ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮುಖ್ಯಮಂತ್ರಿಯಾದ್ರೆ ರಾಮರಾಜ್ಯ ಬರುತ್ತಾ?

By (ನಮ್ಮ ಪ್ರತಿನಿಧಿಯಿಂದ)
|
Google Oneindia Kannada News

ಅಣ್ಣ ತಮ್ಮಂದಿರ ಮಧ್ಯೆ ಯಡಿಯೂರಪ್ಪ ಹೆಣಗಾಟ ಶುರು.. ಬೆಂಗಳೂರು, ನ.08 : ದೋಸ್ತಿ ಸರ್ಕಾರದಿಂದ ಕರ್ನಾಟಕ ರಾಮರಾಜ್ಯವಾಗುತ್ತದೆ.. ಅಭಿವೃದ್ಧಿಗೊಳ್ಳುತ್ತದೆ ಎಂಬ ನಿರೀಕ್ಷೆ ಯಾರಿಗೂ ಇಲ್ಲ. ಇವರಿಗೂ ಒಂದು ಅವಕಾಶ.. ಎಂಬುದಷ್ಟೇ ಜನರ ಅಭಿಪ್ರಾಯ. ಜೆಡಿಎಸ್ ನಿಂದ ಮೋಸಕ್ಕೆ ಗುರಿಯಾದರಲ್ಲ ಎಂದು ಜನರ ಅನುಕಂಪ.

ಬಿಜೆಪಿ ಮುಖಂಡ ಯಡಿಯೂರಪ್ಪ ಅವರ ಪಟ್ಟಾಭಿಷೇಕಕ್ಕೆ ಇದ್ದ ನೂರೊಂದು ವಿಘ್ನಗಳು ದೂರವಾಗಿವೆ. ಸದ್ಯದ ವರ್ತಮಾನಗಳ ಪ್ರಕಾರ ರಾಜ್ಯಪಾಲರು ಯಾವಾಗ ಬೇಕಾದರೂ, ಸರ್ಕಾರ ರಚನೆಗೆ ಆಹ್ವಾನ ನೀಡುವ ಸಾಧ್ಯತೆಗಳಿವೆ. ಸೋಮವಾರ(ನ.12) ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ. 'ಅಂತೂ ಇಂತೂ ಕುರ್ಚಿ ಬಂತು'ಅನ್ನುವಂತಾಗಿದೆ ಯಡಿಯೂರಪ್ಪ ಅವರ ಸ್ಥಿತಿ.

ಸಿಕ್ಕಿದ ದೇವರಿಗೆಲ್ಲ(ದೇವೇಗೌಡರಿಗೂ) ಅಡ್ಡಡ್ಡ ಬಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿ ದಕ್ಕಿಸಿಕೊಳ್ಳಲು ಪಟ್ಟ ಪಾಡನ್ನು ಕಂಡ ರಾಜ್ಯದ ಜನತೆ, ಕೆಲವು ಸಲ ಅಯ್ಯೋ ಪಾಪ ಅಂದಿದೆ. ಬೇಸರದಿಂದ ಕುರ್ಚಿ ಮೋಹ ಈ ಮಟ್ಟಕ್ಕೆ ಹೋಗಬಾರದು ಎಂದು ಗೊಣಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರವಹಿಸಿಕೊಂಡರೆ, ದಕ್ಷಿಣ ಭಾರತದಲ್ಲಿ ಅಧಿಕಾರದ ಖಾತೆ ತೆರೆದ ಸಂತಸ ಬಿಜೆಪಿಗೆ ದಕ್ಕಲಿದೆ. ಈ ಖುಷಿಗಾಗಿಯೇ ಬಿಜೆಪಿ ರಾಷ್ಟ್ರೀಯ ನಾಯಕರು ಈ ಪರಿ ಪರದಾಡಿದರು. ಇದನ್ನು ತಡೆಯಲು ಕಾಂಗ್ರೆಸ್ ಹಗ್ಗ ಜಗ್ಗಾಡಿತು.

ರಾಷ್ಟ್ರಪತಿ ಆಡಳಿತಕ್ಕೆ ತೆರೆ ಬಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕ ಯಶವಂತ ಸಿನ್ಹಾ, 'ಇದೊಂದು ಐತಿಹಾಸಿಕ ದಿನ. ಪ್ರಜಾತಂತ್ರಕ್ಕೆ ಸಂದ ಗೌರವ' ಎಂದು ಬಣ್ಣಿಸಿದ್ದಾರೆ. 'ಆತುರ ಬೇಡ. ಬಿಜೆಪಿ ಸಂತೋಷದಿಂದ ಬೀಗುವುದೇನೂ ಬೇಕಿಲ್ಲ. ಸರ್ಕಾರ ರಚನೆಯಾದರೂ, ಇದು ಪೂರ್ಣಾವಧಿ ಪೂರೈಸಲಾರದು. ಒಂದೆರಡು ತಿಂಗಳಲ್ಲಿಯೇ ಸರ್ಕಾರ ಕುಸಿಯಲಿದೆ' ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಆ ಮಾತನ್ನು ತಳ್ಳಿ ಹಾಕುವಂತಿಲ್ಲ.

