ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ವೀಕ್ ಎಂಡ್ ರಾಜಕೀಯ ; ಭಾನುವಾರದ ಸೆನ್ಸೆಕ್ಸ್

By Staff
|
Google Oneindia Kannada News

ಬೆಂಗಳೂರು. ಅ.28 : ರಾಜ್ಯ ರಾಜಕೀಯದ ಪ್ರಸ್ತುತ ವಿದ್ಯಮಾನಗಳತ್ತ ಪಕ್ಷಿನೋಟ ಹೀಗಿದೆ:

  • 66 ಮಂದಿ ಶಾಸಕ ಬಲಕ್ಕೆ ಉಳಿದ 46 ಶಾಸಕರನ್ನು ಭರ್ತಿಮಾಡುವ ತಂತ್ರ-ಜ್ಞಾನ ಹುಡುಕಾಟದಲ್ಲಿ ಅನುಭವಿ ಪಾರ್ಟಿ ಕಾಂಗ್ರೆಸ್.
  • ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತಿನ ಮಾರಾಮಾರಿ. ಒಂದು ಗುಂಪು ಏರಿಗೆ, ಇನ್ನೊಂದು ಗುಂಪು ನೀರಿಗೆ; ಬೇಸತ್ತ ಸಿದ್ದರಾಮಯ್ಯ ಸಭೆಯಿಂದ ನಿರ್ಗಮನ
  • ಕಾಂಗ್ರೆಸ್ ಮಾರುಕಟ್ಟೆಯಲ್ಲಿ ಕುದುರೆ ವ್ಯಾಪಾರ ತಪ್ಪಿಸಲು ಕುಮಾರಣ್ಣ ಮತ್ತು ಚೆಲುವರಾಯಸ್ವಾಮಿ ಪಣ. ಹೈಟೆಕ್ ಬಸ್ಸಿನಲ್ಲಿ ರಮಣಶ್ರೀ ರೆಸಾರ್ಟ್ ಗೆ ಶಾಸಕರ ಸುಖಪ್ರಯಾಣ.
  • ಅಂತಿಮವಾಗಿ ಬಿಜೆಪಿ- ಜೆಡಿಎಸ್ ಪರ್ಯಾಯ ಸರಕಾರ ರಚನೆ ವಿರೋಧಿಸಿ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲು ಕಾಂಗೈ ಕುಳಗಳ ನಿರ್ಧಾರ.
  • ಯಡಿಯೂರಪ್ಪ ಎನ್ನುವ ಹೆಸರಿನಲ್ಲಿ ಮುಖ್ಯಮಂತ್ರಿಯ ಬಲವಿಲ್ಲರಿ: ಅದಕ್ಕೆ ಇನ್ನುಮುಂದೆ ಅವರು ಯಡ್ಯೂರಪ್ಪ ನಾಮಾಂಕಿತ
  • ಫಲಿಸಿತು ಒಲವಿನ ಪೂಜಾಫಲ, ಎನಗಿಂದು ಕೂಡಿ ಬಂತೇ ಕಂಕಣಬಲ ಹಾಡು ಗುನುಗುತ್ತಿರುವ ಯಡಿಯೂರಪ್ಪ ಸಾರಿ, ಯಡ್ಯೂರಪ್ಪ.
  • ಬಿಜೆಪಿ ರಾಷ್ಟಾಧ್ಯಕ್ಷ ರಾಜನಾಥ್ ಸಿಂಗ್ ಅವರೊಂಗಿದೆ ಶನಿವಾರ ಸೆಲ್ ಫೋನ್ ನಲ್ಲಿ ಮಾತಾಡಿದ ನಂತರ ಮೌನಕ್ಕೆ ಬಿದ್ದ ದೇವೇಗೌಡ
  • ಇದುವರೆಗೆ ಬಾಯಿ ಬಿಡದ ಜಾತ್ಯತೀತ ಗೌಡರ ಮನದಲ್ಲಿ ಏನು ಹುದುಗಿದೆ ಎಂದು ಬಗೆದು ನೋಡುವಲ್ಲಿ ವಿಫಲರಾದ ರಾಜ್ಯದ ಜನತೆ.
