ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತುರ್ತುಪರಿಸ್ಥಿತಿ ನಿರ್ವಹಣಾ ಘಟಕ

By Super
|
Google Oneindia Kannada News

ಬೆಂಗಳೂರು, ಸೆ.29 : ಕ್ರೈಸಿಸ್ ಮ್ಯಾನೇಜ್‌ಮೆಂಟ್. ಅಂದರೆ ತುರ್ತುಪರಿಸ್ಥಿತಿ ನಿರ್ವಹಣೆ ಭಾರತದಲ್ಲಿ ಅಂಬೆಗಾಲಿಡುತ್ತಿರುವ ವಿದ್ಯಮಾನ. ಮಾನವನ ನಿಯಂತ್ರಣಕ್ಕೆ ಕೈಮೀರಿದ ಯಾವುದೇ ಅವಘಡ ಸಂಭವಿಸಲಿ ಅದನ್ನು ತುರ್ತಾಗಿ ಎದುರಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ ಇಲ್ಲ. ನಾವೇನಿದ್ದರೂ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬೆಂಕಿ ತೋಡುವ ಜನ.

ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 29ರಂದು ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಏಕದಿನದ ಪಂದ್ಯದಲ್ಲಿ ಜಿಲ್ಲಾಡಳಿತ ತುರ್ತುಪರಿಸ್ಥಿತಿ ನಿರ್ವಹಣಾ ಘಟಕವನ್ನು ಸ್ಥಾಪಿಸಲಿದೆ. ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕ್ರೀಡಾಂಗಣದಲ್ಲಿ ತುರ್ತುಪರಿಸ್ಥಿತಿ ನಿರ್ವಹಣಾ ಘಟಕವನ್ನು ಸ್ಥಾಪಿಸಲಾಗುತ್ತಿದೆ.

ರಾಷ್ಟ್ರೀಯ ತುರ್ತುಪರಿಸ್ಥಿತಿ ನಿರ್ವಹಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ಇಂಥ ಶ್ಲಾಘನೀಯ ಕೈಂಕರ್ಯಕ್ಕೆ ಕೈಹಾಕಿದೆ. 55 ಸಾವಿರಕ್ಕೂ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಒನ್‌ಡೇ ಕ್ರಿಕೆಟ್‌ಗಾಗಿ ಒಂದೆಡೆ ಸೇರಿದಾಗ ಎಂಥ ಉನ್ಮಾದವಿರುತ್ತದೆ ಎಂದು ಬೇರೆಯಾಗಿ ಹೇಳಬೇಕಿಲ್ಲ. ದೀಪಾವಳಿ ಹತ್ತಿರಬಂದಿದೆ ಪಟಾಕಿಗಳು ಸುರಕ್ಷತಾ ಸಿಬ್ಬಂದಿಯನ್ನು ತಪ್ಪಿಸಿ ಒಳನುಗ್ಗುವುದು ಸರ್ವೇಸಾಮಾನ್ಯ. ಪಂದ್ಯ ಮುಗಿಯುವ ಹೊತ್ತಿನಲ್ಲಿ ಸರಿರಾತ್ರಿಯಲ್ಲಿ ಕಾಗದದ ಪಂಜುಗಳು ಉರಿದರೂ ಆಶರ್ಯವಿಲ್ಲ. ಹುಚ್ಚು ಆವೇಶಕ್ಕೆ ಬಿದ್ದ ಕ್ರಿಕೆಟ್ ಪ್ರೇಮಿಗಳು ಮುಂದಿರುವ ಬೇಲಿಯನ್ನು ದಾಟಲು ಪ್ರಯತ್ನಿಸಲೂಬಹುದು. ಕ್ರೀಡಾಂಗಣದಲ್ಲಿ ಸಾವಿರಗಟ್ಟಲೆ ಪೊಲೀಸರಿರುತ್ತಾರೆಯಾದರೂ ಕೈಮೀರಿದ ಅವಘಡ ಸಂಭವಿಸಿದಲ್ಲಿ ಅವರೂ ಅಸಹಾಯಕರಾಗಿಬಿಡುತ್ತಾರೆ.

