• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೌಡರ ನಂಬಿದ ಬಿಜೆಪಿಗೆ ಮಧುಚಂದ್ರವೂ ಇಲ್ಲ, ಹಳೇಗಂಡನೂ ಇಲ್ಲ..

By Staff
|
  • ಶಾಮ್
  • ಬೆಂಗಳೂರು, ನ.19 : ಬೆಳಗಿನ ತಿಂಡಿ ನೀನು ಮಾಡು,ರಾತ್ರಿ ಅಡುಗೆ ನಾನು ಮಾಡ್ತೀನಿ. ನಮ್ಮ ನಮ್ಮ ಕಚೇರಿಗಳಲ್ಲಿ ಮಧ್ಯಾನ್ಹದ ಊಟ ಹೇಗೂ ಆಗುತ್ತೆ. ಸೋಮವಾರದಿಂದ ಶುಕ್ರವಾರದತನಕ ಈ ಪದ್ದತಿ ಜಾರಿಯಲ್ಲಿರಲಿ. ಶನಿವಾರ ನಾವಿಬ್ಬರೂ ನಮಗೆ ಇಷ್ಟಬಂದಂತೆ ಮಾಡೋಣಂತೆ. ನಾನು ಎಲ್ಲಿಗಾದರೂ ಹೋಗಬಹುದು, ನೀನು ನಿನಗೆ ಮನಬಂದಂತೆ ಇರಬಹುದು. ಶನಿವಾರ ನಾನು ಹೋಗುವ ಜಾಗಕ್ಕೆ ನೀನು ಡ್ರಾಪ್ ಕೊಡಬೇಕು, ಭಾನುವಾರ ನಿನ್ನನ್ನು ಪಿಕ್ ಅಪ್ ಮಾಡುವ ಡ್ಯೂಟಿ ನನಗಿರಲಿ.

    ಇಂಥದೊಂದು ಒಪ್ಪಂದಕ್ಕೆ ಸಹಿ ಹಾಕಿ ಮದುವೆ ಆದರೆ ಆ ಸಂಸಾರ ಹೇಗಿದ್ದೀತು? ಎಷ್ಟು ದಿನ ನಡೆದೀತು ? ಎಂಬ ಪ್ರಶ್ನೆಗಳನ್ನು ಯಾರೂ ಕೇಳಬಾರದು. ಯಾಕೆಂದರೆ, ಇಟ್ ಈಸ್ ಮೈ ಲೈಫ್, ಅವರ್ ಫ್ಯಾಮಿಲಿ ಮ್ಯಾಟರ್ ಮ್ಯಾನ್!!

    ಒಂದು ಸರಕಾರ ನಡೆಯುವುದು ಮೂಲತಃ ವಿಶ್ವಾಸದ ಬುನಾದಿಯ ಮೇಲೆ. ಜನತೆಯ ವಿಶ್ವಾಸ ಮತ್ತು ಸಹೋದ್ಯೋಗಿಗಳ ಸಹಕಾರವಿಲ್ಲದಿದ್ದರೆ ಆಡಳಿತದ ಬಂಡಿ ಸರಾಗವಾಗಿ ಓಡದು. ಆದರೆ, ಒಂದು ಕರಾರು ಪತ್ರದ ಆಧಾರದ ಮೇಲೆ, ಒಂದು ಪ್ರಾಮಿಸರಿ ನೋಟಿನ ಮೇಲೆ ಬರೆದ ಒಕ್ಕಣಿಕೆಗಳ ರೀತ್ಯ ಕರ್ನಾಟಕ ಸರಕಾರ ನಡೆಸಲು ಅಣಿಯಾಗಿದ್ದ ಜಾತ್ಯತೀತ ಜನತಾದಳದ ಧೋರಣೆಗೆ ಇಡೀ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ. ಇಲ್ಲಿ ಜೆಡಿಎಸ್ ಎಂದರೆ ದುರಹಂಕಾರಿ ದೇವೇಗೌ ಮತ್ತು ಆತ್ಮಗೌರವವಿಲ್ಲದ ಅವರ ಪಕ್ಷದ ಶಾಸಕರು ಎಂದು ಓದಿಕೊಳ್ಳಬೇಕು.

