• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ವೆಂಟಿ ಟ್ವೆಂಟಿ : ಇಂದಿನಿಂದ ಸಿಕ್ಸರ್‌ಗಳ ಸುಗ್ಗಿ ಪ್ರಾರಂಭ

By Staff
|

Indian Captain M Dhoniಬೆಂಗಳೂರು, ಸೆಪ್ಟೆಂಬರ್ 11 : ಸಿಕ್ಸರ್ ಮಳೆ ಸುರಿಸಿದವ ಗೆದ್ದ, ಮಿಸ್‌ಫೀಲ್ಡ್ ಮಾಡಿದವ ಬಿದ್ದ.

ಇದು ಇಂದಿನಿಂದ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಪ್ರಾರಂಭವಾಗುತ್ತಿರುವ ಪ್ರಪ್ರಥಮ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ಆಟಗಾರರ ಮೂಲಮಂತ್ರ.

ಹದಿಹರೆಯದವರಿಂದ ತುಂಬಿರುವ ಎಲ್ಲ ಹನ್ನೆರಡು ತಂಡಗಳು ಯುದ್ಧಕ್ಕೆ ನಿಂತ ಕುದುರೆಗಳಂತೆ ಕೆನೆದಾಡುತ್ತಿವೆ. ಹಳೆ ನೀರು ಹರಿದುಹೋಗಿ ಹೊಸ ನೀರು ತುಂಬಿಕೊಂಡಿದೆ. ಬಹುಶಃ ಎಲ್ಲ ತಂಡಗಳು ರೆಸ್ಟ್ ನೆಪದಲ್ಲಿ ಹಿರಿಯರನ್ನು ಮನೆಯಲ್ಲೇ ಕುಳ್ಳಿರಿಸಿವೆ. ಹದಿಮೂರು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಯಾವ ತಂಡವನ್ನೂ ಕಡೆಗಣಿಸುವಂತಿಲ್ಲ.

ಸೆಪ್ಟೆಂಬರ್ 11ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಬ್ಯಾಟು ಬಾಲು ಮಿಲಾಯಿಸಲಿವೆ. ಡ್ಯಾಡ್ಸ್ ಆರ್ಮಿ ಎಂದು ಟೀಕೆಗೊಳಗಾಗಿದ್ದರೂ ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ತಂಡವೇ ಸದ್ಯಕ್ಕೆ ಫೆವರಿಟ್. ಅಸಾಧ್ಯ ಹೊಡೆತಗಳ ಆಂಡ್ರ್ಯೂ ಸಿಮಂಡ್ಸ್, ಆಡಮ್ ಗಿಲ್‌ಕ್ರಿಸ್ಟ್, ಹೇಡನ್‌ರಿಂದ ಆಸ್ಟ್ರೇಲಿಯಾ ಇನ್ನೂ ಬಲಿಷ್ಠ ತಂಡವೇ. ವೆಸ್ಟ್ ಇಂಡೀಸ್ ತಂಡದಲ್ಲಿ ಬ್ರಿಯಾನ್ ಲಾರಾ ಇಲ್ಲದಿದ್ದರೂ ಶಿವನರೇನ್ ಚಂದ್ರಪಾಲ್ ನಾಯಕತ್ವದ ಯುವ ತಂಡ ಯಾವುದೇ ತಂಡವನ್ನು ಮಕಾಡೆ ಮಲಗಿಸುವ ಸಾಮರ್ಥ್ಯ ಹೊಂದಿದೆ.