ಎಂಥದೇ ಆದ ಅವಘಡಗಳು ನಡೆಯದಂತೆ ನಿಯಂತ್ರಿಸಲು, ಸಂಭವಿಸಿದರೆ ತುರ್ತು ಕ್ರಮಕೈಗೊಳ್ಳಲು ಜಿಲ್ಲಾಡಳಿತದ ಜೊತೆಗೆ ಇನ್ನೂ 13 ಇಲಾಖೆಗಳು ಕೈಜೋಡಿಸಿವೆ. ಬಿಬಿಎಮ್‌ಪಿ, ಪೊಲೀಸ್ (ಕಾನೂನು ಸುವ್ಯವಸ್ಥೆ), ಟ್ರಾಫಿಕ್ ಪೊಲೀಸ್, ಪೊಲೀಸ್ ಕಂಟ್ರೋಲ್ ರೂಂ, ಅಗ್ನಿಶಾಮಕ, ಬಾಂಬ್ ಶೋಧನಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಭಿವೃದ್ಧಿ, ನೀರು ಸರಬರಾಜು, ಬೆಸ್ಕಾಂ ಮೊದಲಾದ 13 ಇಲಾಖೆಗಳು ಬೆಳಿಗ್ಗೆ 9ರಿಂದ ರಾತ್ರಿ ಪಂದ್ಯ ಮುಗಿಯುವವರೆಗೆ ಎಲ್ಲ ಮೂಲೆಗಳಲ್ಲಿ ಕಣ್ಣಿಟ್ಟಿರುತ್ತವೆ.

ಆಂಬುಲನ್ಸ್, ಗಾಯಾಳುಗಳ ನೆರವಿಗೆ ವೈದ್ಯಕೀಯ ತಂಡ, ಹಾಸಿಗೆಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇವೆಗೆ ಸಿದ್ಧರಾಗಿರುತ್ತಾರೆ ಎಂದು ತುರ್ತುಪರಿಸ್ಥಿತಿ ನಿರ್ವಹಣಾ ಸಮೀತಿಯ ಮುಖ್ಯ ಅಧಿಕಾರಿ ಮತ್ತು ಡೆಪ್ಯುಟಿ ಕಮೀಷನರ್ ಆಗಿರುವ ಎಂ.ಎ.ಸಿದ್ದಿಕಿ ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಗಲಾಟೆಗಳು, ದಂಗೆಗಳು, ಬೇಲಿ ಮುರಿದುಕೊಂಡು ಬೀಳುವುದು ಸಾಮಾನ್ಯವಾಗಿರುತ್ತದೆ. ಅಂಥ ಯಾವುದೇ ಅವಘಡಗಳು ಇಲ್ಲಿ ಸಂಭವಿಸದೇಯಿದ್ದರೂ ಮುನ್ನಚ್ಚೆರಿಕೆಯಾಗಿ ತುರ್ತುಪರಿಸ್ಥತಿ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿರುವುದು ಮೆಚ್ಚತಕ್ಕಂಥ ವಿಷಯ.

ಅವಘಡ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಅದನ್ನು ತಡೆಯುವುದು ಹಿತವಲ್ಲವೆ? ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್!

ಕ್ರಿಕೆಟ್ ಮಾತ್ರವಲ್ಲ ವಿಮಾನ ಅಪಘಾತವೇ ಆಗಲಿ, ಕಟ್ಟಡಕ್ಕೆ ಬೆಂಕಿಯೇ ಹತ್ತಿಕೊಳ್ಳಲಿ, ಬೆಂಗಳೂರಲ್ಲಿ ಕಂಡುಕೇಳರಿಯದಂತೆ ಮಹಾಮಳೆಯೇ ಸುರಿಯಲಿ ಇಂಥ ತುರ್ತುಪರಿಸ್ಥಿತಿ ನಿರ್ವಹಣಾ ಪಡೆಯಿರುವುದು ಒಳ್ಳೆಯದು. ಅಧಿಕಾರಿಗಳು ಸೋಮಾರಿಗಳು, ತಕ್ಕಸಮಯಕ್ಕೆ ಬಂದು ಸಹಾಯ ಮಾಡುವುದಿಲ್ಲ ಎಂದೆಲ್ಲ ಶಪಿಸುವುದನ್ನು ಈ ಬಾರಿಯಾದರೂ ಬದಿಗಿಟ್ಟು ಜಿಲ್ಲಾಡಳಿತಕ್ಕೆ ಒಂದು ಥ್ಯಾಂಕ್ಸ್ ಹೇಳೋಣ.

English summary
Disaster Management wing in Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X