ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟಿಬ್ಯಾಂಕ್‌ನವರಿಗೆ ಕನ್ನಡ ಬೇಡವಂತೆ!

By Super
|
Google Oneindia Kannada News

ನಮ್ಮ ನೆಲದಲ್ಲಿ ತಲೆಎತ್ತಿದ ಸಿಟಿಬ್ಯಾಂಕ್‌ನಂಥ ಅನೇಕ ಬ್ಯಾಂಕ್‌ಗಳು ಕನ್ನಡಿಗರನ್ನು ಅವಮಾನಿಸುತ್ತಲೇ ಇವೆ. ಅವರಿಗೆ ನಮ್ಮ ವ್ಯಾಪಾರ ಬೇಕು, ನಮ್ಮ ಹಣ ಬೇಕು, ನಮ್ಮ ನೆಲ ಬೇಕು, ನಮ್ಮ ಗಾಳಿ ಬೇಕು, ಆದರೆ ಭಾಷೆ ಮಾತ್ರ ಬೇಡ. ಕೇಳಿ ನನ್ನದೊಂದು ಕಹಿ ಅನುಭವ...

ಕರ್ನಾಟಕದ ಅಧಿಕೃತ ಭಾಷೆ ಕನ್ನಡ. ನಮ್ಮ ಸಂವಿಧಾನದ ಭಾಷಾಸೂತ್ರದ ನಿಲುವಿನಂತೆ ದೇಶೀಯ ಭಾಷೆಗಳಲ್ಲೇ ಆಡಳಿತ-ವ್ಯವಹಾರ ನಡೆಸಬೇಕೆಂಬುದರ ಅದೇಶದಂತೆ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಿ ಎನ್ನುವುದು ನಿರ್ವಿವಾದವಾದದ್ದು. ಹಾಗಾಗಿ ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸಂಸ್ಥೆಗಳು, ಬ್ಯಾಂಕುಗಳು, ವಿಮಾ ಕಂಪನಿಗಳು, ನಿಗಮ ಮಂಡಳಿಗಳು, ಖಾಸಗಿ ವ್ಯವಹಾರಸ್ಥರು, ಇನ್ಯಾವುದೇ ರೀತಿಯ ಉದ್ಯಮ ಸ್ಥಾಪಿಸಿರುವವರು ಸಾರ್ವಜನಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕಾಗಿರುವುದು, ಇಲ್ಲಿನ ಸಂಸ್ಕೃತಿ, ಭಾಷೆ ಮತ್ತು ಭಾವನೆಗಳಿಗೆ ಮನ್ನಣೆ ನೀಡುವುದು ಅವರ ಮೂಲಧರ್ಮವಾಗಿರಬೇಕು. ಈ ಸಾಮಾನ್ಯ ತಿಳುವಳಿಕೆ ಮತ್ತು ಹೊಣೆಗಾರಿಕೆ ಅವರಲ್ಲಿ ಸಹಜವಾಗಿ ಜಾಗೃತವಾಗಿರಬೇಕು.

ಆದರೆ ಬೆಂಗಳೂರಿನಲ್ಲಿ ಕನ್ನಡ ಹೇಗೆ ಕಡೆಗಣಿಸಲ್ಪಟ್ಟಿದೆ ಎಂಬ ಹಲವಾರು ನಿದರ್ಶನಗಳ ಪಟ್ಟಿಗೆ ನೋಡಿ ಮತ್ತೊಂದು ಸೇರ್ಪಡೆ! ಭಾರತದ ಪ್ರತಿಷ್ಠಿತ ಬ್ಯಾಂಕ್‌ನ ನನ್ನ ಖಾತೆಯಲ್ಲಿ ಉಂಟಾದ ನ್ಯೂನತೆಯನ್ನು ಸರಿಪಡಿಸಲು ಕನ್ನಡದಲ್ಲಿ ವ್ಯವಹರಿಸಲು ಹೇಗೆ ತಿಣುಕಾಡಿ ವಿಫಲನಾದೆ ಎಂದು ವಿಷಾದದಿಂದ ತಿಳಿಸುತ್ತಿದ್ದೇನೆ.

