ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್‌ ಕ್ರಿಕೆಟ್‌ : ಹ್ಯಾಟ್ರಿಕ್‌ ಸಾಧಿಸಿದ ಆಸ್ಟ್ರೇಲಿಯಾ...

By Staff
|
Google Oneindia Kannada News

Jubiliant Australia
ಬಾರ್ಬಡೋಸ್‌ : ಶ್ರೀಲಂಕಾ ತಂಡವನ್ನು 53ರನ್‌(ಡಕ್ವರ್ತ್‌ ಮತ್ತು ಲೂಯಿಸ್‌ ನಿಯಮಾನುಸಾರ)ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ 'ಕ್ರಿಕೆಟ್‌ ವಿಶ್ವಕಪ್‌-2007"ನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

ಶನಿವಾರ(ಏಪ್ರಿಲ್‌ 28) ಇಲ್ಲಿನ ಕೆನ್ಸಿಂಗ್‌ಟನ್‌ ಓವಲ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ, ಟಾಸ್‌ ಗೆದ್ದು ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ವರುಣನ ಅವಕೃಪೆಯಿಂದ ಪಂದ್ಯ 3ಗಂಟೆ ತಡವಾಗಿ ಆರಂಭವಾಯಿತು. ಪಂದ್ಯವನ್ನು 38ಓವರುಗಳಿಗೆ ಇಳಿಸಲಾಯಿತು.

ಗಿಲ್ಲಿ-ಹೇಡನ್‌ ಶೈನಿಂಗ್‌ : ಆ್ಯಡಂ ಗಿಲ್‌ಕ್ರಿಸ್ಟ್‌, ಮ್ಯಾಥ್ಯೂ ಹೇಡನ್‌ ಜೋಡಿ ಭರ್ಜರಿಯಾಗಿ ಬ್ಯಾಟ್‌ ಬೀಸುವ ಮೂಲಕ ಆಸ್ಟ್ರೇಲಿಯಾಕ್ಕೆ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 172ರನ್‌ ಕಲೆಹಾಕಿತು. ರಿಕಿ ಪಾಂಟಿಂಗ್‌, ಆ್ಯಂಡ್ರ್ಯೂ ಸೈಮಂಡ್ಸ್‌ ಕೂಡ ಉತ್ತಮ ಕಾಣಿಕೆ ಸಲ್ಲಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 4ವಿಕೆಟ್‌ ನಷ್ಟಕ್ಕೆ 281ರನ್‌ ಗಳಿಸಿ ಇನಿಂಗ್ಸ್‌ ಪೂರ್ಣಗೊಳಿಸಿತು.

ಆ್ಯಡಂ ಗಿಲ್‌ಕ್ರಿಸ್ಟ್‌ ಕೇವಲ 104 ಎಸೆತಗಳಲ್ಲಿ 149ರನ್‌ ಸಿಡಿಸುವುದರೊಂದಿಗೆ ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದರು. ಕೇವಲ 72 ಎಸೆತಗಳಲ್ಲಿ ಶತಕ ಬಾರಿಸಿದ ಅವರ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 8 ಸಿಕ್ಸರ್‌ಗಳಿದ್ದವು.

ಲಂಕಾಗೆ ಕಠಿಣ ಸವಾಲು :ಶ್ರೀಲಂಕಾದ ಯಾವ ಬೌಲರುಗಳೂ ಆಸ್ಟ್ರೇಲಿಯಾದ ಮೇಲೆ ಒತ್ತಡ ಹೇರಲು ಸಫಲವಾಗಲಿಲ್ಲ. ಲಸಿತ್‌ ಮಾಲಿಂಗ ಮಾತ್ರ ಸ್ವಲ್ಪ ಮಿತವ್ಯಯಿ ಎನಿಸಿ 49 ರನ್‌ ನೀಡಿ 2ವಿಕೆಟ್‌ ಪಡೆಯಲು ಯಶಸ್ವಿಯಾದರು.

ಗೆಲುವಿಗೆ ಕಠಿಣ ಎನ್ನಬಹುದಾದ ಗುರಿ ಬೆನ್ನು ಹತ್ತಿದ ಶ್ರೀಲಂಕಾ, ಒಂದು ಹಂತದಲ್ಲಿ 18 ಓವರುಗಳಲ್ಲಿ 1ವಿಕೆಟ್‌ ಕಳೆದುಕೊಂಡು 110ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಆನಂತರ ವಿಕೆಟ್‌ಗಳು ಒಂದರ ಹಿಂದೆ ಉರುಳುತ್ತಹೋದವು. ಈ ನಡುವೆ ಮತ್ತೆ ಮಳೆ ಬಿದ್ದ ಕಾರಣ, ಸ್ವಲ್ಪ ಹೊತ್ತು ಆಟ ನಿಲ್ಲಿಸಲಾಯಿತು.

