ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಯಾಕೆ ಎನ್ನುವ ಬ್ಯಾಂಗ್‌ಲೂರಿಗರ ಗಮನಕ್ಕೆ...

By Staff
|
Google Oneindia Kannada News

‘ರಿಸರ್ಚ್‌ ಬೇಡ. ಫೋನೆಟಿಕ್ಸ್‌ ಮಾಡು. ಇಂಗ್ಲಿಷಿನ ಫೋನೆಟಿಕ್ಸ್‌ ಸಿಸ್ಟಮ್‌ ನಿನಗೆ ಕರಗತವಾದರೆ ನಿನ್ನಂತಹ ಬುದ್ಧಿವಂತ ಯುವಕ ಯೂಎನ್‌ ಓ ನಲ್ಲಿ ಕೆಲಸ ಮಾಡಬಹುದು. ಕೇಂಬ್ರಿಜ್‌ನಲ್ಲಿ ಕಲಿತ ರಾಜನ್‌ ಎಷ್ಟು ಎತ್ತರಕ್ಕೆ ಏರಿದ್ದಾನೆ ನೋಡು. ಯಾಕೆ ಗೊತ್ತೆ? ಕತ್ತಲಲ್ಲಿ ಅವನ ಮುಖ ನೋಡದೆ ಅವನ ಮಾತು ಕೇಳಿಸಿಕೊಂಡರೆ ಅವನೊಬ್ಬ ನಮ್ಮಂತೆಯೇ ಇಂಗ್ಲಿಷ್‌ ಮನ್‌ ಎಂದು ತಿಳಿಯುವಂತಾಗುತ್ತದೆ. ಇಂಡಿಯಾದಲ್ಲಿ ನಾನು ಒಬ್ಬ ದೊಡ್ಡ ಪ್ರೊಫೆಸರ್‌ರನ್ನು ಭೇಟಿಮಾಡಿದೆ. ಅವರ ಹೆಸರು ಇಯಂಗಾರ್‌ ಅಂತೆ. ಅವನು ಏನು ಹೇಳುತ್ತಾನೆ ತಿಳಿಯುವುದೇ ನನಗೆ ಕಷ್ಟವಾಯಿತು. ಇರಲಿ ಯಾರಮೇಲೆ ರಿಸರ್ಚ್‌ ಮಾಡಬೇಕೆಂದಿದ್ದೀಯ?

ನನ್ನ ಕಸಿವಿಸಿ ಅದುಮಿಟ್ಟು ಹೇಳಿದೆ: ಎಡ್ವರ್ಡ್‌ ಅಪ್‌ವರ್ಡ್‌. ಮತ್ತೆ ಟ್ಯೂಟರ್‌ ಕೇಳಿದ: ಯಾರು? ಮತ್ತೆ ನಾನು ಉಗುಳು ನುಂಗಿಕೊಳ್ಳುತ್ತ ಶುದ್ಧ ಗಂಟಲಿನಲ್ಲಿ ಹೇಳಿದೆ: ಎಡ್ವರ್ಡ್‌ ಅಪ್‌ವರ್ಡ್‌. ತನ್ನ ಬಿಳಿಕೂದಲಿನ ಗೋಟಿಯನ್ನು ಸವರುತ್ತ ಕರುಣೆ ತುಂಬಿದ ದನಿಯಲ್ಲಿ ಟ್ಯೂಟರ್‌ ಹೇಳಿದ: ‘ನಾನು ಯಾಕೆ ಸಾಹಿತ್ಯದ ರಿಸರ್ಚ್‌ ಬದಲು ಲಿಂಗ್ವಿಸ್ಟಿಕ್ಸ್‌ ಮತ್ತು ಫೋನೆಟಿಕ್ಸ್‌ ಮಾಡೆಂದು ನಿನ್ನಂತಹ ಬುದ್ಧಿವಂತನಿಗೆ ಹೇಳಿದೆ ಗೊತ್ತೆ? ನಿನಗೆ ‘ಎ’ ಗೂ ‘ಯೆ’ಗೂ ನಡುವಿನ ವ್ಯತ್ಯಾಸ ಗೊತ್ತಾಗುತ್ತ ಇಲ್ಲ. ಹೇಳು ‘ಎಡ್‌ ವರ್ಡ್‌’ ಎಡ್‌ ಎಡ್‌, ಯೆಡ್‌ ಯೆಡ್‌ ಅಲ್ಲ.’

