ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಕಿಧಾರಿಗಳ ಕಣ್ಗಾವಲಿನಲ್ಲಿ ನಮ್ಮ ಚೆಲುವ ಕರ್ನಾಟಕ

By Staff
|
Google Oneindia Kannada News

ಬೆಂಗಳೂರು : ಕಾವೇರಿ ವಿವಾದದ ಮುಂದುವರೆದ ಅಧ್ಯಾಯದ ನಿಮಿತ್ತ, ಸೋಮವಾರ ಇಡೀ ಕರ್ನಾಟಕವನ್ನು ಆಳುತ್ತಿರುವವರು ಪೊಲೀಸರು!

ಒಂದು ನೂರು ವರ್ಷದ ಆಂತರಿಕ ಯುದ್ಧದಲ್ಲಿ ಆಗಾಗ ಭುಗಿಲೇಳುವ ಆಕ್ರೋಶವನ್ನು ಹತ್ತಿಕ್ಕಲು ಪೊಲೀಸರ ಸನ್ನದ್ಧ ಕೈಗಳಲ್ಲಿ ಇರುವುದು ಕುದುರೆಮುಖ ಅರಣ್ಯಪ್ರದೇಶದಲ್ಲಿ ಬೆಳೆದು ಮಾಗಿ ಒಣಗಿದ ಬೆತ್ತ. ಬ್ರಿಟಿಷರ ಕಾಲದಲ್ಲಿ ಠಾಣೆಗಳಿಗೆ ಸರಬರಾಜಾಗಿದ್ದ ಮದ್ದು ಗುಂಡು ಕೋವಿ. ಬೆಂಕಿ ಬಿದ್ದರೆ ನಂದಿಸಲು ಅದೇ ಕಾವೇರಿ.

ಹಳೆ ಮೈಸೂರು ಪ್ರದೇಶದಲ್ಲಿ ಬಂದ್‌ನ ಬಿಸಿ ಹೆಚ್ಚು ಪ್ರಖರ. ಹಾಗಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಮಡಿಕೇರಿ, ಬೆಂಗಳೂರು, ಸ್ವಲ್ಪ ತುಮಕೂರು ಮತ್ತು ಸ್ಪಲ್ಪ ಕೋಲಾರದಲ್ಲಿ ಕಾವು. ಈ ಜಿಲ್ಲೆಗಳ ಗಲ್ಲಿಗಲ್ಲಿಗಳಲ್ಲಿ ಪೊಲಿಸರ ಕಟ್ಟೆಚ್ಚರ, ಬಿಗಿ ಪಹರೆ.

ನಮ್ಮ ರಾಜ್ಯದ ಪೊಲೀಸ್‌ ಶಕ್ತಿಯನ್ನು ಬಲಪಡಿಸಲು ತಮಿಳುನಾಡನ್ನು ಹೊರತುಪಡಿಸಿ ನೆರೆಯ ರಾಜ್ಯಗಳಿಂದ ತುಕಡಿಗಳ ಆಗಮನ. ಸುಮಾರು ಒಂದು ಲಕ್ಷ ಮಂದಿ ಖಾಕಿಧಾರಿಗಳು ಕರ್ನಾಟಕದ ಉದ್ದಗಲಕ್ಕೂ ಠಳಾಯಿಸುತ್ತಿರುವುದರಿಂದ ಕಿತಾಪತಿ ಮಾಡುವವರಿಗೆ ಕಷ್ಟ.

ಎಲ್ಲೋ ಕೆಲವು ಕಡೆ ಪ್ರದರ್ಶನ, ಘೋಷಣೆ, ಕಾವೇರಿಕನ್ನಡಿಗರ ಬಂಧನದ ಸುದ್ದಿಗಳನ್ನು ಬಿಟ್ಟರೆ ಉಳಿದದ್ದು ನೀರವ ಮೌನ. ಮಾಡದೇ ಉಳಿದ ಕೆಲಸಗಳನ್ನು ಮೆಲಕು ಹಾಕುವ ಕನ್ನಡಿಗರಿಗೆ ವಾರದ ಮೊದಲ ದಿನವೇ ತಮ್ಮ ತಮ್ಮ ಮನೆಗಳಲ್ಲೇ ‘ಗೃಹ ಬಂಧನ’. ಅವರಿಗೆಲ್ಲ ಇದು ಬಯಸದೇ ಬಂದ ಇನ್ನೊಂದು ದೌರ್ಭಾಗ್ಯ.

ಉತ್ತರ ಕರ್ನಾಟಕದಲ್ಲಿ ಕಾವೇರಿ ಬಿಸಿ ಇಲ್ಲ. ಹೈಕೋರ್ಟ್‌ ಪೀಠ ಸ್ಥಾಪನೆಗೆ ಅಲ್ಲಿ ತೋರಿಬಂದ ಉತ್ಸಾಹ, ಆಕ್ರೋಶ ಕಾವೇರಿ ವಿವಾದದ ಸಮಯದಲ್ಲಿ ಕಂಡುಬಂದಿಲ್ಲ. ದಕ್ಷಿಣ ಕರ್ನಾಟಕದವರಿಗೆ ನೇತ್ರಾವತಿ ಕೃಪೆ ಇರುವುದರಿಂದ ಅವರು ಕಾವೇರಿ ಬಗ್ಗ ಎಲೆಕೆಡಿಸಿಕೊಂಡಿಲ್ಲ. ಕಾರವಾರ ಜಿಲ್ಲೆಯಲ್ಲಿ ಮನೆಗೊಂದು ಜಲಪಾತ ಇರುವುದರಿಂದ ಅವರು ಶಿವನಸಮುದ್ರ ನೋಡುವುದಕ್ಕೆ ಮಂಡ್ಯದತನಕ ಬರುವ ಅವಶ್ಯಕತೆ ಇಲ್ಲ ಎಂಬಂತೆ ಮಹಾಮೌನ.

ಇನ್ನು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಪ್ರದೇಶಗಳು ಈ ಕಡೆಯೂ ಇಲ್ಲ ಆಕಡೆಯೂ ಇಲ್ಲ. ಭಗೀರಥನೇ ಎದ್ದು ಬಂದರೂ ನಮಗೆ ಕಾವೇರಿ ನೀರು ಸಿಕ್ಕುವುದಿಲ್ಲ ಎಂಬ ಧೋರಣೆಯಿಂದ, ಬಂದ್‌ ಬಗ್ಗೆ ನಿರುತ್ಸಾಹ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X