• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆರೆದ ಬಾವಿಗೆ ಬಿದ್ದ ಭಾರೀ ಕಾಡು ಕೋಣ ;ಬದುಕುಳಿದೆಯಾ ಬಡಜೀವ!

By ಚಿತ್ರ-ಲೇಖನ : ಆರ್‌.ಶರ್ಮಾ, ತಲವಾಟ-ಕಡವಿನಮನ
|
ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಗಮಟೇಘಟ್ಟದ ರಾಮಯ್ಯನವರ ಬಾವಿಯಲ್ಲಿ ಕಾಡುಕೋಣವೊಂದು ಬಿದ್ದಿದೆ, ಫೋಟೋ ಕ್ಲಿಕ್ಕಿಸುವುದಾದರೆ ಬೇಗ ಬಾ ಅಂತ ಇಡುವಾಣಿಯ ಶ್ರೀಪಾದ ಫೋನ್‌ ಮಾಡಿದರು. ಕಾಡುಕೋಣದ ಫೋಟೋಗಳನ್ನು ನಮಗೆ ಬೇಕಾದಷ್ಟು ಮತ್ತು ಬೇಕಾದ ಹಾಗೆ ಕ್ಲಿಕ್ಕಿಸಲು ಇದೊಂದು ಉತ್ತಮ ಅವಕಾಶ ಎಂದು ಕ್ಯಾಮೆರಾ ಹೆಗಲಿಗೇರಿಸಿ ಸರಸರನೆ ಮೋಟರ್‌ಬೈಕ್‌ ಏರಿ ಹೊರಟೆ.

ನಮ್ಮ ಮಲೆನಾಡಿನಲ್ಲಿ ಕಾಡು ಕೋಣದ ಹಾವಳಿ ಸರ್ವೇಸಾಮಾನ್ಯ. ಸಾಗರ, ಸಿದ್ದಾಪುರ ತಾಲ್ಲೂಕುಗಳಂತೂ ಅವುಗಳ ತವರು. ದಿನನಿತ್ಯ ಒಂದಲ್ಲಾ ಒಂದು ಕಡೆ ಅಡಿಕೆ ತೋಟಗಳನ್ನು ನಾಶ ಮಾಡಿದ ಸುದ್ದಿ ಬರುತ್ತಲೇ ಇರುತ್ತದೆ. ಆದರೆ ಮನುಷ್ಯರನ್ನು ಕಂಡಾಕ್ಷಣ ಮಾರು ದೂರ ಓಡುವ ಕಾಡುಕೋಣಗಳು ಫೋಟೊಗೆ ಸಿಗುವುದು ತುಂಬಾ ಅಪರೂಪ ಮತ್ತು ಸಮೀಪದಿಂದ ನೋಡುವುದು ತುಂಬಾ ಕಷ್ಟ. ಆದರೆ, ಇವತ್ತು ಕೋಣ ಬಾವಿಗೆ ಬಿದ್ದಿದೆಯಂತೆ, ಇನ್ನು ತಡಮಾಡಿದರೆ ಬಾವಿಯಿಂದ ಎದ್ದು ಹೋದರೆ ಅವಕಾಶ ತಪ್ಪಿಹೋದೀತು ಎಂದುಕೊಂಡು ಲಗುಬಗೆಯಿಂದ ಹೊರಟೆ.

ಅದೇಕೋ ನನ್ನ ಕ್ಯಾಮೆರಾ ಕಣ್ಣಿಗೂ ಕಾಡುಕೋಣಕ್ಕೂ ನಂಟು. ಈ ಘಟನೆಗೆ ಎರಡು ದಿವಸದ ಮೊದಲು ಇಡುವಾಣಿ ಘಟ್ಟದ ರಸ್ತೆಯಲ್ಲಿ ಬೈಕಿನಲ್ಲಿ ಸಾಗುತ್ತಿದಾಗ ಒಂಟಿ ಕೋಣವೊಂದು ಅಕಸ್ಮಾತ್‌ ಅಡ್ಡ ಬಂದಿತ್ತು. ಒಂದು ಸುಂದರ ನೋಟವನ್ನು ನನ್ನ ಕ್ಯಾಮೆರಾಕ್ಕೆ ನೀಡಿ ಮಾಯವಾಗಿತ್ತು (ಫೋಟೋ 1). ಅದರ ಮಾರನೇ ದಿನ ಬೆಂಗಳೂರಿನ ಸಾಫ್ಟವೇರ್‌ ಇಂಜನಿಯರ್‌ ಜಗದೀಶರ ಕಾರಿಗೆ ಇದೇ ಇಡುವಾಣಿಯ ಘಟ್ಟದ ರಸ್ತೆಯಲ್ಲಿ ಅಡ್ಡಬಂದು ಕಾರನ್ನು ಜಖಂ ಗೊಳಿಸಿ ಓಡಿಹೋಗಿತ್ತು. ಅದೇ ಕೋಣ ಬಾವಿಗೆ ಬಿದ್ದಿರಬಹುದೆಂದು ಎಣಿಸುತ್ತಾ ಇಡುವಾಣಿಗೆ ಹೋದೆ. ಆದರೆ ನನ್ನ ಕ್ಯಾಮೆರಾಕ್ಕೆ ಸಿಕ್ಕ ಕೋಣನೇ ಬೇರೆ.

