ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಸಿಡಿಸಿದ ಗಿಬ್ಸ್‌...!

By Staff
|
Google Oneindia Kannada News

Gibbs makes history with six sixes off one overಸೇಂಟ್‌ ಕಿಟ್ಸ್‌ : ನೆದರ್‌ಲ್ಯಾಂಡ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಹರ್ಷೆಲ್‌ ಗಿಬ್ಸ್‌, ಒಂದು ಓವರಿನ ಎಲ್ಲ ಎಸೆತಗಳಲ್ಲೂ ಸಿಕ್ಸರ್‌ ಬಾರಿಸಿ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್‌ ಹಾಗೂ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

ಶುಕ್ರವಾರ(ಮಾರ್ಚ್‌ 16) ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 221ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 40ಓವರುಗಳಲ್ಲಿ 3ವಿಕೆಟ್‌ಗಳ ನಷ್ಟಕ್ಕೆ 353ರನ್‌ಗಳನ್ನು ಕಲೆಹಾಕಿತು. ನೆದರ್‌ಲ್ಯಾಂಡ್ಸ್‌ ಪರ 30ನೇ ಓವರ್‌ ಬೌಲ್‌ ಮಾಡಿದ್ದು ಎಡಗೈ ಸ್ಪಿನ್ನರ್‌ ಡಾನ್‌ ವಾನ್‌ ಬಂಗ್‌, ಈ ಓವರ್‌ನ ಎಲ್ಲ ಎಸೆತಗಳಲ್ಲೂ ಸಿಕ್ಸರ್‌ ಬಾರಿಸುವ ಮೂಲಕ ಹರ್ಷೆಲ್‌ ಗಿಬ್ಸ್‌ ಹೊಸ ಇತಿಹಾಸ ನಿರ್ಮಿಸಿದರು.

30ನೇ ಓವರ್‌ ಆರಂಭವಾದಾಗ ಗಿಬ್ಸ್‌ ಮೊತ್ತ 32ರನ್‌, ಒವರ್‌ ಮುಗಿದಾಗ 68ರನ್‌...! 40 ಎಸೆತಗಳಲ್ಲಿ 72ರನ್‌ಗಳನ್ನು ಬಾರಿಸಿದ ಗಿಬ್ಸ್‌, ಅಂತಿಮವಾಗಿ ನಾಯಕ ಲೂಕ್‌ ವಾನ್‌ ಟ್ರೂಸ್ಟ್‌ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು.

ವಿಕೆಟ್‌ ಕೀಪರ್‌ ಮಾರ್ಕ್‌ ಬೌಷರ್‌ ಕೇವಲ 21 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ವಿಶ್ವಕಪ್‌ ಇತಿಹಾಸದ ವೇಗದ ಅರ್ಧ ಶತಕ ದಾಖಲಿಸಿದರು. ದಕ್ಷಿಣ ಆಫ್ರಿಕಾ ಪರ ನಾಯಕ ಗ್ರೇಮ್‌ ಸ್ಮಿತ್‌ ಅರ್ಧ ಶತಕ ಹಾಗೂ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ಶತಕ ಬಾರಿಸಿದರು.

ದಕ್ಷಿಣ ಆಫ್ರಿಕಾದ ಬೃಹತ್‌ ಮೊತ್ತ ಬೆನ್ನಟ್ಟಿದ ನೆದರ್‌ಲ್ಯಾಂಡ್ಸ್‌ ಯಾವುದೇ ಕ್ಷಣದಲ್ಲೂ ಸವಾಲೊಡ್ಡಲಿಲ್ಲ. ನಿಗದಿತ 40 ಓವರುಗಳಲ್ಲಿ 9ವಿಕೆಟ್‌ಗಳ ನಷ್ಟಕ್ಕೆ ಕೇವಲ 139ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.