ದಿನಕ್ಕೊಂದು ಹೇಳಿಕೆಯಲ್ಲ, ಕ್ಷಣಕ್ಕೊಂದು ಹೇಳಿಕೆ ನೀಡುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನಂಬಿ ಯಡಿಯೂರಪ್ಪ ಮುಂದುವರೆಯುವುದು ಕಷ್ಟವೇ ಇದೆ. ಆದರೆ ಬೇರೆ ದಾರಿ ಬಿಜೆಪಿ ಪಾಲಿಗಿಲ್ಲ. ತಮ್ಮ ರಾಜಕೀಯ ಜೀವನವನ್ನೆಲ್ಲ ಪ್ರತಿಪಕ್ಷದ ಕುರ್ಚಿಯಲ್ಲಿ ಕೂತೇ ಕಳೆದ ಯಡಿಯೂರಪ್ಪ ಅವರಿಗೆ, ಹೆಸರಿನ ಪಕ್ಕ ಮುಖ್ಯಮಂತ್ರಿ ಎಂದು ಬರೆಸಿಕೊಳ್ಳುವ ಕನಸು.

ಕೇಂದ್ರ ಸಂಪುಟದ ತೀರ್ಮಾನ ದೇವೇಗೌಡ ಅವರಿಗೆ ಅಷ್ಟೊಂದು ತೃಪ್ತಿ ತಂದಿಲ್ಲ. ಸರ್ಕಾರ ರಚನೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಜೊತೆ ದೇವೇಗೌಡರು ಗುರುವಾರ(ನ.08)ಇಂದು ಚರ್ಚೆ ನಡೆಸಿದರು. ಸರ್ಕಾರ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಹೆಚ್.ಡಿ.ರೇವಣ್ಣ, ಈಗ ರಾಗ ಬದಲಿಸಿದ್ದಾರೆ. ನಮ್ಮದೇನು ವಿರೋಧವಿಲ್ಲ ಎಂದಿದ್ದಾರೆ. ಗೌಡರ ರಾಜಕೀಯ ಬಲ್ಲವರು ಹೇಳುವ ಪ್ರಕಾರ; ರೇವಣ್ಣ ಮುಂದಿನ ಉಪ ಮುಖ್ಯಮಂತ್ರಿ.

ವೈಷ್ಣವಿ ದೇವಿ ದೇವಸ್ಥಾನಕ್ಕೆ ತೆರಳಿದ್ದ ಯಡಿಯೂರಪ್ಪ, ಗುರುವಾರ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕೇಂದ್ರ ಸಂಪುಟದ ಗ್ರೀನ್ ಸಿಗ್ನಲ್ ಕಂಡು ಹಿರಿಹಿರಿ ಹಿಗ್ಗಿರುವ ಯಡಿಯೂರಪ್ಪ, ಕೇಂದ್ರ ನಾಯಕರಾದ ಆಡ್ವಾಣಿ, ರಾಜನಾಥ್ ಸಿಂಗ್ ಮತ್ತಿತರರ ಭೇಟಿ ಮಾಡಿ ವಂದನಾರ್ಪಣೆ ಸಲ್ಲಿಸಿದ್ದಾರೆ. ಮುಂದೇನು ಮಾಡಬೇಕು, ಜೆಡಿಎಸ್ ತರಲೆಗಳನ್ನು ನಿಭಾಯಿಸುವ ಹೇಗೆ ಮತ್ತಿತರ ಸಂಗತಿಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿದ್ದಾರೆ.

ದೆಹಲಿಯಿಂದ ಗುರುವಾರ ಮಧ್ಯಾಹ್ನ ರಾಜ್ಯಪಾಲರು ಬೆಂಗಳೂರಿಗೆ ಮರಳಿದ್ದಾರೆ. ಇಂದು ರಾತ್ರಿ ಪ್ರತಿಭಾ ಪಾಟೀಲ್, ರಾಷ್ಟ್ರಪತಿ ಆಡಳಿತ ತೆರವಿಗೆ ಅಧಿಕೃತವಾಗಿ ಮೊಹರು ಹಾಕುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಯಡಿಯೂರಪ್ಪ ಇಂದು ರಾತ್ರಿ ಬೆಂಗಳೂರಿಗೆ ಮರಳಲಿದ್ದು, ಶುಕ್ರವಾರ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X