ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೂ ಮೈಕ್ರೋಸಾಫ್ಟ್‌ ಆನ್‌ಲೈನ್‌ ಲಾಟರಿ ಬಂದೀತು ಜೋಕೆ!

By Staff
|
Google Oneindia Kannada News

ಪ್ರೀತಿಯ ಅದೃಷ್ಟವಂತ, ನಿನ್ನ ಇ-ಮೇಲ್‌ ಐ.ಡಿ. ಯ ಟಿಕೆಟ್‌ ಇದೆಯಲ್ಲ ಅದಕ್ಕೆ ಲಾಟರಿ ತಗುಲಿದೆ. ಕಂಗ್ರಾಟ್ಸ್‌ ! -ಇಂತಹ ಪತ್ರಗಳು ಬಂದಾಗ, ಹುಷಾರಾಗಿರಿ!

  • ಚಿದಾನಂದ
Microsoft and Dhanalakshmi Lottery Scam!ನಿಮ್ಮ ಇ-ಮೇಲ್‌ ಐ.ಡಿ.ಗೊಂದು ಮೈಕ್ರೋಸಾಫ್ಟ್‌ ಲಾಟರಿ ಕಂಪೆನಿಯ ವಿನ್ನಿಂಗ್‌ ನೋಟಿಫಿಕೇಶನ್‌ ಅಕಸ್ಮಾತ್‌ ಬಂದು ಬಿದ್ದರೆ, ಬೇರೆ ಯೋಚನೆಯನ್ನೇ ಮಾಡದೆ ಅದನ್ನ ಡಿಲೀಟ್‌ ಮಾಡಿಬಿಡಿ.

ಮಾಡದೆ ಇರಲಿಕ್ಕೆ ಭರ್ಜರಿ ಕಾರಣವಿರುತ್ತದೆ. ನಿಮ್ಮ ಹೆಸರಿಗೆ ಬರುವ ಮೇಲ್‌ನಲ್ಲಿ ರೆಫರೆನ್ಸ್‌ ನಂಬರು, ಬ್ಯಾಚ್‌ ನಂಬರು, ಲಂಡನ್‌ನ ಪ್ರಖ್ಯಾತ ಸಂಸ್ಥೆಯಾಂದರ ಹೆಸರು ಎಲ್ಲವನ್ನು ಹಾಕಿ ‘ಪ್ರಿಯ ಅದೃಷ್ಟವಂತ ವಿಜಯಿಯೇ, ನಿನಗೆ ಮೈಕ್ರೋಸಾಫ್ಟ್‌ ಯು.ಕೆ.ಆನ್‌ಲೈನ್‌ ಲಾಟರಿಯಲ್ಲಿ ಏಳು ಕೋಟಿ ಅಮೆರಿಕನ್‌ ಡಾಲರ್‌ ಬಹುಮಾನ ಬಂದಿದೆ! ಮೊನ್ನೆ 2006ರ ಜುಲೈ 6ರಂದು ಲಂಡನ್‌ನಲ್ಲಿ ಸ್ವೀಪ್‌ಸ್ಟೇಕ್ಸ್‌ ಅಂತಾರಾಷ್ಟ್ರೀಯ ಕಾರ್ಯಕ್ರಮ ನಡೆಯಿತು. ನಿನ್ನ ಮೇಲ್‌ ಐ.ಡಿ. ಯ ಟಿಕೆಟ್‌ ಇದೆಯಲ್ಲ ಅದಕ್ಕೆಲಾಟರಿ ತಗುಲಿದೆ. ಕಂಗ್ರಾಟ್ಸ್‌ ! ಈ ಏಳು ಕೋಟಿ ಅಮೆರಿಕನ್‌ ಡಾಲರುಗಳನ್ನು ಹತ್ತು ಜನ ಅದೃಷ್ಟವಂತರಲ್ಲಿ ಹಂಚಲಾಗಿದ್ದು, ನಿನಗೆ ಬಂದಿರುವುದು ಏಳು ಲಕ್ಷ ಅಮೆರಿಕನ್‌ ಡಾಲರ್‌ಗಳು. ಅದನ್ನು ಫೈಲ್‌ ನಂ. KTU/9023118308/03ಎಂಬ ಅಟೌಂಟಿಗೆ ಜಮೆ ಕೂಡ ಮಾಡಿಬಿಟ್ಟಿದ್ದೇವೆ’

