ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಮೈಕ್ರೊಸಾಫ್ಟ್ ಕಂಪ್ಯೂವಿಶ್ವವಿದ್ಯಾಲಯ!!

By Staff
|
Google Oneindia Kannada News

ಬೆಂಗಳೂರು ಜುಲೈ 12 : ಉನ್ನತ ಕಂಪ್ಯೂಟರ್‌ ಶಿಕ್ಷಣವನ್ನು ನೀಡುವ ಉದ್ದೇಶದ ಕಂಪ್ಯೂಟರ್ ವಿಶ್ವವಿದ್ಯಾಲಯವೊಂದು, ಬೆಂಗಳೂರಿನಲ್ಲಿ ತಲೆ ಎತ್ತುವುದಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮೈಕ್ರೊಸಾಫ್ಟ್‌ ಕಾರ್ಪೋರೇಷನ್ ಆರಂಭಿಸುತ್ತಿರುವ ಈ ಶಿಕ್ಷಣ ಕೇಂದ್ರವು, ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದಲ್ಲಿ ಸ್ಥಾಪಿಸುವ ಪ್ರಥಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ಮಾಹಿತಿ ತಂತ್ರಜ್ಞಾನದ ಮೇರು ಸಂಸ್ಥೆಯಾಗಿರುವ ಮೈಕ್ರೊಸಾಫ್ಟ್‌, ಶಿಕ್ಷಣ ಕ್ಷೇತ್ರದಲ್ಲಿ ಅಂಬೆಗಾಲನ್ನಿಡಲು ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರತಿಭೆಗಳನ್ನು ಗುರುತಿಸಿ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡುವುದರ ಮೂಲಕ ಭಾರತದಲ್ಲಿ ಕಂಪ್ಯೂಟರ್ ವಿದ್ಯಾಮತಿಗಳ ಪೈರು ಬೆಳೆಸುವುದಕ್ಕೆ ಈ ವಿಶ್ವವಿದ್ಯಾಲಯ ಭೂಮಿಯಾಗಲಿದೆ. ಆರಂಭದಲ್ಲಿ 1000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಅಂದಾಜಿದೆ.

ಬೆಂಗಳೂರಿನಲ್ಲಿ ಶಿಕ್ಷಣಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮತ್ತು ಮೈಕ್ರೋಸಾಫ್ಟ್‌ ಅಧಿಕಾರಿಗಳ ನಡುವೆ ಈಗಾಗಲೆ ಮೂರ್ನಾಲ್ಕು ಸುತ್ತಿನ ಮಾತುಕತೆ ನಡೆದಿವೆ. ಉದ್ದೇಶಿತ ಶಿಕ್ಷಣ ಕೇಂದ್ರ ಯಾವ ಮಾದರಿಯಲ್ಲಿ ಸ್ಥಾಪನೆಯಾಗಬೇಕು? ಕ್ಯಾಂಪಸ್‌ಗೆ ಬೇಕಾದ ಜಾಗ ಎಲ್ಲಿದೆ? ಎಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಕೋರ್ಸು ತೆಗೆದುಕೊಳ್ಳಬಹುದು, ಈ ಕೋರ್ಸುಗೆ ಏನಂತ ಕರೆಯೋಣ? ಮುಂತಾದ ಸಂಗತಿಗಳ ಬಗೆಗೆ ಮೈಕ್ರೋಸಾಫ್ಟ್ ಒಂದು ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.

ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವಾದ ಪ್ರತಿಯೊಂದು ಅಂಶಗಳ ಆಮೂಲಾಗ್ರ ಪರಿಶೀಲನೆಯನ್ನು ಮೈಕ್ರೊಸಾಫ್ಟ್ ಕೈಗೆತ್ತಿಕೊಂಡಿದೆ. ಮಾನವ ಸಂಪನ್ಮೂಲ ಸಚಿವಾಲಯ, ವಿಶ್ವವಿದ್ಯಾಲನ ಅನುದಾನ ಆಯೋಗ ಮತ್ತಿತರ ಸಾಂಸ್ಥಿಕವಾಗಿ ಅಂತರ್‌ಗತವಾಗಿರುವ ನಿಯಮಗಳನ್ನು ಅಭ್ಯಸಿಸಿ ಕಂಪನಿಯು ಸಮಗ್ರ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಕರ್ನಾಟಕ ಸರಕಾರದ ಮುಂದೆ ಇಡಲಿದೆ.

ಈ ಸಂಬಂಧ ರಾಜ್ಯ ಸರಕಾರದ ಐಟಿಬಿಟಿ ಇಲಾಖೆಯ ಉನ್ನತಮಟ್ಟದ ಸಮಿತಿಯೊಂದು, ಪ್ರಸ್ತಾವನೆಯ ಅಂಶಗಳ ವಿವಿಧ ಸಾಧಕ ಬಾಧಕಗಳನ್ನು ವಿವಿಧ ದೃಷ್ಟಿಕೋನಗಳಲ್ಲಿ ಅಭ್ಯಸಿಸುತ್ತಿದೆ. ಅಂತಿಮವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಯೋಜನೆಗೆ ಹಸುರು ನಿಶಾನೆ ತೋರಿಸಲಿದ್ದಾರೆ.

ಅಂತೂ, ಬೆಂಗಳೂರನ್ನು ಅರಸಿಕೊಂಡು ಎಲ್ಲರೂ ಬರುತ್ತಾರೆ, ಎಲ್ಲವೂ ಬರುತ್ತದೆ. ಕರ್ನಾಟಕದ ರಾಜಧಾನಿ ಬೆಂಗಳೂರೆಂಬ ಮಾಯಾನಗರಿಯು ವಿಶ್ವ ವ್ಯಾಪಾರ, ವಿಶ್ವಶಿಕ್ಷಣ ಮತ್ತು ಜಾಗತಿಕ ಮನರಂಜನೆಯನ್ನು ಅಂಗೈಯಲ್ಲಿ ಕುಣಿಸುವ ಪ್ರಕ್ರಿಯೆ ಆರಂಭವಾಗಿ ವರ್ಷಗಳು ಉರುಳಿವೆ. ಒಂದೊಂದೆ ದಾಳಗಳು ಉರುಳುತ್ತ ಉರುಳುತ್ತ ಬಂದು ಬೆಂಗಳೂರಲ್ಲಿ ನೆಲೆಕಂಡುಕೊಳ್ಳುತ್ತವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X