ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ್ತಾ ಇದೆ ಹೊಸ ಟಿವಿ ಚಾನೆಲ್‌; ಆದರಿದು ಎಲ್ಲರಿಗಲ್ಲ!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 31 : ಇನ್ನೊಂದು ಹೊಸ ಟಿವಿ ಚಾನೆಲ್‌ ಬರ್ತಾ ಇದೆ. ಆದರೆ ಇದು ನಮಗಲ್ಲ, ನಿಮಗಲ್ಲ. ಹಾಗಾದರೆ ಇನ್ಯಾರಿಗೆ?

ಈ ಚಾನೆಲ್ಲಿನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಒಂದು ಕಥೇಂತ ಇರುವುದಿಲ್ಲ, ಹಾಡಿಲ್ಲ, ಭಾವನೆಗಳಿಲ್ಲ, ಸಂವೇದನೆಗಳಿಲ್ಲ. ನೋಡುತ್ತಿದ್ದರೆ ಒಂದು ಹನಿ ಕಣ್ಣೀರೂ ಸಹ ಬರುವುದಿಲ್ಲ. ನಮ್ಮಲ್ಲಿ ಈಗಿರುವ, ಜನ್ಮಜನ್ಮಾಂತರಕ್ಕಂಟಿದ ಚಾನೆಲುಗಳು ಇಹಕ್ಕೂ ಉಂಟು ಪರಕ್ಕೂ ಉಂಟು ಮನರಂಜನೆಗೆ ಅಲ್ಲಿ ಮುಕ್ತಾಯವೆನ್ನುವುದೇ ಇಲ್ಲ. ಇನ್ನು ಮನೋವಿಕಾಸ ? ಎಲ್ಲರೂ ಮುಕ್ತ ಮುಕ್ತ ಮುಕ್ತರಾಗಿ ಎಷ್ಟೋ ದಿವಸಗಳಾದವಲ್ಲ!

ಅನುದಿನದ ಬದುಕು ಬವಣೆಗಳಿಗೆ ಪರಿಹಾರ ಯಾರಿಗೆ ಬೇಕು? ಬೆಳಗಿನಿಂದ ಕಷ್ಟಪಟ್ಟು ಆಫೀಸಿನಲ್ಲಿ ಕೆಲಸಮಾಡಿ ಮನೆಗೆ ಬಂದರೆ ಪ್ರೀತಿ ಇಲ್ಲದ ಮೇಲೆ ಏನು ಪ್ರಯೋಜನ?

ನಮಗೆ ಈ ಹೊಸ ಚಾನೆಲ್ಲು ಒಗ್ಗುವುದಿಲ್ಲ ಎಂದು ಯಾಕೆ ಗೊತ್ತಾಯಿತಾ? ಈ ಚಾನೆಲ್ಲಿನಲ್ಲಿ 24 ಗಂಟೆ ಕಾಲ ಬರೀ ಸೈಟು, ಮನೆ, ಮನೆ ಸಾಲ, ಫ್ಲ್ಯಾಟು, ರೇಟು, ಬ್ಯಾಂಕು ಬಡ್ಡಿದರ, ಸ್ಥಿರಾಸ್ತಿ, ಮನೆ ಖರೀದಿ, ಮನೆ ಮಾರಾಟ ಇಂಥವೇ ಸುದ್ದಿ, ಮಾತು, ಚರ್ಚೆ, ಮಾರ್ಗದರ್ಶನಗಳಿಂದ ತುಂಬಿತುಳುಕುತ್ತಿರುತ್ತದೆ. ಕಡೆಯಪಕ್ಷ ಯಾವುದಾದರೊಂದು ಧಾರಾವಾಹಿಯ ಪ್ರೊಮೋ ಕೂಡ ಇರುವುದಿಲ್ಲ.

