• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದಭಿಮಾನದ ಗೂಡಿನಲ್ಲಿ ಸುವರ್ಣ ಕರ್ನಾಟಕದ ಪ್ರಭೆ

By ಹ. ಚ. ನಟೇಶ್‌ ಬಾಬು
|

ಕ್ರೀಡಾಂಗಣದಲ್ಲಿ ಜನವೋ ಜನ.. ಮುಗಿಲು ಮುಟ್ಟಿದ ಕನ್ನಡ ಡಿಂಡಿಮ. ಉಕ್ಕಿಹರಿದ ಕನ್ನಡ ಅಭಿಮಾನ. ಕುಮಾರಸ್ವಾಮಿ ಅವರಿಂದ ಸಮಾರಂಭಕ್ಕೆ ಚಾಲನೆ.

ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಜಗಮಗಿಸುವ ವೇದಿಕೆ ಮೇಲೆ, ಸುವರ್ಣ ಕರ್ನಾಟಕ ಸಂಭ್ರಮ ಪದರಪದರವಾಗಿ ಬಿಟ್ಟಿಕೊಂಡಿತು. ಈ ಅಪರೂಪದ ಘಳಿಗೆಗೆ ಸಹಸ್ರಾರು ಜನ ಬುಧವಾರ ಸಂಜೆ ಸಾಕ್ಷಿಯಾದರು.

ಆರಂಭದಲ್ಲಿ ಮಳೆರಾಯ ಎಲ್ಲಿ ಕಾರ್ಯಕ್ರಮ ಕೆಡಿಸಿಬಿಡುವನೋ ಎಂಬ ಆತಂಕವಿತ್ತು. ಕಾರ್ಮೋಡ ಕರಗಿ, ಆಕಾಶ ತಿಳಿಯಾಯಿತು. ಆದರೂ ಮಳೆರಾಯ, ಕಾರ್ಯಕ್ರಮದ ಒಂದು ತಾಸನ್ನು ನುಂಗಿಬಿಟ್ಟಿದ್ದ.

ಈ ಮಧ್ಯೆ 5.50ನಿಮಿಷಕ್ಕೆ ಎರಡು ಬಸ್‌ಗಳಲ್ಲಿ ಕ್ರೀಡಾಂಗಣ ತಲುಪಿದ್ದ ಅತಿಥಿಗಳು ವೇದಿಕೆ ಏರಿದರು. ಮಳೆ ಪೂರ್ಣ ನಿಂತ ನಂತರ ಅಂದರೆ 6.05ನಿಮಿಷಕ್ಕೆ ಕಾರ್ಯಕ್ರಮ ಮತ್ತೆ ಆರಂಭ. ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ ನುಡಿಸಿ, ರಾಷ್ಟ್ರಕ್ಕೆ ಗೌರವ ಸಲ್ಲಿಸಿದ ನಂತರ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.

ವೈ.ಕೆ.ಮುದ್ದು ಕೃಷ್ಣ, ಯಶವಂತ್‌ ಹಳಿಬಂಡಿ, ಮಾಲತಿ ಶರ್ಮ, ಚಂದ್ರಿಕಾ ಗುರುರಾಜ್‌, ಸುರೇಖಾ, ನರಸಿಂಹನಾಯಕ್‌ ಮತ್ತಿತರರ ವೃಂದದಿಂದ ನಡೆದ ಸಮೂಹ ಗಾನ ಎಲ್ಲರ ಸೆಳೆಯಿತು. ಬಿ.ಎಂ.ಶ್ರೀಯವರ ‘ಏರಿಸಿ ಹಾರಿಸಿ ಕನ್ನಡದ ಬಾವುಟ' , ಬೇಂದ್ರೆಯವರ ‘ಒಂದೇ ಒಂದೇ ಕರ್ನಾಟಕ ಒಂದೆ' ಗೀತೆಗಳಿಗೆ ಅಲ್ಲಿ ಜೀವ ಬಂದಿತ್ತು. ಈ ಹಾಡುಗಳಿಗೆ ಕೂತಲ್ಲಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಕೈ ತಟ್ಟುವ ಮೂಲಕ ತಾಳ ಹಾಕುತ್ತಿದ್ದರು.

ಸಮೂಹಗಾನದ ವೈಭವದ ನಂತರ ಯಕ್ಷ ವೈಭವದ ಸಮಯ. ರಂಗ ನಟಿ ಬಿ.ಜಯಶ್ರೀ ಮತ್ತು ನಿರ್ದೇಶಕ ಟಿ.ಎಸ್‌.ನಾಗಾಭರಣ ನಿರೂಪಣೆ ಹೊಣೆ ಹೊರಲು ವೇದಿಕೆ ಏರಿದರು. ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500ಜನರ ಯಕ್ಷಗಾನ ನೃತ್ಯ, ನೋಡುಗರ ನಿಜಕ್ಕೂ ಸೆಳೆಯಿತು.

