• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಯಾಕೆ ಎನ್ನುವ ಬ್ಯಾಂಗ್‌ಲೂರಿಗರ ಗಮನಕ್ಕೆ...

By Staff
|

(‘ನಾವ್ಯಾಕೆ ಕನ್ನಡ ಕಲೀಬೇಕು? ಬ್ಯಾಂಗ್‌ಲೂರ್‌ ಹೆಸರು ಯಾಕೆ ಬದಲಾಗಬೇಕು? ಜಾಸ್ತಿ ಮಾತಾಡಿದರೆ ಜಾಗ ಖಾಲಿ ಮಾಡ್ತೀವಿ? ನಾವ್‌ ಬ್ಯಾಂಗ್‌ಲೂರ್‌ ಅಂದ್ರೆ ನಿಮಗೇನ್ರೀ ಕಷ್ಟ? ಅಂದ ಹಾಗೆ; ಬೆಂಗಳೂರು ನಾಮಕರಣಕ್ಕೆ ಒತ್ತಾಯಿಸಿದವರ್ಯಾರು? ’ -ಇಂತಹ ಪ್ರಶ್ನೆಗಳಿಗೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ ಅವರು ಉತ್ತರರೂಪದಲ್ಲಿ ತಮ್ಮ ವಿಚಾರಗಳನ್ನು ದಟ್ಸ್‌ಕನ್ನಡದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು -ಸಂಪಾದಕ)

Who on earth I was to suggest change of name Bangalore to Bangalooru ?‘ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗಿಬಿಡು’ ಎಂಬ ಒಂದು ವ್ಯಂಗ್ಯದ ಮಾತಿದೆ. ನಾನೀಗ ಆಗಿಬಿಟ್ಟಿದ್ದೇನೆ. ಏನನ್ನೂ ಹರಿಯದೆ. ಏನನ್ನೂ ಕೆಡವದೆ. ಏನನ್ನೂ ಬರೆಯದೆ. ಲಂಡನ್ನಿನಿಂದ ಬಿಬಿಸಿ ಯವರು ಮೂರು ಬಾರಿ ಕರೆದು ವಿಚಾರಿಸಿಕೊಂಡರು. ಯುಎಸ್‌ಎ ಟುಡೆ ಕರೆದು ಅರ್ಧಗಂಟೆ ಕಾಲ ಮಾತಾಡಿಸಿದರು. ನ್ಯೂಯಾರ್ಕ್‌ ಟೈಂಸ್‌ರವರು ಇಲ್ಲಿಯೇ ಇರುವ ಪತ್ರಕರ್ತರೊಬ್ಬರಿಂದ ಬೇಕಾದ ಮಾಹಿತಿ ಪಡೆದರು. ಇನ್ನು ಉಳಿದ ನಮ್ಮವರೇ ಬಿಡಿ: ಎನ್ಡಿಟಿವಿ, ಟೈಮ್ಸ್‌ ನಾನಿದ್ದಲ್ಲೇ ಬಂದು, ತಮ್ಮಲ್ಲಿಗೂ ಕರೆಸಿಕೊಂಡು ಮಾತಾಡಿಸಿದರು. ಹಾಸ್ಯದಲ್ಲಿ ನಾನೀಗ ಮಾತಾಡುತ್ತಿದ್ದರೂ ನಿಮಗೆ ಕೊಚ್ಚಿಕೊಂಡಂತೆ ಕಂಡೀತೆಂದು ಉಳಿದ ವಿವರಗಳನ್ನು ಬಿಟ್ಟಿದ್ದೇನೆ.

ಕಾರಣ ಇಷ್ಟೆ: ಬೆಂಗಳೂರನ್ನು ಬೆಂಗಳೂರು ಎಂದು ಕರೆಯುವಂತೆ, ಬ್ಯಾಂಗಲೂರ್‌ ಎನ್ನದಂತೆ, ಒತ್ತಾಯಿಸಿದ್ದು ನೀವಂತೆ ಹೌದೆ? ಎನ್ನುವುದರಿಂದ ಶುರುವಾಗುವ ಪ್ರಶ್ನೆಯ ಮುಂದಿನ ಪ್ರಶ್ನೆಯನ್ನು ನಾನೇ ಊಹಿಸಿ ಮುಂದಾಗಿ ಉತ್ತರಿಸುತ್ತಿದ್ದೆ.

