ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಈಸಲ ಮಳೆ ಪರವಾಗಿಲ್ವಾ?ರೈತ ಹೇಗಿದ್ದಾನೆ?

By Staff
|
Google Oneindia Kannada News

ರಾಜ್ಯದಲ್ಲಿ ಮುಂಗಾರು ಮಳೆ ತಡವಾಗಿಯಾದರೂ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕಾಗಿ ಸಾಗುತ್ತಿವೆ.

ರಾಜ್ಯದಲ್ಲಿ ಜೂನ್ ತಿಂಗಳ ಅಂತ್ಯದ ವೇಳೆಗೆ ಒಟ್ಟು 29.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ಜೂನ್ ಅಂತ್ಯದ ವೇಳೆಗೆ ವಾಡಿಕೆ ಬಿತ್ತನೆ ಪ್ರದೇಶ 24.74 ಲಕ್ಷ ಹೆಕ್ಟೇರ್ ಇದ್ದು, ಈ ಬಾರಿ 29.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ವೇಳೆಗೆ 25.15 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು.

ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ವಿರಳ ಮಳೆಯಾಗಿದ್ದು, ನೆಲಮಂಗಲ, ಕೋಲಾರ ಜಿಲ್ಲೆಯ ಬಾಗೇಪಲ್ಲಿ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕುಗಳಲ್ಲಿ ಮಳೆಯ ಕೊರತೆಯಿದ್ದು, ರಾಜ್ಯದ ಇತರ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದಾಗಿ ಬಿತ್ತನೆ ಪ್ರದೇಶವೂ ವಾಡಿಕೆಗಿಂತ ಹೆಚ್ಚಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಖಾರಿಫ್ ಬೆಳೆಗಳಾದ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ಉದ್ದು, ಹೆಸರು, ತೊಗರಿ, ಶೇಂಗಾ, ಎಳ್ಳು, ಸೋಯಾಬೀನ್, ಸೂರ್ಯಕಾಂತಿ, ಹತ್ತಿ ಬಿತ್ತನೆ ಹಾಗೂ ತಂಬಾಕು ಸಸಿ ನೆಡುವ ಪ್ರಕ್ರಿಯೆ ರಾಜ್ಯದ ದಕ್ಷಿಣ, ಉತ್ತರ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿದೆ.

ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 8.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯ ಗುರಿ ಹೊಂದಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗುವುದು. ಈ ಬಾರಿ ರೈತರು ಈಗಾಗಲೇ 5.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದು ವಾಡಿಕೆಗಿಂತ ಹೆಚ್ಚಾಗಿದೆ.

ಸಜ್ಜೆಯ ಬಿತ್ತನೆಯೂ ವಾಡಿಕೆಗಿಂತ ಹೆಚ್ಚಾಗಿದೆ. ಆದರೆ ಭತ್ತ, ಜೋಳ, ರಾಗಿ ಬಿತ್ತನೆಯು ವಾಡಿಕೆಗಿಂತ ಕಡಿಮೆಯಾಗಿದೆ. ಮುಂಗಾರು ತಡವಾಗಿ ಪ್ರಾರಂಭವಾದ್ದರಿಂದ ಬಿತ್ತನೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜ್ಯದ 73.95 ಲಕ್ಷ ಹೆಕ್ಟೇರ್ ಖಾರಿಫ್ ಬಿತ್ತನೆ ಪ್ರದೇಶದಲ್ಲಿ 15.58 ಲಕ್ಷ ಹೆಕ್ಟೇರ್ ಆಹಾರ ಧಾನ್ಯಗಳು, 5.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಹಾಗೂ 4.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆಯಾಗಿದೆ.

ಮಳೆಹಾನಿ : ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ರಾಯಚೂರು, ವಿಜಾಪುರ, ಬಾಗಲಕೋಟೆ, ಗುಲ್ಪರ್ಗಾ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 5045 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, ಹಾನಿಯ ವಿವರಗಳ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.

ರೈತರಿಗೆ ಸಲಹೆ : ಪ್ರಸ್ತುತ ಮುಂಗಾರಿನಲ್ಲಿ ಜಲಾಶಯಗಳ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಸಾಧಾರಣಕ್ಕಿಂತ ಹೆಚ್ಚು
ಮಳೆಯಾಗಿರುವುದಲ್ಲದೇ ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೆರೆ ಹಾವಳಿ ಭೀತಿ ಉಂಟಾಗಿದೆ. ಇದರಿಂದಾಗಿ ಬಿತ್ತನೆ ಮಾಡಿರುವ ಬೆಳೆಗಳಲ್ಲಿ ವ್ಯತ್ಯಯವಾಗಿದೆ.

