ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ದುಲ್ ತೆಲಗಿಗೆ 13 ವರ್ಷ ಶಿಕ್ಷೆ, 100 ಕೋಟಿ ರು. ದಂಡ

By Staff
|
Google Oneindia Kannada News

Telgi gets 13 years jail in fake stamp paper scamಪುಣೆ : ಮುನ್ನೂರು ಕೋಟಿ ರುಪಾಯಿಗೂ ಅಧಿಕ ಮೊತ್ತದ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲ ತೆಲಗಿಗೆ 13 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 100 ಕೋಟಿ ರೂ. ದಂಡವನ್ನು ಪುಣೆಯ ವಿಶೇಷ ನ್ಯಾಯಾಲಯ ವಿಧಿಸಿದೆ.

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಮೊಕಾ) ವಿಶೇಷ ನ್ಯಾಯಾಲಯ ಗುರುವಾರ ತೆಲಗಿ ಜೊತೆಗೆ ಉಳಿದ 42 ಆರೋಪಿಗಳಿಗೂ ಶಿಕ್ಷೆಯನ್ನು ಪ್ರಕಟಿಸಿದೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿ ಕರೀಂಲಾಲ ತೆಲಗಿ ಹಾಗೂ ಆತನ ಜತೆಗಿನ 42 ಜನ ಆರೋಪಿಗಳು ತಪ್ಪೊಪ್ಪಿಕೊಂಡದ್ದರಿಂದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಲಾಯಿತು ಎಂದು ನ್ಯಾಯಾಧೀಶೆ ಚಿತ್ರಾ ಬೇಡಿ ತೀರ್ಪು ಪ್ರಕಟಿಸುವಾಗ ಹೇಳಿದರು.

ಸಹ ಆರೋಪಿಗಳಿಗೆ 6 ವರ್ಷ ಕಠಿಣ ಸಜೆ ಹಾಗೂ 5 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. 100 ಕೋಟಿ ರೂ. ದಂಡವನ್ನು ಕಟ್ಟಲು ತೆಲಗಿ ವಿಫಲನಾದರೆ, ಮತ್ತೆ 3 ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಆರೋಪ ಹಾಗೂ ಶಿಕ್ಷೆ

ಪುಣೆಯಲ್ಲಿ 2002ರಲ್ಲಿ ಅಪಾರ ಪ್ರಮಾಣದ ನಕಲಿ ಛಾಪಾ ಕಾಗದಗಳನ್ನು ಕಾರೊಂದರಲ್ಲಿ ಸಾಗಿಸುವಾಗ ಬುಂದನ್‌ಗಢ್ ಪೊಲೀಸರಿಗೆ ಕರೀಂಲಾಲ ಸಿಕ್ಕಿಬಿದ್ದ. ಸುಮಾರು 12 ರಾಜ್ಯಗಳಲ್ಲಿ ಹರಡಿದ ತೆಲಗಿ ಜಾಲದಲ್ಲಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಪ್ರಮುಖ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂಬುದು ಕಂಡು ಬಂದರೂ ಸಾಬೀತಾಗಿಲ್ಲ. ಮಹಾರಾಷ್ಟ್ರದ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಆರ್.ಎಸ್.ಶರ್ಮ ಮೇಲಿನ ಆರೋಪವು ಸರಿಯಾದ ಸಾಕ್ಷಿ ಪ್ರಮಾಣಗಳಿಲ್ಲವೆಂದು ಬಿದ್ದುಹೋಯಿತು.

ಹಲವರಿಗೆ ನೆಮ್ಮದಿಯ ನಿಟ್ಟುಸಿರು

2003ರಲ್ಲಿ ಬೆಂಗಳೂರಿನಲ್ಲಿ ನಾರ್ಕೋ ಅನಾಲಿಸಿಸ್ ಮುಂತಾದ ಆಧುನಿಕ ಉಪಕರಣಗಳ ಸಹಾಯದಿಂದ ಗಣ್ಯರ ಹೆಸರು ತಿಳಿಯಲು ಪೊಲೀಸರು ವ್ಯರ್ಥ ಪ್ರಯತ್ನಪಟ್ಟರು. ಪುಣೆಯ ನ್ಯಾಯಾಲಯದಲ್ಲೂ ಕೂಡ ತೆಲಗಿ ಯಾರೊಬ್ಬರ ಹೆಸರನ್ನು ಹೇಳದೆ, ತಪ್ಪೊಪ್ಪಿಕೊಂಡದ್ದರಿಂದ ಪ್ರಕರಣ ಬಹುಪಾಲು ಮುಕ್ತಾಯವಾದಂತೆ ತೋರುತ್ತದೆ.

ಆದರೆ ತೆಲಗಿ ಹಾಗೂ ಆತನ ಪತ್ನಿ ಶಹೀದಾ ಎಚ್ಐ‌ವಿ ಪಾಸಿಟಿವ್ ಪೀಡಿತರಾಗಿರುವುದರಿಂದ ಶಿಕ್ಷೆಯ ಪ್ರಮಾಣದ ಬಗ್ಗೆ ತೆಲಗಿಯ ವಕೀಲ ಹರ್ಷದ್ ನಿಂಬಾಳ್ಕರ್ ಬೇಸರ ವ್ಯಕ್ತಪಡಿಸಿ, ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ತೆಲಗಿ ವಿರುದ್ಧದ ಇನ್ನೂ 24ಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೆ ಹಾಗೆ ಉಳಿದಿದ್ದು, ಅವುಗಳ ವಿಚಾರಣೆ ಹಲವಾರು ಕಾರಣದಿಂದ ಮುಂದೂಡಲ್ಪಡುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X