ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಂತರ್ಜಾಲದಿ ಹೆಚ್ಚಿದ ಕನ್ನಡ ಬಿತ್ತನೆಯಿಂದ ಹೊಸ ಆಸೆ’

By Staff
|
Google Oneindia Kannada News

ಜಾಗತೀಕರಣ, ಕನ್ನಡ ಗಣಕ, ತಂತ್ರಜ್ಞಾನ, ಕನ್ನಡದ ಮುಂದಿನ ಸವಾಲುಗಳು -ಹೀಗೆ ನಾನಾ ಸಂಗತಿಗಳು ಮೈಸೂರಿನಲ್ಲಿ ಇತ್ತೀಚೆಗೆ ಚರ್ಚೆಗೆ ಬಂದವು. ಈ ಬಗ್ಗೆ ಒಂದು ವರದಿ.

  • ಲಾವಣ್ಯ ಪಿ ಜಿ, ಮೈಸೂರು
ಮೈಸೂರು : ಕೆಲಕಾಲದ ಹಿಂದೆ ಕನ್ನಡ ನಶಿಸಿಹೋಗುತ್ತಿರುವ ಭಾಷೆಗಳಲ್ಲಿ ಒಂದು ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದರೆ ಅಂತಹ ಯಾವುದೇ ಭಯವಿಲ್ಲ, ಕನ್ನಡದ ಪರವಾಗಿ ಅಂತರ್ಜಾಲದಲ್ಲಿ ದನಿಯೆತ್ತುತ್ತಿರುವ ತಂತ್ರಜ್ಞರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಭಾಷಾ ತಜ್ಞ ಲಿಂಗದೇವರು ಹಳೆಮನೆ ಶ್ಲಾಘಿಸಿದರು.

Guests lighting up the lamp
ಕನ್ನಡಸಾಹಿತ್ಯ.ಕಾಂ-ಮೈಸೂರು ಬೆಂಬಲಿಗರ ಬಳಗದ ಉದ್ಘಾಟನೆ ಹಾಗೂ ‘ಸಲ್ಲಾಪ’ ಪ್ರಕಾಶನದ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕನ್ನಡ ಭಾಷೆ ಅಂತರ್ಜಾಲದ ಅನುಕೂಲಗಳನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಮುಂದುವರೆಯಬೇಕು ಎಂದು ಸಲಹೆ ನೀಡಿದರು.

ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಸಮಾರಂಭವನ್ನು, ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದಗೌಡ ಉದ್ಘಾಟಿಸಿದರು.

ಯಾವುದೇ ಹೊಸ ತಂತ್ರಜ್ಞಾನ ಒಳಿತು-ಕೆಡುಕುಗಳೊಂದಿಗೆ ಬರುತ್ತದೆ ಎಂದು ಹೇಳಿದ ಅವರು ಸಮಾಜ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ತಂತ್ರಜ್ಞಾನದ ಜೊತೆ ಮುಂದುವರೆಯಬೇಕೇ ಹೊರತು ಹೊಸದನ್ನು ನಿರಾಕರಿಸಬಾರದು ಎಂದು ಹೇಳಿದರು.

ಶ್ರೀ ಜಯಚಾಮರಾಜೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಜಿ.ಸಂಗಮೇಶ್ವರ ಮಾತನಾಡಿ ಭಾಷೆಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ತಮ್ಮ ಕಾಲೇಜಿನ ಸಂಪೂರ್ಣ ಸಹಕಾರ ಇರುತ್ತದೆಂದು ಹೇಳಿದರು.

Books being released...
ಮುಕ್ತ ತಂತ್ರಾಂಶಗಳ ಉಪಯೋಗ ಹೆಚ್ಚಬೇಕು ಎಂದು ಹೇಳಿದ ಅವರು ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಕನ್ನಡಕ್ಕೆ ಬೇಕಾಗಿರುವ ತಂತ್ರಾಂಶಗಳ ತಯಾರಿ ಕೆಲಸಗಳಲ್ಲಿ ತೊಡಗಿಸಲು ತಾವು ಸಿದ್ಧರಿರುವುದಾಗಿ ಹೇಳಿದರು. ಈ ನಿಟ್ಟಿನಲ್ಲಿ ಕನ್ನಡಸಾಹಿತ್ಯ.ಕಾಂ ಹಮ್ಮಿಕೊಳ್ಳುವ ಯಾವುದೇ ತಂತ್ರಾಂಶ ಸಂಬಂಧಿ ಕಾರ್ಯಕ್ರಮಕ್ಕೆ ಆರ್ಥಿಕ ಬೆಂಬಲ ನೀಡುವುದಾಗಿ ಕೆ ಎಸ್‌ ಸಿ ಬಳಗಕ್ಕೆ ತಿಳಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕಸಾಕಾಂ ಸಂಪಾದಕ ಶೇಖರ್‌ಪೂರ್ಣರವರು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಸರಿಯಾಗಿ ಸಮಾಜವನ್ನು ತಯಾರಿ ಮಾಡುವಲ್ಲಿ ತಂತ್ರಾಂಶ ತಜ್ಞರ ಜವಾಬ್ದಾರಿ ಹೆಚ್ಚು ಎಂದು ಹೇಳಿದರು. ವಿದ್ಯಾರ್ಥಿಗಳ ಸಹಕಾರದೊಂದಿಗೆ ಕನ್ನಡಕ್ಕೆ ಬೇಕಾಗುವ ತಂತ್ರಾಂಶ ತಯಾರು ಮಾಡುವ ಸಲಹೆಯನ್ನು ಸಂತಸದಿಂದ ಸ್ವೀಕರಿಸಿದ ಅವರು ಆ ನಿಟ್ಟಿನಲ್ಲಿ ಶೀಘ್ರವೇ ಕೆಲಸ ಪ್ರಾರಂಭಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ.ಕಾಂನ ಪ್ರಕಾಶನ ಅಂಗವಾದ ‘ಸಲ್ಲಾಪ’ದಿಂದ ಹೊರಬಂದಿರುವ ವಿಕ್ರಮ್‌ ಹತ್ವಾರರ ‘ಇದೇ ಇರಬೇಕು ಕವಿತೆ’ ಹಾಗೂ ‘ಕಟ್‌ಸೀಟ್‌ ಮತ್ತು ಇತರ ಕತೆಗಳು’ ಕೃತಿಗಳ ಬಿಡುಗಡೆ ಮಾಡಲಾಯಿತು.

ಕೃತಿಗಳ ಕುರಿತು ಮಾತನಾಡಿದ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದ ಸುಚೇಂದ್ರಪ್ರಸಾದ್‌, ಸಮಕಾಲೀನ ಲೇಖಕರ ಹಾಗೂ ಯುವಜನಾಂಗದಲ್ಲಿರುವ ಜಿಜ್ಞಾಸೆಗಳ ಬಗ್ಗೆ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾನಸ, ಕನ್ನಡ ಅಧ್ಯಯನ ಕೇಂದ್ರದ ಪಂಡಿತಾರಾಧ್ಯ, ಶಿಕಾರಿಪುರ ಹರಿಹರೇಶ್ವರ ಮುಂತಾದ ಆಸಕ್ತ ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X