‘ಜಗತ್ತಿನಾದ್ಯಂತ ವೆಬ್‌ಸೈಟ್‌ಗಳಿಂದ, ಕಂಪ್ಯೂಟರ್‌ ಡ್ರಾ ಸಿಸ್ಟಮ್‌ನಿಂದ, ಒಂದು ಲಕ್ಷ ಇ-ಮೇಲ್‌ ವಿಳಾಸಗಳಿಂದ, ಕಾರ್ಫೊರೇಟ್‌ ಸಂಸ್ಥೆಗಳಿಂದ ಸುಮ್ಮನೆ ಬಿಡು ಬೀಸಾಗಿ ಆಯ್ಕೆ ಮಾಡಿದ ಅದೃಷ್ಟವಂತ ಇ-ಮೇಲ್‌ ಐ.ಡಿಗಳ ಪೈಕಿ ನಿಂದೂ ಒಂದು. ಈ ನಂಬರು ನಮ್ಮ ಲಂಡನ್ನಿನ ಯುಕೆ ಬುಕ್‌ಲೆಟ್‌ ರೆಪ್ರೆಸೆಂಟೆಟಿವ್‌ ಆಫೀಸಿನ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ನಮ್ಮ ಲಂಡನ್ನಿನ ಯಾವುದೇ ಪೇಮೆಂಟ್‌ ಆಫೀಸಿನಿಂದ ನೀನು ಈ ಮೊತ್ತ ಪಡೆಯಬಹುದು! ನೀನು ಸಂಪರ್ಕಿಸಿದ ಕೂಡಲೆ ನಮ್ಮ ಲಂಡನ್‌ ಏಜೆಂಟ್‌ ಪ್ರಾಸೆಸಿಂಗ್‌ ಆರಂಭಿಸುತ್ತಾನೆ, ನಿನ್ನ ಹಣ ಬಿಡುಗಡೆ ಮಾಡುತ್ತಾನೆ. ಆದರೆ ಸೆಕ್ಯೂರಿಟಿಯ ದೃಷ್ಟಿಯಿಂದ ನಿನಗೆ ಬಹುಮಾನ ಬಂದಿರುವ ವಿಷಯವನ್ನು ಇಡೀ ಮೊತ್ತ ನಿನ್ನ ಕೈಗೆ ತಲುಪುವ ತನಕ ಯಾವ ಕಾರಣಕ್ಕೂ ಯಾರಿಗೂ ಹೇಳಬೇಡ!’ ಅಂತೆಲ್ಲ ಬರೆದು ನಿಮಗೊಂದು ವಿಳಾಸ ಕೊಡುತ್ತಾರೆ. ಜಾನ್‌ ಸ್ಮಿತ್‌ ಎಂಬುವವನ ಲಂಡನ್‌ ನಂಬರು, ಅವನ [email protected] ಅಂತ ಇ-ಮೇಲ್‌ ವಿಳಾಸ ಕೊಡುತ್ತಾರೆ.

ನಿಮ್ಮ ಏಳು ಲಕ್ಷ ಡಾಲರುಗಳನ್ನು ಕ್ಲೇಮ್‌ ಮಾಡುವುದಕ್ಕೊಂದು ಅದ್ಭುತವಾದ ಫಾರ್ಮ್‌ ಕೂಡ ಮೇಲ್‌ನಲ್ಲಿ ಕಳಿಸಿಕೊಡುತ್ತಾರೆ. ಅದರ ಮೂಲಕ ನಿಮ್ಮ ವಿಳಾಸ, ಟೆಲಿಫೋನ್‌ ನಂಬರು, ಆದಾಯ ವಿವರ ಇತ್ಯಾದಿ ಪಡೆಯುತ್ತಾರೆ. ಆದರೆ ಯಾವ ಕಾರಣಕ್ಕೂ ನಮ್ಮ ಇ-ಮೇಲ್‌ ಐ.ಡಿಗೆ ಉತ್ತರಿಸಲೇ ಬೇಡ. ಇನ್ನು ಮೇಲೆ ನೀನುಂಟು, ಹಣ ವಿತರಿಸುವ ನಮ್ಮ ಜಾನ್‌ ಸ್ಮಿತ್‌ ಎಂಬ ಏಜೆಂಟನುಂಟು-ನಿಂಗೆ ‘ಗುಡ್‌ಲಕ್‌’ ಅಂತ ಹೇಳಿ ಒಂದು ಗುಂಪು ತೆರೆಯ ಮರೆಗೆ ಸರಿದು ಬಿಡುತ್ತದೆ.

