ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರ ಪ್ರದಕ್ಷಿಣೆ : ಮೈಸೂರಿನಲ್ಲಿ ಎಲ್ಲೆಲ್ಲೂ ಜನ ಜನ ಜನ

By Staff
|
Google Oneindia Kannada News

ಮೈಸೂರು, ಅ.16 : ರಾಜ್ಯ ರಾಜಕೀಯದ ಕಾವು, ಮೈಸೂರು ದಸರಾ ಸಡಗರವನ್ನು ಕುಗ್ಗಿಸಿಲ್ಲ. ವಿದೇಶಿಯರು ಸೇರಿದಂತೆ ಅಸಂಖ್ಯ ಪ್ರವಾಸಿಕರನ್ನು ದಸರಾ ಆಕರ್ಷಿಸಿದೆ.

ಮಂಗಳವಾರ(ಅ.16) ಐದನೇ ದಿನಕ್ಕೆ ದಸರಾ ಉತ್ಸವ ಕಾಲಿಟ್ಟಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರವಾಸಿಕರು ಪಾಲ್ಗೊಳ್ಳುತ್ತಿದ್ದಾರೆ. ಮೈಸೂರು ಅರಮನೆ ಮುಂದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಹಾರಾಜ ಕಾಲೇಜಿನ ಮೈದಾನದಲ್ಲಿ ಯುವ ದಸರಾ ರಂಗೇರಿದೆ.

ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅ.13ರಂದು ಚಂದ್ರಶೇಖರ ಕಂಬಾರ ಚಾಲನೆ ನೀಡಿದರು. ಕುನ್ನಕುಡಿ ವೈದ್ಯನಾಥ್ ಅವರ ಸಂಗೀತ ಕಚೇರಿ ಎಲ್ಲರ ಆಕರ್ಷಿಸಿದೆ. ಅರಮನೆ ಮೈದಾನದಲ್ಲಿ ಜನಪದ ಜಾತ್ರೆ ಎಂಬ ಉತ್ಸವ , ಮೊದಲ ಬಾರಿಗೆ ಆರಂಭವಾಗಿದೆ. ರಾಜ್ಯದ 15ತಂಡಗಳು ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತಿವೆ.

ಟಿವಿಎಸ್ ಸಮೂಹ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಯೋಜಕತ್ವ ವಹಿಸಿವೆ. ಅ.13ರಿಂದ ಆರಂಭಗೊಂಡಿರುವ ಯುವ ದಸರಾದಲ್ಲಿ ತಡೆಯಿಲ್ಲದ ಮನರಂಜನೆ ಮುಂದುವರೆದಿದೆ. ವಿಷ್ಣುವರ್ಧನ್,ಮುಂಗಾರು ಮಳೆ ನಾಯಕ ಗಣೇಶ್, ಉಷಾ ಉತುಪ್, ಸೋನು ನಿಗಮ್ ಪಾಲ್ಗೊಳ್ಳುವಿಕೆ ಮೈಸೂರಿಗರಿಗೆ ಹರ್ಷ ತಂದಿದೆ.

ನಗರದ ಹೋಟೆಲ್ ಗಳು ತುಂಬಿತುಳುಕುತ್ತಿವೆ. ಅಕ್ಕಪಕ್ಕದ ಊರುಗಳಲ್ಲಿ ಗೃಹ ವಾಸ್ತವ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಚಾಲನೆ ನೀಡಿದೆ. ಶತಮಾನದಷ್ಟು ಹಳೆಯದಾದ ಮೈಸೂರಿನ ಮೃಗಾಲಯಕ್ಕೆ ಅನೇಕ ಪ್ರವಾಸಿಕರು ಆಗಮಿಸುತ್ತಿದ್ದಾರೆ. ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಕೆಆರ್ಎಸ್, ರಂಗನತಿಟ್ಟು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಈಗ ಜನವೋ ಜನ. ಮೈಸೂರಿಗೆ 80ಕಿ.ಮೀ.ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲೂ ಪ್ರವಾಸಿಕರ ದಂಡು ಕಾಣಿಸುತ್ತಿದೆ.

ದಸರಾ ಹಿನ್ನೆಲೆ ನಗರದಲ್ಲಿ ನಡೆದ ಆಹಾರ ಮೇಳದಲ್ಲಿ ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ಥಾನ, ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಖಾದ್ಯಗಳು ಕಂಡು ಬಂದವು.

ದಸರಾ ಕ್ರೀಡಾಕೂಟ ಈ ವರ್ಷ ಮಹತ್ವ ಪಡೆದಿದೆ. 2500ಕ್ಕೂ ಅಧಿಕ ಆಟಗಾರರು ನಗರಕ್ಕೆ ಬಂದಿದ್ದಾರೆ. ಕುಸ್ತಿ, ಕಬಡ್ಡಿ ಸೇರಿದಂತೆ ಸಾಂಪ್ರದಾಯಿಕ ಆಟಗಳು, ಜನರನ್ನು ಸೆಳೆದಿವೆ.

ನಾಡಹಬ್ಬ ದಸರಾವನ್ನು ಆಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತಿದೆ. ಅ.21ರಂದು ಜಂಬೂ ಸವಾರಿ ನಡೆಯಲಿದ್ದು, ಆ ದಿನ ಮೈಸೂರು ಕಿಕ್ಕಿರಿದು ತುಂಬಲಿದೆ. ಜಂಬೂ ಸವಾರಿಯನ್ನು ದೂರದರ್ಶನ ನೇರಪ್ರಸಾರ ಮಾಡಲಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X