ಬ್ಯಾಂಕ್‌ನ ಬೆಂಗಳೂರಿನ ಕರೆ ಕೇಂದ್ರದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕನ್ನಡದಲ್ಲಿ ವ್ಯವಹರಿಸಲು ಬಯಸಿದ ನನಗೆ ಮೊದಲಿಗೆ ಅಲ್ಲಿ ದೊರೆತದ್ದು ಕೇವಲ 'ಇಂಗ್ಲೀಷ್‌ ಅಥವ ಹಿಂದಿ’ ಭಾಷೆಯಲ್ಲಿನ ಸಹಾಯವಾಣಿ. ಕನ್ನಡದಲ್ಲಿ ವ್ಯವಹರಿಸಬಯಸಲು ನಾನು ನೇರವಾಗಿ ಸಹಾಯವಾಣಿ ಅಧಿಕಾರಿಗೆ ಮನವಿ ಸಲ್ಲಿಸಿದಾಗ ಅವರು ಕನ್ನಡವೊಂದನ್ನು ಬಿಟ್ಟು ಇತರ ಭಾಷೆಗಳಲ್ಲಿ 'ಹಿಂದಿ, ತಮಿಳು, ತೆಲುಗು, ಮಲಯಾಳಿ’ ಸಹಾಯದ ಬಗ್ಗೆ ಅಭಯ ನೀಡಿದರು.

ಕನ್ನಡದ ಅಧಿಕಾರಿಯೇ ಬೇಕೆಂದು ನಾನು ಪಟ್ಟು ಹಿಡಿದಾಗ ದೊರೆತ ಹಾರಿಕೆ ಉತ್ತರ 'ಕನ್ನಡ ಮಾತನಾಡುವ ಅಧಿಕಾರಿ ಕಾರ್ಯನಿರತರಾಗಿದ್ದಾರೆ ನಂತರ ಕರೆ ಮಾಡಿ’. ನಂತರದಲ್ಲಿ ಎರಡು ದಿನ ಸತತವಾಗಿ ಹಲವಾರು ಕರೆ ಮಾಡಿದ ನಂತರ ದೊರೆತದ್ದು ಹರುಕು-ಮುರುಕು ಕನ್ನಡ ಮಾತನಾಡುವ ಅಧಿಕಾರಿಯ ಸಹಾಯ.

ಬೆಂಗಳೂರು-ಕರ್ನಾಟಕದ ಸಾಮಾನ್ಯ ಕನ್ನಡ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್‌ನಲ್ಲಿ ಕನ್ನಡದ ಸಹಾಯ ವಾಣಿ, ಕನ್ನಡ ಅಧಿಕಾರಿಗಳ ನೇಮಕ, ಕನ್ನಡಕ್ಕೆ ಪ್ರಾಶಸ್ತ್ಯ ನೀಡಿ ಎಂದು ಕನ್ನಡದಲ್ಲಿ ಬರೆದ ಮನವಿ ಪತ್ರವನ್ನು ಇ-ಮೇಲ್‌, ಫ್ಯಾಕ್ಸ್‌ ಮತ್ತು ಅಂಚೆ ಮೂಲಕ ಬ್ಯಾಂಕ್‌ನ ಮುಖ್ಯಾಧಿಕಾರಿಗೆ ಕಳುಹಿಸಿದಾಗ, ನನಗೆ , ಸಮಸ್ತ ಕನ್ನಡಿಗರಿಗೆ ಹಾಗು ಇತರ ಹಿಂದಿಯೇತರ ಭಾಷಿಕರಿಗೂ ಮುಖಭಂಗವಾಗುವಂತಹ ಉತ್ತರವನ್ನು ಬ್ಯಾಂಕ್‌ನ ಚೆನ್ನೈನ ಕೇಂದ್ರ ಕಚೇರಿಯಿಂದ ರವಾನಿಸಿದ್ದಾರೆ! ಬ್ಯಾಂಕ್‌ನ ಚೆನ್ನೈ ಕೇಂದ್ರ ಕಛೇರಿಯಿಂದ ಸ್ವೀಕರಿಸಿದ ಪತ್ರದ ನಕಲನ್ನು ತಮ್ಮ ಉಲ್ಲೇಖಕ್ಕಾಗಿ ಇಲ್ಲಿ ಲಗತ್ತಿಸಿದ್ದೇನೆ. ಬೆಂಗಳೂರಿನ ಕರೆ ಕೇಂದ್ರದ ದೂರವಾಣಿ ಸಂಖ್ಯೆ 22272484 / 22294653.

ಸುಮಾರು 15 ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆ ಬ್ಯಾಂಕ್‌, ನಾನು ಕನ್ನಡದಲ್ಲಿ ಮನವಿ ಸಲ್ಲಿಸಿದ್ದೇ ತಪ್ಪು, ಅದು ಅವರಿಗೆ ಅರ್ಥವಾಗದ, ವ್ಯವಹರಿಸಲು ಶಕ್ಯವಲ್ಲದ ಪ್ರಾದೇಶಿಕ ಭಾಷೆ ಎಂಬ ವ್ಯಾಖ್ಯಾನ ಬರುವಂತೆ ಉತ್ತರಿಸುತ್ತ ಮುಂದಿನ ಯಾವುದೇ ಅಹವಾಲುಗಳನ್ನು ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಮಾತ್ರ ಮಾಡಿ ಎಂಬ ಉದ್ಧಟತನದ ಅದೇಶ ನೀಡಿದ್ದಾರೆ.

