ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಸ್ಸಿ ದಾಳಿಗೆ ವರ್ಷ : ‘ಉಗ್ರ’ರ ಪ್ರತಾಪ ನಿರಂತರ!

By Staff
|
Google Oneindia Kannada News

ಬೆಂಗಳೂರು : ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮೇಲೆ ದಾಳಿ ನಡೆದು ಶುಕ್ರವಾರಕ್ಕೆ(ಡಿ.28) ಒಂದು ವರ್ಷ. ಆದರೆ ಘಟನೆಯಲ್ಲಿ ಮೃತಪಟ್ಟ ವಿಜ್ಞಾನಿ ಪೂರಿ ಹಂತಕನನ್ನು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ.

ಉಗ್ರರ ಮಟ್ಟ ಹಾಕಲು, ಭದ್ರತಾ ಪಡೆಗಳು ಮತ್ತು ಪೊಲೀಸರು ಕಟ್ಟೆಚ್ಚರವಹಿಸಿದರೂ ಪ್ರಯೋಜನವಾಗಿಲ್ಲ. ರಾಷ್ಟ್ರದ ವಿವಿಧ ಭಾಗಗಳಲ್ಲಿ ಉಗ್ರರ ಕಿತಾಪತಿಗಳು ನಡೆಯುತ್ತಲೇ ಇವೆ. ಆತಂಕದ ನಡುವೆ ಬದುಕ ಬೇಕಾದ ಪರಿಸ್ಥಿತಿ ನೆಲೆಸಿದೆ.

ಕಳೆದ ವರ್ಷದ ಆ ಘಟನೆ ನೆನೆಸಿಕೊಂಡವರಿಗೆ ಈಗಲೂ ಮೈ ಜುಂ ಎನ್ನುತ್ತದೆ. ಡಿ.28ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಂಕಿರಣವೊಂದು ನಡೆದಿತ್ತು. ವಿಜ್ಞಾನಿಗಳ ಗುಂಪು ಸಂಕಿರಣ ಮುಗಿಸಿಕೊಂಡು ಹೊರಬರುತ್ತಿದ್ದಂತೆಯೇ ಲಷ್ಕರೆ ತೋಯ್ಬಾ ಉಗ್ರನೊಬ್ಬ, ಗುಂಡಿನ ದಾಳಿ ಆರಂಭಿಸಿದ್ದ. ಘಟನೆಯಲ್ಲಿ ನವದೆಹಲಿ ಐಐಟಿ ಪ್ರೊಫೆಸರ್‌ ಎಂ.ಸಿ.ಪೂರಿ ಮೃತಪಟ್ಟು, ಇತರ ನಾಲ್ವರು ಗಾಯಗೊಂಡಿದ್ದರು.

ದಾಳಿಯಲ್ಲಿ ಗ್ರೆನೇಡ್‌ಗಳನ್ನು ಎಸೆಯಲಾಗಿತ್ತಾದರೂ ಅದೃಷ್ಟವಶಾತ್‌ ಅವು ಸ್ಫೋಟಗೊಂಡಿರಲಿಲ್ಲ. ಹಾಗಾಗಿ ಬಹುದೊಡ್ಡ ವಿಪತ್ತೊಂದು ದೂರವಾಗಿತ್ತು.

ಘಟನೆ ನಂತರ ಲಷ್ಕರೆ ತೋಯ್ಬಾದ ದಕ್ಷಿಣ ಭಾರತ ಕಮಾಂಡರ್‌ ಎನ್ನಲಾಗಿರುವ ನಲ್ಗೊಂಡದ ಅಬ್ದುಲ್‌ ರೆಹಮಾನ್‌ನನ್ನು ಬಂಧಿಸಲಾಗಿತ್ತು. ಆದರೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ ಸಿಕ್ಕಿರಲಿಲ್ಲ. ಕೇಂದ್ರೀಯ ಗೂಢಚಾರ ಸಂಸ್ಥೆಗಳು ವೇಗವಾಗಿ ತನಿಖೆ ಆರಂಭಿಸಿದವಾದರೂ ಸದ್ಯಕ್ಕೆ ನಿಧಾನಗತಿಯಲ್ಲಿ ಸಾಗುತ್ತಿವೆ.

ನಗರ ಪೊಲೀಸರು ಹಂತಕನನ್ನು ಹಿಡಿಯಲೆತ್ನಿಸಿದ ಎಲ್ಲ ಯತ್ನಗಳೂ ವಿಫಲವಾಗಿವೆ. ಈ ದುರ್ಘಟನೆ ನಂತರ ವಿಜಾಪುರ, ಬೆಳಗಾವಿ, ಬೀದರ್‌ ಹಾಗೂ ಕಲ್ಬುರ್ಗಿ ನಗರಗಳು ಲಷ್ಟರೆ ತೋಯ್ಬಾ ಉಗ್ರರಿಗೆ ಆಶ್ರಯತಾಣಗಳಾಗಿ ಪರಿಣಮಿಸಿವೆ. ಈ ಪ್ರದೇಶಗಳ ಕೆಲವರು ಪಾಕಿಸ್ತಾನದೊಂದಿಗೆ ವಿವಾಹ ಸಂಬಂಧಗಳನ್ನೂ ಹೊಂದಿದ್ದಾರೆ ಎನ್ನಲಾಗಿದೆ.

ನೆರೆಯ ಆಂಧ್ರಪ್ರದೇಶದ ತೆಲಂಗಾಣ ಪ್ರಾಂತವೂ ಲಷ್ಕರೆ ತೋಯ್ಬಾ ಉಗ್ರರಿಗೆ ಆಶ್ರಯ ತಾಣವಾಗಿದೆ. ಇಲ್ಲಿಂದ ನುಸುಳಿ ರಾಜ್ಯಕ್ಕೆ ಬರುವ ಉಗ್ರರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X