ನನಗೆ ತಡೆಯದಾಯಿತು: ‘ ಸರ್‌ ನಿಮಗೆ ಅಯ್ಯಂಗಾರ್‌ ಎನ್ನಲು ಬರುವುದಿಲ್ಲ; ಈಯೆಂಗಾರ್‌ ಎನ್ನುತ್ತೀರಿ. ನಾನು ಯಾಕೆ ಯೆಡ್ವರ್ಡ್‌ ಅನ್ನಬಾರದು?. ನಿಮ್ಮ ಹಾಗೆ ನಾನು ಮೈಸೂರಿನಲ್ಲಿ ಪಾಠಮಾಡುವಾಗ ಮಾತಾಡಿದರೆ ವಿದ್ಯಾರ್ಥಿಗಳು ನನ್ನನ್ನು ಇಂಗ್ಲಿಷ್‌ ಸೋಗಿನ ಮಂಗ ಎಂದುಕೊಳ್ಳುತ್ತಾರೆ.’

ನಾನು ಬೈ ಹೇಳಿ ಸೀದ ರಿಚರ್ಡ್‌ ಹಾಗರ್ಟ್‌ ಹತ್ತಿರಹೋದೆ. ಅವನು ಅಲ್ಲಿ ಸೀನಿಯರ್‌ ಪ್ರಾಧ್ಯಾಪಕ. ಆದದ್ದನ್ನು ವಿವರಿಸಿ ‘ನಾನು ಫೋನೆಟಿಕ್ಸ್‌ ಮಾಡುವುದಿಲ್ಲ. ನನ್ನ ಕಾಮನ್‌ ವೆಲ್ತ್‌ ಸ್ಕಾಲರ್‌ ಶಿಪ್‌ ಬಿಟ್ಟುಕೊಡುತ್ತೇನೆ. ಮೈಸೂರಿಗೆ ಹಿಂದಕ್ಕೆ ಹೋಗುತ್ತೇನೆ’ ಎಂದೆ. ಹಾಗರ್ಟ್‌ ನಗುತ್ತ ಹೇಳಿದ: ನಿನ್ನ ಟ್ಯೂಟರ್‌ ಒಳ್ಳೆಯ ಮನುಷ್ಯ. ಅವನಿಗೆ ಹೇಳುತ್ತೇನೆ. ಈ ವರ್ಷದ ಕೊನೆಯಲ್ಲಿ ನಿನಗೊಂದು ಎಂ ಏ ಪರೀಕ್ಷೆ ಮಾಡುತ್ತೇವೆ. ನಿನ್ನ ಮೆಚ್ಚಿನ ಶೇಕ್ಸ ಪಿಯರ್‌ ಬಗ್ಗೆ ನಾಲ್ಕು ಪೇಪರ್‌ಗಳನ್ನು ತೆಗೆದುಕೊಂಡು ಪಾಸು ಮಾಡು. ಆಮೇಲಿಂದ ನಿನಗೆ ಪ್ರಿಯವಾದ ರಿಸರ್ಚ್‌ ಮಾಡು. ನಾನು ಕೂಡ ಮರೆತಾಗ ಸಹಜವಾಗಿ ಮಾತಾಡೋದು ಕಾರ್ಮಿಕರ ಇಂಗ್ಲಿಷ್‌. ನಿನ್ನ ಟ್ಯೂಟರ್‌ ನನಗೂ ಹೀಗೇ ಹೇಳಬಹುದಿತ್ತು’ ಎಂದು ನಕ್ಕರು.

