• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುವೆಂಪು ಚಿತ್ರ ಕದ್ದ ‘ಕುವೆಂಪು ವಿವಿ’ ವಿರುದ್ಧ ಒಂದು ಸಮರ!

By Staff
|


Copyright belongs to Somashekar K Gಬೆಂಗಳೂರು : ಕುವೆಂಪು ವಿಶ್ವವಿದ್ಯಾಲಯ, ಕುವೆಂಪು ಭಾವಚಿತ್ರದಿಂದಾಗಿಯೇ ವಿವಾದಕ್ಕೆ ಸಿಲುಕಿದೆ. ತಪ್ಪಿತಸ್ಥರ ಕಟಕಟೆಯಲ್ಲಿ ನಿಂತಿದೆ!

ತಾವು ತೆಗೆದ ಜ್ಞಾನಪೀಠ ಪ್ರಶಸ್ತಿ ಅಲಂಕೃತ ಕವಿ ಕುವೆಂಪು ಅವರ ಕಪ್ಪು-ಬಿಳುಪು ಛಾಯಾಚಿತ್ರವನ್ನು, ತಮ್ಮ ಪರವಾನಗಿ ಇಲ್ಲದೆ ಕುವೆಂಪು ವಿವಿ ಬಳಸಿಕೊಂಡಿದೆ. ಹೀಗಾಗಿ ವಿವಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಛಾಯಾಗ್ರಾಹಕ ಕೆ.ಜಿ. ಸೋಮಶೇಖರ್‌ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕುವೆಂಪು ಶತಮಾನೋತ್ಸವ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಹೊರತಂದ ಡೈರಿಯ ಮುಖಪುಟದಲ್ಲಿ , ಕುವೆಂಪು ಭಾವಚಿತ್ರವನ್ನು ಅಚ್ಚು ಮಾಡಲಾಗಿದೆ. ಡೈರಿಯ ಸುಮಾರು 46 ಸಾವಿರ ಪ್ರತಿಗಳನ್ನು ತಯಾರಿಸಿ ಹಂಚಲಾಗಿದೆ. ಆದರೆ ಕುವೆಂಪು ಭಾವಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ನಮ್ಮನ್ನು ವಿವಿ ಮರೆತಿದೆ ಎಂದರು.

ಪರವಾನಗಿ-ಸಂಭಾವನೆ ನೀಡುವುದು ಹಾಗಿರಲಿ, ಒಂದು ಪತ್ರ ಬರೆದು ಒಪ್ಪಿಗೆ ಕೇಳುವ ಸೌಜನ್ಯವನ್ನೂ ಅಧಿಕಾರಿಗಳು ತೋರಿಸಿಲ್ಲ. ಆ ಮೂಲಕ ತಮ್ಮನ್ನ ಮತ್ತು ಕಲೆಯನ್ನು ಅವಮಾನಿಸಲಾಗಿದೆ ಎಂದು ಕೆ.ಜಿ.ಸೋಮಶೇಖರ್‌ ದೂರಿದರು.

ಈ ಬಗ್ಗೆ ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿ ಡಾ. ಎಂ. ಚಿದಾನಂದಗೌಡ ( ಕುವೆಂಪು ಅವರ ಅಳಿಯ), ಕುಲಸಚಿವ ಪಾಂಡೆ, ಹೊಸ ರಿಜಿಸ್ಟ್ರಾರ್‌ ಆರ್‌.ಉದಯ ಕುಮಾರ್‌, ಹಾಲಿ ಉಪಕುಲಪತಿ ಡಾ. ಶೇರಿಗಾರ್‌ ಅವರಿಗೆ ಪತ್ರಮುಖೇನ ಹಾಗೂ ಮುದ್ದಾಂ ಭೇಟಿ ಮಾಡಿ ಮನವಿ ಮಾಡಿದ್ದಾಗ್ಯೂ ಏನೂ ಪ್ರಯೋಜನವಾಗಿಲ್ಲ . ಆದಕಾರಣ ಅನ್ಯಮಾರ್ಗವಿಲ್ಲದೆ ಕಾನೂನು ಮಾರ್ಗ ಕಂಡುಕೊಳ್ಳಬೇಕಾಯಿತು ಎಂದು ಹೇಳಿದರು.

ತಮ್ಮ ವಕೀಲ ಅರವಿಂದ್‌ ಮುಳಗುಂದ್‌ ಮುಖಾಂತರ ಸೋಮಶೇಖರ್‌, ಮೆ 3ರಂದು ವಿಶ್ವವಿದ್ಯಾಲಯಕ್ಕೆ ನೋಟೀಸು ಜಾರಿಮಾಡಿದ್ದರು. ಮೂರುವಾರದ ಒಳಗೆ ಸೂಕ್ತ ಉತ್ತರ ನೀಡಬೇಕೆಂದು ಕೋರಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ವಿಶ್ವವಿದ್ಯಾಲಯದ ವಿರುದ್ಧ ಖಟ್ಲೆ ಹೂಡುವುದು ಅನಿವಾರ್ಯವಾಗಿದೆ ಎಂದು ಸೋಮಶೇಖರ್‌ ವಿವರಿಸಿದರು.

