ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹೊರಗೂ ಮಳೆ ಒಳಗೂ ಮಳೆ’ ಕಥಾಗುಚ್ಛ ಲೋಕಾರ್ಪಣೆ

By Staff
|
Google Oneindia Kannada News

Raghunath Ch. Ha.ಬೆಂಗಳೂರು : ಪ್ರತಿಭಾವಂತ ಯುವ ಕಥೆಗಾರ ರಘುನಾಥ.ಚ.ಹ. ಅವರ ಕಥಾಸಂಕಲನ ‘ಹೊರಗೂ ಮಳೆ ಒಳಗೂ ಮಳೆ’ ಭಾನುವಾರ ಲೋಕಾರ್ಪಣಗೊಂಡಿತು.

ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹಿರಿಯ ಕಥೆಗಾರ, ಕಾದಂಬರಿಕಾರ ರಾಘವೇಂದ್ರ ಪಾಟೀಲ ಸಂಕಲನ ಲೋಕಾರ್ಪಣಗೊಳಿಸಿದರು. ಆನಂತರ ಮಾತನಾಡಿ ಅವರು, ‘ರಘುನಾಥರ ಕಥೆಗಳು ಗ್ರಾಮೀಣ ಬದುಕಿನ ಸೂಕ್ಷ್ಮ ಸಂವೇದನೆಗಳನ್ನು ಮೈಗೂಡಿಸಿಕೊಂಡಿವೆ. ಅಲ್ಲದೆ ನಗರ ಜೀವನದ ದ್ವಂದ್ವಗಳಿಗೂ ದನಿಯಾಗಿವೆ. ಅವರ ಕಥೆಗಳಿಗೆ ಭಾವಗೀತಾತ್ಮಕತೆ ಪ್ರಾಪ್ತವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ‘ಕಥೆಗಳ ಕಥೆಗಳು’ ಎಂಬ ಸಂವಾದ ಕಾರ್ಯಕ್ರಮವೂ ನಡೆಯಿತು. ಸಹೃದಯರು ಹಾಗೂ ಕಥೆಗಾರರಾದ ಎಸ್‌.ದಿವಾಕರ್‌, ಅಶೋಕ ಹೆಗಡೆ, ವಿವೇಕ ಶಾನಭಾಗ, ಆನಂದ ಋಗ್ವೇದಿ, ಮಂಜುನಾಥ್‌ ಗೀತಾ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಥೆಗಾರ ರಘುನಾಥ ತಮ್ಮ ಸೃಜನಶೀಲತೆಯ ಮೂಲಪ್ರೇರಣೆಯಾಗಿದ್ದ ಗತಿಸಿಹೋದ ತಮ್ಮ ತಂದೆಯವರನ್ನು ನೆನಪಿಸಿಕೊಂಡರು.

ದಟ್ಸ್‌ಕನ್ನಡ ಅಂತರ್ಜಾಲ ತಾಣದ ಸಂಪಾದಕ ಎಸ್‌.ಕೆ.ಶ್ಯಾಮಸುಂದರ ಮಾತನಾಡಿ, ‘ಪ್ರತಿಯಾಬ್ಬರ ಬದುಕಿನಲ್ಲೂ ಒಂದು ಗೀತೆ, ಒಂದು ಕಥೆ ಇದ್ದೇ ಇರುತ್ತದೆ. ಇದನ್ನು ವಿರೋಧಿಸುವವರ್ಯಾರು?’ ಎಂದು ಕೇಳುತ್ತಾ, ಸಾಹಿತ್ಯ ಪ್ರೀತಿ ಹಾಗೂ ಬದುಕಿನ ಪ್ರೀತಿಯ ಐಕ್ಯತೆಯನ್ನು ವ್ಯಾಖ್ಯಾನಿಸಿದರು.

ಪತ್ರಕರ್ತ ಜಯಪ್ರಕಾಶ ನಾರಾಯಣ ಸ್ವಾಗತಿಸಿದರು. ಸಂಚಯ ಸಾಹಿತ್ಯಕ ಪತ್ರಿಕೆಯ ಸಂಪಾದಕ ಡಿ.ವಿ.ಪ್ರಹ್ಲಾದ ನಿರೂಪಿಸಿ, ವಂದಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X