ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವೈಶಾಖ ಸಂಜೆ’ಗೆ ಬರೋಕಾಗದೇ ಇದ್ದವರಿಗೆ ನನ್ನ ಸಂತಾಪ!

By Staff
|
Google Oneindia Kannada News


ಮೊದಲ ಬಾರಿಗೆ ಬೆಂಗಳೂರಲ್ಲಿ, ಪ್ರಾಯಶಃ ಕರ್ನಾಟಕದಲ್ಲಿ ದುಡ್ಡು ಕೊಟ್ಟು ಜನ ಸುಗಮ ಸಂಗೀತ ಕೇಳುವುದಕ್ಕೆ ಬಂದಿದ್ದರು! ಅಲ್ಲದೇ ಕಾರ್ಯಕ್ರಮ ಹೌಸ್‌ ಫುಲ್‌! ಅಲ್ಲಿ, ಅಶ್ವಥ್‌, ಪಲ್ಲವಿ, ಸುಪ್ರಿಯಾ ಮತ್ತಿತರರ ಗಾನ ವೈಭವ!

Singer M D Pallaviನಿನ್ನೆ, ಭಾನುವಾರ(ಮೇ.14) ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘‘ವೈಶಾಖ ಸಂಜೆ- ಕಾವ್ಯ ಗಾಯನ’’ ಕಾರ್ಯಕ್ರಮ. ಬಿಸಿಲ ದಿನದ ನಂತರದ ಇಳಿ ಸಂಜೆಗೆ ಸಿ. ಅಶ್ವಥ್‌ ಗಾಯನದ ತಂಪು.

ಭಾಗವತರು ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ, ರಿkುೕ ಕನ್ನಡದ ಸಹಯೋಗ. ಸಿ. ಅಶ್ವಥ್‌ ಜೊತೆಗೆ ಸ್ವರ ಸಿಂಚನಗೈದವರು ಎಂ.ಡಿ.ಪಲ್ಲವಿ ಅರುಣ್‌, ಸುಪ್ರಿಯಾ ಆಚಾರ್ಯ ಮತ್ತು ರವಿ ಮುರೂರು. ಜೊತೆಗೆ ಎಂದಿನಂತೆ ಅಶ್ವತ್‌ರವರ ಅದ್ಭುತ ಹಿನ್ನೆಲೆ ವಾದಕರ ಬಳಗ.

ಮೊದಲಿಗೆ ‘‘ಎಲ್ಲಾದರು ಇರು ಎಂತಾದರು ಇರು’’ ಹಾಡಿಂದ ಕಾವ್ಯ ಗಾಯನ ಆರಂಭಿಸಿದರು ಅಶ್ವಥ್‌, ಸಂಗಡಿಗರ ಜೊತೆಗೆ. ನಂತರ ಸುಪ್ರಿಯಾ ಆಚಾರ್ಯ ‘‘ಮುಚ್ಚುಮರೆಯಿಲ್ಲದೆಯೆ’’ , ಅಶ್ವಥ್‌ ಬಹು ಆರ್ದವಾಗಿ ‘‘ಬದುಕು ಮಾಯೆಯ ಮಾಟ’’ ಹಾಡಿದರು. ಪಲ್ಲವಿಯವರ ನಾಕುತಂತಿಯ ‘‘ಆವು ಈವಿನಾ’’ ಹಾಡಿಗೆ ಕಲಾಕ್ಷೇತ್ರ ಸ್ತಬ್ದ. ಇಷ್ಟು ಹೊತ್ತಿಗೇ ಇಡಿಯ ಕಲಾಕ್ಷೇತ್ರ ತುಂಬಿಕೊಂಡಾಗಿತ್ತು. ಭರ್ತಿ ಸಾವಿರ ಜನ. ಎಲ್ಲರೂ ನಿಧಾನಕ್ಕೆ ವೈಶಾಖದ ಸಂಜೆಯಾಳಕ್ಕೆ ಇಳಿಯುತ್ತಿದ್ದರು.