1970ರಲ್ಲಿ ಕುವೆಂಪು ಅವರ ಮೈಸೂರು ಮನೆಯಲ್ಲಿ ತಾವು ಕ್ಲಿಕ್ಕಿಸಿದ ಚಿತ್ರವು ವಿಶ್ವಕನ್ನಡಿಗರ ಮತ್ತು ಕಪ್ಪು ಬಿಳುಪು ಛಾಯಾಚಿತ್ರ ಪ್ರಿಯರ ಮನೆಸೂರೆಗೊಂಡಿದೆ. ಕುವೆಂಪು ಶತಮಾನೋತ್ಸವ ಸ್ಮರಣೆಗೋಸ್ಕರ ನೂರಾರು ಸಭೆ ಸಮಾರಂಭಗಳು, ಉತ್ಸವಗಳು ನಡೆದವು. ಕೋಟ್ಯಂತರ ರೂಪಾಯಿಗಳನ್ನು ವಿನಿಯೋಗಿಸಲಾಯಿತು. ಆದರೆ ಕನ್ನಡಿಗರ ಮನೆಮನಗಳಲ್ಲಿ ಬೆಳಗಿದ ಮನೋಜ್ಞ ಚಿತ್ರವನ್ನು ಸೆರೆಹಿಡಿದ ನಮ್ಮಂತಹ ಬಡಪಾಯಿಯ ಹೊಟ್ಟೆಗೆ ತಣ್ಣೀರು ಬಿತ್ತು ಎಂದು ಮನನೊಂದು ನುಡಿದರು.

ನ್ಯಾಯ ನೀಡಿ : ಕಪ್ಪು ಬಿಳುಪು ಚಿತ್ರ ತೆಗೆಯುವುದನ್ನೆ ವೃತ್ತಿ ಮತ್ತು ಜೀವನಮಾರ್ಗವಾಗಿರಿಸಿಕೊಂಡ ತಮಗೆ ಉಂಟಾಗಿರುವ ಅನ್ಯಾಯ ಮತ್ತು ನೋವಿಗೆ ವಿಶ್ವವಿದ್ಯಾಲಯ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಸೋಮಶೇಖರ್‌ ಒತ್ತಾಯಿಸಿದ್ದಾರೆ. ಜೊತೆಗೆ ನೋಟೀಸಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯಪಾಲರಿಗೂ ದೂರು : ಕುವೆಂಪು ವಿವಿ ಅಧಿಕಾರಿಗಳ ವರ್ತನೆ ಬಗ್ಗೆ, ಸೋಮಶೇಖರ್‌ ಅವರು ಕುಲಪತಿಗಳಾದ ರಾಜ್ಯಪಾಲರಿಗೂ ದೂರು ಸಲ್ಲಿಸಿದ್ದಾರೆ. ಆದರೆ, ರಾಜ್ಯಪಾಲರ ಕಚೇರಿಯಿಂದಲೂ ಯಾವುದೆ ಪ್ರತಿಕ್ರಿಯೆ ಬಂದಿಲ್ಲ.

ಶಂಕರಘಟ್ಟದಲ್ಲಿರುವ ವಿಶ್ವವಿದ್ಯಾಲಯ ಕಚೇರಿಯಾಂದಿಗೆ, ಚಿದಾನಂದಗೌಡರೊಂದಿಗೆ ತಾವು ನಡೆಸಿದ ಪತ್ರವ್ಯವಹಾರದ ನಕಲುಗಳನ್ನು ಮತ್ತು ಮೈಸೂರಿನಲ್ಲಿರುವ ಪ್ರೊ. ಸಿ.ಪಿ.ಕೃಷ್ಣಕುಮಾರ್‌ ಜತೆಯಲ್ಲಿ ಕುವೆಂಪು ಅವರ ಭಾವಚಿತ್ರ ತೆಗೆದ ಸಂದರ್ಭದ ಉಲ್ಲೇಖಗಳನ್ನು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.

ರಾಜಕಾರಣಿ ಮತ್ತು ಸಿನಿಮಾ ನಟನಟಿಯರ ಚಿತ್ರಗಳನ್ನು ಯಾವತ್ತೂ ತೆಗೆಯದ ಸೋಮಶೇಖರ್‌ ಕವಿ, ಕಲಾವಿದರು, ವಿಜ್ಞಾನಿಗಳು, ಗಾಯಕರು ಮತ್ತಿತರ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ 1000ಕ್ಕೂ ಹೆಚ್ಚು ಗಣ್ಯರ ಭಾವಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಬಣ್ಣದ ಪ್ರಪಂಚಕ್ಕೆ ಮನಸೋತ ಥಳಕುಬಳುಕಿನ ಈ ಕರ್ನಾಟಕದಲ್ಲಿ, ತಮಗೆ ಮಾನ್ಯತೆಯಿಲ್ಲವೆಂದು ನಿರ್ಧರಿಸಿದ ಅವರು, ಈಗ ರಾಜ್ಯವನ್ನು ತೊರೆದು ತಮ್ಮ ಕುಟುಂಬದೊಂದಿಗೆ ಪೂನಾದಲ್ಲಿ ನೆಲೆಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more