ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೆಂಟಿ ಟ್ವೆಂಟಿ ಅಧಿಪತ್ಯಕ್ಕೆ ಭಾರತ-ಪಾಕ್ ಸಮರ

By Staff
|
Google Oneindia Kannada News

Who will wear the Twenty20 crown? India or Pak?ಡರ್ಬಾನ್, ಸೆ.23 : ಇಲ್ಲಿಯವರೆಗೆ ನಡೆದಿರುವ ವಿಶ್ವಕಪ್‌ಗಳದ್ದೇ ಒಂದು ತೂಕವಾದರೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟ್ವೆಂಟಿ 20 ವಿಶ್ವಕಪ್‌ದ್ದೇ ಮತ್ತೊಂದು ತೂಕ.

ಪಾಕ್ ಜೊತೆ ಆಸ್ಟ್ರೇಲಿಯಾ ಫೈನಲ್‌ಗೆ ಬಂದಿದ್ದರೆ ಈ ಪರಿಯ ರೋಮಾಂಚಕತೆ ಈ ಟೂರ್ನಿಗೆ ಬರುತ್ತಿತ್ತೋ ಇಲ್ಲೊ. ಹಿಂದೆಂದೂ ಇಲ್ಲದಂತಹ ಸಂಚಲನ, ಭಾವೋದ್ವೇಗತೆ ಈ ಫೈನಲ್‌ಗೆ ದಕ್ಕಿದೆ.

ಅದಕ್ಕೆ ಕಾರಣ ಕ್ರಿಕೆಟ್‌ನ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಸೋಮವಾರ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸೆಣೆಸುತ್ತಲಿರುವುದು.

ಇವೆರಡೂ ತಂಡಗಳು ವಿಶ್ವಕಪ್‌ನ ಫೈನಲ್‌ನಲ್ಲಿ ಹೋಗಲಿ ಪ್ರಥಮ ಹಂತದಲ್ಲಿ ಸೆಣೆಸಾಟಕ್ಕಿಳಿದರೂ ತನ್ನದೇ ಆದ ತೀವ್ರತೆ ತನ್ನಷ್ಟಕ್ಕೆ ತಾನೇ ಪಡೆದುಕೊಳ್ಳುತ್ತದೆ. ಇನ್ನು ಫೈನಲ್‌ನಲ್ಲಿ ಮುಖಾಮುಖಿಯಾದರೆ ಕೇಳಬೇಕೆ? ವಿಶ್ವಕಪ್‌ನ ಬೇರೆಬೇರೆ ಹಂತದಲ್ಲಿ ಸಬ್‌ಕಾಂಟಿನೆಂಟ್‌ನ ಇವೆರಡೂ ರಾಷ್ಟ್ರಗಳು ಗುದ್ದಾಡಿದ್ದರೂ ಫೈನಲ್‌ನಲ್ಲಿ ಎಂದೂ ಎದುರಾಗಿರಲಿಲ್ಲ.

ಅಷ್ಟೇ ಅಲ್ಲ ಇಲ್ಲಿಯವರೆಗೆ ವಿಶ್ವಕಪ್‌ನಲ್ಲಿ ನಡೆದಿರುವ ಎಲ್ಲ ಪಂದ್ಯಗಳಲ್ಲಿ ಪಾಕ್ ತಂಡವನ್ನು ಭಾರತ ಬಗ್ಗುಬಡಿದಿದೆ. ಭಾರತದ ಮೇಲೆ ಇವೆಲ್ಲಾ ಸೋಲುಗಳನ್ನು ಒಗ್ಗೂಡಿಸಿ ಒಂದೇ ಬಾರಿಗೆ ಸೇಡು ತೀರಿಸಿಕೊಳ್ಳಲು ಪಾಕ್‌ಗೆ ಸದವಕಾಶ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ಸೊಕ್ಕನ್ನು ಮುರಿದು ಫೈನಲ್‌ಗೆ ನುಗ್ಗಿರುವ ಭಾರತಕ್ಕೆ ಪಾಕ್ ವಿರುದ್ಧ ಅಪರಾಜಿತ ಕಾಳಗವನ್ನು ಮುಂದುವರೆಸಿಕೊಂಡು ಹೋಗುವ ತವಕ.

