• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚದುರಂಗದಾಟದಲ್ಲಿ ನಿರ್ಜೀವ ಪಗಡೆಕಾಯಿ ಕುಮಾರಸ್ವಾಮಿ!

By Staff
|

ರಾಜಕೀಯ ಚದುರಂಗದಾಟದಲ್ಲಿ ಸ್ವತಂತ್ರವಾಗಿ ಒಂದೇ ಒಂದು ನಡೆಯನ್ನು ನಡೆಸಲಾಗದ ನಿರ್ಜೀವ ಪಗಡೆಯ ಕಾಯಿ; ಹರದನಹಳ್ಳಿ ದೇವೇಗೌಡರ ಮಗ ಕುಮಾರಸ್ವಾಮಿ ಅಲಿಯಾಸ್ ಎಚ್.ಡಿ.ಕುಮಾರಸ್ವಾಮಿ. ಆಟ ಆಡುವಾತ ಉರುಳಿಸಿದ ದಾಳಕ್ಕೆ ಅನುಗುಣವಾಗಿ ಮುನ್ನಡೆಸಿದತ್ತ ನಡೆದವರು ಕುಮಾರಸ್ವಾಮಿ. ಅವರು ಕಿರೀಟವಿಲ್ಲದೆ ಸಿಂಹಾಸನವೇರಿದ ರಾಜಕುಮಾರ. ಸಿಂಹಾಸನಕ್ಕಾಗಿ ನಡೆಸಿದ ಹೋರಾಟ, ವಚನ ಭ್ರಷ್ಟತೆ ಎಂಬು ಬಿರುದನ್ನು ಧರಿಸಿದ್ದು ಎಲ್ಲವೂ ಅವರನ್ನು ಬೆತ್ತಲಾಗಿಸಿದೆ. ಈಗ ಸಿಂಹಾಸನವಿಲ್ಲ. ಜೊತೆಗೆ ಮುಖದ ತುಂಬ ಕಪ್ಪು ಮಸಿ.

ಅಪ್ಪನ ಮಾತು ಕೇಳಿ ದಾರಿ ತಪ್ಪಿದ ಮಗ ಕುಟಿಲತೆಯಿಂದ ವಿರೋಧಿಗಳನ್ನು ಉರುಳಿಸಿದ ರೀತಿ, ದಾಳ ಉರುಳಿಸುವವನ ಅಣತಿಯಂತೆ ಪಗಡೆ ಕಾಯಿ ರಾಜನ ಚುಕ್ಕಾಣಿ ಹಿಡಿದಿದ್ದು, ರಾಜಕೀಯ ದಾಯಾದಿಗಳಿಗೆ ನೀಡಲೇಬೇಕಾಗಿದ್ದ ರಾಜ್ಯವನ್ನು ಕುಂಟುನೆಪ ತೋರಿಸಿ ಸಿಗಲಾರದಂತೆ ಮಾಡಿದ್ದು ಮಹಾಭಾರತದ ಪಾತ್ರವೊಂದನ್ನು ನೆನಪಿಸುತ್ತದೆ.

ಸ್ವತಃ ನಿರ್ಣಯಗಳನ್ನು ತೆಗೆದುಕೊಳ್ಳಲಾರದ, ಪಕ್ಷದ ಮೇಲೆಯೇ ಹಿಡಿತವಿಲ್ಲದ, ಸೋತಾಗ ಪಶ್ಚಾತ್ತಾಪ ಪಟ್ಟು ಗಳಗಳನೇ ಅಳುವ ರಾಜ ರಾಜ್ಯವನ್ನು ಹೇಗೆ ಆಳಬಲ್ಲ? ನುಡಿದಂತೆ ನಡೆಯುವ ಮನಸ್ಸಿದ್ದೂ ಸೂತ್ರದ ಗೊಂಬೆಯಂತೆ ಕೈಕಾಲು ಬಾಯಿ ಆಡಿಸುವ ವ್ಯಕ್ತಿ ಹೇಗೆ ನಂಬಿಕಾರ್ಹನಾಗಬಲ್ಲ? ಗಂಟೆಗೊಂದು ರೀತಿ ಮಾತನಾಡುತ್ತ ಇಡೀ ರಾಜ್ಯದ ಜನತೆಗೆ ಮಂಕುಬೂದಿ ಎರಚಲು ಯತ್ನಿಸಿದ ವ್ಯಕ್ತಿಯನ್ನು ನಮ್ಮ ಅಧಿಪತಿ ಅಂತ ಕರೆಯುವುದಾದರೂ ಹೇಗೆ?