ನಂತರ ಕ್ರೀಡಾಂಗಣದ ತುಂಬ ಜಾನಪದ ಸಿರಿ. ಸ್ನೇಹ ನಂದಗೋಪಾಲ್‌ ನಿರ್ದೇಶನದಲ್ಲಿ ಜಾನಪದ ನೃತ್ಯಗಳು ಆರಂಭವಾದವು. ಸೋಮನ ಕುಣಿತ, ಪಟ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಹಲಗೆ ಮೇಳ, ಕೋಲಾಟ, ಕರಡಿ ಮಜಲು ಮತ್ತಿತರ ಜಾನಪದ ನೃತ್ಯಗಳು ಹೊಸ ಲೋಕಕ್ಕೆ ನೋಡುಗರನ್ನು ಕರೆದೊಯ್ದವು. ನಂದಿಕೋಲಿಗೆ ಕನ್ನಡ ಧ್ವಜಗಳನ್ನು ಸಿಕ್ಕಿಸಿಕೊಂಡು ಕಲಾವಿದರು ಹೆಜ್ಜೆ ಹಾಕಿದರು. ರಂಗಿನ ಬಟ್ಟೆ ತೊಟ್ಟ ಲಂಬಾಣಿ ಯುವತಿಯರು, ಸಂಗೀತ ನಾದಕ್ಕೆ ಹೆಜ್ಜೆ ಹಾಕಿದರು.

6.50ರಲ್ಲಿ ಕ್ರೀಡಾಂಗಣದಲ್ಲಿ ವಿಶಿಷ್ಟ ಮೆರವಣಿಗೆ ಆರಂಭ. ಮುಖ್ಯಮಂತ್ರಿ, ರಾಜ್ಯಪಾಲರು, ರಾಜ್ಯೋತ್ಸವ ಸನ್ಮಾನಿತರು, ಅತಿಥಿಗಳು ಸೇರಿದಂತೆ ನಾನಾ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಳಸ ಹೊತ್ತ ನೀರೆಯರಿಂದ, ಮೆರವಣಿಗೆ ರಂಗೋರಂಗು. ‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ' ಹಾಡು ಹಿನ್ನೆಲೆಯಲ್ಲಿ ಮೊಳಗುತ್ತಿತ್ತು.

ಸಿ.ಅಶ್ವಥ್‌ ನೇತೃತ್ವದಲ್ಲಿ ‘ಜಯಭಾರತ ಜನನಿಯ ತನುಜಾತೆ' ಮೊಳಗಿದಾಗ ವೇದಿಕೆ ಮೇಲಿದ್ದವರು ಎದ್ದು ನಿಂತು ಗೌರವ ಸೂಚಿಸಿದರು. ಸಮಾರಂಭದಲ್ಲಿ ‘ಹಚ್ಚೇವು ಕನ್ನಡದ ದೀಪ ಹಾಡು' ಹಾಡು ಕೇಳಿ ಬಂದಾಗ, ಕ್ರೀಡಾಂಗಣದ ತುಂಬೆಲ್ಲ ದೀಪಗಳ ಜಾತ್ರೆ. ಈ ದೃಶ್ಯ ಕಂಡ ಕಣ್‌ಗಳಿಗೆ ಒಂದು ಕ್ಷಣ ರೋಮಾಂಚನ. ಬಾನಿನ ನಕ್ಷತ್ರಗಳೆಲ್ಲವೂ ಭುವಿಗೆ ಬಂದಂತೆ ಎಲ್ಲರಲ್ಲೂ ಖುಷಿ.

ಏಕೀಕರಣ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗೌರವಿಸಿದರು. ಟಿ.ಎನ್‌.ಚತುರ್ವೇದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಸಚಿವ ಎಂ.ವಿ.ರಾಜಶೇಖರನ್‌, ಗೃಹ ಸಚಿವ ಎಂ.ಪಿ.ಪ್ರಕಾಶ್‌, ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ಕೃಷ್ಣ, ವಿಧಾನ ಮಂಡಲದ ಸಭಾಪತಿ ಎಲ್‌.ಸಚ್ಚಿದಾನಂದ ಖೋತ್‌, ಪ್ರತಿಪಕ್ಷದ ನಾಯಕ ಎನ್‌.ಧರ್ಮಸಿಂಗ್‌, ಎಚ್‌.ಕೆ.ಪಾಟೀಲ್‌, ಬಿ.ಸರೋಜದೇವಿ, ತಾರಾ, ಶ್ರೀನಾಥ್‌, ಸಾ.ರಾ.ಗೋವಿಂದ್‌, ಗಂಗರಾಜು ಮತ್ತಿತರರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಐ.ಎಂ.ವಿಠಲಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮ ವೀಕ್ಷಣೆಗಾಗಿ ಎರಡು ಬೃಹತ್‌ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು. ನಾಡು-ನುಡಿಗಾಗಿ ದುಡಿದ ಮಹನೀಯರ ಭಾವಚಿತ್ರಗಳು ಕ್ರೀಡಾಂಗಣದಲ್ಲಿ ರಾರಾಜಿಸುತ್ತಿದ್ದವು. ರಾಜ್ಯದ ವಿವಿಧ ಮೂಲೆಗಳಿಂದ ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಎಂಟು ಸಾಂಸ್ಕೃತಿಕ ದಿಬ್ಬಣಗಳ ಜ್ಯೋತಿಗಳು, ಕ್ರೀಡಾಂಗಣದಲ್ಲಿ ಬೆಳಗುತ್ತಿದ್ದವು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Patriotic Fervor touches zenith in Karnataka. Golden Jubilee of Karnataka celebrated with regional gait and passion for Kannada language and culture. Jubilee function celebrated in pomp and glory in KSCA Stadium, Bangalore. Governor T.N. Chaturvedi presided over the function. Chief Minister gave away Karnataka Unification and Rajyotsava Awards to achievers in Various fields. Kannada Songs, Dances, laser shows, Air shows, ballets and tableaus were the highlights of the program.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more