ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರ್‌ದ್ವಯರ ಜಿದ್ದಾಜಿದ್ದಿ ಕದನಕ್ಕೆ ಸಾತನೂರು ಸಜ್ಜು

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 30 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಸಾತನೂರು ಸಮಾರಂಭ ಇಬ್ಬರ ಬಲಾಬಲಕ್ಕೆ ವೇದಿಕೆ ಸಜ್ಜುಗೊಳಿಸಿದೆ.

ಅಭಿವೃದ್ಧಿ ಕಾಮಗಾರಿ ನೆವವೊಡ್ಡಿ ಸಾತನೂರಿಗೆ ಕುಮಾರಸ್ವಾಮಿ ಬಂದರೆ ಏನು ಬೇಕಾದರೂ ಆಗಬಹುದು ಎಂದು ಡಿಕೆಶಿ ಎಸೆದಿದ್ದ ಸವಾಲನ್ನು ಸ್ವೀಕರಿಸಿರುವ ಕುಮಾರಸ್ವಾಮಿ ಸಾತನೂರನ್ನು ಅಭಿವೃದ್ಧಿ ಮಾಡಿಯೇ ತೀರುತ್ತೇನೆ ಎಂದು ಪ್ರತಿಸವಾಲು ಹಾಕಿದ್ದಾರೆ.

ಡಿಕೆಶಿ ಒಡ್ಡಿರುವ ಬೆದರಿಕೆಗೆ ಅಂಜುವುದಿಲ್ಲ. ಡಿಕೆಶಿ, ಸಿಂಧ್ಯಾ ಸೇಡಿನ ರಾಜಕಾರಣಕ್ಕೆ ಅಂತ್ಯ ಹಾಡಿ ಕನಕಪುರ, ಸಾತನೂರಿನಲ್ಲಿ ನೂತನ ರಾಜಕೀಯ ಯುಗಕ್ಕೆ ನಾಂದಿ ಹಾಡುತ್ತೇನೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಕುಮಾರಸ್ವಾಮಿ ಸಾತನೂರು ಭೇಟಿಯಿಂದಾಗಿ ತಮ್ಮ ಚೀನಾ ಪ್ರವಾಸವನ್ನು ರದ್ದುಗೊಳಿಸಿದ್ದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಸಾತನೂರಿನ ಅಭಿವೃದ್ಧಿಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇಬ್ಬರ ಬಹಿರಂಗ ಕಾಳಗಕ್ಕೆ ಸಾತನೂರು ಸಜ್ಜಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರುವಂತೆ ಮುನ್ನೆಚ್ಚರಿಕೆಯಾಗಿ ಮೂರೂವರೆ ಸಾವಿರ ಪೊಲೀಸರ ದಂಡು ಸಾತನೂರಲ್ಲಿ ಬೀಡುಬಿಟ್ಟಿದೆ.

ಕುಮಾರಸ್ವಾಮಿ ತಮ್ಮ ಭೇಟಿಯನ್ನು ಖಚಿತಪಡಿಸುತ್ತಿದ್ದಂತೆ ಶಿವಕುಮಾರ್ ತಾವೇ ಸಮಾರಂಭದ ಅಧ್ಯಕ್ಷತೆ ವಹಿಸುತ್ತಿದ್ದು ಕೊನೆಯಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ಕುಮಾರಸ್ವಾಮಿಗೆ ತಕ್ಕ ಉತ್ತರ ನೀಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಬಾವುಟವಲ್ಲದೇ ತಮ್ಮ ಬೆಂಬಲಿಗರು ಬೇರೆ ಬಾವುಟವನ್ನೂ ಹಾರಿಸುತ್ತಾರೆ ಎಂದು ಡಿಕೆಶಿ ಹೇಳಿರುವ ಹಿನ್ನೆಲೆಯಲ್ಲಿ ಎರಡೂ ರಾಜಕೀಯ ಬಣಗಳ ನಡುವೆ ಜಟಾಪಟಿ ನಡೆಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಅಧಿಕಾರಾವಧಿ ಮುಗಿಯುತ್ತ ಬಂದಿದ್ದರೂ ಕುಮಾರಸ್ವಾಮಿ ಅಧಿಕಾರ ಮುಂದುವರಿಸುತ್ತಾರೆಂಬುದು ಡಿಕೆಶಿ ಅನಿಸಿಕೆಯಾದರೆ ಮುಂದಿನ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವ ಡಿ.ಕೆ.ಶಿವಕುಮಾರ್ ಸಾತನೂರಿನ ಅಭಿವೃದ್ಧಿ ಕಾರ್ಯಗಳಿಗೆ ಬೇಕಂತಲೇ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವುದು ಎಚ್‌ಡಿಕೆ ವಾದ.

ಒಟ್ಟು 500 ಕೋಟಿ ರು. ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಆದರೆ ಯಾವ ಕಾಮಗಾರಿಗೂ ಇಲ್ಲಿಯವರೆಗೆ ತಾಂತ್ರಿಕ ಅನುಮೋದನೆ ಸಿಕ್ಕಿಲ್ಲ, ಇದೆಲ್ಲ ರಾಜಕೀಯ ಕುತಂತ್ರ ಎಂದು ಡಿಕೆಶಿ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X