ಇಪ್ಪತ್ತು ತಿಂಗಳು ರಾಜ್ಯವಾಳಿ ಕೊನೆಯಕ್ಷಣದವರೆಗೂ ಅಪ್ಪ ಎಚ್.ಡಿ.ದೇವೇಗೌಡರೇ ಹೇಳಿದಂತೆ ಚಾಚೂತಪ್ಪದೆ ನಡೆದುಕೊಂಡು ಕೊನೆಯ ಕ್ಷಣದಲ್ಲಿ "ಆತ್ಮಸಾಕ್ಷಿ"ಗೆ ವಿರುದ್ಧವಾಗಿ ನಡೆದೆ, ಜನತೆಗೆ ನೋವಾಗಿದ್ದರೆ ಕ್ಷಮಿಸಬೇಕು ಎಂದು ಗಳಗಳನೇ ಅತ್ತರೆ ಜನ ಕ್ಷಮಿಸುತ್ತಾರೆಯೇ? ಖಂಡಿತ ಕ್ಷಮಿಸಲಾರರು.

ರಾಜಕೀಯದಲ್ಲಿ ಎಂದೂ ಸಕ್ರೀಯವಾಗಿ ಭಾಗವಹಿಸದಿದ್ದ ಕುಮಾರಸ್ವಾಮಿ ಶಾಸಕನಾಗಿ ಪ್ರಥಮಬಾರಿ ಆಯ್ಕೆಯಾದ ವರ್ಷದಲ್ಲೇ ರಾಜಕೀಯ ಬದ್ಧ ವೈರಿಗಳ ಜೊತೆ ಕೈಜೋಡಿಸಿದಾಗಲೇ ಈ ಟ್ವೆಂಟಿ ಟ್ವೆಂಟಿ ಮ್ಯಾಚ್‌ನ ಫಲಿತಾಂಶ ಎಲ್ಲಾ ರಾಜಕಾರಣಿಗಳಿಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೂ ತಿಳಿದಿತ್ತು.

ರಾಜಕೀಯ ನಡೆಗಳನ್ನು, ಸೂಕ್ಷ್ಮಗಳನ್ನು ಹಂತಹಂತವಾಗಿ ಕಲಿಯಲು ಕುಮಾರಸ್ವಾಮಿಗೆ ಮೈತ್ರಿಸರ್ಕಾರ ಅದ್ಭುತ ವೇದಿಕೆ ಕಲ್ಪಿಸಿತ್ತು. ಕಡಿಮೆ ವಯಸ್ಸು, ಬತ್ತದ ಉತ್ಸಾಹ, ರಾಜಕೀಯಕ್ಕೆ ಹೊಸಬನಾದ್ದರಿಂದ ಭ್ರಷ್ಟತೆಯ ಸೊಂಕಿಲ್ಲದ ವ್ಯಕ್ತಿತ್ವ(ಅಂತ ಅಂದುಕೊಳ್ಳಬಹುದು) ಯಾರಿಗೂ ಸಿಗದ ಅವಕಾಶವನ್ನು ಬೊಗಸೆಯಲ್ಲಿ ದಕ್ಕಿಸಿತ್ತು. ಆದರೆ, ಬೊಗಸೆ ಹಿಡಿದಾಗಲೇ ಅದಕ್ಕೆ ತೂತು ಬಿದ್ದಿತ್ತು ಅನ್ನುವುದು ವಿಷಾದನೀಯ.