ನಂತರ ಶುರುವಾಗುವುದೇ, ನಾವು ಭಾರತಕ್ಕೆ ಬಂದು ನಿಮಗೆ ದೊಡ್ಡದೊಂದು ಬಾಕ್ಸ್‌ನಲ್ಲಿ ಲಕ್ಷಾಂತರ ಡಾಲರು ಕೊಡುತ್ತೇವೆಂಬ ನಾಟಕ. ಕೆರರಿಸಂ ಸಮಸ್ಯೆ ಇರುವುದರಿಂದ ದೇಶದಿಂದ ದೇಶಕ್ಕೆ ಬ್ಯಾಂಕುಗಳ ಮೂಲಕ ಹಣ ಕಳಿಸಲಾಗುವುದಿಲ್ಲ. ಹೀಗಾಗಿ ನಮ್ಮ ಏಜೆಂಟನೇ ಭಾರತಕ್ಕೆ ಬರುತ್ತಾನೆ. ಆದರೆ ಒಂದು ಷರತ್ತು : ಆತ ಮುಂಬಯಿಗೆ ಮಾತ್ರ ಬರಬಲ್ಲ. ಆತ ಮೊದಲ ಸಲ ಭಾರತಕ್ಕೆ ಬರುತ್ತಿದ್ದಾನೆ. ಹೀಗಾಗಿ ನೀನೇ ಮುಂಬಯಿಗೆ ಬರಬೇಕು. ಅಲ್ಲಿ ನಿಮಗೆ ಜಾರ್ಜ್‌ ಅಕಾ ಎಂಬ ನಮ್ಮ ಏಜೆಂಟ್‌ ಸಿಕ್ಕು ಏಳು ಲಕ್ಷ ಡಾಲರು, ಹ್ಞಾಂ... ಕೊಡುತ್ತಾನೆ ಎನ್ನುತ್ತದೆ ಮತ್ತೊಂದು ಗುಂಪಿನವರ ಮೇಲ್‌.

ಇದೆಲ್ಲ ದಿನದಿಂದ ದಿನಕ್ಕೆ build up ಆಗುವಂಥ ಆಸೆ. ಇನ್ನೇನು ಕೋಟಿಗಟ್ಲೆ ಹಣ ನೀವಿರುವ ಭಾರತಕ್ಕೆ, ಮುಂಬಯಿಗೆ ಬಂದು ಬೀಳಲಿದೆ ಅಂತ ನಿಮ್ಮಲ್ಲಿ ಖಾತರಿ ಹುಟ್ಟಿಸಿದ ಮೇಲೆ ಕೊನೆಗೆ ಅವರು ಕೇಳುವುದೇನು ಗೊತ್ತೆ? ಮ್ಯಾನಹಟ್ಟನ್‌ ಬ್ಯಾಂಕಿಗೆ 3700 ಅಮೆರಿಕನ್‌ ಡಾಲರ್‌ ಜಮೆ ಮಾಡಿರಿ! ಅದು ಏಳು ಲಕ್ಷ ಡಾಲರುಗಳನ್ನು ನಿಮಗೆ ತಲುಪಿಸಲಿಕ್ಕೆ ತಗಲುವ ಪ್ರಾಸೆಸಿಂಗ್‌ ಫೀ ಅನ್ನುತ್ತಾರೆ!

ಅದೇ ಕೊನೆ : ಅವರು ಹೇಳಿದ ಅಟೌಂಟಿಗೆ 3700 ಅಮೆರಿಕನ್‌ ಡಾಲರು ಕಟ್ಟಿದ ಮೇಲೆ ‘ಜಗಮೇ... ಮಾಯಾ!’

ಇಂಥ ವಂಚನೆಗಳ ಬಗ್ಗೆ ಎಚ್ಚರದಿಂದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X