    ಗೌಡರು ಹೆಣೆದ ಷರತ್ತುಗಳ ಪಟ್ಟಿಯಲ್ಲಿ ಏನಾದರೂ ಇದ್ದುಕೊಳ್ಳಲಿ. ಗೌಡರು ತಯಾರಿಸಿದ ಪಟ್ಟಿ ಎಂದರೆ ಯಡಿಯೂರಪ್ಪನವರ ಸರಕಾರ ತಮ್ಮ ಮೂಗಿನ ನೇರಕ್ಕೆ ನಡೆಯಬೇಕು, ಯಡ್ಡಿ ಮತ್ತು ಅವರ ಸಂಗಡಿಗರ ಜುಟ್ಟು ಜನಿವಾರ ತಮ್ಮ ಉಡುದಾರಕ್ಕೆ ಕಟ್ಟಿಕೊಂಡಿರಬೇಕು ಎಂದರ್ಥ. ಎಲ್ಲರೂ ಎಲ್ಲಕಾಲಕ್ಕೂ ತಮ್ಮ ಕಾಲಿಗೆ ಸಾಷ್ಟಾಂಗ ಹಾಕಬೇಕು. ತಾವು ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು ಆದರೆ ತಾವು ಯಾರ ಮಾತನ್ನೂ ಕೇಳುವುದಕ್ಕೂ ಸಹ ರೆಡಿ ಇಲ್ಲ ಎನ್ನುವುದು ಮಾಜಿ ಪ್ರಧಾನಿ ದೇವೇಗೌಡರ ಆಜನ್ಮ ಮ್ಯಾಗ್ನಕಾರ್ಟ. ಹೀಗೆ ಯೋಚಿಸುವ ದೇವೇಗೌಡರಂಥ ರಾಜಕಾರಣಿ ಮನುಕುಲದ ಇತಿಹಾಸದಲ್ಲಿ ಹುಟ್ಟಿರಲಿಲ್ಲ, ಇನ್ನು ಮುಂದೆ ಹುಟ್ಟುವುದೂ ಇಲ್ಲ. ಅವರನ್ನು ಮಧ್ಯಯುಗೀನ ಸಾಮ್ರಾಟರಿಗೆ ಅಥವಾ 14ನೇ ಲೂಯಿಗೆ ಹೋಲಿಸುವಂತಿಲ್ಲ. ಜನತಂತ್ರ ವಿರೋಧಿ ಗೌಡರಿಗೆ ಗೌಡರೇ ಸಾಟಿ.