ಎಂಎ ಗೆ ಈ ಟ್ಯೂಟರನೇ ಪರೀಕ್ಷಕನಾಗಿದ್ದ. ನಾನು ಬರೆದದ್ದನ್ನು ಓದಿ ತುಂಬ ಇಷ್ಟಪಟ್ಟು, ನನ್ನ ದುಗುಡ ದುಮ್ಮಾನದ ಮಾತಿನಿಂದ ನಾನೇ ನಾಚುವಷ್ಟು ಒಳ್ಳೆಯ ಮಾತಾಡಿ, ರಿಸರ್ಚ್‌ಗೆ ಕಳಿಸಿಕೊಟ್ಟ. ಅಪ್‌ವರ್ಡ್‌ಗೂ ನನಗೂ ರಿಸರ್ಚಿನಾಚೆಯೂ ಬಳೆದ ಸಂಬಂಧ ಬಹು ಸ್ವಾರಸ್ಯದ ನನ್ನನ್ನು ಗಾಢವಾಗಿ ಮುಟ್ಟಿ ಬೆಳೆಸಿದ ಇನ್ನೊಂದು ವೃತ್ತಾಂತ. ಪ್ರತ್ಯೇಕವಾಗಿ ಬರೆಯಬೇಕಾದ್ದು- ನನ್ನ ಕಮ್ಯುನಿಸ್ಟ್‌ ಗೆಳೆಯರಿಗಾಗಿ.

***

ಹೆಸರಿನ ಬದಲಾವಣೆ ಮಾತ್ರವಲ್ಲ : ಇನ್ನೂ ಕೆಲವು ವಿಷಯಗಳನ್ನು ಸಭೆಯಲ್ಲಿ ಧರಂಸಿಂಗ್‌ರಿಗೆ ನಾನು ನಿವೇದಿಸಿದ್ದೆ.

ಕರ್ನಾಟಕದ ಎಲ್ಲರೂ ಅಕ್ಷರಸ್ತರಾಗಬೇಕು; ಈ ವರ್ಷವೇ ಕನ್ನಡಮಾಧ್ಯಮದಲ್ಲಿ ಶಬ್ದ ಸಂಕೋಚ ತೊರೆದು ಇಂಗ್ಲಿಷನ್ನೂ ಬಳಸುವ ಒಂದು ಮೆಡಿಕಲ್‌ ಕಾಲೇಜು ಒಂದು ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಬೇಕು; ಈ ಕಾಲೇಜುಗಳಿಗೆ ಕನ್ನಡ ಓದಲು ಬರೆಯಲು ಕಲಿತು ಬರುವ ಯಾರಿಗಾದರೂ ಪ್ರವೇಶವಿರಬೇಕು; ಎಲ್ಲ ಮಕ್ಕಳಿಗೂ ಸಾಮಾನ್ಯ ಶಾಲೆಗಳಲ್ಲಿ ಉಚಿತ ಸಮಾನ ಶಿಕ್ಷಣ ದೊರೆಯಬೇಕು. ಎಲ್ಲರಿಗೂ ಇಂಗ್ಲಿಷ್‌ ಮಾತಾಡಲು ಸಾಧ್ಯವಾಗುವಂತೆ ಮಾಡಿ ಇಂಗ್ಲಿಷನ್ನು ನಮಗೆ ಬೇಕಾದಂತೆ ಪಳಗಿಸಿಕೊಂಡು ಅದರ ಭ್ರಮೆ ಕಳೆಯುವಂತೆ ಮಾಡಬೇಕು. ಧರಂ ಸಿಂಗ್‌ ಒಪ್ಪಿಕೊಂಡಿದ್ದರು. ಈ ಸುವರ್ಣ ಕರ್ನಾಟಕದ ವರ್ಷದಲ್ಲಿ ಈಗಿನ ಮುಖ್ಯಮಂತ್ರಿಗಳೂ ಮೇಲಿನ ಎಲ್ಲವನ್ನೂ ಒಪ್ಪಿಕೊಂಡಾರೆಂಬ ಭರವಸೆ ಇಟ್ಟುಕೊಳ್ಳೋಣವೆ?

