• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಪ್ರವೀಣ ದೇವೇಗೌಡರಿಗೊಂದು ಬಹಿರಂಗ ಪತ್ರ...

By Staff
|

ಆರ್ಥಿಕ ದೃಷ್ಟಿಯಿಂದ ಹೇಳುವುದಾದರೂ ಕಾವೇರಿ ಇಲ್ಲದ ತಮಿಳುನಾಡನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಕರ್ನಾಟಕಕ್ಕಾದರೆ ದಕ್ಷಿಣದಲ್ಲಿ ಕಾವೇರಿ, ಉತ್ತರದಲ್ಲಿ ಕೃಷ್ಣೆ, ನಡುವೆ ತುಂಗಭದ್ರೆಯರಿದ್ದಾರೆ. ತಮಿಳುನಾಡಿಗೆ ಕೇವಲ ಕಾವೇರಿ ಮಾತ್ರ. ಅಮರಾವತಿ ಹಾಗೂ ವೈಗೈ ಇರುವುದು ಹೆಸರಿಗಷ್ಟೇ. ತಮಿಳುಭೂಮಿಯ ನಟ್ಟನಡುವೆ ಹರಿಯುವ ಕಾವೇರಿ ಆ ರಾಜ್ಯದ ಜೀವನದಿ, ಈಜಿಪ್ಟ್‌ಗೆ ನೈಲ್‌ನದಿ ಇರುವಂತೆ. ತಮಿಳರಿಂದ ಕಾವೇರಿಯನ್ನು ಕಸಿಯುವ ಪ್ರಶ್ನೆಯೇ ಇಲ್ಲ.

ಹಾಗಾದರೆ ಕಾವೇರಿ ನನಗೆ ಅದೇಕೆ ಇಷ್ಟು ಮುಖ್ಯವಾಗುತ್ತಾಳೆ?

ಬಲಿಷ್ಟ ಹಾಗೂ ಬಲಹೀನ ವ್ಯವಸ್ಥೆಗಳೆರಡರ ನಡುವಿನ ಅಸಮಾನ ಸಂಘರ್ಷದ ಒಂದು ಜ್ವಲಂತ ನಿದರ್ಶನ ಈ ಕಾವೇರಿ ವಿವಾದ. ಸ್ವಾತಂತ್ಯಪೂರ್ವದಲ್ಲಿ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟಿದ್ದ ಮದರಾಸು ದೇಶೀಯ ಸಂಸ್ಥಾನ ಮೈಸೂರಿನ ಮೇಲೆ ಎರಡು ಅಸಮಾನ ಹಾಗೂ ಅನ್ಯಾಯಕರ ಒಪ್ಪಂದಗಳನ್ನು ಹೇರಿತು. ಮದರಾಸನ್ನು ಆಳುತ್ತಿದ್ದ ಬ್ರಿಟಿಷ್‌ ಸಾಮ್ರಾಜ್ಯಶಾಹಿಗಳು ಹೇರಿದ ಈ ಒಪ್ಪಂದಗಳನ್ನು ತಿರಸ್ಕರಿಸುವ ಸ್ವಾತಂತ್ರ್ಯ ಅಧೀನ ಸಂಸ್ಥಾನವಾದ ಮೈಸೂರಿಗೆ ಇರಲೇ ಇಲ್ಲ. ಸ್ವಾತಂತ್ರಾನಂತರವೂ ಇದೇ ಪದ್ದತಿ ಮುಂದುವರೆಯಬೇಕೆಂದು ತಮಿಳುನಾಡು ಹಠ ಹಿಡಿದದ್ದು ಅಚ್ಚರಿಯಷ್ಟೇ ಅಲ್ಲ ಅಸಹ್ಯವನ್ನೂ ಉಂಟುಮಾಡುತ್ತದೆ. ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತಮಿಳುನಾಡು ಹಿಡಿದ ಮಾರ್ಗಗಳು ಅನೇಕ.

ಮೊದಲು ಪ್ರತ್ಯೇಕತೆಯ ಕೂಗು ಹಾಕಿ ಕೇಂದ್ರಕ್ಕೆ ಛಳಿ ಹುಟ್ಟಿಸಿತು. ಅಳುವ ಮಗುವಿಗೆ ಹೆಚ್ಚು ಹಾಲು ಎಂಬಂತೆ ಕೇಂದ್ರ ಅದರ ಬೇಡಿಕೆಗಳನ್ನೆಲ್ಲಾ ಒಪ್ಪಿಕೊಳ್ಳುತ್ತಾ ಹೋದಾಗ ತನಗೆ ಬೇಕಾದಂತೆ ಕೇಂದ್ರವನ್ನು ಆಡಿಸುವ ಪರಿಪಾಠವನ್ನು ಆ ರಾಜ್ಯ ರೂಢಿಸಿಕೊಂಡಿತು. ಇದಕ್ಕೆ ಬಲಿಯಾದದ್ದು ಪಕ್ಕದ ರಾಜ್ಯಗಳಾದ ಕೇರಳ ಹಾಗೂ ಕರ್ನಾಟಕ. ಸೌಮ್ಯಸ್ವಭಾವವೇ ಈ ಎರಡು ರಾಜ್ಯಗಳಿಗೆ ಮುಳುವಾಗಿ ರಚ್ಚೆ ಹಿಡಿದ ಮಗುವಿನಂತೆ ವರ್ತಿಸುವ ತಮಿಳುನಾಡಿನ ಪರವಾಗಿ ಕೇಂದ್ರ ವರ್ತಿಸತೊಡಗಿತು.

