ಪ್ರಿಯ ಓದುಗರೇ ಒಂದು ಮಾಹಿತಿ ದಯವಿಟ್ಟು ತಿಳಿಸಿ
ಬೆಂಗಳೂರು : ಗುರುವಾರ ಮಧ್ಯಾಹ್ನ 1ಗಂಟೆ. ನಾನು ಊಟಮಾಡುವುದಕ್ಕೆ ಟೆರೇಸಿಗೆ ಹೊರಟಿದ್ದೆ. ಅಷ್ಟರಲ್ಲಿ ನಮ್ಮ ಕಚೇರಿಯ ಲ್ಯಾಂಡ್ ಲೈನಿಗೆ ಒಂದು ದೂರವಾಣಿ ಕರೆ ಬಂತು. ಆ ಹೆಂಗಸು ಮಾತಾಡುವುದಕ್ಕೆ ಮುಂಚೆಯೇ ಅಳುತ್ತಿದ್ದಳು. ಕೇವಲ ಅಳು.
ವಿಷಯ ಏನು ಹೇಳಮ್ಮ ಅಂದರೆ ಮತ್ತೆ ಜೋರು ಅಳುವುದಕ್ಕೆ ಶುರುಮಾಡಿದಳು. ನಾನು ಸಮಾಧಾನ ಮಾಡುವುದಕ್ಕೆ ಹೋಗಲಿಲ್ಲ. ಅವಳ್ಯಾಕೆ ಅಳುತ್ತಿದ್ದಾಳೆ, ನನಗೇಕೆ ಫೋನು ಮಾಡಿದಳು ಎನ್ನುವುದು ನನ್ನ ಚಿಂತೆ. ಅವಳಿಗೂ ಊಟದ ಹೊತ್ತಾಗಿರಬೇಕು.
ಅವಳ ಗಂಡ ದಿನಾ ಅವಳನ್ನು ಹೀನಾಮಾನ ಬಯ್ಯುತ್ತಾನಂತೆ, ಕೋಪ ಜಾಸ್ತಿಯಾದಾಗ ಹೊಡೆಯುತ್ತಾನಂತೆ. ನನಗೆ ಬಯ್ದರೆ ಪರವಾಗಿಲ್ಲ ಸರ್, ಏನೂ ಗೊತ್ತಿಲ್ಲದೇ ಇರೋ ಪಾಪ ನನ್ನ ಮಗಳನ್ನು ಹಿಡಕೊಂಡು ಹೊಡೀತಾರೆ. ನಿಮಗೆ ದಮ್ಮಯ್ಯ ಅಂತೀನಿ ದಾರಿ ತೋರಿಸುತ್ತೀರಾ? ಅಂತ ಮತ್ತೆ ಗಳಗಳ ಅಳುವುದಕ್ಕೆ ಶುರುಮಾಡಿದಳು.
ಅವಳ ಮಗುವಿಗೆ 13ವರ್ಷ. ಹುಟ್ಟಿನಿಂದ ಬುದ್ಧಿಮಾಂದ್ಯ . ಅವಳನ್ನು ಆಜೀವಕಾಲ ಯಾರಾದರೂ ನೋಡಿಕೊಳ್ಳದೆ ವಿಧಿಯಿಲ್ಲ. ಅದಕ್ಕೆ ತಾಯಿ ಕರಳು ತಯ್ಯಾರು. ಆದರೆ ತಂದೆ ಎನಿಸಿಕೊಂಡವನಿಗೆ ಮಗಳು ನಿತ್ಯ ಉಪದ್ರವ, ಜನ್ಮಕ್ಕಂಟಿದ ಶನಿ. ಯಾಕಾದರೂ ಹುಟ್ಟಿದಳೋ ಅಂತ ಹಿಡಿ ಶಾಪಹಾಕುತ್ತಾನಂತೆ .
ಆದರೆ ಪರಿತಾಪ ಪಡುತ್ತಿರುವವಳು ತಾಯಿ. ಹೇಗಾದರೂ ಮಾಡಿ ಯಾರದ್ದಾದರೂ ಕೈಕಾಲು ಹಿಡಿದು ಮಗಳನ್ನು ಯಾವುದಾದರೂ ಬುದ್ಧಿಮಾಂದ್ಯ ಶಾಲೆಗೆ, ಹಾಸ್ಟೆಲ್ಗೆ ಸೇರಿಸಬೇಕೆನ್ನುವುದು ಅವಳ ಇಚ್ಛೆ. ಈಗಾಗಲೇ ಅಂತಹ ನಾಲ್ಕಾರು ಶಾಲೆಗಳಿಗೆ ಹೋಗಿ ಕೇಳಿ ಬಂದಳಂತೆ. ಯಾರೂ ಸೇರಿಸಿಕೊಳ್ಳಲಿಲ್ಲವಂತೆ. ಯಾಕಂದ್ರೆ ಬುದ್ಧಿಮಾಂದ್ಯರಿಗೆಂದು ಕಟ್ಟಿದ ಆ ಹಾಸ್ಟೆಲ್ಗಳು ಗಂಡುಮಕ್ಕಳಿಗೆ ಮಾತ್ರ ಮೀಸಲಂತೆ.
ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳುವ ಯಾವುದಾದರೂ ಬುದ್ಧಿಮಾಂದ್ಯ ಶಾಲೆ/ಆಶ್ರಮ/ವಸತಿಧಾಮ ಇದ್ದರೆ ಅದರ ವಿಳಾಸ ಕೊಡಿ ಅಂತ ವಿಚಾರಿಸುವುದಕ್ಕೆ ಆಕೆ ನನತನಕ ಬಂದಿದ್ದಳು. ಒಂದು ಕ್ಷಣ ಬೆಚ್ಚಿಬಿದ್ದೆ. ಅಂತಹ ಯಾವ ವಿಳಾಸವೂ ನನ್ನ ಬಳಿಯಿಲ್ಲ. ನನ್ನ ಸ್ನೇಹಿತರಿಬ್ಬರಿಗೆ ಆ ಕೂಡಲೇ ಫೋನು ಮಾಡಿದೆ ಅವರಿಗೂ ಹೊಳೆಯಲಿಲ್ಲ.
ನಿಮಗೆ ಗೊತ್ತಿದ್ದರೆ ದಯೆ ಇಟ್ಟು ತಿಳಿಸಿ. ಮಾಹಿತಿ ರವಾನಿಸಲು ಕೆಳಗಿನ post your comments ವಿಭಾಗವನ್ನು ಬಳಸಿ.
ನಮಸ್ಕಾರ
ಶಾಮ್