ಸ್ವಂತ ಮನೆಯಲ್ಲೇ ಬಾಡಿಗೆದಾರರಂತೆ, ಬಾಡಿಗೆ ಮನೆ ತಮ್ಮದೆ ಎನ್ನುವಂತೆ ಬದುಕು ನೂಕುವ ಮಧ್ಯಮ ವರ್ಗದ ಭಾರತೀಯ ಜನಸ್ತೋಮಕ್ಕೆ ಈ ಚಾನೆಲ್ಲು ಖಂಡಿತಾ ಬೇ‌ಡ. ಆದರೂ, ಶತಕೋಟಿ ಜನಸಂಖ್ಯೆಯ ಭಾರತದಲ್ಲಿ ದೈತ್ಯವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್‌ ಉದ್ಯಮವನ್ನು ಬೆರಗುಗಣ್ಣಿನಿಂದ ನೋಡುತ್ತಾ, ದೂರ ಬೆಟ್ಟದಲ್ಲೊಂದು ಪುಟ್ಟ ಮನೆಯಿರಬೇಕು ಎಂದು ಮನಸ್ಸಿನ ಒಂದು ಮೂಲೆಯಲ್ಲಿ ಕನಸು ಕಾಣುವ ಪ್ರಜೆಗಳಿಗೆ ಇಂಥ ಚಾನೆಲ್ಲುಗಳಿಂದ ಉಪಯುಕ್ತ ಮಾಹಿತಿ ಸಿಕ್ಕೀತು, ಸಿಕ್ಕುತ್ತದೆ ಎನ್ನುವ ಆಶಯದಿಂದ ಹೊಸತೊಂದು ಚಾನಲ್ಲಿನ ಬಗ್ಗೆ ನಾಲ್ಕು ಮಾತುಗಳನ್ನು ನಿಮಗೋಸ್ಕರ ಬರೆಯಲಾಗಿದೆ, ಓದುತ್ತಾ ಬನ್ನಿ.

ರಿಯಲ್‌ ಎಸ್ಟೇಟ್‌ ವಿದ್ಯಮಾನಗಳ ಚಿತ್ರಗಳನ್ನು ಕಟ್ಟಿಕೊಡುವ ಏಕೈಕ ಉದ್ದೇಶದ ಒಂದು ಚಾನೆಲ್‌ಗೆ ಬೆಂಗಳೂರು ಮೂಲದ Alliance Group ಸಂಸ್ಥೆ 4.400 ಕೋಟಿ ರೂಪಾಯಿಗಳ ಬಂಡವಾಳ ಹಾಕಿದೆ. 24 x 7 ಸ್ಥಿರಾಸ್ತಿ ವಿಷಯಗಳನ್ನು ಮಾತ್ರ ಬಿತ್ತರಿಸುವ ಈ ಚಾನೆಲ್ಲಿನ ಹೆಸರು Real Estate TV.

ಭಾರತದಲ್ಲಿ ಈಹೊತ್ತು ಕೊಳ್ಳುವ ಶಕ್ತಿ, ಬಂಡವಾಳ ಹೂಡುವ ಶಕ್ತಿ ವೃದ್ಧಿಸುತ್ತಿದೆ. ಕೇವಲ ನಗರ ಪ್ರದೇಶಗಳಲ್ಲದೆ ಸಣ್ಣಪುಟ್ಟ ಪಟ್ಟಣ ಪ್ರದೇಶಗಳಲ್ಲೂ ಮಂದಿ ಮನೆ ಕಟ್ಟಿಕೊಳ್ಳಲು ಹವಣಿಸುತ್ತಾರೆ. ಇವರಿಗೆಲ್ಲ ಸಾಲ ಮೂಲಗಳನ್ನು ತೋರಿಸುವ, ಕಟ್ಟಡ ನಿರ್ಮಾಣ ಸೌಲಭ್ಯ, ಪರಿಕರಗಳನ್ನು ಪೂರೈಸುವ, ಸ್ಥಿರಾಸ್ತಿ ಪಾಸ್ತಿ ವಿಷಯವನ್ನು ವಿವರವಾಗಿ ಹಂಚಿಕೊಳ್ಳುವ ಸಂಸ್ಥೆಗಳು ಹೇರಳವಾಗಿ ಹುಟ್ಟಿಕೊಂಡಿವೆ. ಹಾಗೆ ನೋಡಿದರೆ ಇಂದು ಭಾರತದಲ್ಲಿ ಬೃಹತ್‌ ಬಂಡವಾಳವನ್ನು ಹೂಡುತ್ತಿರುವ ಉದ್ಯಮವೆಂದರೆ ಅದು ರಿಯಲ್‌ ಎಸ್ಟೇಟ್ ಮಾತ್ರ. ಅಂದಮೇಲೆ, ಇಂಥವರಿಗೆಲ್ಲ ಸ್ಥಿರಾಸ್ತಿ ವಿದ್ಯಮಾನಗಳ ಬಗೆಗೆ ಪಕ್ಕಾ ಮಾಹಿತಿ ಮತ್ತು ಮಾರ್ಗದರ್ಶನ ಆಗಿಂದಾಗ್ಯೆ ಲಭ್ಯವಾಗಬೇಕು.

ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನತೆ ವಾಸಕ್ಕೋಸ್ಕರ ಅಥವಾ ಬಂಡವಾಳ ತೊಡಗಿಸುವುದಕ್ಕೋಸ್ಕರ ಸ್ಥಿರಾಸ್ತಿ ವಿಷಯಗಳ ಬಗೆಗೆ ಆಮೂಲಾಗ್ರವಾಗಿ ತಿಳಿಯಬಯಸುತ್ತಾರೆ. ಅವರಿಗೆಲ್ಲ ಕರಾರುವಾಕ್ಕಾದ ಮಾಹಿತಿಯನ್ನು ನೀಡುವುದು ಈ ಚಾನೆಲ್ಲಿನ ಕಾರ್ಯಕ್ರಮ. ನಮ್ಮ ಟಿವಿ ಈ ವಿಷಯ ವ್ಯಾಪ್ತಿಗೆ ಮಾತ್ರ ಮೀಸಲು ಎಂದಿದ್ದಾರೆ Real Estate TV ಚಾನೆಲ್ಲಿನ ಸಿಒಓ ಟಿ.ಕೆ. ವಿಭಾಕರ್‌.

ಸ್ಥಿರಾಸ್ತಿ ಮಾರುಕಟ್ಟೆಯ ಇತ್ತೀಚಿನ ಸಂಗತಿಗಳನ್ನು ಕ್ಷಣಕ್ಷಣ ನೀಡುವುದೇ ತಮ್ಮ ಚಾನೆಲ್ಲಿನ ಉದ್ದೇಶ ಎನ್ನುತ್ತಾರೆ ವಿಭಾಕರ್‌.

ಸರಕಾರ ರೂಪಿಸುವ ನಿಯಮಗಳು, ಕಾನೂನು ಕಟ್ಟಳೆಗಳು, ಮಂತ್ರಿಮಹೋದಯರ ಹೇಳಿಕೆಗಳ ಪ್ರಸ್ತಾಪಗಳಲ್ಲದೆ, ಜನಸಾಮಾನ್ಯರು ಬಳಸಲು ಇಂಬು ಕೊಡುವ ಸೈಟು ಸ್ಕ್ವೇರ್‌ ಫೀಟು, ಫ್ಲಾಟು ಸಿಮೆಂಟು ಕಾಂಕ್ರೀಟು ಸುದ್ದಿ ಸಮಾಚಾರ, ಚರ್ಚೆ ಮತ್ತು ಸಮೂಹ ವಿಚಾರ ಪ್ರಜ್ಞೆಗಳನ್ನು ಬಿಂಬಿಸುವುದು ಚಾನೆಲ್ಲಿನ ಏಕೈಕ ಉದ್ದೇಶವಂತೆ.

ರಿಯಲ್‌ ಎಸ್ಟೇಟ್‌ ಚಾನಲ್ಲು ಸೆ.1ರಿಂದ ಪರೀಕ್ಷಾರ್ಥ ಪ್ರಸಾರ ಆರಂಭಿಸುತ್ತಿದೆ. ಅಧಿಕೃತವಾಗಿ ಇದೇ ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಈ ಚಾನಲ್ಲು DTH ಫಾರ್ಮ್ಯಾಟ್‌ನಲ್ಲಿ ಉಚಿತ.[ Free-to-Air]. ಟಾಟಾ ಸ್ಕೈ ಹಾಗೂ ಮತ್ತಿತರ ಡಿಟಿಎಚ್‌ ಆಪರೇಟರ್ಸ್ ಜೊತೆ ಮಾತುಕತೆ ನಡೆಯುತ್ತಿದ್ದು ನಿಮಗಿದು Free..

ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಲಭ್ಯವಾಗುವ ಈ ಟಿವಿ ಸಹಜವಾಗಿಯೇ ಇಂಗ್ಲಿಷ್‌ನಲ್ಲಿ ಇರುತ್ತದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X