1967ರಲ್ಲಿ ತಮಿಳುಜನತೆ ರಾಷ್ಟ್ರೀಯ ಪಕ್ಷಗಳನ್ನು ಧಿಕ್ಕರಿಸಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸತೊಡಗಿತು. ರಾಷ್ಟೀಯ ಪಕ್ಷಗಳು ಈ ಪ್ರಾದೇಶಿಕ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಂಡು ಒಂದಷ್ಟು ಸೀಟು ಗಿಟ್ಟಿಸಬೇಕಾದ ದುರ್ಗತಿಗಿಳಿದವು. ಈ ಕೆಲವು ಸೀಟುಗಳಿಗಾಗಿ ರಾಷ್ಟ್ರೀಯ ಪಕ್ಷಗಳು ತಮಿಳುನಾಡಿನ ಪಕ್ಷಗಳನ್ನು ಓಲೈಸುವ ಪರಿಪಾಠ ಆರಂಭವಾದಂದಿನಿಂದ ಆ ರಾಜ್ಯದ ಅದೃಷ್ಟ ಖುಲಾಯಿಸಿತು. ಕೇಂದ್ರದಲ್ಲಿ ಅಧಿಕಾರ ಬಯಸುವ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಈ ಪ್ರಾದೇಶಿಕ ಪಕ್ಷಗಳ ಬೆಂಬಲ ಅನಿವಾರ್ಯ ಎಂಬ ಪರಿಸ್ಥಿತಿ 1989ರಲ್ಲಿ ನಿರ್ಮಾಣವಾದಾಗಾಗಿನಿಂದ ತಮಿಳುನಾಡನ್ನು ತಡೆಯುವವರೇ ಇಲ್ಲದಂತಾಯಿತು.

ಒಮ್ಮೊಮ್ಮೆ ಹೊರಗಿನಿಂದ ಸಹಕಾರ ನೀಡುತ್ತಾ, ಅವಕಾಶ ದೊರೆತಾಗ ಒಳಗೇ ಸೇರಿಕೊಳ್ಳುತ್ತಾ ತಮಿಳುನಾಡಿನ ಪಕ್ಷಗಳು ಕೇಂದ್ರ ಸರಕಾರವನ್ನು ತಮ್ಮಿಚ್ಚೆಯಂತೆ ಕುಣಿಸತೊಡಗಿದ್ದು, ಇವುಗಳ ಬೆಂಬಲವೆಲ್ಲಿ ತಪ್ಪಿಹೋಗಿ ತಮ್ಮ ಸರಕಾರ ಪತನವಾಗುತ್ತದೆಯೋ ಎಂಬ ನಿರಂತರ ಆತಂಕದಲ್ಲಿ ರಾಷ್ಟ್ರೀಯ ಪಕ್ಷಗಳು ಮುಳುಗೇಳತೊಡಗಿದ್ದು ಈ ರಾಷ್ಟ್ರದ ರಾಜಕಾರಣದಲ್ಲಿನ ಒಂದು ಅತ್ಯಂತ ದುರಾದೃಷ್ಟಕರ ಬೆಳವಣಿಗೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಜನತೆ ಒಂದಲ್ಲಾ ಒಂದು ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸುತ್ತಾ ನಡೆಯಿತು. ತಮ್ಮನ್ನು ಬೆಂಬಲಿಸದೇ ಕರ್ನಾಟಕದ ಜನತೆಗೆ ಬೇರೆ ದಾರಿಯೇ ಇಲ್ಲ ಎಂದು ರಾಶ್ಟ್ರೀಯ ಪಕ್ಷಗಳಿಗೆ ಮನವರಿಕೆಯಾದಾಗಿನಿಂದ ಅವು ಕರ್ನಾಟಕವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದನ್ನು ಸರಿಸುಮಾರು ನಿಲ್ಲಿಸಿಯೇಬಿಟ್ಟವು. ಕರ್ನಾಟಕವೆಂದರೆ ಏನು ಮಾಡಿದರೂ ಸಹಿಸಿಕೊಂಡು ತೆಪ್ಪಗಿರುವ ಬಡಕೂಸು ಅಂದುಕೊಂಡು ಕೇಂದ್ರದ ಶಾಶಕಾಂಗ, ಕಾರ್ಯಾಂಗಗಳು ಕರ್ನಾಟಕವನ್ನು ಅಸಡ್ಡೆ ಮಾಡತೊಡಗಿದವು. ಈಗ ನ್ಯಾಯಾಂಗವೂ ಅದನ್ನೇ ಮಾಡಿದೆ.

