ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ಕಾರ್ಯಕರ್ತರಿಗೆ ಕಾಯುತ್ತಾ ನಿಂತ ಗೌಡರು

By Staff
|
Google Oneindia Kannada News

ಪಕ್ಷದ ಕಾರ್ಯಕರ್ತರಿಗೆ ಕಾಯುತ್ತಾ ನಿಂತ ಗೌಡರುಬೆಂಗಳೂರು, ನ. 29 : ನಮ್ಮದೇ ನಿಜವಾದ ಜಾತ್ಯತೀತ ಜನತಾದಳ ಎಂದು ದೇವೇಗೌಡರ ಗುಂಪು ಮತ್ತು ಇಲ್ಲಇಲ್ಲ ತಮ್ಮದೇ ಅಸಲಿ ಜೆಡಿಎಸ್ ಎಂದು ಪ್ರಕಾಶ್ ನೇತೃತ್ವದ ಗುಂಪು ಹಠ ಹಿಡಿದು ಜಗಳ ಕಾಯುವ ರಾಜಕೀಯ ಮನರಂಜನೆಯ ಮತ್ತೊಂದು ಅಧ್ಯಾಯ ಆರಂಭವಾಗಿದೆ.ಜನತಾ ಪರಿವಾರ ಒಡೆದು ಹೋಳಾದಾಗಲೆಲ್ಲ ಇಂಥ ಹೈರಾಣಗಳನ್ನು ರಾಜ್ಯದ ಜನತೆ ನೋಡಿದ್ದಾರೆ.ಮುಖ್ಯವಾಗಿ ಚುನಾವಣೆ ಚಿಹ್ನೆ ( ಹುಲ್ಲಿನ ಹೊರೆ ಹೊತ್ತು ರೈತನಿಗಾಗಿ ನಿಂತು ಕಾಯುತ್ತಿರುವ ಒಂಟಿ ಮಹಿಳೆ)ಯಾರಿಗೆ ಸೇರಬೇಕು, ಕಚೇರಿ ಕಟ್ಟಡ ಯಾರಿಗೆ ಹೋಗಬೇಕು ಮುಂತಾದ ಕಿರಿಪಿರಿಗಳು ಈಗಾಗಲೇ ಶುರುವಾಗಿದೆ. ಈ ರಣರಂಪಗಳನ್ನು ಓದಲು ನೀವು ಸಿದ್ಧರಾಗಬೇಕಷ್ಟೆ.

ಇವತ್ತು ಗುರುವಾರ ಸಂಜೆ ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡರ ಮುಂದಾಳತ್ವದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಸಭೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಬೆಂಗಳೂರು ಅರಮನೆಯ ಶೀಷಮಹಲ್ ನಲ್ಲಿ ಆರಂಭವಾದ ಸಭೆಗೆ ಮೊದಲು ಬಂದವರೇ ದೇವೇಗೌಡರು. ಪಕ್ಷದ ಶಾಸಕರು, ಮಾಜಿ ಧುರೀಣರು ಮತ್ತು ಬೇರುಮಟ್ಟದ ಕಾರ್ಯಕರ್ತರಿಗಾಗಿ ಗೌಡರು ಕಾಯುತ್ತಿದ್ದ ದೃಶ್ಯ ಎಂಥವರ ಮನವನ್ನೂ ಕರಗಿಸುವಂತಿತ್ತು.

ಸದಾ ಕುಮಾರಣ್ಣನ ಶರ್ಟಿಗೆ ಅಂಟಿಕೊಂಡಿರುತ್ತಿದ್ದ ಚೆಲುವರಾಯ ಸ್ವಾಮಿ ಸೇರಿದಂತೆ ಪಕ್ಷದ ಅರ್ಧಕ್ಕಿಂತಲೂ ಹೆಚ್ಚು ಶಾಸಕರು ಈಗಾಗಲೇ ಗುಳೆ ಹೋಗಿದ್ದಾರೆ. ರೆಬೆಲ್ ಸ್ಟಾರ್ ಪ್ರಕಾಶ್ ಮುಂದಾಳತ್ವದಲ್ಲಿ ಜರುಗಿದ ಬುಧವಾರದ ಬಂಡಾಯ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಇವತ್ತಿನ ದಿನ ದೇವೇಗೌಡರ ಸಭೆಗೆ ಫ್ರೀ ಡ್ರಾಪ್ ಕೊಡ್ತೀವಿ ಬನ್ರೀ ಅಂದರೂ ಇದುವರೆವಿಗೂ ಕಾರು ಹತ್ತಿಲ್ಲ.

ಎಲ್ಲೋ ಒಂದು ಕಡೆ ರಾಜಕೀಯ ಆಶ್ರಯ ಸಿಕ್ಕರೆ ಸಾಕಪ್ಪಾ ಎಂದು ಜೆಡಿಎಸ್ ಶಾಸಕರು ವಿಲವಿಲ ಒದ್ದಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ತಮ್ಮನ್ನು ಯಾರು ದತ್ತು ತೆಗೆದು ಕೊಳ್ಳುತ್ತಾರೆ ಎಂದು ಅನಾಥರಾಗಿರುವ ಶಾಸಕರು ಎದುರುನೋಡುತ್ತಿರುವುದು ತಮಾಷೆಯಾಗಿದೆ. ಇಷ್ಟು ದಿವಸ ಗೌಡರು ಹೇಳಿದ ಹಾಗೆ ಕೇಳಿದ್ದಕ್ಕೆ ತಮಗೆ ಇಂಥ ಪಾಡು ಬಂತು ಎಂದು ಕೈ ಹಾಗೂ ಜೇಬುಗಳನ್ನು ಹಿಸುಕಿಕೊಳ್ಳುತ್ತಿದ್ದಾರೆ.

ಗೌಡರು ಅರಮನೆ ಸಭೆಯಲ್ಲಿ ಏನು ಅಪ್ಪಣೆ ಕೊಡಿಸಿದರು ಎಂದು ನಿಮಗೆ ಆಮೇಲೆ ಹೇಳುತ್ತೇವೆ. ಸದ್ಯಕ್ಕೆ ಗೌಡರ ಪಾಳಯಕ್ಕೆ ನಕ್ಸಲಿಸ್ಟ್ ಥರ ಕಾಣುತ್ತಿರುವ ಪ್ರಕಾಶ್ ಅವರ ಚಲನವಲನಗಳನ್ನು ನಾವು ಗಮನಿಸೋಣ. ದಾರಿತಪ್ಪಿದ ಮಕ್ಕಳಂತಾಗಿರುವ ಜೆಡಿಎಸ್ ಶಾಸಕರಿಗೆ ಅವರು ತೆರೆಯಲಿರುವ ಅನಾಥಾಶ್ರಮ ಎಲ್ಲಿದೆ ಎಂದು ಕಾಯೋಣ. ಕೊನೆಗೆ ಪ್ರಕಾಶ್ ಬೆನ್ನಿಗೆ ಚೂರಿ ಹಾಕುವವರು ಯಾರು ಎಂಬಬಗ್ಗೆ ಈಗಲೇ ಊಹಿಸುವ ತಪ್ಪನ್ನು ಮಾಡದಿರೋಣ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X