  • ಕೋಮುವಾದಿ, ಜಾತಿವಾದಿ, ಅಯೋಧ್ಯ, ರಾಮ ಲಕ್ಷ್ಮಣ ಸೀತಾಕಾಂತ ಸ್ಮರಣೆಗೆ ಅಕ್ಟೋಬರ್ ಕೊನೆಯ ವಾರಾಂತ್ಯದ ರಜೆ.
  • ತಾನು ವಚನಬ್ರಷ್ಟ ಎಂಬ ಕಳಂಕದಿಂದ ಪಾರಾದರೆ ಸಾಕಪ್ಪಾ ಎಂದು ಎಚ್. ಡಿ. ಕುಮಾರಸ್ವಾಮಿ ತಾಯಿ ಭುವನೇಶ್ವರಿಯಲ್ಲಿ ಹರಕೆ.
  • ಸರಕಾರ ರಚನೆ ಬೆಂಬಲಿಸುವ ಜೆಡಿಎಸ್ ಪತ್ರಕ್ಕೆ 56 ಶಾಸಕರ ರುಜು. ಅದಕ್ಕೆ ಹಸ್ತಾಕ್ಷರ ಹಾಕಲು ಏಕಾಂಗಿ ಎಂಪಿ ಪ್ರಕಾಶ್ ನಿರಾಕರಣೆ.
  • ಮಂತ್ರಿ ಮಹೋದಯ ಸ್ಥಾನಮಾನದ ಗುಣಾಕಾರ ಭಾಗಾಕಾರದಲ್ಲಿ ಬಿಜೆಪಿಯ 79 ಮಂದಿ ಶಾಸಕರು.
  • ಮೊದಲು ಸರಕಾರ ರಚನೆ ಆಗಲಿ, ಆನಂತರ ಇಲಾಖೆ ಹಂಚಿಕೊಳ್ಳುವಿಕೆ ಬಗ್ಗೆ ತಲೆಕೆಡಿಸಿಕೊಳ್ಳುವಿಕೆಗೆ ಜೆಡಿಎಸ್ ಒಲವು.
  • 80 ವರ್ಷ ವಯಸ್ಸಿನ ಹಿರೀಕ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಗೆ ಅಪರೂಪಕ್ಕೆ ಈಗ ಕೈತುಂಬಾ ಕೆಲಸ.
  • ಸಂವಿಧಾನ ತಜ್ಞರು, ಚಾಣಕ್ಯರು ಮತ್ತು ಅಮಾತ್ಯರೊಂದಿಗೆ ರಾಜಭವನದಲ್ಲಿ ಹಗಲೂ ಮೂರು ಹೊತ್ತು ಗಂಭೀರ ಚರ್ಚೆ.
  • ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಬಿಜೆಪಿ ಸರಕಾರ ಪ್ರತಿಷ್ಠಾಪನೆಗೆ ದೆಹಲಿಯಿಂದ ಬೆಳ್ಳಿ ತಟ್ಟೆಯಲ್ಲಿ ಫಲ ತಾಂಬೂಲ.
  • ಯಡಿಯೂರಪ್ಪ ನಿಷ್ಠ ಮಠ ಗುಡಿ ಗುಂಡಾರಗಳಿಂದ ಫಲ ಮಂತ್ರಾಕ್ಷತೆ, ಆಶೀರ್ವಚನ.
  • ರಾಜ್ಯದ ಮೂಲೆಮೂಲೆಗಳಿಂದ ಜಿಜೆಪಿ ಕಾರ್ಯಕರ್ತರ ಬೆಂಗಳೂರು ಯಾತ್ರೆ. ಯಡ್ಯೂರಪ್ಪ ಅವರಿಗೆ ತಿಲಕ ಇಡಲು ನಾಮುಂದು ತಾಮುಂದು.

( ದಟ್ಸ್ ಕನ್ನಡ ಫೋನ್ ಸಮಾಚಾರ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X