ಅನುಭವಕ್ಕಿಂತ ಚುರುಕಿನಿಂದ ಆಟವಾಡಬಲ್ಲ ಯುವಆಟಗಾರರಿಗೆ ಈ ಟೂರ್ನಿಯಲ್ಲಿ ಮನ್ನಣೆ ಸಿಕ್ಕಿದ್ದು ಎಲ್ಲ ತಂಡಗಳಲ್ಲಿ ಕಂಡುಬಂದಿರುವ ಸಾಮಾನ್ಯ ಸಂಗತಿ. ಭಾರತ ತಂಡದಿಂದ ಅತ್ಯುತ್ತಮ ಫಾರಂನಲ್ಲಿರುವ ಸಚಿನ್ ತೆಂಡೂಲ್ಕರ್ ಮತ್ತು ಮರಳಿ ಬಂದಿರುವ ಸೌರವ್ ಗಂಗೂಲಿಯನ್ನು ಬಿಟ್ಟಿದ್ದು ಅವರಿಬ್ಬರ ಕಣ್ಣು ಕೆಂಪಾಗುವಂತೆ ಮಾಡಿದ್ದು ಸುಳ್ಳಲ್ಲ. ರಾಹುಲ್ ದ್ರಾವಿಡ್ ಈ ಪಂದ್ಯಾವಳಿ ತಮ್ಮಂಥವರಿಗಲ್ಲ ಎಂದು ತಾವೇ ಹಿಂದೆ ಸರಿದಿದ್ದಾರೆ.

ನಮ್ಮ ಭಾರತ ತಂಡ ಮಾತ್ರವಲ್ಲ ಕೈಕಾಲು ಸೋಲುತ್ತಿರುವ ಹಿರಿಯ ಆಟಗಾರರನ್ನು ಹೆಚ್ಚು ಕಡಿಮೆ ಎಲ್ಲ ತಂಡಗಳು ಪಕ್ಕಕ್ಕೆ ತಳ್ಳಿವೆ. ದಕ್ಷಿಣ ಆಫ್ರಿಕಾದ ಆಪದ್ಬಾಂಧವನಂತಿದ್ದ ಜಾಕ್ ಕಾಲಿಸ್‌ರನ್ನೇ ನಿಧಾನವಾಗಿ ಸ್ಕೋರ್ ಮಾಡುತ್ತಾರೆಂದು ಕೈಬಿಟ್ಟಿದೆ. ಕೇವಲ ಐದು ಪಂದ್ಯಗಳಲ್ಲಿ 251 ರನ್ ಪೇರಿಸಿ ಅತಿ ಹೆಚ್ಚು ರನ್ ಗಳಿಸಿರುವ ಸ್ಮಿತ್ ದಕ್ಷಿಣ ಆಫ್ರಿಕಾದ ಶಕ್ತಿ. ಥರ್ಟಿ ಪ್ಲಸ್ ಆಟಗಾರರನ್ನು ಹೆಚ್ಚಾಗಿ ಹೊಂದಿರುವ ಏಕೈಕ ತಂಡವೆಂದರೆ ಆಸ್ಟ್ರೇಲಿಯಾ!

ಶಕ್ತಿಯುತ ಬ್ಯಾಟಿಂಗ್, ಜಾಣ್ಮೆಯ ಬೌಲಿಂಗ್, ಚುರುಕಾದ ಫೀಲ್ಡಿಂಗ್, ವಿಕೆಟ್ ಮಧ್ಯ ಓಡುವ ತಾಕತ್ತಿಗೆ ಸವಾಲಿನಂತಿದೆ ಈ ಟೂರ್ನಾಮೆಂಟ್. ಹೆಚ್ಚುಕಡಿಮೆ ಆಲ್‌ರೌಂಡ್ ಆಟಗಾರರಿಂದ ಕೂಡಿರುವ ತಂಡಗಳಿಂದ ಆಲ್‌ರೌಂಡ್ ಆಟ ಬಂದರೇ ಪಂದ್ಯ ಗೆಲ್ಲುವ ಚಾನ್ಸ್. ಇದರಿಂದಾಗಿಯೇ ಎಲ್ಲ ತಂಡಗಳು ಯುವಕರನ್ನು ನೆಚ್ಚಿಕೊಂಡಿವೆ.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡವೂ ಮೂವತ್ತರೊಳಗಿನ ಯುವಕರಿಂದ ಕೂಡಿ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುತ್ತಿದೆ. ಸಿಡಿಲಬ್ಬರದ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಹರಭಜನ್ ಸಿಂಗ್ ತಂಡಕ್ಕೆ ಮರಳಿ ಬಂದಿದ್ದಾರೆ. ಒಂದು ದಿನದ ಪಂದ್ಯಗಳಿಗೆ ಮರಳಲು ಸನ್ನದ್ಧರಾಗಿರುವ ಇವರ ಸಾಮರ್ಥ್ಯವನ್ನು ಈ ವಿಶ್ವಕಪ್ ಒರೆಗೆ ಹಚ್ಚಲಿದೆ. ಇವರೊಂದಿಗೆ ಇರ್ಫಾನ್ ಪಠಾಣ್‌ರ ತಮ್ಮ ಯುಸೂಫ್ ಪಠಾಣ್ ಪ್ರಥಮ ಬಾರಿಗೆ ಭಾರತದ ಕ್ಯಾಪ್ ಧರಿಸಲಿದ್ದಾರೆ. ಉತ್ತಮ ಫಾರಂನಲ್ಲಿರುವ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪರಿಂದ ಭಾರತದ ಬ್ಯಾಟಿಂಗ್ ಬಲಾಢ್ಯವಾಗೇ ಇದೆ.