ಸಿಕ್ಸರ್‌ಗಳ ಸುರಿಮಳೆ ಒತ್ತಟ್ಟಿಗಿರಲಿ ಕ್ರಿಕೆಟನ್ನು ಕಂಡು ಕೆಂಡಾಮಂಡಲವಾಗುವ ಆಟದ ಪ್ರೇಮಿಗಳನ್ನು ಈ ಟೂರ್ನಿ ತನ್ನತ್ತ ಸೆಳೆದುಕೊಂಡಿದೆ. ಇಡೀ ವಿಶ್ವದ ಗಮನ ಸೋಮವಾರ ನಡೆಯಲಿರುವ ಮಹಾಸಮರದಲ್ಲಿ ನೆಟ್ಟಿರುತ್ತದೆಂದರೆ ತಪ್ಪಾಗಲಾರದು.

ಫೀಯರ್‌ಲೆಸ್ ಧೋನಿ ಪಡೆ : ಬಿಸಿರಕ್ತದ ಯುವಕರಿಂದ ತುಂಬಿರುವ ಭಾರತ ತಂಡದಲ್ಲಿ ಸೋಲುತ್ತೇವೆಂಬ ಭಯವಿಲ್ಲ. ಧೀರೋದಾತ್ತ ದಾಂಡಿಗರಿಲ್ಲದಿದ್ದರೂ ಅಂಡರ್‌ಡಾಗ್‌ಗಳೆಂದೇ ಪರಿಗಣಿಸಲ್ಪಟ್ಟಿದ್ದ ಭಾರತಕ್ಕೆ ಮಹೇಂದ್ರಸಿಂಗ್ ಧೋನಿಯಂಥ ನಾಯಕತ್ವದಿಂದ ಮತ್ತಷ್ಟು ಹುಮ್ಮಸ್ಸು ತುಂಬಿದೆ. ಧೋನಿಯ ಬದಲು ಯಾವುದೇ ಹಿರಿಯ ಆಟಗಾರರು ನಾಯಕನಾಗಿದ್ದರೆ ಈ ಪರಿಯ ಪರಿಣಾಮ ಬರುತ್ತಿತ್ತೇ ಎಂಬುದು ಪ್ರತಿಯೊಬ್ಬನ ವಿವೇಚನೆಗೆ ಬಿಟ್ಟ ವಿಚಾರ.

ಅಣೆಕಟ್ಟಿಲ್ಲದ ನದಿಯಂತೆ ಹರಿಯುತ್ತಿರುವ ಯುವರಾಜ್ ಸಿಂಗ್‌ನಂಥ ದಾಂಡಿಗರರನ್ನು ಕಟ್ಟಿಹಾಕದಿದ್ದರೆ ಎಂಥ ಅನಾಹುತವಾಗುತ್ತದೆಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳು ಜಗಜ್ಜಾಹೀರಾತು ಮಾಡಿವೆ. ಯುವರಾಜ್ ಇಲ್ಲಿಯವರೆಗೆ 12 ಚೆಂಡುಗಳನ್ನು ಮೈದಾನದಾಚೆ ಅಟ್ಟಿದ್ದಾರೆ. ಯುವಿಯೊಂದಿಗೆ ರಾಬಿನ್ ಉತ್ತಪ್ಪ, ರೋಹಿತ್ ಶರ್ಮಾ, ಧೋನಿಯಂಥವರು ಗೂಟ ಕಿತ್ತ ಹೋರಿಗಳಂತೆ ಬ್ಯಾಟಿಗೆ ಸಿಕ್ಕ ಚೆಂಡುಗಳನ್ನು ಧೂಳಿಪಟ ಮಾಡುತ್ತಿದ್ದಾರೆ.

ಪಾಕ್ ತಂಡ ಕೂಡ ಸರಿಸಾಟಿಯಾಗಿ ಸೆಡ್ಡುಹೊಡೆದು ನಿಂತಿದೆ. ಬ್ಯಾಂಟಿಂಗ್‌ಕಿಂತ ಬೌಲಿಂಗ್‌ನಲ್ಲಿ ಪಾಕ್ ಪ್ರಭುತ್ವ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಅಷ್ಟೊಂದು ಮಿಂಚದಿದ್ದರೂ ಶಾಹಿದ್ ಅಫ್ರೀದಿ ಟೂರ್ನಿಯ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಎಲ್ಲರಿಗಿಂತ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಯಾರಿಗೆ ಗೊತ್ತು ಫೈನಲ್‌ನಲ್ಲಿ ಫಾರ್ ಅ ಚೇಂಜ್ ಅವರ ಬ್ಯಾಟ್ ಮಾತಾಡಲೂಬಹುದು.

