ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಗೋ ಸಮ್ಮೇಳನ : ದಿನ-3ಸಂತರು ಕೆರಳಿದರು.. ಗೋ ಸಂರಕ್ಷಣೆಗೆ ಪಣ ತೊಟ್ಟರು!

By Staff
|
Google Oneindia Kannada News


ರಾಮಚಂದ್ರಾಪುರ ಮಠದ ಆವರಣದಲ್ಲಿನ ‘ವಿಶ್ವ ಗೋ ಸಮ್ಮೇಳನ’ದ ಮೂರನೇ ದಿನ(ಏ.23) ನಾನಾ ವೈವಿಧ್ಯಗಳಿದ್ದವು. ನಾನಾ ಆಕರ್ಷಣೆಗಳಿದ್ದವು. ವಿಶ್ವದ ಜನ ಆಲೋಚಿಸಬೇಕಾದ ಸಂಗತಿಗಳಿದ್ದವು.

ರಾಮಚಂದ್ರಾಪುರ ಮಠ : ಕರ್ತವ್ಯ ಪ್ರಧಾನ ಸಂಸ್ಕೃತಿ ಪ್ರತೀಕವಾಗಿರುವ ಗೋ ಸಂರಕ್ಷಣೆಗೆ ಮಹತ್ವ ನೀಡಿದಾಗ ಮಾತ್ರ ಈ ರಾಷ್ಟ್ರದ ಅಭ್ಯದಯ ಸಾಧ್ಯ ಎಂದು ಕೋಲ್ಕತಾ ದೇವರ್ಷಿ ಯೋಗ ಪೀಠದ ಶ್ರೀ ವಿಜಯ ಚತುರ್ವೇದಿ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಬೆಳಗ್ಗೆ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವ ಪಾರ್ವತಿಯರ ವಾಹನಗಳಾದ ನಂದಿ ಮತ್ತು ಸಿಂಹ ಕ್ರಮವಾಗಿ ಕರ್ತವ್ಯ ಮತ್ತು ಅಧಿಕಾರ ಪ್ರಧಾನ ಸಂಸ್ಕೃತಿ ಪ್ರತಿನಿಧಿಸುತ್ತವೆ. ಮೊದಲು ಕರ್ತವ್ಯ ಪ್ರಜ್ಞೆಗೆ ಆದ್ಯತೆ ನೀಡಿದಾಗ ಅಧಿಕಾರ ತಂತಾನೆ ಬರುತ್ತದೆ ಎಂದು ವಿಶ್ಲೇಷಿಸಿದರು.

ಪ್ರಸ್ತುತ ಸ್ಥಿತಿಯಲ್ಲಿ ಗೋ ಹತ್ಯೆ ಹೆಚ್ಚಾಗಿರುವುದಕ್ಕೂ ಕರ್ತವ್ಯ ಪ್ರಜ್ಞೆ ಮರೆತಿರುವ ಸಂಗತಿಗೂ ಸಾಕಷ್ಟು ಸಾಮ್ಯತೆ ಇದೆ. ರಾಜಕೀಯ ಮತ್ತು ಶಿಕ್ಷಣ ಪದ್ಧತಿಯಲ್ಲೂ ಸಿಂಹ ಸಂಸ್ಕೃತಿಯೇ ಹೆಚ್ಚಾಗಿದೆ. ಮಕ್ಕಳಲ್ಲಿ ಭಕ್ತಿಗಿಂತ ಭಯ ಹೆಚ್ಚಾಗಿರುವುದರಿಂದ ಪದವೀಧರರನ್ನು ತಯಾರಿಸುವ ಕೆಲಸ ವಾಗುತ್ತಿದೆಯೇ ವಿನಃ ರಾಷ್ಟ್ರ ನಿರ್ಮಾತೃಗಳನ್ನು ಸೃಷ್ಠಿ ಮಾಡುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಸರಕಾರ ಮತ್ತು ಮಾಧ್ಯಮಗಳು ಈ ದಿಸೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ನೆರವಾಗಬೇಕು ಎಂದವರು ವಿನಂತಿಸಿದರು.

ಯೋಗ, ಧ್ಯಾನ ಮತ್ತು ಪ್ರಾಣಾಯಾಮದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಗವ್ಯ ಉತ್ಪನ್ನಗಳಾದ ಘೃತ, ದುಗ್ಧ ನೀತಿ ಪ್ರಯೋಗದಿಂದ (ಮೂಗಿನಿಂದ ತುಪ್ಪ, ಹಾಲು ಹಾಕಿ ಚಿಕಿತ್ಸೆ ನೀಡುವ ಪದ್ಧತಿ) ಮಕ್ಕಳ ಬುದ್ಧಿ ಮಟ್ಟ ಇಮ್ಮಡಿಸುತ್ತದೆ. ಇದನ್ನು ತಾವು ಸ್ವತಃ ಅನುಷ್ಠಾನ ಮಾಡಿ ಯಶ ಕಂಡಿರುವುದಾಗಿ ತಿಳಿಸಿದರು.

ಸನಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಗೋ ಪೂಜೆ ಕರ್ತವ್ಯ ಪ್ರಜ್ಞೆಯ ಪ್ರತಿಬಿಂಬವಾಗಿದೆ. ಶ್ರಮದಿಂದ ಸೇವೆ ಮಾಡಿದಾಗ ಲಭ್ಯವಾಗುವ ಅಧಿಕಾರ ಎಂದಿಗೂ ಶಾಶ್ವತ. ಮಾತ್ರವಲ್ಲ ಶಿವ ಪಾರ್ವತಿಯರ ಸಾನ್ನಿಧ್ಯ ಸೂಚಕ . ಹಾಗಾಗಿ ಭಾರತೀಯತೆ ಉಳಿಯಬೇಕೆಂದರೆ ಗೋ ಸಂತತಿ ಉಳಿಯಬೇಕು ಎಂದರು.

***

ಪ್ರತಿ ಪೀಠಗಳೂ ಗೋ ಸಂರಕ್ಷಣೆ ಮಾಡಲಿ...

ಗೋ ಸಂರಕ್ಷಣಾ ಕಾರ್ಯಕ್ಕೆ ಪ್ರತಿಯಾಂದು ಧರ್ಮ ಪೀಠಗಳೂ ಸ್ಪಂದಿಸಬೇಕು ಎಂದು ಚಿಕ್ಕಬಳ್ಳಾಪುರದ ಶಿವಸಾಯಿಬಾಬಾ ಸ್ವಾಮೀಜಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗೋವಿಲ್ಲದ ಮಠ ಮಠವೇ ಅಲ್ಲ. ಗೋ ಹತ್ಯೆ ಮಾಡುವವರಿಗೆ ಅದರಿಂದ ಸಿಗುವ ಹಣವನ್ನು ನಮ್ಮ ಪೀಠವೇ ನೀಡಿ ಗೋ ಸಂರಕ್ಷಣೆ ಮಾಡುತ್ತಿದೆ ಎಂದರು.

ಬಳ್ಳಾರಿಯ ಮಹಾಯೋಗಿ ಪೀಠದ ಶ್ರೀ ರಾಜೇಶ್ವರಾನಂದ ಸ್ವಾಮೀಜಿ ಮಾತನಾಡಿ, ಗೋ ಸಂರಕ್ಷಣಾ ಅಭಿಯಾನಕ್ಕೆ ತಮ್ಮ ಪೀಠ ಸಂಪೂರ್ಣ ಸ್ಪಂದಿಸುತ್ತದೆ. ಮಠದಲ್ಲಿ ಶೀಘ್ರ ಗೋ ಶಾಲೆ ಆರಂಭವಾಗಲಿದೆ ಎಂದರು.

***

ಸಂತ ಶಕ್ತಿ ಎದ್ದು ನಿಲ್ಲಬೇಕು..

ಸಂತ ಶಕ್ತಿ ಎದ್ದು ನಿಂತರೆ ಸರ್ಕಾರ ಸೈನ್ಯ ಪೋಲೀಸ್‌ ಯಾರಿಂದಲೂ ಮಾಡಲಾರದ ಕೆಲಸವನ್ನು ಮಾಡಲು ಸಾಧ್ಯ. ತ್ರಿಮೂರ್ತಿಗಳಿಗೂ ಮೀರಿದ ಶಕ್ತಿ ಗುರುಶಕ್ತಿ. ಗೋ ಮಾತೆಯ ರಕ್ಷಣೆಗಾಗಿ ಸಂಘಟಿತವಾಗಬೇಕಾಗಿದೆ ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ತಿಳಿಸಿದರು.

ಅವರು ಶ್ರೀ ರಾಮಚಂದ್ರಾಪುರ ಮಠದಲ್ಲಿ ಸಂಪನ್ನಗೊಂಡಿರುವ ವಿಶ್ವ ಗೋ ಸಮ್ಮೇಳನದ ಸಂತ ಸಮಾವೇಶದಲ್ಲಿ ಸಂತ ಸಮಾಗಮದ ಉದ್ದೇಶ ಕುರಿತು ವಿವರಿಸುತ್ತಿದ್ದರು.