‘ನಿಜವೇ ಬೆಂಗಳೂರು ಎಂದು ಬೆಂಗಳೂರನ್ನು ಕರೆದಾಕ್ಷಣ ’ ಇನ್‌ ಫ್ರಾಸ್ಟ್ರಕ್ಷರ್‌ ಡೆವಲೆಪ್‌ಮೆಂಟ್‌ ಆದಂತೇನೂ ಅಲ್ಲ’ ಇತ್ಯಾದಿ. ಬ್ಯಾಂಗಲೂರ್‌ ಇಡೀ ಜಗತ್ತಿನಲ್ಲಿ ಬ್ರಾಂಡ್‌ ಆಗಿರುವಾಗ ಏಕಿದನ್ನು ನಿಮ್ಮ ಸರ್ಕಾರ ಬದಲುಮಾಡಿ ಬ್ರಾಂಡ್‌ನಿಂದಾಗಿ ಒದಗುವ ಎಲ್ಲ ಐಶ್ವರ್ಯವನ್ನು ಕಳೆದುಕೊಳ್ಳಬೇಕು? ನಿಜವೇ, ಆದರೆ ನೋಡಿ ಮಿಸ್ಟರ್‌, ನಮ್ಮ ಹವಾದಿಂದಾಗಿ ಬ್ಯಾಂಗಲೂರ್‌ ಬ್ರಾಂಡ್‌ ಆಯಿತು; ಬ್ರಾಂಡ್‌ ಆದದ್ದರಿಂದ ಹವಾ ಕೆಟ್ಟಿತು. ಎಲ್ಲೆಲ್ಲೂ ಕಾರುಗಳಾಗಿ ಈಗ ಹೊಗೆಯೋ ಹೊಗೆ. ಮೂಗು ಮುಚ್ಚಿಕೊಂಡು ಓಡಾಡುವಂತೆಯೂ ಇಲ್ಲ. ಅಷ್ಟು ಜನ.

ಬೆಂಗಳೂರಿನವರೇ ಆದ ಒಬ್ಬರು ತಪ್ಪುತಪ್ಪು ಇಂಗ್ಲಿಷಿನಲ್ಲಿ ನನಗೆ ಬೈದು ಎರಡು ಕಾಗದ ಬರೆದಿದ್ದಾರೆ. ಯಾಕ್ರೀ ನಾನು ಕನ್ನಡ ಕಲೀಬೇಕು. ನಿಮ್ಮ ಐವತ್ತು ಮಿಲಿಯನ್‌ ಜನರ ಒಪ್ಪಿಗೆ ಪಡೆದು ಮಾಡಿರೋ ಬದಲಾವಣೆಯೇನ್ರಿ ಇದು? ಅವರು ಏನೇ ಕರೆದರೂ ನಾವು ಕೆಲವರು ಯಾಕೆ ಬ್ಯಾಂಗಲೂರ್‌ ಅಂತ ಕರೀಬಾರದು? ಗೆಳೆಯ ಆಶೀಶ್‌ ನಂದಿಯವರೂ, ಗೆಳೆಯರೂ ಹಿರಿಯರೂ ಆದ ಶಾರದಾಪ್ರಸಾದರೂ ಈ ಮನುಷ್ಯನಂತೆ ಕುಪಿತರಾಗದೆ ಅದೇ ವಾದ ಮಾಡುತ್ತಾರೆ: ‘ಇರುವುದು ಒಂದೇ ಸಿಟಿಯಲ್ಲ; ಇನ್ನೊಂದು ಸಿಟಿಯೂ ಇದೆ. ಬೆಂಗಳೂರೂ ಇರಲಿ, ಬ್ಯಾಂಗಲೂರ್‌ ಕೂಡ ಇರಲಿ’. ನನ್ನ ಉದಾರವಾದೀ ಮನಸ್ಸಿಗೆ ಈ ವಾದ ಹಿಡಿಸುತ್ತದೆ.

ಸಂಕೋಚದಿಂದಲೇ ಅವರಿಗೆ ಹೇಳಲು ಪ್ರಯತ್ನಪಡುತ್ತೇನೆ:

‘ನೋಡಿ, ಬ್ಯಾಂಗಲೂರ್‌ಗೆ ಇನ್ನೊಂದು ಬೆಂಗಳೂರು ಇದೆ ಎಂದು ಗೊತ್ತೇ ಇಲ್ಲ. ರಾಜಕುಮಾರ್‌ ಅಪಹರಣವಾದಾಗ, ತೀರಿಕೊಂಡಾಗ ಅವರ ಕಾರುಗಳ ಮೇಲೆ ಜನ ಕಲ್ಲು ತೂರಿದಾಗ, ಬಸ್ಸು ಸುಟ್ಟಾಗ ಬೆಂಗಳೂರು ಕೂಡ ಇರುವುದು ಗೊತ್ತಾಗುತ್ತದೆ. ಆದರೆ ಅದೊಂದು ಕ್ಷಣ ಮಾತ್ರ.

