ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾಯಕರು ಬಲಿ : ಬೆಂಕಿಗೆ ತುಪ್ಪ ಸುರಿದ ಕರುಣಾನಿಧಿ

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ತಮಿಳುನಾಡು ಬಸ್ಸಿಗೆ ಬೆಂಗಳೂರಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆಯನ್ನು ಆ ರಾಜ್ಯದ ಮುಖ್ಯಮಂತ್ರಿ ಕರುಣಾನಿಧಿ ಬುಧವಾರ(ಸೆ.19) ಸ್ಫಷ್ಟ ಮಾತುಗಳಲ್ಲಿ ಖಂಡಿಸಿದ್ದಾರೆ.
ಬುಧವಾರ ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಕರ್ನಾಟಕ ಸರ್ಕಾರ ಇಂತಹ ಘಟನೆಗಳ ತಪ್ಪಿಸಬೇಕು. ತಮಿಳುನಾಡಿನ ಬಸ್ಸುಗಳಿಗೆ ಮತ್ತು ಪ್ರಯಾಣಿಕರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಿಡಿಗೇಡಿಗಳು ಬೆಂಗಳೂರಿನಲ್ಲಿರುವ ನನ್ನ ಪುತ್ರಿಯ ನಿವಾಸದ ಮೇಲೂ ದಾಳಿ ಮಾಡಿದ್ದಾರೆ. ರಾಮನ ಹೆಸರಲ್ಲಿ ಕುಕೃತ್ಯವೆಸಗುವುದು ಸಲ್ಲದು. ಇಷ್ಟಕ್ಕೂ ಈ ರಾಮ ಯಾರು? ರಾಮ ಯಾವ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾನೆ ಎಂದು ಮತ್ತೆ ಪ್ರಶ್ನಿಸಿದ್ದಾರೆ.

ಬಸ್ಸಿಗೆ ಬೆಂಕಿ : ರಾಮಸೇತು ಮತ್ತು ರಾಮನಿಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ನೀಡಿರುವ ಹೇಳಿಕೆ, ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿಯೇ ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದನ್ನು ಮಂಗಳವಾರ ರಾತ್ರಿ 9.32ರ ಸುಮಾರಿನಲ್ಲಿ ನಗರದಲ್ಲಿ ಸುಡಲಾಗಿದೆ.

ಹೊಸೂರು ರಸ್ತೆಯ ಬೊಮ್ಮನಹಳ್ಳಿ ಸಮೀಪ ಗುಂಪೊಂದು, ತಮಿಳುನಾಡು ಬಸ್ಸನ್ನು ಸುಟ್ಟಿದೆ. ಈ ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ ಎಂದು ಬುಧವಾರ(ಸೆ.19) ಪೊಲೀಸರು ಖಚಿತಪಡಿಸಿದ್ದಾರೆ. ಬಸ್ಸು ಬೆಂಗಳೂರಿನಿಂದ ಸೇಲಂಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಬಸ್ಸನ್ನು ತಡೆದ ಗುಂಪು, ಪ್ರಯಾಣಿಕರನ್ನು ಹೊರಬರಲು ಸೂಚಿಸಿತು. ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿತು ಎಂದು ಪೊಲೀಸರು ಹೇಳಿದ್ದಾರೆ.

ಆತಂಕದ ವಾತಾವರಣ : ಬಸ್ಸಿಗೆ ಬೆಂಕಿ ಹಚ್ಚಿದ ಘಟನೆ ನಂತರ ಕೆಲಕಾಲ ಹೊಸೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬುಧವಾರ ಪರಿಸ್ಥಿತಿ ತಿಳಿಯಾಗುತ್ತಿದೆ. ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಈ ಕೃತ್ಯದ ಹೊಣೆಯನ್ನೂ ಯಾವುದೇ ಸಂಘಟನೆಯೂ ಒಪ್ಪಿಕೊಂಡಿಲ್ಲ.

ಯಾರದೋ ತಪ್ಪಿಗೆ, ಇನ್ಯಾರದ್ದೋ ತಿಕ್ಕಲು ತನಕ್ಕೆ ಅಮಾಯಕರು ಮತ್ತು ಮುಗ್ಧರು ಬಲಿಯಾಗುತ್ತಾರೆ. ನಾಗರಿಕ ಸಮಾಜದಲ್ಲಿ ಇಂತಹ ಕೃತ್ಯಗಳು ನಿಜಕ್ಕೂ ನಾಚಿಕೆಗೇಡು. ಕನ್ನಡ ನೆಲದಲ್ಲಿ ನಡೆದ ಆ ಪೈಶಾಚಿಕ ಘಟನೆಗೆ ಯಾರು ಹೊಣೆ. ಇಬ್ಬರು ಬಸ್ ಬೆಂಕಿ ಅನಾಹುತಕ್ಕೆ ಬಲಿಯಾಗಿದ್ದಾರೆ ಎಂದು ಟಿವಿ9 ತನ್ನ ವಾಹಿನಿಯಲ್ಲಿ ಬಿತ್ತರಿಸುತ್ತಿದ್ದರೆ, ತಮಿಳುನಾಡಿನ ಪತ್ರಿಕೆಗಳು ಒಂದಕ್ಕೆ ಎರಡು ಮಾಡಿ ನಾಲಕ್ಕು ಮಂದಿ ಆಹುತಿಯಾಗಿದ್ದಾರೆ ಎಂದು ಬರೆದುಕೊಂಡಿವೆ.

ಭಾವೋನ್ಮಾದಕ್ಕೆ ಎಡೆಮಾಡಿಕೊಡುವಂತಹ ವರದಿಗಳನ್ನು ಬರೆಯುವುದರಲ್ಲಿ ತಮಿಳು ಮಾಧ್ಯಮ ಎತ್ತಿದ ಕೈ. 1991 ರಲ್ಲಿ ಕಾವೇರಿ ಗಲಭೆ ಸಮಯದಲ್ಲೂ ತಮಿಳು ಪತ್ರಿಕೆಗಳು ಸುಳ್ಳುಸುಳ್ಳೇ ಅಂಕಿಅಂಶಗಳನ್ನು ಪ್ರಕಟಿಸಿ ತಮಿಳು ಅಭಿಮಾನವನ್ನು ಮೆರೆದಿದ್ದವು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಸುದ್ದಿ :
ರಾಮಸೇತು ಉಳಿಯಲು ಸೋನಿಯಾ ಕಾರಣ : ಪೂಜಾರಿ
ಯಾರಿವನು ರಾಮ? ಇವ ಯಾವ ಕಾಲೇಜಿನ ವಿದ್ಯಾರ್ಥಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X