ಗುರುಶಕ್ತಿಗೆ ಮಿಗಿಲಾದ ಶಕ್ತಿ ಗೋಮಾತೆಯೆಂದು ಹೇಳಿದ ಶ್ರೀಗಳು ಗೋವಿನ ಉಳಿವಿಗಾಗಿ ಶಸ್ತ್ರ ಹಾಗೂ ಶಾಸ್ತ್ರದಿಂದ ಹೋರಾಟ ನಡೆಸಬೇಕು. ಗೋವಿಗಾಗಿ ಸಂತರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ದೇಶದ 600ಜಿಲ್ಲೆಗಳ ಪೈಕಿ 200 ಜಿಲ್ಲೆಯಲ್ಲಿ ನಕ್ಸಲ ಶಾಸನವಿದೆ ಆದರೆ ಒಂದೇ ಒಂದು ಜಿಲ್ಲೆಯಲ್ಲಿಯೂ ಧರ್ಮ ಶಾಸನವಿಲ್ಲ ಅಂತಹ ಧರ್ಮ ಶಾಸನವಿಲ್ಲದ ದೇಶದಲ್ಲಿ ಧರ್ಮ ಆದೇಶವನ್ನು ಜೀವನಾಧಿಕಾರಕ್ಕಾಗಿ ನೀಡಬೇಕಾದಂತಹ ಅಗತ್ಯತೆ0 ಇದೆ. ಗೋವಿಲದ ಜೀವನಾಧಿಕಾರಕ್ಕೆ ಅರ್ಥವಿಲ್ಲ. ನಮ್ಮ ದೇಶ, ಗೋರಾಷ್ಟ್ರ ದೇಶ ಎನಿಸಿಕೊಂಡಿದೆ ಆದರೆ ಗೋವಿಗೆ ಆಮಾನ್ಯವಾದಂತಹ ಗೌರವವನ್ನು ಕೊಡುತ್ತಿಲ್ಲ. ಸ್ಪಂದನೆಯನ್ನು ನೀಡುತ್ತಿಲ್ಲ. ದೇಶದಲ್ಲಿ ಹಂತಕ ಪ್ರವೃತಿ ಹೆಚ್ಚಿದೆಯೇ ಹೊರತು ಚಿಂತಕ ಪ್ರವೃತ್ತಿ ಹೆಚ್ಚಲಿಲ್ಲ ಎಂದರು.

ಮನುಷ್ಯನ ಜೀವನಕ್ಕೆ ಬೇಕಾದಂತಹ ಸಂತೋಷಕ್ಕೆ ನೆಮ್ಮದಿಗೆ ಗೋವು ಕಾರಣ. ಅಂತಹ ಗೋವಿನ ರಕ್ಷಣೆಗೆ ನಮ್ಮ ಸರ್ಕಾರ ಇಲ್ಲ. ಸೈನ್ಯ ಇಲ್ಲ. ನ್ಯಾಯಾಲಯವೂ ಇಲ್ಲದಂತಹ ಸಂದರ್ಭದಲ್ಲಿ ಸಂತರೂ ಇಲ್ಲದಿದ್ದರೆ ದೇಶ ದಿಕ್ಸೂಚಿ ಇಲ್ಲದ ನೌಕೆಯಾಗುತ್ತದೆ ಎಂದರು.

ವೇದಿಕೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಸಂತರು ಉಪಸ್ಥಿತರಿದ್ದು, ರಾಮಕೃಷ್ಣಾಶ್ರಮ,ಚಿನ್ಮಯ ಮಿಶನ್‌ ಕಲ್ಕತ್ತಾ, ಬಿಹಾರ್‌ ಅಸ್ಸಾಂ ಮಹಾರಾಷ್ಟ್ರ ಕೇರಳ ಹಾಗೂ ಕನಾಟಕದ ಉತ್ತರ ಭಾಗದ ಅನೇಕರು ಹಾಜರಿದ್ದರು.

***

ಕೋಲ್ಕತ್ತದ ‘ಗೋ’ಉತ್ಪನ್ನ ಸಮ್ಮೇಳನದಲ್ಲಿ ..

ಕೋಲ್ಕತ್ತದ ಕಾಮದೇನು ವೀದ್ಯಾಪೀಠ, ಸರ್ವೋದಯ ವಿಚಾರ ಪ್ರಸಿದ್ಧ ಇವರು ಗೋಮಯದಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿರುವುದು ವಿಶೇಷವಾಗಿತ್ತು. ಇವರು ತಾವು ತಯಾರಿಸಿರುವ ಹಲ್ಲುಪುಡಿ, ಗೋ ಅರ್ಖಾ, ತುಪ್ಪವನ್ನು ಜನರಿಗೆ ಪರಿಚಯಿಸುತ್ತ ,ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಮಾಡುತ್ತಿದ್ದರು.