ನಾನು ಇಡುವಾಣಿಯ ಬಾವಿ ತಲುಪುವಷ್ಟರಲ್ಲಿ ಜನಜಂಗುಳಿ ಸೇರಿಯಾಗಿತ್ತು. ಇಷ್ಟು ಹತ್ತಿರದಿಂದ ಸುರಕ್ಷಿತವಾಗಿ ನೋಡುವ ಅವಕಾಶವನ್ನು ಜನ ಕಳೆದುಕೊಳ್ಳಲು ಸಿದ್ದರಿರಲಿಲ್ಲ. ಕುತೂಹಲ ತಣಿಸಿಕೊಳ್ಳಲು ಬಾವಿ ಇಣುಕುತ್ತಿದ್ದ ಜನರನ್ನು ಕೋಣ ಅಸಹಾಯಕತೆಯಿಂದ ಈಜುತ್ತಾ ಮೆಲೆ ನೋಡುತ್ತಿತ್ತು.(ಫೋಟೋ 2). ಘಮಟೆಗಟ್ಟದ ಗುರುಮೂರ್ತಿ ಆಗಲೆ ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದ್ದರಿಂದ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳೂ ಸೇರಿದ್ದರು.

ಅರಣ್ಯ ಇಲಾಖೆಯ ಹದಿನೈದು ಇಪ್ಪತ್ತು ಅಧಿಕಾರಿಗಳೇನೋ ಇದ್ದರು ಆದರೆ ಅವರಿಗೂ ಈ ಅನುಭವ ಹೊಸತು. ಹೀಗಾದಾಗ ಕೋಣವನ್ನು ಮೇಲಕ್ಕೆತ್ತುವ ಬಗೆ ಹೇಗೆ ಎಂಬುದರ ತರಬೇತಿ ಅವರಿಗಿರಲಿಲ್ಲ. ಒಬ್ಬೊಬ್ಬ ಅಧಿಕಾರಿಗಳು ಒನ್ನೊಂದು ಸಲಹೆ ನೀಡುತ್ತಿದ್ದರು. ಅಡಿಕೆ ತೋಟದ ಮೇಲ್ಬಾಗವಾದ್ದರಿಂದ ಕ್ರೇನ್‌ ಮುಂತಾದ ಆಧುನಿಕ ಸಲಕರಣೆ ಅಲ್ಲಿಗೆ ಹೋಗುವುದು ದುಸ್ತರ. ಹೆಲಿಕಾಪ್ಟರ್‌ ಬರಬಹುದಾಗಿತ್ತು ಆದರೆ ಅದು ಬರಲು ನಮ್ಮ ದೇಶ ಅಮೇರಿಕಾ ಅಲ್ಲವಲ್ಲ. ಆ ಕಾರಣದಿಂದ ಕೋಣವನ್ನು ಮೇಲೆತ್ತೆಲು ತಲೆಗೊಂದು ಪುಕ್ಕಟೆ ಸಲಹೆ ಬರುತ್ತಿತ್ತು.

ಏತನ್ಮದ್ಯೆ ಮೂವತ್ತು ಅಡಿ ಆಳದ ಎಂಟು ಅಡಿ ನೀರಿರುವ ಬಾವಿಗೆ ಕೋಣ ಬಿದ್ದು ಆಗಲೇ ಆರು ತಾಸಾಗಿತ್ತು.ಕೋಣ ನೀರಿನಿಂದ ಏಳಲೂ ಆಗದೆ ಮುಳುಗಲೂ ಆಗದೆ ಬುಸುಗುಡುತ್ತಾ ಸುಸ್ತಾಗಿತ್ತು. ಅಲ್ಲಿ ಸೇರಿದ್ದ ಜನರು ಬಾವಿಯಲ್ಲಿನ ನೀರನ್ನು ಖಾಲಿ ಮಾಡಿ, ಮೇಲೆತ್ತುವ ಬಗೆ ಆಮೇಲೆ ಯೋಚಿಸೋಣ, ಇಲ್ಲದಿದ್ದರೆ ನೀರಿನಲ್ಲಿ ಮುಳುಗಿ ಉಸುರುಗಟ್ಟಿ ಸಾಯುತ್ತದೆ ಎಂದರು. ಅಧಿಕಾರಿಗಳಿಗೂ ಸರಿ ಎನಿಸಿತು ತಕ್ಷಣ ಸೀಮೆ ಎಣ್ಣೆ ಚಾಲಿತ ಪಂಪ್‌ ಬಳಸಿ ನೀರು ಮೇಲೆತ್ತೆಲಾಯಿತು. ನೀರು ಕಡಿಮೆಯಾಗುತ್ತಿದ್ದಂತೆ ನೆಲದ ಮೇಲೆ ಕಾಲೂರಿ ಥ್ಯಾಂಕ್ಸ್‌ ಎನ್ನುವ ನೋಟ ಬೀರಿತು ಕೋಣ (ಫೋಟೋ 3).

