಾಡಲು ಸ್ಥಳ ಕಲ್ಪಿಸಲಾಗಿದೆ. ಆದರೆ ಒಂದೊಂದು ಕುಟುಂಬದಲ್ಲಿ ಸರಾಸರಿ 5ರಿಂದ 6 ಜನರು ಇದ್ದು ಪ್ರತಿ ಷೆಡ್ಡಿನಲ್ಲಿ 25-30 ಜನ ಅತ್ಯಂತ ಕಿರಿದಾದ ಜಾಗದಲ್ಲಿ ವಾಸಿಸುವ ಅಮಾನವೀಯ ಸ್ಥಿತಿ ನಿರ್ಮಾಣವಾಗಿರುವುದನ್ನು ನಾವು ಪ್ರತ್ಯಕ್ಷ ಕಂಡಿದ್ದೇವೆ.

ಈ ಷೆಡ್ಡುಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಬೇರೆ ಬೇರೆ ಜಾಗವಿಲ್ಲ. ಜೊತೆಗೆ ಐದಾರು ಕುಟುಂಬಗಳು ಒಂದೇ ಷೆಡ್ಡಿನಲ್ಲಿ ಸೇರುವಾಗ ಅವರು ಪ್ರತ್ಯೇಕವಾಗಿ ಅಡಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿರುವುದರಿಂದ ಬಹಳ ತೊಂದರೆಯಾಗಿರುವುದನ್ನು ನಾವು ಖುದ್ದಾಗಿ ಮನವರಿಕೆ ಮಾಡಿಕೊಂಡಿದ್ದೇವೆ. ಮಳೆ ಬಂದು ಪ್ರವಾಹ ಬಂದಾಗ ತಕ್ಷಣಕ್ಕೆ ಆಶ್ರಯ ನೀಡಬೇಕಾಗಿದ್ದು ವಾಸ್ತವವಾದರೂ ಸಹ ಈಗಾಗಲೇ ಈ ಅನಾಹುತ ಸೆಪ್ಟೆಂಬರ್ 17-18ರಂದು ನಡೆದಿದ್ದು ಜಿಲ್ಲಾಡಳಿತಕ್ಕೆ ಸಾಕಷ್ಟು ಕಾಲಾವಕಾಶ ಇದ್ದು, ಅಗತ್ಯ ವ್ಯವಸ್ಥೆ ಮಾಡಬೇಕಾಗಿತ್ತು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ.

ಈ ಕೂಡಲೇ ಐದಾರು ಕುಟುಂಬಗಳು ಒಂದೇ ಷೆಡ್ಡಿನಲ್ಲಿ ಇರುವ ಪರಿಸ್ಥಿತಿಯನ್ನು ಬದಲಾಯಿಸಿ ಪ್ರತಿ ಕುಟುಂಬಕ್ಕೆ ಸೇರಿದಂತೆ ಪ್ರತ್ಯೇಕ ಷೆಡ್ ಅಥವಾ ವಿಭಾಗ ಇರುವ ಜಾಗವನ್ನು ನೀಡಲು ಇನ್ನು ಒಂದು ವಾರದಲ್ಲಿ ಕ್ರಮ ತೆಗೆದುಕೊಳ್ಳುವುದು. ಬರೀ ಷೆಡ್ಡುಗಳನ್ನು ನಿರ್ಮಾಣ ಮಾಡಿ ಆಶ್ರಯ ನೀಡಿದರೆ ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಈ ಷೆಡ್ಡುಗಳಿಗೆ ಬಾಗಿಲುಗಳು ಇಲ್ಲದೇ ಇರುವುದನ್ನು ನಾವು ಗಮನಿಸಿದ್ದೇವೆ. ಬಾಗಿಲುಗಳು ಇಲ್ಲದೇ ಇದ್ದಾಗ ಕತ್ತಲೆಯಲ್ಲಿ ಹಾವು, ಬೀದಿ ನಾಯಿಗಳು ಮತ್ತಿತರ ಪ್ರಾಣಿಗಳು ನುಗ್ಗಿ ಮಕ್ಕಳು ಮತ್ತು ವಯಸ್ಸಾದವರು ಎಲ್ಲರೂ ಇರುವುದು ಕಷ್ಟವಾಗುತ್ತದೆ. ಆದ್ದರಿಂದ ಷೆಡ್ಡುಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅದಕ್ಕೆ ಬಾಗಿಲುಗಳನ್ನು ನಿರ್ಮಿಸಬೇಕು. ಬಾಗಿಲುಗಳ ಜೊತೆಯಲ್ಲಿ ಕನಿಷ್ಠ ಅವರುಗಳು ಸ್ನಾನ ಮಾಡುವುದಕ್ಕೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ಸ್ನಾನ ಮಾಡುವುದಕ್ಕೆ ಪ್ರತ್ಯೇಕ ಸ್ಥಳವನ್ನು ಷೆಡ್ಡಿಗೆ ಸೇರಿದ ಹಾಗೆ ಹತ್ತಿರದಲ್ಲಿ ಒಂದು ಸ್ನಾನದ ಷೆಡ್ಡನ್ನು ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ನಾವು ಭೇಟಿ ನೀಡಿದ ಸಂದರ್ಭದಲ್ಲಿ ಎಷ್ಟೋ ಕಡೆ ದೀಪವನ್ನು ಅಳವಡಿಸದೇ ಇರುವುದನ್ನು ಗಮನಿಸಿದ್ದೇವೆ.

