ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸಂಪುಟ 'ಪ್ರಕಾಶ'ಮಾನವಾಗಲಿದೆಯೇ?

By Staff
|
Google Oneindia Kannada News

ಬೆಂಗಳೂರು, ನ.10 : ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಕಾಪಾಡಿಕೊಂಡು ರಾಜ್ಯವನ್ನು ರಾಮರಾಜ್ಯವನ್ನಾಗಿ ಪರಿವರ್ತಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಪಟ್ಟಧರಿಸಲಿರುವ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹಿಂದಿನ ಸರಕಾರದಲ್ಲಿ ಎರಡೂ ಪಕ್ಷಗಳ ನಡುವೆ ಉದ್ಭವವಾಗಿದ್ದ ಸಾಮರಸ್ಯಕೊರತೆಯನ್ನು ತೊಡೆದುಹಾಕಿ ಅತ್ಯುತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.

ಜೆಡಿಎಸ್ ರಾಷ್ಟ್ರೀಯ ನಾಯಕ ಎಚ್.ಡಿ.ದೇವೇಗೌಡ ಅವರು ವಿಧಿಸಿರುವ 12 ಷರತ್ತುಗಳ ತೂಗುಕತ್ತಿ ಮೈತ್ರಿ ಸರಕಾರದ ಮೇಲೆ ತೂಗುತ್ತಿದ್ದರೂ ಯಡಿಯೂರಪ್ಪ ಮತ್ತು ಬಿಜೆಪಿ ಕಾರ್ಯಕರ್ತರ ಹರ್ಷಕ್ಕೆ ಪಾರವೇ ಇರಲಿಲ್ಲ.

ಪ್ರಕಾಶ್‌ಗೆ ಆಹ್ವಾನ : ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಬೆನ್ನುತೋರಿಸಿದ್ದ ಎಂ.ಪಿ.ಪ್ರಕಾಶ್ ರಾಜ್ಯ ಸಂಪುಟ ಸೇರಬೇಕೆಂದು ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ವೈಮನಸ್ಯವನ್ನು ಮರೆತು ಸಂಪುಟವನ್ನು ಬಲಪಡಿಸಬೇಕೆಂದು ಅವರು ಪ್ರಕಾಶ್‌ರನ್ನು ಕೋರಿದ್ದಾರೆ.

ಇದರೊಟ್ಟಿಗೆ, ಪ್ರಕಾಶ್ ಬೇರೆ ದಾರಿ ತುಳಿದಿದ್ದರಿಂದ ಕೆಂಡಾಮಂಡಲವಾಗಿದ್ದ ದೇವೇಗೌಡರೂ ಕೂಡ ಪ್ರಕಾಶ್ ಸಂಪುಟ ಸೇರಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮನವಿಯಿಂದ ಪ್ರಕಾಶ್ ಪ್ರಕಾಶಿಸಿದ್ದಾರೆಯೆ ಎಂಬ ಬಗ್ಗೆ ಇನ್ನೂ ಮಾಹಿತಿ ದಕ್ಕಿಲ್ಲ.

ಕುಮಾರಸ್ವಾಮಿ ಡಿಸಿಎಂ ಖಚಿತ : ಡಿಸಿಎಂ ಪಟ್ಟಕ್ಕೆ ಗೌಡರ ಕುಟುಂಬದಲ್ಲಿಯೇ ಕಿತ್ತಾಟ ಇದ್ದರೂ ಪಕ್ಷದ ಸದಸ್ಯರ ಒತ್ತಾಯಕ್ಕೆ ಮಣಿದು ಕುಮಾರಸ್ವಾಮಿಯವರನ್ನೇ ಉಪ ಮುಖ್ಯಮಂತ್ರಿ ಮಾಡಲು ದೇವೇಗೌಡರು ಒಪ್ಪಿದ್ದಾರೆ.

ರೇವಣ್ಣ ಉಪ ಮುಖ್ಯಮಂತ್ರಿ ಪಟ್ಟದ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದರೂ ಅವರಿಗೆ ಪಕ್ಷದ ಸದಸ್ಯರ ಬೆಂಬಲವಿಲ್ಲದಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ.

ಭಾನುವಾರ ನಡೆಯಲಿರುವ ಜೆಡಿಎಸ್ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ಅಧಿಕೃತ ಸುದ್ದಿ ಹೊರಬೀಳಲಿದೆ. ಎಂ.ಪಿ.ಪ್ರಕಾಶ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನಲ್ಲಿ ಭಿನ್ನಮತ : ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸರಕಾರ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಆಡಳಿತಕ್ಕೆ ಬರಲು ಕಾಂಗ್ರೆಸ್‌ನಲ್ಲಿನ ಕೆಲ ನಾಯಕರೇ ಕಾರಣರಾಗಿದ್ದಾರೆ ಎಂದು ಪಕ್ಷದಲ್ಲಿ ಗುಸುಗುಸು ಎದ್ದಿದೆ.

ಬಿಜೆಪಿ ಸರಕಾರ ರಾಜ್ಯದಲ್ಲಿ ಬರದಂತೆ ಮಾಡಲು ಶತಪ್ರಯತ್ನ ಮಾಡಿದ್ದ ಕಾಂಗ್ರೆಸ್ ಪಾಳಯದಲ್ಲಿ ಇತ್ತೀಚಿನ ಬೆಳವಣಿಗೆಗಳಿಂದ ದಂಗುಬಡಿದಂತಾಗಿದೆ. ಒಬ್ಬರ ಮೇಲೆ ಒಬ್ಬರು ಗೂಬೆಕೂಡಿಸುವ, ಕಾಲೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

(ಏಜೆನ್ಸಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X