    ಬಿಜೆಪಿಯಷ್ಟು ಮೂರ್ಖ ಶಿಖಾಮಣಿಗಳು ಸೌತ್ ಇಂಡಿಯಾದಲ್ಲಿ ಇನ್ನಾರೂ ಇಲ್ಲ. ಆಕಾಶವೇ ಬೀಳಲಿ ಮೇಲೆ, ನಾ ನಿನ್ನ ಕೈಬಿಡೆನು ಎಂದು ಹಾಡುತ್ತಾ ಅಧಿಕಾರದ ಆಸೆ ಮತ್ತು ಅದಕ್ಕಾಗಿ ಗೌಡರ ವಂಶದ ಅಂಗಾಲುನೆಕ್ಕುವ ಹೀನಾಯ ಸ್ಥಿತಿ ಅವರಿಗೆ ಬೇಕಿರಲಿಲ್ಲ. ಈ ಮದುವೆ, ಮರುಮದುವೆ, ಮಧುಚಂದ್ರ ಕ್ಷಣಿಕ ಎಂದು ಗೊತ್ತಿದ್ದರೂ ಮಂತ್ರಿಗಿರಿಯ ಹಪಾಹಪಿಗೆ, ಗೌಡರ ಬ್ಲಾಕ್ ಮೇಲ್ ತಂತ್ರಕ್ಕೆ ಮತ್ತು ಜೆಡಿಎಸ್ ಹೆಣೆದ ಕುಣಿಕೆಗೆ ಕೊರಳೊಡ್ಡುವ ನಾಚಿಕೆಗೇಡಿನ ರಾಜಕೀಯ ಮಾಡುವ ಅಗತ್ಯವಿರಲಿಲ್ಲ. ತುಮಕೂರಿನಲ್ಲಿ ಚುನಾವಣೆಯ ರಣಕಹಳೆ ಮೊಳಗಿಸಿದ ಅರ್ಧಗಂಟೆಯಲ್ಲಿ ಯಾವಾಗ ಬಿಜೆಪಿ ನಾಯಕರು ಬೆಂಗಳೂರಿಗೆ ಓಡಿಬಂದರೋ ಆಗಲೇ ಇವರು ಇರಳು ಕಂಡ ಬಾವಿಯಲ್ಲಿ ಹಗಲು ಬೀಳುವ ಮೂರ್ಖತನ ತೋರಿದ್ದಾರೆಂದು ರಾಜ್ಯದ ಪ್ರಜೆಗಳಿಗೆ ಗೊತ್ತಾಗಿತ್ತು.

    ಏಳುದಿನದ ಬಿಜೆಪಿ ಸರಕಾರ ಬಿದ್ದುಹೋದರೆ ಹೋಗಲಿ. ಎಡಗೈಯಲ್ಲಿ ಬೆಂಬಲಪತ್ರ ಬಲಗೈಯಲ್ಲಿ ಷರತ್ತುಗಳ ಪಟ್ಟಿ ಹಿಡಿದು ಬರುವ ಜೆಡಿಎಸ್ ಶಾಸಕರನ್ನು ನಂಬಿ ರಾಜ್ಯಭಾರ ಮಾಡುವ ಪ್ರಮೇಯ ಯಡಿಯೂರಪ್ಪ ಅವರಿಗೆ ಬೇಡವಾಗಲಿ. ಗೌಡರು ಸಿದ್ಧಪಡಿಸಿರುವ ಪ್ರಾಮಿಸರಿ ನೋಟಿಗೆ ಸೋಮವಾರದ ಸೂರ್ಯ ನೆತ್ತಿಯಮೇಲೆ ಬಂದರೂ ಸಹಿಹಾಕಲು ನಿರಾಕರಿಸುತ್ತಿರುವ ಯಡಿಯೂರಪ್ಪ ಮಿತ್ರರಿಗೆ ಚಳಿಗಾಲದ ಶುಭಾಶಯಗಳು.

    ಛಾಪಾ ಕಾಗದದ ಮೇಲೆ ಸಹಿ ಹಾಕಿ ಯಡಿಯೂರಪ್ಪ ಸರ್ಕಾರ ರಚಿಸಿದರೇ, ಅದಕ್ಕಿಂತ ಅವಮಾನ ಇನ್ನೊಂದಿಲ್ಲ. ಇದು ಸಾಧ್ಯವಾಗಿದ್ದೇ ಆದರೆ, ಕರ್ನಾಟಕದ ಜನ ನಾಚಿಕೆಯಿಂದ ತಲೆತಗ್ಗಿಸಬೇಕಿತ್ತು. ಪರಸ್ಪರ ವಿಶ್ವಾಸ ಮತ್ತು ನಂಬಿಕೆಯಿಲ್ಲದ ಜನರು ರಾಜ್ಯದ ಕುರ್ಚಿ ಮೇಲೆ ಕೂರುವುದು ತಪ್ಪು. ನೂರಕ್ಕೆ ನೂರರಷ್ಟು ತಪ್ಪು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more