ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆರಾಯನ ಆರ್ಭಟಕ್ಕೆ ರಾಜ್ಯ ತತ್ತರ : 12 ಜನರ ಸಾವು

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 06 : ಸ್ವಲ್ಪ ದಿನ ರಜಾ ಹಾಕಿದ್ದ ಮುಂಗಾರು ಮಳೆ ರಾಜ್ಯಾದ್ಯಂತ ಸುರಿಯುತ್ತಿದ್ದು ಕಳೆದ 24 ಗಂಟೆಗಳಲ್ಲಿ 12 ಜನರನ್ನು ಆಹುತಿ ತೆಗೆದುಕೊಂಡಿದೆ.

ಅನೇಕ ನದಿಗಳು ಮೈದುಂಬಿ ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಮಡಿಕೇರಿ, ಭಾಗಮಂಡಲ ಸಂಪೂರ್ಣ ಸಂಪರ್ಕ ಕಡಿದುಕೊಂಡಿದ್ದರೆ, ಕರಾವಳಿಯಲ್ಲಿ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬೆಳೆ ಮತ್ತು ಆಸ್ತಿಗೆ ಹೆಚ್ಚಿನ ಹಾನಿ ಸಂಭವಿಸಿದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಕರಡಿಗುಡ್ಡದಲ್ಲಿ ಒಂದೇ ಕುಟುಂಬದ ಮೂರು ಮಕ್ಕಳು ಮತ್ತು ಓರ್ವ ಮಹಿಳೆ ಮನೆ ಕುಸಿದು ಸಾವಿಗೀಡಾಗಿದ್ದಾರೆ. ಕುಟುಂಬದ ಸದಸ್ಯರ ಮರಣವನ್ನು ಸಹಿಸಲಾಗದೆ ಮನೆಯ ಯಜಮಾನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಬೆಳಿಗ್ಗೆ ದುರಂತ ಸಂಭವಿಸಿದ ಮನೆಗೆ ಕಂದಾಯ ಸಚಿವ ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿ ಕುಟುಂಬಕ್ಕೆ ನಾಲ್ಕು ಲಕ್ಷ ಪರಿಹಾರ ಘೋಷಿಸಿದ್ದಾರೆ.

ಹಾವೇರಿ ಪಟ್ಟಣದಲ್ಲಿಯೇ ಮತ್ತೊಬ್ಬ ರಾತ್ರಿ ಮಲಗಿದಾಗ ಗೋಡೆ ಕುಸಿದಿದ್ದರಿಂದ ಮೃತ್ಯುವಿಗೀಡಾಗಿದ್ದಾನೆ.

ಶಿವಮೊಗ್ಗ ಜಿಲ್ಲೆಯಲ್ಲಿಯೂ ಗೋಡೆ ಕುಸಿತದಿಂದ ಮೂವರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಶಾಲಾಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ದಾವಣಗೆರೆಯಲ್ಲಿಯೂ ಮನೆಯ ಛಾವಣಿ ಕುಸಿದಿದ್ದರಿಂದ ಮಲಗಿದ್ದ ಇಬ್ಬರನ್ನು ಜವರಾಯ ತನ್ನ ಬಳಿಗೆ ಕರೆದುಕೊಂಡಿದ್ದಾನೆ.

ಉಡುಪಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದರೂ ಮೀನು ಹಿಡಿಯಲು ಸಮುದ್ರಕ್ಕಿಳಿಯುವ ಸಾಹಸ ಮಾಡಿದ ಇಬ್ಬರು ಸಮುದ್ರಪಾಲಾಗಿದ್ದಾರೆ. ಅವರಿದ್ದ ದೋಣಿ ಮುಳುಗಿದ್ದರಿಂದ 18 ಲಕ್ಷ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಮಲ್ಪೆ ಬಳಿಯೂ ಸಮುದ್ರದಲ್ಲಿ ಸಾಗರಕ್ಕಿಳಿದಿದ್ದ 6 ಜನ ತಮಿಳುನಾಡಿನ ಮೀನುಗಾರರನ್ನು ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ.

