• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಹೊಸ ಸರ್ಕಾರ:ರಾಜ್ಯಪಾಲರು ಏನನ್ನುತ್ತಾರೆ?

By Staff
|

ಕರ್ನಾಟಕದಲ್ಲೀಗ ರಾಜ್ಯಪಾಲರ ರಾಮೇಶ್ವರ ಠಾಕೂರ್ ಅವರ ಆಡಳಿತ... ಬೆಂಗಳೂರು, ಅ.12 : ರಾಜ್ಯಪಾಲ ರಾಮೇಶ್ವರ ಠಾಕೂರ್ ಶುಕ್ರವಾರ(ಅ.12) ವಿಧಾನಸೌಧದಲ್ಲಿ ಆಡಳಿತದ ಚುಕ್ಕಾಣಿ ಹಿಡಿದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಲು ಅವರು ನಿರಾಕರಿಸಿದ್ದಾರೆ.

ಅಧಿಕಾರಿಗಳ ಸಭೆ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡುತ್ತಿದ್ದರು. ಮುಂದಿನ ರಾಜಕೀಯ ಬೆಳವಣಿಗೆ ಮತ್ತು ಹೊಸ ಸರ್ಕಾರ ರಚನೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ, ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಭಾರತದ ಸಂವಿಧಾನದನ್ವಯ ನಾನು ಕಾರ್ಯ ನಿರ್ವಹಿಸುತ್ತೇನೆ. ಪಕ್ಷಪಾತ ಧೋರಣೆಯನ್ನು ಅನುಸರಿಸುವುದಿಲ್ಲ ಎಂದರು. ರಾಜ್ಯದಲ್ಲಿನ ಅಸ್ಥಿರತೆ ಎಷ್ಟು ದಿನ ಎಂಬ ಪ್ರಶ್ನೆಗೆ, ನನಗೂ ಗೊತ್ತಿಲ್ಲ ಎಂದು ರಾಜ್ಯಪಾಲರು ಉತ್ತರಿಸಿದರು.

'ರಾಜ್ಯಪಾಲರು ವಾಪಸ್ ಮರಳಲಿ..'ಎಂಬ ವಾಟಾಳ್ ನಾಗರಾಜ್ ಅವರ ಕಪ್ಪುಬಾವುಟದ ಸ್ವಾಗತವನ್ನು ರಾಜ್ಯಪಾಲರು, ವಿಧಾನಸೌಧದಲ್ಲಿ ಮೊದಲ ದಿನ ಎದುರಿಸಬೇಕಾಯಿತು. ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ನಿಗಾವಹಿಸಲು ರಾಜ್ಯಪಾಲರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ : ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿಸಿಕೊಳ್ಳುತ್ತಿರುವ ಸಚಿವ ರಾಜಶೇಖರ ಮೂರ್ತಿ ಮತ್ತು ಎನ್.ಧರ್ಮಸಿಂಗ್ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಸದ್ಯದ ಬೆಳವಣಿಗೆ ಗಮನಿಸಿದರೆ, ಜೆಡಿಎಸ್ ಜೊತೆ ಮರು ಮೈತ್ರಿ ಏರ್ಪಡುವ ಲಕ್ಷಣಗಳು ಕಾಣಿಸುತ್ತಿವೆ.

ಮನೆಬಾಗಿಲಿಗೇ ಆಡಳಿತ : ರಾಜ್ಯಪಾಲರ ಕರೆ

ರಾಜ್ಯವು ಅಭಿವೃದ್ಧಿ ಪಥದಲ್ಲಿ ನಿರಂತರವಾಗಿ ಮುನ್ನಡೆಯಲು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಶ್ರಮಿಸುವಂತೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಇಂದು(ಅ.12) ಕರೆ ನೀಡಿದರು.

ವಿಧಾನಸೌಧದಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಪರಿಣಾಮಕಾರಿ ಹಾಗೂ ಸೂಕ್ಷ್ಮ ಸಂವೇದಿ ಆಡಳಿತವನ್ನು ನೀಡುವ ಮೂಲಕ ಅಧಿಕಾರಿಗಳು ರಾಜ್ಯದ ಅಭಿವೃದ್ಧಿ ಹಾಗೂ ದುರ್ಬಲ ವರ್ಗದ ಜನರ, ಅದರಲ್ಲೂ ಮಹಿಳೆಯರು, ಮಕ್ಕಳು, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ರೈತರ ಆತ್ಮಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಈ ಪ್ರಕ್ರಿಯೆಯನ್ನು ಇತಿಹಾಸಕ್ಕೆ ಸೇರಿಸಬೇಕು ಎಂದರು. ನೆರೆ ಹಾವಳಿಯಿಂದ ಪೀಡಿತ ಜನರಿಗೆ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಸಂಬಂಧ ಪಟ್ಟ ಫಲಾನುಭವಿಗಳಿಗೆ ದೊರಕುವಂತೆ ಮಾಡಬೇಕು. ಅಧಿಕಾರಿಗಳು ಪ್ರತಿ ನಿರ್ಧಾರವನ್ನೂ ಕಾನೂನುಬದ್ಧವಾಗಿ ತೆಗೆದುಕೊಂಡು, ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಜನಸಾಮಾನ್ಯರ ಮನೆಬಾಗಿಲಿಗೇ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಯ್ಯುವ ಕೆಲಸವಾಗಬೇಕೆಂದು ಅವರು ತಿಳಿಸಿದರು.

ಪ್ರಾಮಾಣಿಕ, ದಕ್ಷ ಅಧಿಕಾರಿಗಳನ್ನು ಪ್ರೋತ್ಸಾಹಿಸಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಅವರಿಗೆ ರಕ್ಷಣೆ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ರಾಜ್ಯಪಾಲರು, "ಇಂದಿನ ಕೆಲಸವನ್ನು ಇಂದೇ ಮುಗಿಸಿ" ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯದ ಮೂಲಭೂತ ಸೌಲಭ್ಯಗಳ ಕೊರತೆ, ಅದರಲ್ಲೂ ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಅವರು ಮೆಟ್ರೋ ರೈಲು ಯೋಜನೆ ಹಾಗೂ ಏರ್‌ಪೋರ್ಟ್ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಚುರುಕುಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ರಾಷ್ಟ್ರಪತಿ ಆಳ್ವಿಕೆಯ ಈ ಅವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಜವಾಬ್ದಾರಿಯನ್ನು ನಿರ್ವಹಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಬಿ. ಮಹಿಷಿ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X