ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರ ಸ್ಥಿತಿ ಈರುಳ್ಳಿಯಿಲ್ಲದೆ ಮಾಡಿದ ಚಿತ್ರಾನ್ನ

By Staff
|
Google Oneindia Kannada News

Cheee! Bengalooru is stinking!ಹಾಪ್ಕಾಮ್ಸ್‌ನಲ್ಲೋ ಸುಭಿಕ್ಷಾದಲ್ಲೋ ತಂದಿಟ್ಟಿರುವ ಕೊಳೆತ ಈರುಳ್ಳಿ ಸಿಕ್ಕರೇ ಪುಣ್ಯ ಅನ್ನುವಂತಾಗಿದೆ ಬೆಂಗಳೂರಿಗರ ಸ್ಥಿತಿ. ಕೆಜಿಗೆ 25 ರು. ಮಾರುವ ನಾರುತ್ತಿರುವ ಈರುಳ್ಳಿಯನ್ನು ಕೊಳ್ಳದೇ ಬೇರೆ ವಿಧಿಯೇ ಇಲ್ಲ. ಸಗಟು ವ್ಯಾಪಾರಸ್ಥರು ಸರ್ಕಾರದೊಡನೆ ಜಿದ್ದಿಗೆ ಬಿದ್ದು ಎಪಿಎಂಸಿ ಕಾಯಿದೆಯನ್ನು ಹಿಂತೆಗೆದುಕೊಳ್ಳದೇ ಮುಷ್ಕರ ಹಿಂತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಮುಂತಾದ ತರಕಾರಿಗಳನ್ನು ಕೊಳೆಯದಂತೆ ಇಡಲು ಹೆಣಗಾಡುತ್ತಿದ್ದಾರೆ.

ತರಕಾರಿ ಕೊಳ್ಳುವವರಿಗೆ ಸುಭಿಕ್ಷಾದಲ್ಲಿಟ್ಟ ಅಸುರಕ್ಷಿತ ಈರುಳ್ಳಿ ನೋಡಿದರೆ ಕಣ್ಣೀರು ಬರುತ್ತಿಲ್ಲ. ಅದರ ಬೆಲೆ, ಅದಿರುವ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತಿದೆ. ರಾಶಿರಾಶಿ ಬಿದ್ದಿರುವ ತರಕಾರಿಗಳನ್ನು ಮಾರಾಟಮಾಡಲಾಗುತ್ತಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳು ಮಾರುತ್ತಿರುವ ತರಕಾರಿಗಳನ್ನು ಕೊಳ್ಳಲಾಗುತ್ತಿಲ್ಲ.

ನಾವೂ ಮಾತುಕತೆಗೆ ಸಿದ್ಧ ನೀವೇ ಬನ್ನಿ ಅನ್ನುವ ಸರ್ಕಾರ ಮಾರಾಟಗಾರರ ಕೂಗಿಗೆ ಕ್ಯಾರೆ ಅನ್ನುತ್ತಿಲ್ಲ. ಹಣವಂತರಿಗೆ ದುಡ್ಡು ಕೊಟ್ಟರೆ ಕೊಳೆತ ತರಕಾರಿಯಾದರೂ ಸಿಗುತ್ತಿದೆ. ಆದರೆ, ತರಕಾರಿ ಮಾರಿ ಹೊಟ್ಟೆ ಹೊರೆದುಕೊಳ್ಳುವ ಚಿಲ್ಲರೆ ವ್ಯಾಪಾರಿಗಳು ಹೊಟ್ಟೆಗೆ ತಣ್ಣೀರು ಸುರಿದುಕೊಂಡು ಕುಳಿತಿದ್ದಾರೆ.

ಈಗಾಗಲೆ ಆರನೇ ದಿನಕ್ಕೆ ಕಾಲಿಟ್ಟಿರುವ ಮುಷ್ಕರ ಕೊನೆಗೊಳ್ಳುವ ಯಾವ ಸೂಚನೆಗಳೂ ಕಂಡುಬರುತ್ತಿಲ್ಲ. ರೈತರ ಸದುದ್ದೇಶಕ್ಕಾಗಿಯೇ ಎಪಿಎಂಸಿ ಕಾಯಿದೆಯನ್ನು ತಿದ್ದುಪಡಿ ಮಾಡುತ್ತಿರುವುದಾಗಿ ಎಂದು ಕಾಳಜಿಯ ಮುಖವಾಡ ತೋರುತ್ತಿದ್ದರೂ ಮೆಟ್ರೋ, ರಿಲಾಯನ್ಸ್‌ಗಳು ಎಲ್ಲೆಂದರಲ್ಲಿ ತಲೆಯೆತ್ತಿ ನಿಲ್ಲುತ್ತಿರುವುದು ಸರ್ಕಾರದ ಅಸಲಿಯತ್ತನ್ನು ಬಹಿರಂಗ ಮಾಡಿದೆ, ರೈತರ ಕಾಳಜಿಗೆ ಕಾರಣವಾಗಿದೆ.