***

ಚಪಾತಿ ಲಟ್ಟಿಸುವುದೇ ಗಮ್ಮತ್ತು

‘ಗೋ’ ಸಮ್ಮೇಳನದ ‘ಅಮೃತಾಹಾರ’ ಭೋಜನ ಶಾಲೆಯಲ್ಲಿ ಬಡಿಸುವ ಚಿಕ್ಕಚಿಕ್ಕ ಕಾರ್ಯಕರ್ತರಿಗೆ, ಅಡುಗೆ ಮನೆಗೆ ಬಂದ ಯಂತ್ರವೇ ಮನೋರಂಜನೆ ಒದಗಿಸುತ್ತಿರುವುದು ವಿಶೇಷವಾಗಿತ್ತು. ಅವರವರಲ್ಲೇ ಮಾತುಕತೆ ಇದರ ಕುರಿತು ‘ಇದಕ್ಕೆ ಮೂರುವರೆ ಲಕ್ಷರೂಪಾಯಂತೆ,ಒಂದು ಗಂಟೆಗೆ ಎರಡುವರೆ ಸಾವಿರ ಚಪಾತಿ ತಯಾರಾಗುತ್ತದಂತೆ!’ ಏನೇ ಆಗಲಿ ಈ ಯಂತ್ರ, ದಣಿದ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡುತ್ತಿರುವು ಸತ್ಯ.

***

ಇದು ಭಕ್ತಿಭಾವದ ಸುವಸ್ತು

ರಾಮಾಯಣದ ಶಬರಿಯ ಭಕ್ತಿಭಾವುಕತೆ ಎಲ್ಲರಿಗೂ ಗೊತ್ತು!

ರಾಮಚಂದ್ರಾಪುರಮಠದ ವಿಶ್ವ ಗೋಸಮ್ಮೇಳನಕ್ಕೆ ಭಕ್ತರು ನೀಡಿದ ಸುವಸ್ತು ಕಾಣಿಕೆಯಲ್ಲಿಯೂ ಭಕ್ತಿಪೂರಣ ಹರಿದಿದೆ.

ಬಂದ ಸುವಸ್ತುಗಳ ಕಾಣಿಕೆಯಲ್ಲಿ ಬಾಳೆನಾರು, ಹಾಳೆಕುಂಟು (ಅಡಿಕೆಹಾಳೆಯಿಚಿದತಯಾರಿಸಿದ ಸಾರಿಸುವ ಸಾಧನ) ಹಾಳೆ ಬಳ್ಳಿ, ತೆಂಗಿನ, ಅಡಿಕೆಯ ಕಡ್ಡಿಗಳ ಹಿಡಿ, ಹಿಟ್ಟಂಡೆ ಹುಲ್ಲಿನ ಹಿಡಿ ಈಚಲು ಹಿಡಿ, ಚಾಪೆಗಳು ಮೊದಲಾದ ಹೊರ ಕಾಣಿಕೆಗಳು ಭಕ್ತಿಭಾವಗಳನ್ನು ಹೊತ್ತು ಹರಿದುಬರುತ್ತಿವೆ. ತೆಂಗಿನ ಕಾಯಿ ನಿಂಬೆಹಣ್ಣು ಮುಂತಾದವುಗಳ ಪರ್ವತಗಳೇ ನಿರ್ಮಾಣವಾಗುತ್ತಿದ್ದು ನೋಡುಗರ ಕಣ್ಮನ ತಣಿಸುತ್ತಿದೆ.

***

ಸುವಸ್ತು ಕಾಣಿಕೆಯಲ್ಲಿ ಕಲ್ಲುಸಕ್ಕರೆಯ ಬಟ್ಟಲು

ಕಲ್ಲು ಸಕ್ಕರೆ ಕೊಳ್ಳಿರೋ ‰ನೀವೆಲ್ಲರೂ‰.. ಯಾರಿಗೆ ಗೊತ್ತಿಲ್ಲ ಈ ಹಾಡು. ಆದರೆ ರಾಮಚಂದ್ರಾಪುರಮಠದ ಸುವಸ್ತು ಸಂಗ್ರಹಾಲಯದಲ್ಲಿ ಮೈಸೂರಿನ ರಾಮರಾಜ್ಯ ಸೀತಾಲಕ್ಷ್ಮೀ ರಾಮಶ್ರೇಷ್ಠಿಯವರು ವಿಶ್ವ ಗೋ ಸಮ್ಮೇಳನಕ್ಕೆ ಕಳುಹಿಸಿದ ಈ ಕಲ್ಲುಸಕ್ಕರೆ ಬಟ್ಟಲಿನಾಕರದಲ್ಲಿದ್ದು ಜನರಲ್ಲಿ ಬೆರಗುಮೂಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X