ಈ ಕೂಡಲೇ ಎಲ್ಲಾ ಷೆಡ್ಡುಗಳಿಗೆ ದೀಪದ ವ್ಯವಸ್ಥೆ ಮಾಡುವುದು. ಜೊತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ವರದಿ ಮಾಡಿದ್ದರೂ ಸಹ ನೀರು ಅವಶ್ಯಕವಾಗಿ ಬೇಕಾಗಿರುವುದರಿಂದ ಪ್ರತಿ ದಿನ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳುವುದು. ಮೆಣಸಗಿ ಮತ್ತು ಕುರ್ಲಗೇರಿ ಅಂದಾಕ್ಷಣ ಉಳಿದ ವಿವಿಧ ಊರುಗಳಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವ ಹಾಗಿಲ್ಲ. ಈ ಊರುಗಳಲ್ಲೂ ಸಹ ಕುಟುಂಬಗಳಿಗೆ ಬೇರೆ ಬೇರೆ ಷೆಡ್ಡುಗಳನ್ನು ನೀಡಿದ್ದರೂ ಕೆಲವೊಂದು ಪ್ರಾಥಮಿಕ ಸೌಲಭ್ಯಗಳನ್ನು ಕಲ್ಪಿಸದೇ ಇರುವುದನ್ನು ಸಹ ನಾವು ಗಮನಿಸಿದ್ದೇವೆ. ಅದಕ್ಕೂ ಸಹ ಗಮನ ಹರಿಸಿ ಕ್ರಮ ತೆಗೆದುಕೊಳ್ಳುವುದು.

