ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲೆಲ್ಲೂ ಹಬ್ಬದ ಸಡಗರ ಅದೇ ಹುರುಪು, ಉಲ್ಲಾಸ, ಸಂಭ್ರಮ!

By Staff
|
Google Oneindia Kannada News

ಬೆಂಗಳೂರು, ಅ.20 : ಬೆಲೆ ಏರಿಕೆಯ ಬಿಸಿಯ ನಡುವೆಯೂ ಮಾರುಕಟ್ಟೆಗಳು ಗ್ರಾಹಕರ ಗಜಿಬಿಜಿಯಿಂದ ತುಂಬಿ ತುಳುಕುತ್ತಿದ್ದವು. ಮಲ್ಲೇಶ್ವರಂ, ವಿಜಯನಗರ, ಯಶವಂತಪುರ, ಕೆ.ಆರ್.ಮಾರುಕಟ್ಟೆಗಳಲ್ಲಿ ಜನವೋ ಜನ.

ಕಳೆದೆರಡು ದಿನಗಳಿಂದ ನಗರದಲ್ಲಿ ಹುಯ್ಯುತ್ತಿರುವ ಸಂಜೆ ಐದರ ಮಳೆ ಹಬ್ಬದ ಸಂಭ್ರಮಕ್ಕೇನು ತಣ್ಣೀರೆರಚಲಿಲ್ಲ. ಮಾರುಕಟ್ಟೆಗಳಲ್ಲಿ ನಿಂಬೆ, ಬಾಳೆಕಂದು, ಬೂದು ಕುಂಬಳ ಕಾಯಿ, ಹೂವಿನ ಖರೀದಿ ಸಾಂಗವಾಗೇ ನಡೆಯಿತು. ಶುಕ್ರವಾರದಿಂದಲೇ ಕೆಲವು ಕಡೆ ಆಯುಧ ಪೂಜೆ ಸಂಭ್ರಮ ಶುರುವಾಗಿತ್ತು. ತಂತಮ್ಮ ವಾಹನಗಳಿಗೆ ಬಾಳೆಕಂದುಗಳನ್ನು ಕಟ್ಟಿ ಚಕ್ರದ ಅಡಿಗೆ ನಿಂಬೆ ಹಣ್ಣಿಟ್ಟು ಬೂದುಕುಂಬಳವನ್ನು ನಿವಾಳಿಸಿ ಹೊಡೆಯುತ್ತಿದ್ದ ದೃಶ್ಯಗಳು ಸಾಮನ್ಯವಾಗಿದ್ದವು. ಸ್ನಾನವೇ ಕಾಣದ ವಾಹನಗಳು ಆಯುಧ ಪೂಜೆಯ ದಿನವಂತೂ ತಣ್ಣೀರ ಅಭಿಷೇಕದಲಿ ಮಿಂದು ಹೂವಿನಲಿ ಸಿಂಗಾರಗೊಂಡಿದ್ದವು. ಕೆಲವೊಂದು ಕಚೇರಿ, ಕಾರ್ಖಾನೆಗಳು ಶನಿವಾರ ಮತ್ತು ಭಾನುವಾರ ರಜೆ ಘೋಷಿಸಿವೆ.

ಇದಿಷ್ಟು ನಗರವಾಸಿಗಳ ಕತೆಯಾದರೆ ಬೆಂಗಳೂರು ಹೊರವಾಸಿಗಳ ಕತೆ ತೀರಾ ಭಿನ್ನ. ಈ ಹಬ್ಬಗಳು ವಾರಾಂತ್ಯಕ್ಕೆ ಬಂದಿದ್ದು ಜೊತೆಗೆ ಮಕ್ಕಳಿಗೆ ದಸರಾ ರಜೆಗಳು ಸೇರಿ ಊರಿಗೆ ಹೊರಡುವ ತಾರಾತುರಿಯಲ್ಲಿ ಅವರಿದ್ದರು. ಶುಕ್ರವಾರವಂತೂ (ಅ.19) ಕೆಂಪೇಗೌಡ ಬಸ್ ನಿಲ್ದಾಣ ಕಿಷ್ಕಿಂದೆಯಾಗಿತ್ತು. ಹೆಜ್ಜೆ ಇಡಲೂ ಸ್ಥಳವಿಲ್ಲದ ದುಸ್ಥಿತಿ. ಮಕ್ಕಳು ಮರಿಗಳನ್ನು ಹೊತ್ತವರಂತೂ ಹೈರಾಣಾಗಿದ್ದರು. ಇನ್ನು ಮಹಿಳೆಯರ ಸ್ಥಿತಿಯಂತೂ ಸಾಕಪ್ಪಾ ಸಾಕು ಅನ್ನುವಂತಿತ್ತು. ನಗರದಲ್ಲಿನ ರೈಲ್ವೆ ನಿಲ್ದಾಣಗಳ ಪರಿಸ್ಥಿತಿಯೂ ಇದೇ ಆಗಿತ್ತು. ಒಟ್ಟಿನಲ್ಲಿ ಸಂಪ್ರದಾಯ ಅನ್ನಿ ಸಂಸ್ಕೃತಿ ಅನ್ನಿ ಸಂಭ್ರಮಿಸಲು, ಒಂದಷ್ಟು ವಿರಮಿಸಲು ಹಬ್ಬ ಅಂತೂ ಬೇಕೆ ಬೇಕು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X