ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14ನೇ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಕಂಡ ಏಳುಬೀಳುಗಳು

By Staff
|
Google Oneindia Kannada News
All in the game : Dharam Singh, Devegowda, Yediyurappa, Kumaraswamy

ಬೆಂಗಳೂರು, ಅ.03 : ಸಿದ್ಧಾಂತಗಳನ್ನು ಬದಿಗೊತ್ತಿ ಕೇವಲ ಅಧಿಕಾರಕ್ಕಾಗಿಯೇ ಜಾತಿವಾದಿ, ಜಾತ್ಯತೀತ, ಎರಡೂ ಅಲ್ಲದ ರಾಜಕೀಯ ಬಣಗಳು (ಅ)ಪವಿತ್ರಮೈತ್ರಿ ಬೆಳೆಸಿ ಮತ್ತೊಂದು ಚುನಾವಣೆಯತ್ತ ರಾಜ್ಯವನ್ನು ತಂದು ನಿಲ್ಲಿಸಿವೆ. ಎರಡೆರಡು ಸರ್ಕಾರಗಳು ರಚಿತವಾದರೂ ಎರಡೂ ಬರಕತ್ತಾಗದೆ ಮತ ಹಾಕಿದ ಮತದಾರರನ್ನು ಮಂಗ್ಯಾ ಆಗಿ ಮಾಡಿವೆ.ರಾಜಕಾರಾಣಿಗಳು ಹೂಡಿರುವ ತಂತ್ರ, ಪ್ರತಿತಂತ್ರಗಳು ಹೇಗಿವೆಯೆಂದರೆ ಯಾರು ಸಾಚಾ, ಯಾರು ಶಕುನಿ ಎಂದು ನಿರ್ಧರಿಸಲಾಗದ ಸ್ಥಿತಿಗೆ ರಾಜ್ಯದ ಜನತೆ ಬಂದು ನಿಂತಿದೆ.

ಬಿಜೆಪಿಗೆ ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಟ್ಟರೆ ಜಾಣರಾಗುತ್ತಾರೆ, ಅಧಿಕಾರ ಬಿಟ್ಟುಕೊಡದಿದ್ದರೂ ಜಾಣರಾಗುತ್ತಾರೆ. ಮೊದಲನೇ ಕೆಲಸ ಮಾಡಿದರೆ ಅವರು ಜನಮನ್ನಣೆ ಗಳಿಸುತ್ತಾರೆ, ಎರಡನೇ ಕೆಲಸ ಮಾಡಿದರೆ ಅಧಿಕಾರ ಅವರಲ್ಲಯೇ ಉಳಿಯುತ್ತದೆ! ಮತ್ತೊಂದು ರಾಜಕೀಯ ಬಣ ಕಾಂಗ್ರೆಸ್ ಜಾಣ್ಮೆಯಿಂದ ಮುಂದಿನ ನಡೆಗಳನ್ನು ಎದಿರುನೋಡುತ್ತಿದೆ. ಒಂದು ವೇಳೆ 'ಡಿಫ್ಯಾಕ್ಟೋ ಮುಖ್ಯಮಂತ್ರಿ' ಎಚ್.ಡಿ.ದೇವೇಗೌಡ ಅಧಿಕಾರ ಬಿಟ್ಟುಕೊಡದೇ ಇದ್ದರೆ ಮಧ್ಯಂತರ ಚುನಾವಣೆಯಾಗುವುದು ಗ್ಯಾರಂಟಿ. ಜನ ಇವರೆಲ್ಲರಿಗಿಂತಲೂ ಜಾಣರು.

ಏನೇ ಇರಲಿ, ಕರ್ನಾಟಕದ ರಾಜಕೀಯರಂಗ ಹಿಂದೆಂದೂ ಕಂಡಿರದ ನಾಟಕೀಯ ಬೆಳವಣಿಗೆಗಳನ್ನು ಕಾಣುತ್ತಿರುವ ಹಿನ್ನೆಲೆಯಲ್ಲಿ ನಡೆದುಬಂದ ಹಾದಿಯತ್ತ ಒಂದು ನೋಟ ಹರಿಸೋಣ.

2004ರಲ್ಲಿ 14ನೇ ಲೋಕಸಭೆ ಮತ್ತು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದ ರಾಜಕೀಯ ಪಕ್ಷಗಳ ಬಲಾಬಲ ಈ ಕೆಳಗಿನಂತಿದೆ.