ಆಸ್ಟ್ರೇಲಿಯಾ ಬಗ್ಗುಬಡಿದ ಭಾರತ : ಟ್ವೆಂಟಿ 20ಯಂಥ ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಭಾನುವಾರ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯವೇ ಸಾಕ್ಷಿ. ಆಯಾ ದಿನ ಆಯಾ ಟೈಮಿನಲ್ಲಿ ಯಾವ ತಂಡ ಅತ್ಯುತ್ತಮವಾಗಿ ಆಡುವುದೋ ಅದೇ ಗೆಲ್ಲುತ್ತದೆ. ಕಡೆಯ ಚೆಂಡಿನವರೆಗೆ ಏನನ್ನೂ ಹೇಳಲಾರದಂಥ ಲಯವನ್ನು ಈ ಟೂರ್ನಿ ಪಡೆದುಕೊಂಡಿದೆ.

ಆಸೀಸ್ ಬೌಲಿಂಗ್‌ನ್ನು ಧೂಳಿಪಟ ಮಾಡಿದ ಪಂದ್ಯದ ಪುರುಷೋತ್ತಮ ಯುವರಾಜ್‌ರ 30 ಚೆಂಡುಗಳ 70 ರನ್ ಸಹಾಯದಿಂದ 188 ರನ್ ಪೇರಿಸಿದ ಭಾರತ ಸ್ಪರ್ಧಾತ್ಮಕ ಗುರಿಯನ್ನೇ ಇಟ್ಟಿತ್ತು. ಮಧ್ಯದವರೆಗೂ ಅದನ್ನು ಸಮರ್ಥವಾಗಿ ಬೆನ್ನತ್ತಿದ 'ಡ್ಯಾಡ್ಸ್ ಆರ್ಮಿ' ಮಹತ್ವದ ಕ್ಷಣಗಳಲ್ಲಿ ಮುಗ್ಗರಿಸಿತು. ಭಾರತದ ಕರಾರುವಾಕ್ ದಾಳಿಯ ಎದಿರು ಗುರಿ ದಾಟಲಾರದೆ 15 ರನ್‌ಗಳಿಂದ ಹಿಂದೆ ಬಿದ್ದಿತು.

ಆವೇಶ ಹೆಚ್ಚು ನಿಖರತೆ ಕಡಿಮೆಯಂತಿರುವ ಶ್ರೀಶಾಂತ್ ಆಶ್ಚರ್ಯಕರವೆಂಬಂತೆ ಆಸೀಸ್ ದಾಂಡಿಗರು ತಡಕಾಡುವಂತೆ ಮಾಡಿದರು. ಮೊದಲು ಉತ್ತಮ ಯಾರ್ಕರ್‌ನಿಂದ 'ಗಿಲ್ಲಿ'ಯನ್ನು ಮನೆಗಟ್ಟಿದ ಶ್ರೀಶಾಂತ್ ನಂತರ ಎರಡನೇ ದಾಳಿಯಲ್ಲಿ ಡೇಂಜರಸ್ ಹೇಡನ್‌ರ ಸ್ಟಂಪನ್ನು ಉಡಾಯಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಆಸೀಸ್ ಪರ ಹೇಡನ್ ಅತ್ಯುತ್ತಮವಾಗಿ ಆಡಿ 64 ರನ್ ಗಳಿಸಿದರು.

ಆಸ್ಟ್ರೇಲಿಯಾವನ್ನು ಸೋಲಿಸುವುದು ಭಾರತಕ್ಕೆ ಅಸಾಧ್ಯ ಎಂಬ ಮಾತನ್ನು ಸ್ಟೀವ್ ವಾ ಹಿಂದಕ್ಕೆ ಪಡೆಯಬೇಕೆನ್ನುವಂತೆ ಭಾರತ ಉತ್ತರ ನೀಡಿದೆ. ಸ್ಟೀವ್ ವಾ ಈಗ ಏನು ಹೇಳುತ್ತಾರೋ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X