ನಾಲ್ಕು ಹನಿ ಮಳೆ ಬಂದರೇ ಸಾಕು ಮಹಾಮಳೆ ಬಂದವರಂತೆ ಎಗರಾಡುವ ಬೆಂಗಳೂರು ಚರಂಡಿಗಳು ಬೆಂಗಳೂರಿಗರ ಜೀವನವನ್ನು ಅಸಹನೀಯ ಮಾಡಿಟ್ಟಿವೆ. 10 ಮಿ.ಮೀ. ಮಳೆ ಸುರಿದರೆ 10 ಸೆಂ.ಮೀ. ಮಳೆ ಬಂದವರಂತೆ ಮೊಳಕಾಲೆತ್ತರ ನೀರು ರಸ್ತೆಯಲ್ಲಿ ಹರಿಯಲು ಪ್ರಾರಂಭಿಸುತ್ತದೆ.

ಮಳೆಗಾಲ ಪ್ರಾರಂಭವಾಗುವ ಮೊದಲೇ ಚರಂಡಿಗಳನ್ನು ದುರುಸ್ತಿ ಮಾಡಬೇಕೆಂಬ ಕಾಳಜಿ ಸರ್ಕಾರಕ್ಕಿಲ್ಲ. ಪ್ಲಾಸ್ಟಿಕ್ಕು, ಇತರ ತ್ಯಾಜ್ಯಗಳನ್ನು ಚರಂಡಿಗೆ ಎಸೆದರೆ ಚರಂಡಿ ಕಟ್ಟಿಕೊಳ್ಳುತ್ತದೆಂಬ ವಿವೇಚನೆ ಜನರಿಗಿಲ್ಲ. ಅಗೆದ ರಸ್ತೆಯನ್ನು ದುರುಸ್ತಿಯನಂತರ ಮುಚ್ಚಿ ಒಡಾಟಕ್ಕೆ ಯೋಗ್ಯ ಮಾಡಬೇಕೆನ್ನುವ ಕಾಳಜಿ ಕಾರ್ಪೋರೇಷನ್ನಿಗಿಲ್ಲ. ಊರ ಹೊರಹೊರಗಿನ ಫ್ಯಾಕ್ಟರಿಗಳೆಲ್ಲ ತ್ಯಾಜ್ಯಗಳೆಲ್ಲ ಚರಂಡಿ ಸೇರಿ, ಚರಂಡಿ ನೀರೆಲ್ಲ ಬೆಂಗಳೂರಿಗರು ಕುಡಿಯುವ ತಿಪ್ಪಗೊಂಡನಹಳ್ಳಿ ಕೆರೆ ಸೇರಿ, ಆ ಕೆರೆಯ ನೀರನ್ನೇ ಕುಡಿಯುವಂತಾಗಿದೆ ಬೆಂಗಳೂರಿಗರ ಸ್ಥಿತಿ.

ಅಡ್ಡಾಡಲೂ ಜಾಗವಿರದಂತೆ ಆಕ್ರಮಿಸಿಕೊಂಡಿರುವ ಮುಗಿಲೆತ್ತರ ವಸತಿಸಮುಚ್ಚಯಗಳು, ಅದರ ಕಂಪೌಂಡಿನ ಹೊರಗೆ ವಾರಗಟ್ಟಲೆ ತೆಗೆಯದೆ ಬಿದ್ದಿರುವ ಕೊಳೆತು ನಾರುವ ತಿಪ್ಪೆ. ತಿಪ್ಪೆಯಲ್ಲಿ ಅಪ್ಪ ಅಮ್ಮಂದಿರಿಗೆ ಬೇಡವಾದ, ಡಾಕ್ಟರುಗಳ ಪ್ರಯೋಗಕ್ಕೆ ಆಹಾರವಾದ ಭ್ರೂಣಗಳು! ಕೊಳೆತು ನಾರುತ್ತಿದೆ ಬೆಂಗಳೂರು!

ಸಿಗ್ನಲ್ ಹಸಿರು ದೀಪ ತೋರಿದೊಡನೆ ದ್ವಿಚಕ್ರವಾಹನಗಳು ರೇಸಿಂಗಿಗೆ ಹೋಗುತ್ತಿವೆಯೇನೋ ಎಂಬಂಥ ಭ್ರಮೆ. ಸಣ್ಣ ಮಳೆಯಾದರೆ, ಒಂದು ಮುಷ್ಕರ ಹೂಡಿದರೆ ಕಿಲೋಮೀಟರುಗಟ್ಟಲೆ ನಿಲ್ಲುವ ವಾಹನಗಳು. ರಸ್ತೆಮೇಲೆ ಹೋಗಲಾಗದೆ ಫುಟ್‌ಪಾತ್ ಏರುವ ದ್ವಿಚಕ್ರವಾಹನಗಳು, ಅವನ್ನು ನಿಯಂತ್ರಿಸಲಾಗದ ಪೊಲೀಸರು. ಒಟ್ಟಿನಲ್ಲಿ ಬೆಂಗಳೂರಿಗರ ಸ್ಥಿತಿ ಈರುಳ್ಳಿಯಿಲ್ಲದೆ ಮಾಡಿದ ಚಿತ್ರಾನ್ನವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X