ಅಂಬರೀಷ್ಗೆ ಸಚಿವ ಸ್ಥಾನ ಯಾಕೆ ಕೊಟ್ಟರು ಗೊತ್ತೆ?
ಕೇಂದ್ರ ಸಂಪುಟದಲ್ಲಿ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವರಾಗಿ ಅಂಬರೀಷ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಹಿನ್ನೋಟ.
- ಮತ್ತೀಕೆರೆ ಜಯರಾಮ್
ತಾರಾ ವರ್ಚಸ್ಸಿನಿಂದ ಜನ ಮಾನಸದಲ್ಲಿ ಸ್ಥಾನ ಪಡೆದು, ರಾಜಕೀಯದಲ್ಲಿರುವ ಅಂಬರೀಷ್ ಈವರೆಗೆ ಕಾಂಗ್ರೆಸ್ನಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಿದ್ದರು. ಇದೀಗ ಅರ್ಹತೆ, ಹಿರಿತನಕ್ಕಿಂತಲೂ ಮುಖ್ಯವಾಗಿ ಜಾತಿ ಬಲದಿಂದ ಸಚಿವ ಸ್ಥಾನ ಗಿಟ್ಟಿದೆ.
ಸಂಸದ್ ಅಧಿವೇಶನದಲ್ಲಿ ದೀರ್ಘ ಕಾಲ ಗೈರು ಹಾಜರಿ ದಾಖಲೆಯನ್ನು ಅಂಬರೀಷ್ ಸ್ಥಾಪಿಸಿದ್ದರು. ಒಂದೊಮ್ಮೆ ಅವರು ಸತತ ಹಾಜರಿ ಮತ್ತು ಚರ್ಚೆಯಲ್ಲಿ ಸಕ್ರಿಯರಾಗಿದ್ದರೆ ಎಂದೋ ಸಚಿವ ಸ್ಥಾನ ದಕ್ಕಿಸಿಕೊಳ್ಳಬಹುದಿತ್ತು.
ಸೋಂಬೇರಿತನವೇ ಶಾಪ : ಲಾಬಿ ಗೊತ್ತಿಲ್ಲದಿದ್ದರೂ ರಾಜಕೀಯ ಪಟ್ಟುಗಳನ್ನು ಅರಿತಿದ್ದ ಅಂಬರೀಷ್ಗೆ ಸಚಿವರಾಗಲು ಇಲ್ಲಿವರೆಗೆ ಸೋಂಬೇರಿತನ ಶಾಪವಾಗಿ ಪರಿಣಮಿಸಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಲಾದರೂ ಅವರು ತಮ್ಮ ದಿನಚರಿಯನ್ನು ಬದಲಿಸಿಕೊಳ್ಳಬೇಕಿದೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಂಬರೀಷ್ಗೆ ಸಚಿವ ಸ್ಥಾನ ದಕ್ಕುತ್ತದೆ ಎನ್ನುವ ಸುದ್ದಿಗಳಿಗೆ ರೆಕ್ಕೆ-ಪುಕ್ಕ ಬಂದಿದ್ದವು. ಪ್ರತಿ ವಿಸ್ತರಣೆಯಲ್ಲೂ ಅಂಬರೀಷ್ ಹೆಸರು ಪ್ರಸ್ತಾಪವಾಗುತ್ತಿದ್ದೇ ವಿನಾ ವರಿಷ್ಠರು ಕೃಪೆ ತೋರುತ್ತಿರಲಿಲ್ಲ. ಸಕ್ರಿಯ ರಾಜಕಾರಣಕ್ಕೆ ಮರಳಬೇಕೆನ್ನುವ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರೂ ಅಂಬರೀಷ್ಗೆ ಅಡ್ಡಗಾಲಾಗಿದ್ದರು.
ರೆಬೆಲ್ ಸ್ಟಾರ್ : ಕೇಂದ್ರ ಸಚಿವ ಸ್ಥಾನ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಅಂಬರೀಷ್ ಅವರು ಕಾಂಗ್ರೆಸ್ ಪಡಸಾಲೆಯಲ್ಲಿ ಹೊಸ ಆಟ ಶುರುವಿಟ್ಟುಕೊಂಡಿದ್ದರು. ಜಿಲ್ಲೆಯಲ್ಲಿ ನಡೆದ ಪಕ್ಷ ಮತ್ತು ಸಾರ್ವಜನಿಕ ಸಭೆ-ಸಮಾರಂಭಗಳಿಂದ ಬಹುತೇಕ ದೂರ ಉಳಿದುಕೊಂಡು ವರಿಷ್ಠರ ವಿರುದ್ಧ ಅಸಮಾಧಾನ ಹೊರಗೆಡವಿದ್ದರು.
ಕಳೆದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಜತೆ ಅಂಬರೀಷ್ ನಡೆಸಿದ್ದು ಪ್ರವಾಸವೇ ಹೊರತು, ಪ್ರಚಾರವಲ್ಲ. ಎಸ್.ಎಂ.ಕೃಷ್ಣ ನಿರ್ಗಮನದ ನಂತರ ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸೊರಗಿತ್ತು.
ಆದರೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜಾ.ದಳ ಮತ್ತು ಬಿಜೆಪಿ ಪಾಲುದಾರಿಕೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಾಂಗ್ರೆಸ್ ವರಿಷ್ಠರಿಗೆ ಒಕ್ಕಲಿಗ ಸಮುದಾಯವನ್ನು ಸೆಳೆಯುವ ಆಲೋಚನೆ ಮೂಡಿತು.
ಕೇಂದ್ರ ಸಚಿವ ಸ್ಥಾನ ದಕ್ಕಲಿಲ್ಲ ಎನ್ನುವ ಅಂಬರೀಷ್ ಅವರನ್ನು ಸೆಳೆಯಲು ಜಾ.ದಳ ಮುಖಂಡರು ಕಸರತ್ತು ನಡೆಸುತ್ತಿದ್ದ ವಿಷಯವೂ ಜಗಜ್ಜಾಹೀರಾಗಿತ್ತು. ಅದೂ ಕೂಡ ಅಂಬರೀಶ್ ಮೇಲೆ ಕಾಂಗ್ರೆಸ್ ವರಿಷ್ಠರು ಕೃಪೆ ತೋರಲು ಒಂದು ಕಾರಣ.
ಅಂಬರೀಷ್ 4ನೇಯವರು : ಕೇಂದ್ರದಲ್ಲಿ ಸಚಿವ ಸ್ಥಾನಕ್ಕೇರಿದ ಮಂಡ್ಯ ಜಿಲ್ಲೆಯ ರಾಜಕೀಯ ಮುಖಂಡರ ಪೈಕಿ ಅಂಬರೀಷ್ ನಾಲ್ಕನೆಯವರು.
ಮೊದಲಿಗೆ ಎಸ್.ಎಂ.ಕೃಷ್ಣ, ಎಂ.ವಿ.ರಾಜಶೇಖರ ಮೂರ್ತಿ, ಕೆ.ರೆಹಮಾನ್ ಖಾನ್ ಇದೀಗ ಅಂಬರೀಷ್ ಅವರು ಕೇಂದ್ರದಲ್ಲಿ ಸಚಿವ ಹುದ್ದೆ ಪಡೆದಿದ್ದಾರೆ. ನಾಲ್ವರೂ ರಾಜ್ಯ ಸಚಿವರು ಎನ್ನುವುದು ಮತ್ತೊಂದು ವಿಶೇಷ.
(ಸ್ನೇಹ ಸೇತು : ವಿಜಯ ಕರ್ನಾಟಕ)