ಭಾರತ ತನ್ನ ಪ್ರಥಮ ಪಂದ್ಯದಲ್ಲಿ ಸ್ಕಾಟ್ಲಂಡ್ ತಂಡವನ್ನು ಸೆಪ್ಟೆಂಬರ್ 13ರಂದು ಡರ್ಬಾನ್‌ನಲ್ಲಿ ಎದುರಿಸಲಿದೆ. ಕಳೆದ ವಿಶ್ವಕಪ್‌ನಲ್ಲಿ ಸ್ಕಾಟ್ಲಂಡ್ ತಂಡ ಭಾರತಕ್ಕೆ ಮಣ್ಣು ಮುಕ್ಕಿಸಿದ್ದು ಯಾರೂ ಮರೆತಿಲ್ಲ.

ಭಾರತದ ತಂಡ : ಮಹೇಂದ್ರ ಸಿಂಗ್ ಧೋನಿ (ಕ್ಯಾ), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರಭಜನ್ ಸಿಂಗ್, ಅಜಿತ್ ಅಗರಕರ್, ದಿನೇಶ್ ಕಾರ್ತಿಕ್, ಗೌತಮ್ ಗಂಭೀರ್, ರಾಬಿನ್ ಉತ್ತಪ್ಪ, ರುದ್ರಪ್ರತಾಪ್ ಸಿಂಗ್, ಪಿಯೂಶ್ ಚಾವ್ಲಾ, ಶ್ರೀಶಾಂತ್, ರೋಹಿತ್ ಶರ್ಮಾ, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್, ಜೋಗಿಂದರ್ ಶರ್ಮಾ

ಟ್ವೆಂಟಿ 20 ಅಂದರೆ ಏನು? :

ತಲಾ ಇಪ್ಪತ್ತು ಓವರ್ ಗಳ ಪಂದ್ಯದ ಕಾಲಾವಧಿ 3 ಗಂಟೆಗಳು. ಒಬ್ಬ ಬೌಲರ್ ಗರಿಷ್ಠ ನಾಲ್ಕು ಓವರ್ ಮಾಡಬಹುದು. ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬರಲು ಒಂದೂವರೆ ನಿಮಿಷ ಕಾಲಾವಕಾಶವಿರುತ್ತದೆ. ಆದ್ದರಿಂದ ಇಡೀ ತಂಡ ಬೌಂಡರಿ ಗೆರೆಯ ಬಳಿಯಲ್ಲೇ ಇರುತ್ತದೆ. ಟ್ವೆಂಟಿ 20 ಕ್ರಿಕೆಟ್ ಏಕದಿನ ಪಂದ್ಯಗಳಂತಲ್ಲ. ಇಲ್ಲಿ ನಿರೀಕ್ಷೆಗಳು ತಲೆಕೆಳಗಾಗಲಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X