ಆನಂತರ ಶ್ರೀಲಂಕಾ, ಗೆಲ್ಲಲು 36 ಓವರುಗಳಲ್ಲಿ 269ರನ್‌ಗಳ ಸವಾಲು ಪಡೆಯಿತು. ಆದರೂ ಶ್ರೀಲಂಕಾ 8ವಿಕೆಟ್‌ ಕಳೆದುಕೊಂಡು 215ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಗೆಲುವಿಗಾಗಿ ಸನತ್‌ ಜಯಸೂರ್ಯ(55) ಹಾಗೂ ಕುಮಾರ ಸಂಗಕ್ಕಾರ(54) ನಡೆಸಿದ ಹೋರಾಟ ವಿಫಲವಾಯಿತು. ಜಯವರ್ಧನೆ ನೇತೃತ್ವದ, ಶ್ರೀಲಂಕಾ ತಂಡದ ಎರಡನೇ ಬಾರಿ ವಿಶ್ವಕಪ್‌ ಗೆಲ್ಲುವ ಕನಸು ಭಗ್ನಗೊಂಡಿತು.

ಮೈಖೇಲ್‌ ಕ್ಲಾರ್ಕ್‌ 33ರನ್‌ ನೀಡಿ 2ವಿಕೆಟ್‌ ಪಡೆದರೆ, ಮ್ಯಾಕ್‌ಗ್ರಾ, ವ್ಯಾಟ್ಸನ್‌, ಹಾಗ್‌, ಸೈಮಂಡ್ಸ್‌ ತಲಾ ಒಂದು ವಿಕೆಟ್‌ ಉರುಳಿಸಿದರು. ಆ್ಯಡಂ ಗಿಲ್‌ಕ್ರಿಸ್ಟ್‌ ಪಂದ್ಯ ಪುರುಷೋತ್ತಮ ಗೌರವ ಪಡೆದರು.

ಮೆಕ್‌ಗ್ರಾ ವಿದಾಯ : ವೇಗದ ಬೌಲರ್‌ ಗ್ಲೆನ್‌ ಮೆಕ್‌ಗ್ರಾ ಸರಣಿ ಸರ್ವೋತ್ತಮ ಗೌರವಕ್ಕೆ ಪಾತ್ರರಾದರು. ಈ ಗೌರವ ಪಡೆಯುವುದರೊಂದಿಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಕೂಡ ಸ್ಮರಣೀಯ.

ಆಸ್ಟ್ರೇಲಿಯಾ ಹಾಗೂ ವಿಶ್ವಕಪ್‌ : ಆಸ್ಟ್ರೇಲಿಯಾ 4ನೇ ಬಾರಿಗೆ ವಿಶ್ವಕಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಅಲ್ಲದೆ ಸತತ ಮೂರು ಬಾರಿ ವಿಶ್ವಕಪ್‌ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧಿಸಿತು. 1987ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಗೆದ್ದಿದ್ದ ಆಸ್ಟ್ರೇಲಿಯಾ, ತವರಿನಲ್ಲಿ ನಡೆದ 1992ರ ವಿಶ್ವಕಪ್‌ನಲ್ಲಿ ಫೈನಲ್‌ ತಲುಪಲೂ ವಿಫಲವಾಗಿತ್ತು. 1996ರ ವಿಶ್ವಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಪರಾಭವಗೊಂಡಿತ್ತು.

ಆದರೆ, 1999, 2003 ಹಾಗೂ 2007ರ ವಿಶ್ವಕಪ್‌ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. 2003ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಯಾವ ಪಂದ್ಯವನ್ನೂ ಸೋಲದೆ ವಿಶ್ವಕಪ್‌ ಗೆದ್ದಿತ್ತು. ಪ್ರಸ್ತುತ ವಿಶ್ವಕಪ್‌ನಲ್ಲೂ ಅದೇ ದಾಖಲೆಯನ್ನು ಮಾಡಿ ಬೆರಗು ಮೂಡಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X