ತಮಿಳುನಾಡಿಗೆ ಕಾವೇರಿ ಮುಖ್ಯ ನಿಜ. ಆದರೆ ಈ ಟ್ರಿಬ್ಯೂನಲ್‌ ಹೇಳಿದಷ್ಟಲ್ಲ. ಕರ್ನಾಟಕದ ನ್ಯಾಯಯುತ ಅಗತ್ಯಗಳನ್ನು ಕಡೆಗಣಿಸಿ, ತಮಿಳುನಾಡಿನ ಪರವಾಗಿ ನಿಂತದ್ದು, ಆ ರಾಜ್ಯಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರು ನೀಡಿದ್ದು ಟ್ರಿಬ್ಯೂನಲ್‌ನ ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ ಎಂಬುದನ್ನು ಸಾರಿ ಹೇಳುತ್ತದೆ. ತಮಿಳುನಾಡಿನ ಮೃದುನೆಲದಲ್ಲಿರುವ ಹೇರಳ ಅಂತರ್ಜಲದತ್ತ ಕಣ್ಣೆತ್ತಿಯೂ ನೋಡದೇ, ಕರ್ನಾಟಕದ ಕಲ್ಲುನೆಲದಲ್ಲಿರುವ ಅತ್ಯಲ್ಪ ಪ್ರಮಾಣದ ಅಂತರ್ಜಲವನ್ನು ಮಾತ್ರ ಭೂತಗನ್ನಡಿ ಇಟ್ಟು ನೋಡಿ, ಕುಡಿಯಲು ಆ ನೀರು ಸಾಕು ಬಿಡಿ ಎಂದು ಹೇಳುವ ಈ ಟ್ರಿಬ್ಯೂನಲ್‌ ನ್ಯಾಯವ್ಯವಸ್ಥೆಗೇ ಕಳಂಕ.

ಪರಿಸ್ಥಿತಿ ಹೀಗೇ ಮುಂದುವರೆದರೆ ಕರ್ನಾಟಕದ ಅಸ್ತಿತ್ವಕ್ಕೇ ಧಕ್ಕೆಯಾಗುವಂತಹ ಗಂಭೀರ ಸ್ಥಿತಿ ಎದುರಾಗಬಹುದು. ಇದನ್ನು ತಡೆಯಬೇಕಾದರೆ ತಮಿಳುನಾಡಿನ ಚಾಲಾಕಿತನವನ್ನೇ ಕರ್ನಾಟಕವೂ ಹಮ್ಮಿಕೊಳ್ಳುವುದು ಅಗತ್ಯ. ಆದರೆ ಈ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ತಮಿಳರು ಐವತ್ತು ವರ್ಷಗಳಿಂದ ಬೆಳೆಸಿಕೊಂಡು ಬಂದ ವರ್ತನೆಯನ್ನು ಕನ್ನಡಿಗರು ಏಕಾಏಕಿ ರೂಢಿಸಿಕೊಳ್ಳುವುದು ಅಸಾಧ್ಯದ ಮಾತು. ತುರ್ತಾಗಿ ಕೆಲಸ ಆಗಬೇಕಾಗಿರುವುದರಿಂದ ತಮಿಳುನಾಡಿನ ನೇತಾರರು ಮಾಡುವ ಕೆಲಸವನ್ನೇ ಕರ್ನಾಟಕದ ರಾಜಕೀಯ ಮುತ್ಸದ್ದಿಗಳು ಮಾಡುವ ಅಗತ್ಯವಿದೆ.