ಇಂತಹ ಅಭಾಸಗಳು ಕೇವಲ ಕರ್ನಾಟಕ-ಬೆಂಗಳೂರಿನಲ್ಲಿ ಮಾತ್ರ ಕೇಳಲು/ಕಾಣಲು ಸಾಧ್ಯ. ಪ್ರಾದೇಶಿಕ ಭಾಷೆ ಅರ್ಥಮಾಡಿಕೊಳ್ಳದ, ಸಾಮಾನ್ಯ ಗ್ರಾಹಕನಿಗೆ ಅವನ ಪ್ರಾದೇಶಿಕ ಭಾಷೆಯಲ್ಲಿ ಉತ್ತರ ನೀಡದ ಪ್ರಸಂಗ ಭಾರತದ ಇನ್ಯಾವುದೇ ಭಾಗಗಳಲ್ಲಿ ನಡೆದಿದ್ದರೂ ಅಂತಹ ಸಂಸ್ಥೆಗಳಿಗೆ ಬೀಗ ಜಡಿದು ಅಲ್ಲಿಂದ ಗಡಿಪಾರು ಮಾಡಿಸುವ ಕಾರ್ಯ ಕೂಡಲೇ ನೆರವೇರಿರುತ್ತಿತ್ತು.

ಈ ತೆರನಾದ ಕನ್ನಡದ ಬಗೆಗಿನ ನಿರ್ಲಕ್ಷ್ಯ, ನಮ್ಮನ್ನು ನಮ್ಮ ನೆಲದಲ್ಲೇ ಮೂಲೆ ಗುಂಪಾಗಿಸಿವ ಈ ಪರಿಯನ್ನು ಕರ್ನಾಟಕದಲ್ಲಿ ತೆರೆಯಲ್ಪಟ್ಟಿರುವ ಯಾವುದೇ ಖಾಸಗಿ ಬ್ಯಾಂಕುಗಳಲ್ಲಿ ಇಲ್ಲವೇ ಇತರೇ ಖಾಸಗಿ ವ್ಯವಹಾರ ಸಂಸ್ಥೆಗಳಲ್ಲಿ . ಐಸಿಐಸಿಐ, ಯುಟಿಐ, ಸಿಟಿ ಬ್ಯಾಂಕ್‌, ಎಚ್‌ಎಸ್‌ಬಿಸಿ, ಸ್ಟಾಂಡರ್ಡ್‌ ಚಾರ್ಟರ್ಡ್‌, ಎಚ್‌ಡಿಎಫ್‌ಸಿ, ಅಮೆರಿಕನ್‌ ಎಕ್ಸ್‌ಪ್ರೆಸ್‌, ಡಾಯಿಟ್ಸ್‌ ಬ್ಯಾಂಕ್‌‰‰ ಇತ್ಯಾದಿ ಇಂದು ನಾವು ಕಾಣಬಹುದಾಗಿದೆ.

ಕನ್ನಡ ಮಾತ್ರ ಬಲ್ಲ ಮಾನ್ಯ ಮುಖ್ಯಮಂತ್ರಿಗಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೆ, ಬ್ಯಾಂಕ್‌ನ ಬದ್ಧತೆ ಸಂಕೇತ ಅರಿತಿರುವ ಹಿರಿಯರೆ, ಅಧಿಕಾರಿಗಳೆ ಮತ್ತು ಕನ್ನಡ ರಕ್ಷಣೆಯ ನಾಯಕರೇ ನಾವು ಈ ಸಂದರ್ಭದಲ್ಲಿ / ಆ ಬ್ಯಾಂಕ್‌ನ ಬೆಂಗಳೂರಿನ-ಕರ್ನಾಟಕದ ಶಾಖೆಗಳಲ್ಲಿ ಕನ್ನಡತನ ಮೂಡಿಸಲು ಇನ್ಯಾವ ರೀತಿ ಪ್ರತಿಕ್ರಿಯಿಸಬೇಕು-ಪ್ರಯತ್ನಿಸಬೇಕು-ಪ್ರತಿಭಟಿಸಬೇಕು ತಿಳಿಸುವಿರಾ?

English summary
Citi Bank Unable to address Indian customer issues if their correspondence is in vernaculars. Asserts Citi Bank Customer Care center in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X