ಬಹಳ ಮುಖ್ಯವಾಗಿ ಎಲ್ಲಾ ಕಡೆ ಸಂತ್ರಸ್ಥ ಕುಟುಂಬದವರ ಕುಟುಂಬಕ್ಕೆ ಒಂದರಂತೆ ಕಂಬಳಿ(ಬ್ಲಾಂಕೆಟ್) ಮತ್ತು ಒಂದು ಸೆಟ್ ಬಟ್ಟೆಗಳನ್ನು, ಅಂದರೆ, ಒಬ್ಬ ಮಹಿಳೆಗೆ ಒಂದು ಸೀರೆ ಮತ್ತು ಒಬ್ಬ ಪುರುಷರಿಗೆ ಒಂದು ಪಂಚೆ ಬಟ್ಟೆ ನೀಡಿರುವುದು ತಿಳಿದುಬಂದಿರುತ್ತದೆ. ಸರ್ಕಾರದ ಮಾರ್ಗದರ್ಶಿ ಸೂತ್ರಗಳು ಏನೇ ಇದ್ದರೂ ಇದು ಒಂದು ತುರ್ತುಸ್ಥಿತಿಯಾಗಿರುವುದರಿಂದ ಮಾನವೀಯತೆಯಿಂದ ಪರಿಶೀಲಿಸಿ ಭಾರಿ ಮಳೆ ಮತ್ತು ಚಳಿಯಲ್ಲಿ ಮನುಷ್ಯರಿಗೆ ವಸ್ತ್ರ ಬೇಕಾಗಿರುವುದರಿಂದ ಮನುಷ್ಯನಿಗೆ ಕನಿಷ್ಠ ಅವಶ್ಯಕತೆಯನ್ನು ಪೂರೈಸಬೇಕಾಗಿರುವುದು ಆಡಳಿತದ ಜವಾಬ್ದಾರಿಯಾಗಿರುತ್ತದೆ. ಈಗ ಕುಟುಂಬಕ್ಕೆ ಒಂದೇ ಕಂಬಳಿಯನ್ನು(ಬ್ಲಾಂಕೆಟ್) ಕೊಟ್ಟಿರುವುದು ಚಳಿಗಾಲದಲ್ಲಿ ಯಾವುದೇ ರೀತಿಯಲ್ಲೂ ಸಹಾಯವಾಗುವುದಿಲ್ಲ. ಆದುದರಿಂದ ಇರುವ ಮಾರ್ಗದರ್ಶಿ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು ಕುಟುಂಬ ಒಂದಕ್ಕೆ ಕಡೆಯ ಪಕ್ಷ ಮೂರು ಕಂಬಳಿಗಳನ್ನು ನೀಡಲು ಕ್ರಮ ತೆಗೆದುಕೊಳ್ಳುವುದು. ಜೊತೆಗೆ ರೇಷನ್ ಕೊಡುವ ಬಗ್ಗೆ ನಾವು ಸ್ಥಳಕ್ಕೆ ಭೇಟಿ ನೀಡಿದಾಗ ತಿಳಿಸಿದ್ದಾರೆ. ಅವರ ರೇಷನ್ ಕಾರ್ಡ್‌ಗಳು ಈ ಪ್ರವಾಹದಿಂದ ಕೊಚ್ಚಿಹೋಗಿರುತ್ತವೆ. ಕೂಡಲೇ ಈ ಎಲ್ಲಾ ಕುಟುಂಬಗಳಿಗೆ ರೇಷನ್ ಕಾರ್ಡ್ ಕೊಡುವ ವ್ಯವಸ್ಥೆ ಮಾಡಿ ಮತ್ತು ಆ ರೇಷನ್ ಕಾರ್ಡ್‌ಗೆ ಅನುಗುಣವಾಗಿ ಆಹಾರ ಪದಾರ್ಥಗಳು ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕು. ರೇಷನ್ ಅಂಗಡಿಗೆ ಪರವಾನಗಿ ಕೊಡುವುದು ವಿಳಂಬವಾದರೂ ಸಹ ಇದನ್ನು ತುರ್ತು ಮತ್ತು ಜರೂರು ಎಂದು ಪರಿಗಣಿಸಿ ಒಂದು ವಾರದಲ್ಲಿ ವ್ಯವಸ್ಥೆ ಮಾಡುವುದು.

ಆರೋಗ್ಯ ತಪಾಸಣೆಯ ಬಗ್ಗೆ ವೈದ್ಯರು ಭೇಟಿ ನೀಡಿದ್ದರು ಎಂದು ಅಧಿಕಾರಿಗಳ ಸಭೆಯಲ್ಲಿ ನಮಗೆ ವರದಿ ಮಾಡಲಾಯಿತು. ಆದರೆ ಸಾಕಷ್ಟು ವೈದ್ಯರು ಮತ್ತು ದಾದಿಯರು ಸರಿಯಾಗಿ ಬರುತ್ತಿಲ್ಲ ಎನ್ನುವ ಅಂಶವು ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ ಜಿಲ್ಲಾಡಳಿತ ಕೂಡಲೇ ಒಂದು ವೇಳಾಪಟ್ಟಿಯನ್ನು ನಿಗಧಿಪಡಿಸಿ ಈ ರೀತಿ ಪ್ರವಾಹದಿಂದ ನೊಂದ ಕುಟುಂಬಗಳಿರುವ ಕಡೆ, ಯಾವ ದಿನ ಮತ್ತು ಸಮಯಕ್ಕೆ ವೈದ್ಯರು ಮತ್ತು ದಾದಿಯರು ಹೋಗುತ್ತಾರೆ ಎನ್ನುವುದನ್ನು ಪ್ರಕಟಿಸುವುದು ಹಾಗೂ ಅವರು ಸಾಕಷ್ಟು ಔಷಧಿಗಳ ಜೊತೆ ಅಲ್ಲಿಗೆ ಹೋಗಿ ಜನರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನೀಡುವಂತೆ ಕ್ರಮ ತೆಗೆದುಕೊಳ್ಳುವುದು.