ಆ ಕೆಲಸಗಳನ್ನು ತಮಿಳರಷ್ಟೇ ಸಮರ್ಥವಾಗಿ ಮಾಡುವ ಸಾಮರ್ಥ್ಯ, ಚಾಕಚಕ್ಯತೆ ಇರುವುದು ತಮಗೆ ಮಾತ್ರ ಗೌಡರೇ. ಏನಾದರೂ ಮಾಡಿ ಎಂದು ನಾನು ನಿಮ್ಮನ್ನು ಕೇಳುತ್ತಿರುವುದಕ್ಕೆ ಇಷ್ಟೇ ಕಾರಣ. ಬೇರೇನೂ ಇಲ್ಲ. ಕರ್ನಾಟಕ ಉಳಿಯಬೇಕಾದರೆ, ತನ್ನ ಕುಟಿಲನೀತಿಗಳು ಅನುಗಾಲವೂ ನಡೆಯುವುದಿಲ್ಲ ಎಂದು ತಮಿಳುನಾಡಿಗೆ ಮನವರಿಕೆಯಾಗಬೇಕಾದರೆ, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ರಾಷ್ಟ್ರೀಯ ಏಕತೆಗೆ ಮಾರಕ ಎಂಬ ಸತ್ಯವನ್ನು ರಾಷ್ಟ್ರೀಯ ಪಕ್ಷಗಳು ಹಾಗೂ ಕೇಂದ್ರ ಸರಕಾರ ಅರಿಯಬೇಕಾದರೆ ನಿಮ್ಮಂಥವರು ಈಗ ಕಾರ್ಯಪ್ರವೃತ್ತರಾಗಲೇಬೇಕು ಗೌಡರೇ.

ಇದನ್ನು ಬರೆಯುತ್ತಿರುವಾಗ ಟ್ರಿಬ್ಯೂನಲ್‌ನ ಅಂತಿಮ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಲು ಕರ್ನಾಟಕ ಸಚಿವಸಂಪುಟ ನಿರ್ಧರಿಸಿರುವ ಸುದ್ದಿ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅತ್ಯುತ್ತಮ ಮಾರ್ಗ. ತಡವಾಗಿಯಾದರೂ ರಾಜ್ಯಸರಕಾರ ಒಳ್ಳೆಯ ನಿರ್ಧಾರ ಕೈಗೊಂಡಿದೆ. ತಮ್ಮ ಸುಪುತ್ರರಿಗೆ ತಾವೇ ಈ ಸಲಹೆ ನೀಡಿರಬಹುದೇನೋ. ಅದು ಒಳ್ಳೆಯದೇ ಬಿಡಿ. ಏನೇನೋ ಒಳಸಂಚು ಮಾಡಿ ಕುಮಾರಸ್ವಾಮಿಯವರನ್ನು ತಾವು ಮುಖ್ಯಮಂತ್ರಿ ಮಾಡಿದಿರಿ ಎಂದು ಜನ ಹೇಳುತ್ತಾರೆ. ನನ್ನ ದೃಷ್ಟಿಯಲ್ಲಿ ಅದರಲ್ಲೇನೂ ತಪ್ಪಿಲ್ಲ ಗೌಡರೇ.

ತನ್ನ ಮಕ್ಕಳ ಅಭ್ಯುದಯಕ್ಕಾಗಿ, ಸುಖಸಂತೋಷಕ್ಕಾಗಿ ತಂದೆಯಾದವನು ಪ್ರಯತ್ನಿಸಲೇಬೇಕಲ್ಲವೇ? ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯ ಒಂದು ಬಹುಮುಖ್ಯ ಲಕ್ಷಣವಲ್ಲವೇ ಅದು? ನೆಹರೂ, ಶೇಖ್‌ ಅಬ್ದುಲ್ಲಾ ಮಾಡಿದ್ದು, ಕರುಣಾನಿಧಿ ಮಾಡುತ್ತಿರುವುದು ಅದನ್ನೇ ಅಲ್ಲವೇ? ಮಕ್ಕಳ ಅಭ್ಯುದಯದ ದಾರಿ ತೋರಿದ ತಾವು ರಾಜ್ಯದ ಅಭ್ಯುದಯದ ದಾರಿಯನ್ನು ಮಕ್ಕಳಿಗೆ ತೋರಿಸಿದರೆ ಅಷ್ಟೇ ಸಾಕು. ಕಡೆಗಾಲದಲ್ಲಿ ಮಕ್ಕಳೂ ತಮ್ಮ ಕೈಬಿಡುವುದಿಲ್ಲ, ನಾವೂ ತಮ್ಮನ್ನು ಮರೆಯುವುದಿಲ್ಲ.

ತಾವು ಹಿರಿಯರು. ನಾನು ಅನನುಭವಿ. ತಿಳಿಯದೇ ತಮಗೆ ಬೇಸರ ಉಂಟುಮಾಡಿದ್ದಲ್ಲಿ ದಯವಿಟ್ಟು ಕ್ಷಮಿಸಿ. ಜತೆಗೇ ನನ್ನ ಮಾತುಗಳಲ್ಲಿರುವ ಸತ್ಯವನ್ನೂ ಗುರುತಿಸಿ.

ಇಂತಿ ವಂದನೆಗಳೊಡನೆ...

ಪ್ರೇಮಶೇಖರ, ಪಾಂಡಿಚೇರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more