ಜಾಗತೀಕರಣದ ಅಧ್ವರ್ಯುಗಳು ಒಂದು ಹೆಸರಿನ ಬದಲಾವಣೆಯಿಂದಲೇ ಇಷ್ಟು ಬೆಚ್ಚುತ್ತಾರೆ- ಅಲ್ಲವೆ?ರೈತರ ಆತ್ಮಹತ್ಯೆಗೂ, ಸುನಾಮಿಗೂ ಸಂಬಂಧವಿರುವ ಸೆನ್ಸೆಕ್ಸ್‌ ಬೆಂಗಳೂರು ಬೆಂಗಳೂರೇ ಆಗಿಬಿಟ್ಟರೆ ಇಳಿಯಬಹುದೆನ್ನುವ ಭಯ ನಮ್ಮ ಐಟಿಗಳಿಗೆ ಇರಬಹುದೆ?

ಹೆಸರಿನ ಬದಲಾವಣೆ ಒಂದು ಸಂಪೂರ್ಣ ಕನ್ನಡೀಕರಣದ, ಅಂದರೆ ನಾವು ಕನ್ನಡಿಗರಾಗಿದ್ದೇ ಜಗತ್ತಿಗೆ ಸಲ್ಲುವರಾಗುವ ದಿಕ್ಕಿನತ್ತ ಇಟ್ಟ ಸಾಂಕೇತಿಕ ಕ್ರಿಯೆಯಾಗಲಿ, ಕೇವಲ ಪ್ರಚಾರ ಪಡೆದು ಮರೆತ ಸಂಕೇತವಾಗಿ ಉಳಿಯದಿರಲಿ ಎಂದು ಆಶಿಸುತ್ತೇನೆ, ವರ್ಡ್‌ಸ್ವರ್ತ್‌ ಕವಿಯಲ್ಲಿ ಓದಿದ ಡಾಫಡಿಲ್ಸ್‌ ಎಂಬ ಹೂವು ಗಾಳಿಗೆ ಓಲಾಡುವುದನ್ನು ಕಣ್ಣಾರೆ ನೋಡಲೆಂದೂ ಇಂಗ್ಲೆಂಡಿಗೆ ಹೋಗಿದ್ದ ನನಗೊಂದು ಆಸೆಯಿದೆ;

ಬೆಂಗಳೂರಿಗೆ ಬರುವ ಎಲ್ಲ ಹೊರಗಿನವರೂ ಮೈಸೂರು ಮಲ್ಲಿಗೆಗೂ, ಉಡುಪಿಯ ವಾದಿರಾಜ ಗುಳ್ಳಕ್ಕೂ, ನಂಜನಗೂಡಿನ ರಸಬಾಳೆಗೂ, ಅಲ್ಲಮ ಬಸವರ ವಚನಗಳಿಗೂ ಆಸೆ ಪಡುವವರಾಗಬೇಕು. ಜಾಯ್ಸ್ನಲ್ಲಿ ಅವನ ಹೀರೋ ಡೆಡಲಾಸ್‌ನ ಅಲೆದಾಟವನ್ನು ಮೆಚ್ಚಿದವರು ಕುವೆಂಪುವಿನ ನಾಯಿಗುತ್ತಿ ಅಲೆದು ಕಾಣುವ ದಟ್ಟ ದಲಿತ ಪ್ರಪಂಚವನ್ನೂ ಕಾಣುವಂತವರಾಗಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X