ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನ : ಚಂಪಾ ಮೇಲೆ ಹರಿಹಾಯ್ದ ಕುಮಾರ್‌

By Staff
|
Google Oneindia Kannada News

ಬೆಂಗಳೂರು : ಶಿವಮೊಗ್ಗ ಸಾಹಿತ್ಯ ಸಮ್ಮೇಳನ ಆಹ್ವಾನ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಂದ್ರಶೇಖರ ಪಾಟೀಲ್‌ ಮೇಲೆ ಹರಿಹಾಯ್ದಿದ್ದಾರೆ.

ಸೋಮವಾರ ತರಾತುರಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಕಸಾಪ ಅಧ್ಯಕ್ಷ ಚಂಪಾ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ಬರಬೇಕೆಂದು ಆಹ್ವಾನಿಸಿದರು. ಆಗ ಕುಪಿತರಾದ ಕುಮಾರಸ್ವಾಮಿ ನೀವು ನನಗೆ ಗೌರವ ಕೊಡದಿದ್ದರೂ ಪರವಾಯಿಲ್ಲ. ಸಿಎಂ ಸ್ಥಾನಕ್ಕಾದರೂ ಗೌರವ ನೀಡಬೇಕಿತ್ತು. ಕೊನೇ ಕ್ಷಣದಲ್ಲಿ ಏಕೆ ಬಂದಿದ್ದೀರಿ? ಹೋಗಿ ನೀವೇ ಮಾಡಿಕೊಳ್ಳಿ ಎಂದು ಗದರಿದರು.

ಈ ಕುರಿತು ಸಮಜಾಯಿಷಿ ನೀಡಲು ಚಂಪಾ ಯತ್ನಿಸಿದರಾದರೂ ಕುಮಾರಸ್ವಾಮಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಮೇಜಿನ ಮುಂದೆ ನಿಂತಿದ್ದ ಚಂಪಾ ಅವರನ್ನು ಕುಮಾರಸ್ವಾಮಿ ಕುಳಿತುಕೊಳ್ಳಿ ಎಂದೂ ಹೇಳಲಿಲ್ಲ. ಹಾಗಾಗಿ ಚಂಪಾ ಪೆಚ್ಚುನೋರೆ ಹಾಕಿಕೊಂಡು ಹೋಗಬೇಕಾಯಿತು ಎಂದು ಮೂಲಗಳು ಹೇಳಿವೆ.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿಯಾದ ನಾನು ಆಹ್ವಾನ ಪತ್ರಿಕೆ ಇಲ್ಲದೆ ಸಮ್ಮೇಳನಕ್ಕೆ ಹೋಗುವುದು ಹೇಗೆ? ಹಾಗಾಗಿ ಏನು ಮಾಡಬೇಕೆಂಬುದನ್ನು ತೀರ್ಮಾನಿಸುತ್ತೇನೆ. ಮುಖ್ಯಮಂತ್ರಿ ಸ್ಥಾನಕ್ಕಿರುವ ಘನತೆ, ಗೌರವ ಉಳಿಸಿ ಶಿಷ್ಟಾಚಾರ ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಯಡಿಯೂರಪ್ಪ ಕ್ಷಮೆಯಾಚನೆ : ಪ್ರಮುಖ ಸಾಹಿತಿಗಳನ್ನು ಗೌರವಪೂರ್ವಕವಾಗಿ ಆಹ್ವಾನಿಸದ ಬಗ್ಗೆ ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕ್ಷಮೆಯಾಚಿಸಿದ್ದಾರೆ.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈಗ ಆಗಿರುವ ಲೋಪಕ್ಕೆ ಕ್ಷಮೆಯಾಚಿಸುತ್ತೇನೆ. ಕೈಮುಗಿದು ಕೇಳಿಕೊಳ್ಳುತ್ತೇನೆ. ನೀವೆಲ್ಲರೂ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ ಎಂದು ವಿನಂತಿಸಿಕೊಂಡರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X