ನಮ್ಮನ್ನೆಲ್ಲ ಆಮೇಲೆ ತುಂಬಿಕೊಂಡದ್ದು ಹಾಡು ಹಾಡು ಮತ್ತು ಹಾಡು. ಶ್ರಾವಣಾ ಬಂತು, ಕವಿದಂತೆ ಮಂಜು ಈ ಹಗಲಿಗೆ, ಪಲ್ಲವಿ ತೇಲಿಸಿದ ತಪ್ಪಿ ಹೋಯಿತಲ್ಲೇ, ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಂತೆ, ಬಂಗಾರ ನೀಲ ಕಡಲಾಚೆಗೀಚೆ, ಸುಪ್ರಿಯಾ ಆಚಾರ್ಯ ಮನ ತಟ್ಟಿದ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ, ಇಡಿಯ ತಂಡ ಹಾಡಿದ ನೂರು ದೇವರನೆಲ್ಲ ನೂಕಾಚೆ ದೂರ, ಅಶ್ವಥ್‌ ಕ್ಲಾಸಿಕ್‌- ನೀ ಹೀಂಗ ನೋಡಬ್ಯಾಡಾ ನನ್ನ..

ನಡುವೆ ಪುಟ್ಟ ವಿರಾಮ. ಲಹರಿಯ ಕ್ಯಾಸೆಟ್‌ ಹರವಿಕೊಂಡಿದ್ದ ಟೇಬಲ್‌ ಜನರಿಂದ ಮುತ್ತಲ್ಪಟ್ಟಿತ್ತು. ಏನು ಕ್ಯಾಸೆಟ್‌- ಸೀಡಿ ಇದೆ ಅಂತ ನೋಡೋಕೂ ಆಗಲಿಲ್ಲ. ವಿರಾಮದ ನಂತರ ಮತ್ತೆ ಭರಪೂರ ಹಾಡು ಹಬ್ಬ. ಸುಪ್ರಿಯಾ ದನಿಯಲ್ಲಿ ಅಮ್ಮಾ ನಿನ್ನ ಎದೆಯಾಳದಲ್ಲಿ, ಅಶ್ವಥ್‌, ಕಾಣದ ಕಡಲಿಗೇ ಮೊದಲೆರಡು, ನಂತರ ಪ್ರಾಯಶಃ ಆ ಸಂಜೆಯ ಅತ್ಯುತ್ತಮ ಗೀತೆಗಳಲ್ಲಿ ಒಂದು-ಪಲ್ಲವಿ ಅರುಣ್‌ರ ‘‘ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ..’’ ಈಕೆ ಎಷ್ಟು ಸೊಗಸಾಗಿ ಈ ಗೀತೆಯನ್ನ ಹಾಡಿದರೆಂದರೆ, ಹಾಡು ನಿಂತು ಅರೆ ಕ್ಷಣ, ಸದ್ದೇ ಇಲ್ಲ, ಆಮೇಲೆ ಚಪ್ಪಾಳೆಗಳ ಸುರಿಮಳೆ.

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು, ದೀಪವು ನಿನ್ನದೇ ಗಾಳಿಯು ನಿನ್ನದೇ, ರವಿ ಮುರೂರು ಹಿಂದುಸ್ತಾನಿ ಲೇಪವಿತ್ತು ಹಾಡಿದ ಲಕ್ಷ್ಮೀನಾರಾಯಣ ಭಟ್ಟರ ‘‘ಮರೆಯಲಾರೆ ನಿನ್ನ ನೀರೆ’’ ಎಲ್ಲ ಹಾಡು ಚಂದವೋ ಚಂದ. ಅಶ್ವಥ್‌, ‘‘ಸ್ವಾತಂತ್ರ ಸಂಗ್ರಾಮ ಆಗಿ 150 ವರ್ಷ ಆದ ನೆನಪಿಗೆ ಒಂದು ದೇಶ್‌ ಭಕ್ತಿ ಗೀತೆ ಹಾಡ್ಬಿಡೋಣ, ಖುಷಿಲಿ’’ ಅಂತ ಹೇಳಿ ‘‘ನಾವು ಭಾರತೀಯರು’’ ಅಂತ ಎಲ್ಲ ಸಹ ಗಾಯಕರೊಡನೆ ಉಚ್ಚ ಕಂಠದಲ್ಲಿ ಹಾಡಿ ನಮ್ಮೆಲ್ಲರೊಳಗೆ ಒಂದೇ ಅನ್ನುವ ಭಾವ ತುಂಬಿದರು.