ಈ ಸಮಯದಲ್ಲಿ ರೈತರು ಹೆಚ್ಚುವರಿಯಾಗಿ ಬೀಳುವ ಮಳೆನೀರು ನಿರ್ವಹಣೆ ಮಾಡುವ ಮೂಲಕ ಬೆಳೆಗಳ ರಕ್ಷಣೆ ಮಾಡುವುದು ಅಗತ್ಯ. ಅದಕ್ಕಾಗಿ ಕೂರಿಗೆ ಬಿತ್ತನೆಯಾಗಿರುವ ಎಳೆಯ ಪೈರುಳ್ಳ ಭತ್ತದ ತಾಕುಗಳಲ್ಲಿ ಹಾಗೂ ಇನ್ನಿತರ ತೋಟದ ಬೆಳೆಗಳಿರುವ ತಗ್ಗಿನ ಗದ್ದೆಗಳ
ಇಳಿಜಾರಿನ ಕೆಳಭಾಗದಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಿ ಅವುಗಳ ಮೂಲಕ ಹೆಚ್ಚುವರಿ ನೀರು ಹೊರಹಾಕಿ ಪೈರನ್ನು ರಕ್ಷಿಸಬಹುದು.

ಮಳೆಯ ನಂತರ ಬಿತ್ತನೆ ಹದ ದೊರಕಿದ ಕಡೆಗಳಲ್ಲಿ ಈಗಾಗಲೇ ಬಿತ್ತನೆಯಾಗಿರುವ ತೊಗರಿ, ಹೆಸರು, ಉದ್ದು, ಅಲಸಂದೆ, ನೆಲಗಡಲೆ, ಮುಸುಕಿನ ಜೋಳ, ಹತ್ತಿ, ಸೋಯಾ ಅವರೆ ಮುಂತಾದ ಬೆಳೆಗಳಲ್ಲಿ ಸಾಲಿಗೆ ಮಣ್ಣು ಏರು ಹಾಕುವ ಮೂಲಕ ಹೆಚ್ಚು ತೇವಾಂಶದ ಬಾಧೆ ಬೆಳೆಗೆ ಆಗದಂತೆ ಮಾಡಲು ಸಾಧ್ಯ. ಖುಷ್ಕಿ ಜಮೀನುಗಳಲ್ಲಿ ಬೀಳುವ ಮಳೆಯ ನೀರನ್ನು ಸುರಕ್ಷಿತ ರೀತಿಯಲ್ಲಿ ಕಾಲುವೆಗಳ ಅಥವಾ ನೇಗಿಲು ಸಾಲುಗಳ ಮೂಲಕ ಕೃಷಿ ಹೊಂಡಗಳಲ್ಲಿ
ಸಂಗ್ರಹಿಸಬಹುದು. ಒಡೆದ ಬದು ಮತ್ತು ಕೊರೆದ ಕೋಡಿಗಳನ್ನು ದುರಸ್ತಿಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ನೀಡುತ್ತಾರೆ.

***

ಜುಲೈ 9 ರಂದು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಕೌನ್ಸಿಲಿಂಗ್

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಯ್ಕೆಯಾಗಿರುವ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಅಭ್ಯರ್ಥಿಗಳು ಕೌನ್ಸಿಲಿಂಗ್‌ಗೆ ದಿನಾಂಕ 9-7-2007ರಂದು ಬೆಳಿಗ್ 10ಗಂಟೆಗೆ ಹಾಜರಾಗಲು ಕೋರಲಾಗಿದೆ.

ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆಂಟ್ರಲ್ ಜೂನಿಯರ್ ಕಾಲೇಜು ಆವರಣ, ಕೆ. ಜಿ. ರಸ್ತೆ, ಬೆಂಗಳೂರು ಇಲ್ಲಿ ಹಾಜರಾಗಲು ಕೋರಿದೆ.

***

ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ

ಜುಲೈ 21ರಂದು ಬೆಂಗಳೂರು ನಗರದಲ್ಲಿ ನಡೆಯಲಿರುವ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸರ್ಕಾರವು ಆದೇಶಿಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ನೌಕರರಿಗೆ ಜುಲೈ 21ರಂದು ಒಂದು ದಿನ ಹಾಗೂ ಇತರೆ ಜಿಲ್ಲೆಗಳಿಂದ ಬರುವ ನೌಕರರಿಗೆ ಜುಲೈ 20 ಹಾಗೂ 21ರಂದು ಎರಡು ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X