ಕುಮಾರಸ್ವಾಮಿ ಎಂದೂ ಸರಿದಾರಿಯಲ್ಲಿ ನಡೆಯಲು ಪ್ರಯತ್ನವನ್ನೇ ಮಾಡಲಿಲ್ಲ ಎಂದರೆ ತಪ್ಪಾದೀತು. ಜನತಾದರ್ಶನ, ಗ್ರಾಮವಾಸ ಮಾಡಿ ಬಡವರ ಮಾತಿಗೆ ಕಿವಿಯಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೇರೆ ರಾಜಕಾರಣಿಗಳಿಗಿಂತ ಹೃದಯವಂತ, ಉತ್ತಮ ಮಾರ್ಗದರ್ಶನವಿದ್ದರೆ ಉತ್ತಮ ಆಡಳಿತ ನೀಡಬಲ್ಲ ಎಂದು ಆಶೆ ಹುಟ್ಟಿಸಿದ್ದರು. ಸಾರಾಯಿ, ಲಾಟರಿ ನಿಷೇಧಿಸಿದ್ದಾರೆ. ಆದರೆ, ಕಿರೀಟ ತೊಡಿಸಿದಂದಿನಿಂದ ಕಿರೀಟ ಇಳಿಯುವವರೆಗೂ ಕೋಣ ನೀರಿಗೆ ಎಳೆದಂತೆ ಕುಟಿಲಹಾದಿಯಲ್ಲಿ ನುಗ್ಗಿಸುತ್ತಾ ನಡೆದ ಅಪ್ಪ ದೇವೇಗೌಡರು ಒಂದೆಡೆಯಾದರೆ, ಇನ್ನೇನು ಬೆಂಬಲ ಪತ್ರ ಬಿಜೆಪಿಗೆ ಕೊಡಬೇಕೆನ್ನುವಾಗ ಅವರ ಕೈಯಿಂದ ಅದನ್ನು ಕಿತ್ತುಕೊಂಡು ಅಪ್ಪ ಹಾಕಿದ ದಾರಿಯಲ್ಲೇ ನಡೆ, ಬೆಂಬಲ ಪತ್ರ ನೀಡಿದ್ದೇ ಆದರೆ ಅಪ್ಪನನ್ನು ಕಳೆದುಕೊಳ್ಳಬೇಕಾಗುತ್ತೆ (ಬಿಜೆಪಿಗೆ ಬೆಂಬಲ ನೀಡಿದರೆ ದೇವೇಗೌಡ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದರು) ಎಂದು ಬೆದರಿಕೆಯೊಡ್ಡಿದ, ಕುಮಾರಸ್ವಾಮಿ ಪ್ರತಿಯೊಂದು ಕ್ರಿಯೆಯಲ್ಲೂ ಮೂಗು ತೂರಿಸುವ ಅಣ್ಣ ರೇವಣ್ಣ ಮತ್ತೊಂದೆಡೆ.

ಅಪ್ಪನ 'ಮಾರ್ಗದರ್ಶನ'ವಿಲ್ಲದಿದ್ದರೆ, ಅಣ್ಣನ 'ಸಹಕಾರ'ವಿಲ್ಲದಿದ್ದರೆ ಕುಮಾರಸ್ವಾಮಿ ಜನತೆಯೆ ಆರಾಧ್ಯ ರಾಜಕಾರಣಿಯಾಗುತ್ತಿದ್ದರೆ? ಬಿಜೆಪಿಗೆ ಅಧಿಕಾರ ಬಿಟ್ಟುಕೊಡುತ್ತಿದ್ದರೆ? ಉತ್ತರಿಸುವುದು ಕಷ್ಟ. ಅಸಲಿಗೆ ಇವರಿಬ್ಬರ ಕೈವಾಡವಿಲ್ಲದಿದ್ದರೆ 'ಕೈ' ಸಂಕೇತದ ಕಾಂಗ್ರೆಸ್‌ಗೆ ಕೈನೀಡಿ ಮುಖ್ಯಮಂತ್ರಿ ಆಗುತ್ತಲೂ ಇರಲಿಲ್ಲ.