ಹಿಂದೆ ಬಂದವರೆಲ್ಲ ಕನ್ನಡವನ್ನು ಮಾತಾಡಲಾದರೂ ಕಲಿಯುತ್ತ ಇದ್ದರು. ಮಾಸ್ತಿ , ಪುತಿನರಂತಹ ತಮಿಳು ಮಾತಾಡುವವರು ಕನ್ನಡದ ಶ್ರೇಷ್ಠ ಲೇಖಕರಾದರು. ಈಗಿನವರ ಹೆಂಡಂದಿರು ಕೂಡ ಕನ್ನಡ ಕಲಿಯಬೇಕಾಗಿಲ್ಲ. ತರಕಾರಿಯವನ ಹತ್ತಿರ ಅವರು ಚೌಕಾಸಿ ಮಾಡಬೇಕಾಗಿಲ್ಲ. ಫುಡ್‌ ಮಾಲ್ಗಳು, ಫುಡ್‌ ವರ್ಲ್ಡ್‌ ಗಳು ಎಲ್ಲೆಲ್ಲೂ ಇವೆ. ಚೌಕಾಸಿ ಮಾಡಬಲ್ಲ, ಹರಟೆಹೊಡೆದು ಕಾಲಕಳೆಯಬಲ್ಲ ಸಣ್ಣ ಪುಟ್ಟ ಅಂಗಡಿಗಳೆಲ್ಲವೂ ಮುಚ್ಚಿ ಹೋಗಲಿವೆ. ತಾವಿರುವ ಜಾಗ ತಮ್ಮದೇ ಆದರೆ, ಅದನ್ನು ಮಾರಿಕೊಂಡರೆ ಅವರು ಕೆಲಸವಿಲ್ಲದ ಕೋಟ್ಯಾಧಿಪತಿಗಳಾಗುತ್ತಾರೆ. ಬಾಡಿಗೆಗೆ ಹಿಡಿದವರಾದರೆ ದೆಸೆ ದಿಕ್ಕಿಲ್ಲದ ಬಡಪಾಯಿಗಳಾಗುತ್ತಾರೆ.

ಈಗ ಇಂಗ್ಲಿಷಿನಲ್ಲೇ ಎಲ್ಲ ಹೆಂಗಸರು ಬ್ರಿಂಜಾಲ್‌, ಲೇಡೀಸ್‌ ಫಿಂಗರ್‌ ಬನಾನಾ ಕೊಳ್ಳಬಹುದು. ಇನ್ನು ಅವರ ಮಕ್ಕಳಿಗಂತೂ ಇಲ್ಲಿನ ಮಕ್ಕಳ ಸಂಸರ್ಗವೇ ಇಲ್ಲ. ಅವರು ಹೋಗುವ ಸ್ಕೂಲೇ ಬೇರೆ, ಕನ್ನಡದ ಮಕ್ಕಳು ಹೋಗುವ ಸ್ಕೂಲೇ ಬೇರೆ. ಪ್ಲೀಸ್‌, ಇನ್ನೊಂದು ಮಾತು. ಕನ್ನಡದ ಮಕ್ಕಳು ಎಂದರೆ ಬಡವರ ಮಕ್ಕಳು ಎಂದು ಅರ್ಥ ಮಾಡಿಕೊಳ್ಳಬೇಕು. ಕನ್ನಡದವರ ಮಕ್ಕಳು ಎಂದುಕೊಳ್ಳಕೂಡದು. ಯಾಕೆಂದರೆ ಇವರ ಮಕ್ಕಳೂ ಕನ್ನಡ ಮಾತಾಡಬೇಕಾಗಿಲ್ಲ. ವರ್ಷಕ್ಕೆ ಒಂದು ಲಕ್ಷ ಫೀಸ್‌ ಕೊಟ್ಟು ಒಂದು ಒಂದೂವರೆ ಗಂಟೆ ಪ್ರಯಾಣಮಾಡಿ ಕನ್ನಡದ ಮಕ್ಕಳ ಸ್ಪರ್ಷವಾಗದಂತೆ, ಹೆಣ್ಣು ಮಕ್ಕಳ ತಲೆಯಲ್ಲಿ ಬಡವರ ಮಕ್ಕಳ ಹೇನು ಸೇರದಂತೆ ಇವರು ಬದುಕುತ್ತಾರೆ. ಇದು ಬ್ಯಾಂಗಲೂರ್‌.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more