ಸರ್ಚ್ ಇಂಜಿನ್ : 300ಭಾಷೆಗಳಲ್ಲಿ ಇಮೇಜ್ ಹುಡುಕಿ!
ನ್ಯೂಯಾರ್ಕ್ , ಸೆಪ್ಟೆಂಬರ್ 18 : ನೆಟ್ಟಿಗರಿಗೊಂದು ಸಂತಸದ ಸುದ್ದಿ. ಯುಎಸ್ನ ಸಂಶೋಧಕರು ಆವಿಷ್ಕರಿಸಿದ ಹೊಸ ಸರ್ಚ್ ಇಂಜಿನ್ನಿಂದ ಇನ್ನು ಮುಂದೆ ಸ್ಥಳೀಯ ಭಾಷೆಯಲ್ಲೆ ನಮಗೆ ಬೇಕಾದ ಚಿತ್ರಗಳನ್ನು ಹುಡುಕಬಹುದು .
ಪಾನ್ಇಮೇಜ್ ಎನ್ನುವ ಈ ಸರ್ಚ್ಇಂಜಿನ್ನ್ನು ವಾಷಿಂಗ್ಟನ್ ವಿವಿಯ ಟರ್ನಿ೦ಗ್ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ಸರ್ಚ್ ಇಂಜಿನ್ ಪರಿಣಾಮ ಕನಿಷ್ಠವೆಂದರೂ 300 ಭಾಷೆಗಳಲ್ಲಿ ಚಿತ್ರ(ಇಮೇಜ್)ಗಳನ್ನು ಹುಡುಕಲು ಸಾಧ್ಯವಾಗಲಿದೆ. ಈ ವಿವರಗಳನ್ನು ಡೆನ್ಮಾರ್ಕ್ ನಲ್ಲಿ ನಡೆದ ಯಂತ್ರಗಳ ಮುಖಾಂತರ ಭಾಷಾಂತರ ಕುರಿತ ವಿಚಾರಸಂಕಿರಣದಲ್ಲಿ ಪ್ರಕಟಿಸಲಾಗಿದೆ ಎಂದು ನ್ಯೂ ಸೈಂಟಿಸ್ಟ್(ಆನ್ ಲೈನ್ ಆವೃತ್ತಿ) ವರದಿ ಮಾಡಿದೆ.
ಇಂಗ್ಲಿಷ್ ಬಾರದವರಿಗೆ ಈ ಸರ್ಚ್ ಇಂಜಿನ್ ಪೂರಕವಾಗಲಿದೆ. ಉದಾಹರಣೆಗೆ ಕಪ್ಪೆ ಎನ್ನುವುದನ್ನು ಹುಡುಕಲು, ನಾವು ಇಂಗ್ಲಿಷ್ ನಲ್ಲಿ Frog ಎನ್ನುವ ಕೀ ವರ್ಡ್ ನೀಡುತ್ತೇವೆ. ಇನ್ಮುಂದೆ ಕಪ್ಪೆ ಎನ್ನುವ ಕೀ ವರ್ಡ್ ನ್ನು ನೀಡಿದರೆ ಸಾಕು. ಅದು ಅಂತರ್ಜಾಲ ಭಾಷೆಗೆ ಪರಿವರ್ತಿಸಲಿದೆ. ಪೂರಕ ಚಿತ್ರಗಳು ತೆರೆ ಮೇಲೆ ಕಾಣಿಸಲಿವೆ. ಈ ಸರ್ಚ್ ಇಂಜಿನ್ ನಲ್ಲಿ ಕನ್ನಡ ಇದೆಯೋ ಇಲ್ಲವೋ ಇನ್ನೂ ಸ್ಪಷ್ಟವಾಗಿಲ್ಲ.
(ಏಜನ್ಸೀಸ್)