ಅವಕಾಶವಾದಿ ಎಂದು ಕರೆಯಿರಿ, ಮಹಾತ್ವಾಕಾಂಕ್ಷಿ ಅಂತೆಯೂ ಕರೆಯಿರಿ. ಸೂಟುಬೂಟುಗಳ ಹಂಗಿಲ್ಲದೆ ಪ್ಯಾಂಟು ಬುಷ್‌ಶರ್ಟಿನಲ್ಲೇ ಸಾಮಾನ್ಯ ಜನತೆಯ ಪ್ರತಿನಿಧಿಯಾಗಿ ತಮ್ಮನ್ನು ಬಿಂಬಿಸಿಕೊಂಡಿದ್ದಾರೆ ಕುಮಾರಸ್ವಾಮಿ. ಆದರೂ ಕೊನೆಯಲ್ಲಿ ನೆನಪಿನಲ್ಲುಳಿಯುವುದು 'ಅಪ್ಪ ಕುಣಿಸಿದಂತೆ, ಅಣ್ಣ ಆಡಿಸಿ ಎಣಿಸಿದಂತೆ ಆಡಿದ ಸೂತ್ರದ ಬೊಂಬೆ'ಯಾಗಿಯೇ!

ಲೆಕ್ಕವಿಲ್ಲದಷ್ಟು ಮಾಡಿದ ಜನತಾದರ್ಶನಗಳು, ಯಾವ ಮುಖ್ಯಮಂತ್ರಿಯೂ ಮಾಡಿರದ ಗ್ರಾಮವಾಸಗಳೇ ಕುಮಾರಸ್ವಾಮಿ ಗಳಿಸಿದ ಎರಡು ಇನ್‌ಟ್ಯಾಂಜಿಬಲ್ ಆಸ್ತಿಗಳು. ಈ ಆಸ್ತಿಗಳಿಕೆಯಿಂದ ಜನತೆಗೆ ಎಷ್ಟು ಲಾಭವಾಗಿದೆಯೆನ್ನುವುದು ಚರ್ಚೆಗೆ ಬಿಟ್ಟ ವಿಚಾರ. ಆದರೆ, ಅವರು ಮಾಡಿಕೊಂಡಿರುವ ಟ್ಯಾಂಜಿಬಲ್ ಆಸ್ತಿಗಳಿಗೆ ಲೆಕ್ಕವೇ ಇಲ್ಲ. ಗಣಿ ಧಣಿಗಳಿಂದ ತಿಂದ ಆರೋಪ ಹೊತ್ತಿರುವ 500 ಕೋಟಿ ರುಪಾಯಿ, ವೈಟ್‌ಫೀಲ್ಡ್‌ನಲ್ಲಿ ಪತ್ನಿ ಹೆಸರಲ್ಲಿ ಕಾನೂನು ಬಾಹಿರವಾಗಿ ದಕ್ಕಿಸಿಕೊಂಡರೆನ್ನಲಾದ 85 ಕೋಟಿ ಆಸ್ತಿ, ಕೊನೆಗೆ ಅಪ್ಪ ಅಣ್ಣನ ಜೊತೆ ಸೇರಿಕೊಂಡು ಆಡಿದ ರಾಜಕೀಯ ನಾಟಕ ಅವರ ರಾಜಕೀಯ ಜೀವನದ ಅಂಕದ ಪರದೆಯನ್ನು ಎಳೆದುಬಿಟ್ಟಿದೆ.

ಕುಮಾರಸ್ವಾಮಿ ಈಸ್ ಪೊಲಿಟಿಕಲಿ ಫಿನಿಷ್ಡ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more