ಹೇಳಿ ಹೋಗು ಕಾರಣ, ಅದಾದ ಮೇಲೆ ಸುಗಮ ಸಂಗೀತದ ರಾಷ್ಟ್ರ ಗೀತೆ! (ಅಶ್ವತ್‌ ಉವಾಚ) - ಎದೆ ತುಂಬಿ ಹಾಡುವೆನು , ಇದನ್ನಂತೂ ಪಲ್ಲವಿ ಎದೆ ತುಂಬಿಯೇ ಹಾಡಿದರು. ಕೊನೆಗೆ ‘‘ಎದೆ ತುಂಬಿ ಹಾಡಿದೆನು ‘‘ಇಂದು’’ನಾನು ಅಂತ ಪದ್ಯ ಮುಗಿಸಿದ್ದು ಇದಕ್ಕೆ ಸಾಕ್ಷಿ.

ಈ ಎರಡು ಹಾಡುಗಳಾದ ಮೇಲೆ, ಕೊನೆಯ ಮೂರು ‘‘ಅಶ್ವಥ್‌ ತ್ರಿವಳಿಗಳು’’. ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ಕೋಡಗನಾ ಕೋಳಿ ನುಂಗಿತ್ತಾ ಮತ್ತು ತರವಲ್ಲ ತಗಿ ನಿನ್ನ ತಂಬೂರಿ! ಇವುಗಳಂತೂ ಕುಳಿತವರನ್ನ ಹುಚ್ಚೆಬ್ಬಿಸಿದವು. ಎರೆರೇರಾ... ಅಂತ ಅಶ್ವಥ್‌ ಹಾಡುತ್ತಿದ್ದರೆ ಕೂತವರ ಮೈಲೆಲ್ಲಾ ಮಿಂಚು ಸಂಚಾರ. ಒಂದು ಅದ್ಭುತ ಸಂಜೆ ನಾದದಲ್ಲಿ ಮಿಂದ ಅನುಭವ.

ಈ ಕಾರ್ಯಕ್ರಮ, ಒಂದು ಹೊಸ ಮೈಲಿಗಲ್ಲು ಸ್ಥಾಪಿಸಿತು. ಮೊದಲ ಬಾರಿಗೆ ಬೆಂಗಳೂರಲ್ಲಿ, ಪ್ರಾಯಶಃ ಕರ್ನಾಟಕದಲ್ಲಿ ಟಿಕೇಟು ಖರೀದಿಸಿ, ದುಡ್ಡು ಕೊಟ್ಟು ಜನ ಸುಗಮ ಸಂಗೀತ ಕೇಳುವುದಕ್ಕೆ ಬಂದಿದ್ದರು ಮತ್ತು ಕಾರ್ಯಕ್ರಮ ಹೌಸ್‌ ಫುಲ್‌! ವೇದಿಕೆಯ ಅಲಂಕಾರ ಕೂಡ ಬಹಳ ಹಿತಕರವಾಗಿತ್ತು. ಚೆಂದನೆಯ ಬೆಳಕು ಮತ್ತು ರಂಗ ಸಜ್ಜಿಕೆ.

ಒಟ್ನಲ್ಲಿ, ಒಂದ್‌ ಮಸ್ತ್‌ ಸಂಡೇ ಸಂಜೆ! ಬರೋಕಾಗದೇ ಇದ್ದವರಿಗೆ ನನ್ನ ಸಂತಾಪವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X