ಸಿಕ್ಸರ್‌ ಹಿನ್ನೆಲೆ : ವೆಸ್ಟ್‌ ಇಂಡೀಸ್‌ನ ಆಟಗಾರ ಸರ್‌ ಗ್ಯಾರಿ ಫೀಲ್ಡ್‌ ಸೋಬರ್ಸ್‌ ನಾಟಿಂಗ್‌ಹ್ಯಾಮ್‌ಷೈರ್‌ ತಂಡದ ಪರ ಆಡುತ್ತಾ, ಗ್ಲ್ಯಾಮರ್ಗನ್‌ ತಂಡದ ವಿರುದ್ಧ ಒಂದು ಓವರಿನ ಎಲ್ಲ ಎಸೆತಗಳಲ್ಲೂ ಸಿಕ್ಸರ್‌ ಬಾರಿಸಿದ್ದರು. ಆಗ ದಂಡನೆಗೊಳಗಾದ ಬೌಲರ್‌ ಮಾಲ್ಕಮ್‌ ನ್ಯಾಷ್‌. 1968ರಲ್ಲಿ ಸ್ವಾನ್‌ಸಿಯಾದಲ್ಲಿ ಈ ಪಂದ್ಯ ನಡೆದಿತ್ತು.

ಆನಂತರ 1984ರಲ್ಲಿ ಭಾರತದ ರವಿ ಶಾಸ್ತ್ರಿ ಈ ದಾಖಲೆ ಸರಿಗಟ್ಟಿದ್ದರು. ಶಾಸ್ತ್ರಿ ಮುಂಬಯಿಪರ ಆಡುತ್ತಾ, ಬರೋಡಾ ತಂಡದ ತಿಲಕ್‌ರಾಜ್‌ ಅವರನ್ನು ಈ ಪರಿ ದಂಡನೆಗೆ ಈಡುಮಾಡಿದ್ದರು.

ಆದರೆ ಇನ್ನೂವರೆಗೆ ಯಾರೊಬ್ಬರೂ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹಾಗೂ ಟೆಸ್ಟ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಹೊಡೆದಿರಲಿಲ್ಲ. ಈ ದಾಖಲೆ ಈಗ ಗಿಬ್ಸ್‌ ಮುಡಿಗೇರಿದೆ.

ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ ಜಯ : ಸೇಂಟ್‌ ಲೂಸಿಯಾದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್‌ ಚುರುಕಿನ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್‌ ಪ್ರದರ್ಶಿಸಿತು. ಹಾಗಾಗಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌, ನಿಗದಿತ 50 ಓವರುಗಳಲ್ಲಿ 7ವಿಕೆಟ್‌ಗಳ ನಷ್ಟಕ್ಕೆ 209ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇಂಗ್ಲೆಂಡ್‌ ಪರ ಕೆವಿನ್‌ ಪೀಟರ್‌ಸನ್‌ ಅರ್ಧಶತಕ ಗಳಿಸಿದರು. ನ್ಯೂಜಿಲೆಂಡ್‌ ಪರ ಶೇನ್‌ ಬಾಂಡ್‌, ಸ್ಕಾಟ್‌ ಸ್ಟೈರಿಸ್‌ ಹಾಗೂ ಜೇಮ್ಸ್‌ ಫ್ರ್ಯಾಂಕ್ಲಿನ್‌ ತಲಾ ಎರಡು ವಿಕೆಟ್‌ ಪಡೆದರು.

ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ ಮೇಲ್‌ಕ್ರಮಾಂಕದ ಆಟಗಾರರ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ಸ್ಕಾಟ್‌ ಸ್ಟೈರಿಸ್‌ ಹಾಗೂ ಜೇಕಬ್‌ ಓರಂ 5ನೇ ವಿಕೆಟ್‌ಗೆ ಸೇರಿಸಿದ ಅಜೇಯ 138ರನ್‌ಗಳ ಜೊತೆಯಾಟ ಗೆಲುವಿನ ಸಂಭ್ರಮವನ್ನು ನೀಡಿತು. ಸ್ಟೈರಿಸ್‌ 88 ಹಾಗೂ ಓರಂ 63 ರನ್‌ ಗಳಿಸಿ ಅಜೇಯವಾಗಿ ಉಳಿದರು.

ಶನಿವಾರದ ಪಂದ್ಯಗಳು :

ಭಾರತ-ಬಾಂಗ್ಲಾದೇಶ
ಕ್ರೀಡಾಂಗಣ : ಕ್ವೀನ್ಸ್‌ ಪಾರ್ಕ್‌ ಓವಲ್‌(ಟ್ರಿನಿಡ್ಯಾಡ್‌)
ಪಾಕಿಸ್ತಾನ-ಐರ್ಲೆಂಡ್‌
ಕ್ರೀಡಾಂಗಣ : ಸಬೀನಾ ಪಾರ್ಕ್‌(ಜಮೈಕಾ)

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X