ಇದಲ್ಲದೆ ಶಾಲೆಗೆ ಹೋಗುವ ಮಕ್ಕಳು ಶಾಲೆಯಿಂದ ತಪ್ಪಿಸಿಕೊಳ್ಳದ ಹಾಗೆ, ಅದರಲ್ಲೂ ಇತ್ತೀಚೆಗೆ ಸರ್ಕಾರದ ಯೋಜನೆಯಲ್ಲಿ ಬಿಸಿಯೂಟದ ಕಾರ್ಯಕ್ರಮವಿರುವುದರಿಂದ ಅದಕ್ಕೆ ವ್ಯವಸ್ಥೆ ಮಾಡಿ ಅವರು ಶಾಲೆಗೆ ತಪ್ಪದೇ ಹೋಗುವ ಹಾಗೆ ಕ್ರಮ ತೆಗೆದುಕೊಳ್ಳುವುದು. ಉಳಿದ ಹಾಗೆ ಇನ್ನೇನಾದರೂ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕಾದಲ್ಲಿ ಸ್ಥಳೀಯ ಅಧಿಕಾರಿಗಳು ಪದೇ ಪದೇ ಗ್ರಾಮಗಳಿಗೆ ಭೇಟಿ ನೀಡಿ ಜನರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸುವಂತೆ ಕ್ರಮ ತೆಗೆದುಕೊಳ್ಳುವುದು.

ನಾವು ಭೇಟಿ ನೀಡಿದಾಗ ಅಧಿಕಾರಿಗಳ ಸಭೆಯಲ್ಲಿ ಪ್ರತಿಯೊಂದು ಗ್ರಾಮಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿ ಮಾಡಿದರು. ಈ ನೋಡಲ್ ಅಧಿಕಾರಿಗಳು ಕೂಡಲೇ ತಮಗೆ ಸಂಬಂಧಪಟ್ಟ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಈ ಎಲ್ಲಾ ಸೌಲಭ್ಯಗಳು ಸಿಗುವ ಹಾಗೆ ಕ್ರಮ ತೆಗೆದುಕೊಳ್ಳುವಂತೆ ಅವರಿಗೆ ಸೂಚನೆ ನೀಡುವುದು ಹಾಗೂ ಯಾವ ಯಾವ ಗ್ರಾಮಕ್ಕೆ ಯಾವ ಯಾವ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಆ ಪಟ್ಟಿಯನ್ನು ಆಯೋಗದ ಮಾಹಿತಿಗಾಗಿ ಕಳುಹಿಸುವುದು. ಈಗಾಗಲೇ ಅನಾಹುತವಾಗಿ ಮೂರು ತಿಂಗಳು ಕಳೆದಿರುವುದರಿಂದ ಇಷ್ಟರಲ್ಲಿಯೇ ಶಾಶ್ವತ ವ್ಯವಸ್ಥೆಗೆ ಏನಾದರೂ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿರುತ್ತದೆ. ಇದಲ್ಲದೆ ತಾಲ್ಲೂಕು, ಉಪ ವಿಭಾಗ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆದಷ್ಟು ಬೇಗ ಮೇಲಿಂದ ಮೇಲೆ ಭೇಟಿ ನೀಡಿ ಈ ವ್ಯವಸ್ಥೆಯ ಮೇಲುಸ್ತುವಾರಿ ಮಾಡಬೇಕು.

ನಾವು ಸೂಚಿಸಿದ ಕ್ರಮಗಳನ್ನು ಅವಶ್ಯಕವಾಗಿ ಈ ತಿಂಗಳ ಅಂತ್ಯದೊಳಗೆ ಕ್ರಮ ತೆಗೆದುಕೊಂಡು ವರದಿ ಮಾಡಿ ಮತ್ತು ಈಗಾಗಲೇ ನಾವು ಭೇಟಿ ನೀಡಿದಾಗ ನೀಡಿದ ನಮೂನೆಯ ಪ್ರಕಾರ ಹೆಚ್ಚಿನ ವಿವರಗಳನ್ನು ನೀಡುವುದಲ್ಲದೆ, ಈಗಾಗಲೇ ಸಭೆಯಲ್ಲಿ ಸೂಚಿಸಿದಂತಹ ನ್ಯೂನತೆಗಳನ್ನು ಸರಿಪಡಿಸಿ, ಎಲ್ಲಾ ವಿವರಗಳನ್ನು ಆಯೋಗದ ಪರಿಶೀಲನೆಗಾಗಿ ಮುಂದಿನ ಕ್ರಮಕ್ಕಾಗಿ ತುರ್ತಾಗಿ ದಿನಾಂಕ 31.12.2007ರೊಳಗೆ ಕಳುಹಿಸಿಕೊಡುವುದು.

ಆರ್.ಹೆಚ್. ರೆಡ್ಡಿ, ಬಿ. ಪಾರ್ಥಸಾರಥಿ ಮತ್ತು ಸದಸ್ಯರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more