ಉಡುಪಿ ಜಿಲ್ಲೆಯ ಪಂಗಳ ಎಂಬಲ್ಲಿ ಛಾವಣಿ ಮುರಿದು ಬಿದ್ದಿದ್ದರಿಂದ ಓರ್ವ ಸಾವಿಗೀಡಾಗಿದ್ದು, ಹನ್ನೆರಡು ವರ್ಷದ ಬಾಲಕ ಮತ್ತು ಮಹಿಳೆಯೊಬ್ಬಳು ಪವಾಡಸದೃಶ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ನಂದಾ ಗ್ರಾಮದ ಬಳಿಯ ಕೊಂಕೆ ಎಂಬಲ್ಲಿ ಸೌಪರ್ಣಿಕಾ ನದಿಗೆ ಕಾಲುಜಾರಿ ಬಿದ್ದ 22ರ ಹರೆಯದ ಯುವತಿ ನದಿಪಾಲಾಗಿದ್ದಾಳೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗದ್ದೆಗಳೆಲ್ಲ ನೀರಾವೃತವಾಗಿದ್ದು, ಸೌಪರ್ಣಿಕಾ, ಪಂಚಗಂಗಾವಳಿ, ಚಕ್ರ, ಹಳದಿ ಮತ್ತು ವರಾಹಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈ ನದಿಗಳ ಸುತ್ತಲಿನ ಜನರನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವ ಕಾರ್ಯ ಜಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಕೊಡಗಿಲ್ಲಿಯೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಡಿಕೇರಿ ಮತ್ತು ಭಾಗಮಂಡಲ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿವೆ. 44 ಕೋಟಿಗೂ ಹೆಚ್ಚಿನ ಬೆಳೆ, ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಹರಿವು ಹೆಚ್ಚಾಗಿದ್ದು, ನದಿತಟದಲ್ಲಿ ವಾಸಿಸುತ್ತಿರುವ ಜನ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳಬೇಕೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅತ್ಯಧಿಕ ಮಳೆ : ಮುಂಗಾರು ಮಳೆಯ ಹೆಚ್ಚಿನ ಪಾಲು ಹಂಚದಕಟ್ಟೆಗೆ ಸಂದಿದೆ. ಹಂಚದಕಟ್ಟೆಯಲ್ಲಿ ಕಳೆದ 24 ಗಂಟೆಗಳಲ್ಲಿ 36 ಸೆಂ.ಮೀ. ಮಳೆ ಹುಯ್ದಿದೆ. ಆಗುಂಬೆಯಲ್ಲಿ 31, ಕೊಟ್ಟಿಗೆಹಾರ 29, ಮೂಡಿಗೆರೆ 27, ಸಿದ್ದಾಪುರ 25, ಭಾಗಮಂಡಲ, ಲಿಂಗನಮಕ್ಕಿ 23, ಹೊಸನಗರ, ಕೊಪ್ಪದಲ್ಲಿ 19 ಸೆಂ.ಮೀ. ಮಳೆಯಾಗಿದೆ.

ಎಚ್ಚರಿಕೆ : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಎಲ್ಲೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಗುಂಟ ಭಾರೀ ಮಳೆ ಸುರಿಯಲಿರುವುದರಿಂದ ಮೀನುಗಾರರು ತೆಪ್ಪಗೆ ಮನೆಯಲ್ಲಿಯೇ ಇರಬೇಕೆಂದು ಎಚ್ಚರಿಸಿದೆ.

ಬೆಂಗಳೂರಿನಲ್ಲಿಯೂ ಮೋಡಕವಿದ ವಾತಾವರಣವಿದ್ದು ಸಂಜೆಯ ವೇಳೆಗೆ ತುಂತುರು ಮಳೆ ಹನಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X