ಒಟ್ಟು ವಿಧಾನಸಭೆ ಸ್ಥಾನಗಳು : 224

ಬಿಜೆಪಿ ಕಾಂಗ್ರೆಸ್ ಜನತಾದಳ(ಸ) ಜನತಾದಳ(ಸಂ) ಇತರರು
79 65 58 5 17

ಒಟ್ಟು ಲೋಕಸಭೆ ಸ್ಥಾನಗಳು : 28

ಬಿಜೆಪಿ ಕಾಂಗ್ರೆಸ್ ಜೆಡಿ(ಎಸ್)
18 8 2

ರಾಜಕೀಯ ನಾಟಕದ ಒಳನೋಟಗಳು

ಧರ್ಮಕಾರಣದ ಪ್ರಮುಖ ಮಜಲುಗಳು

* ರಾಜಕೀಯ ಪಕ್ಷಕ್ಕೂ ನಿಚ್ಚಳ ಬಹುಮತ ಸಿಗದೇ ತೂಗುಯ್ಯಾಲೆಯಲ್ಲಿದ್ದ ವಿಧಾನಸಭೆಯಲ್ಲಿ ಮೈತ್ರಿಕೂಟಗಳ ರಾಜ್ಯಭಾರದ ಶಕೆ ಪ್ರಾರಂಭ.
* ಅತಿಹೆಚ್ಚು ಸ್ಥಾನಗಳಿಸಿದ್ದರೂ ಜಾತಿವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಧರಂಸಿಂಗ್ ನೇತೃತ್ವದ ಕಾಂಗ್ರಸ್ ನೊಂದಿಗೆ ಕೈಜೋಡಿಸಿದ ಜಾತ್ಯತೀತ ಜನತಾದಳ.
* 2004ರ ಮೇ 18ರಂದು ಧರಂಸಿಂಗ್ 20ನೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ. ಸಿದ್ದರಾಮಯ್ಯಗೆ ಉಪಮುಖ್ಯಮಂತ್ರಿ ಪಟ್ಟ.
* ಭಲೇ ಅದೃಷ್ಟವೋ ಎಂಬಂತೆ ಧರಂ ಸರ್ಕಾರವಿದ್ದಾಗ ಕೆಲವರ್ಷಗಳಿಂದ ಬರಗಾಲ ಕಂಡಿದ್ದ ರಾಜ್ಯಕ್ಕೆ ಭರ್ತಿ ಮಳೆ, ತಣ್ಣಗಾದ ಕಾವೇರಿ ವಿವಾದ.
* ಅಹಿಂದ ಬೆಂಬಲಿಸಿದ್ದಕ್ಕಾಗಿ ಜೆಡಿಎಸ್ನಿಂದ ಸಿದ್ದರಾಮಯ್ಯ ಜುಲೈ 18ರಂದು ಉಚ್ಚಾಟಣೆ. ಉಪಮುಖ್ಯಮಂತ್ರಿಯಾಗಿ ಎಂ.ಪಿ.ಪ್ರಕಾಶ್ ಪ್ರಮಾಣವಚನ ಸ್ವೀಕಾರ.
* ಧರಂ ಸರ್ಕಾರದ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಜೆಡಿಎಸ್ನಿಂದ ಸಿಡಿದು ಬಿದ್ದ ಎಚ್.ಡಿ.ಕುಮಾರಸ್ವಾಮಿ ಬಣ. ಧರಂ ಸರ್ಕಾರಕ್ಕೆ ಜನವರಿ 20ರಂದು ಜೆಡಿಎಸ್ನ 8 * ಸಚಿವರಿಂದ ರಾಜಿನಾಮೆ.
* ಬಹುಮತ ಸಾಬೀತುಪಡಿಸಲಾಗದೆ ಜನವರಿ 28ರಂದು ಧರಂಸಿಂಗ್ರಿಂದ ರಾಜಿನಾಮೆ.
ಕುಮಾರಪರ್ವದ ಪ್ರಮುಖ ಘಟ್ಟಗಳು

* ಪ್ರಥಮಬಾರಿ ರಾಜ್ಯದಲ್ಲಿ ಅಧಿಕಾರನಡೆಸುವ ಆಸೆಯಿಂದ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ. ಜೆಡಿಎಸ್ ಬಿಜೆಪಿ ನಡುವೆ 20-20 ತಿಂಗಳು ರಾಜ್ಯವಾಳುವ ಒಪ್ಪಂದ.
* ಫೆಬ್ರವರಿ 3ರಂದು 21ನೇ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿಗೆ ಪಟ್ಟಾಭಿಷೇಕ. 46 ವಯಸ್ಸಿನ ಕುಮಾರಸ್ವಾಮಿ ಮೂರನೇ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ.
* 22ನೇ ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಬಿ.ಎಸ್.ಯೆಡಿಯೂರಪ್ಪ 5ನೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
* ಒಪ್ಪಂದದ ಪ್ರಕಾರ 2007ನೇ ಅಕ್ಟೋಬರ್ 3ರಂದು ಕುಮಾರಸ್ವಾಮಿ ಅಧಿಕಾರ ತ್ಯಜಿಸಬೇಕು, ಯೆಡಿಯೂರಪ್ಪ ಅಧಿಕಾರಕ್ಕೇರಬೇಕು.
* ಆ ದೇವರೇ ಬಂದರೂ ಕುಮಾರಸ್ವಾಮಿ ಕೈಕೊಡುವುದಿಲ್ಲ ಎಂದು ನಂಬಿದ್ದ ಯೆಡಿಯೂರಪ್ಪನವರ ಹುಸಿಯಾದ ಕನಸು.
* ಅಕ್ಟೋಬರ್ 5ಕ್ಕೆ ಜೆಡಿಎಸ್ ಕಾರ್ಯಕಾರಣಿ ಸಭೆಯ ಮುಂದೂಡಿಕೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X