ಈಗ ಕೋಣವನ್ನು ಮೇಲೆತ್ತುವ ಬಗೆ ಹೇಗೆಂಬ ಚರ್ಚೆ ಶುರುವಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಯಾಬ್ಬರು ಭತ್ತದ ಹೊಟ್ಟಿನ ಚೀಲ ಬಾವಿಗೆ ತುಂಬೋಣ, ಕೋಣ ಅದನ್ನೇರಿ ಬರುತ್ತದೆ ಎಂಬ ಸಲಹೆಯನ್ನಿತ್ತರು. ಸರಿ ಕಾರ್ಗಲ್‌,ತಾಳಗುಪ್ಪದ ಅಕ್ಕಿಗಿರಣಿಯಿಂದ ಭತ್ತದ ಹೊಟ್ಟುತರಲು ಅರಣ್ಯ ಇಲಾಖೆ ಲಾರಿಗಳನ್ನು ಕಳುಹಿಸಿತು. ಮೂವತ್ತು ಅಡಿ ಆಳದ ಬಾವಿ ತುಂಬಲು ಕನಿಷ್ಟವೆಂದರೂ 1000 ಚೀಲ ಹೊಟ್ಟು ಬೇಕು. ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು 200 ಚೀಲ ಸಂಗ್ರಹವಾಯಿತು. ಅದೂ ಒಂದು ಕಿಲೋಮೀಟರ್‌ ಗುಡ್ದದ ರಸ್ತೆಯಲ್ಲಿ ಚೀಲವನ್ನು ತರಬೇಕಾಗಿದ್ದರಿಂದ ಬಹಳ ಸಮಯ ತಗಲುತ್ತಿತ್ತು. ಸರಿ ಇದು ಆಗದ ಕೆಲಸ ಎಂಬುದು ಅರಿವಾಗುತ್ತಿದ್ದಂತೆ, ಮತ್ತೊಬ್ಬರು ಬಾವಿಯ ಸುತ್ತಲೂ ಮಣ್ಣನ್ನು ಅಗೆದು ಬಾವಿಯನ್ನು ಅರ್ಧ ಮುಚ್ಚಿ ರಸ್ತೆ ಮಾಡೊಣ ಎಂಬ ಸಲಹೆ ಕೊಟ್ಟರು. ಸರಿ ಬಾವಿಗೆ ಮಣ್ಣು, ಕಲ್ಲು ತುಂಬುವ ಕೆಲಸ ಶುರುವಾಯಿತು.

ಒಮ್ಮೆಲೆ ಮಣ್ಣು ಕಲ್ಲುಗಳು ಬಾವಿಯಾಳಗೆ ಬೀಳಲಾರಂಬಿಸಿದ್ದರಿಂದ ಗಾಬರಿಯಾದ ಕಾಡುಕೋಣ ಅತ್ತಿಂದಿತ್ತ ಹಾರಾಡತೊಡಗಿತು. ಅದರ ಓಡಾಟದ ರಭಸಕ್ಕೆ ಬಾವಿಯಾಳಗೆ ಮಣ್ಣು ಕುಸಿಯಬಾರದೆಂದು ನಿರ್ಮಿಸಿದ್ದ ಸಿಮೆಂಟಿನ ರಿಂಗಿನ ಪಕ್ಕದ ಜಾಗದಲ್ಲಿ ಬಿತ್ತು. ಅದು ಇಕ್ಕಟ್ಟಾದ ಜಾಗ ಆಗಿದ್ದರಿಂದ, ಹಾಗು ಜತೆಯಲ್ಲಿ ಕೆಸರು ಮಣ್ಣು ತುಂಬಿದ್ದರಿಂದ ಏಳಲಾಗದೆ ಒದ್ದಾಡತೊಡಗಿತು ಕೋಣ (ಫೋಟೋ 4). ಒಂದು ಹಂತದಲ್ಲಿ ಕೋಣವನ್ನು ಎತ್ತಲಾಗದ ಅಸಹಾಯಕ ಹತಾಶ ಸ್ಥಿತಿಗೆ ಸೇರಿದವರೆಲ್ಲರೂ ಬಂದರು.

ಆಗ ಸ್ಥಳೀಯರಾದ ಗುಡ್ಡೆಮನೆ ಅಣ್ಣಪ್ಪ ಆಗುವುದಕ್ಕೆಲ್ಲಾ ನಾನೇ ಹೊಣೆ ಎಂಬ ಗಟ್ಟಿ ನಿರ್ಧಾರದೊಂದಿಗೆ ಕೋಣ ಸಿಕ್ಕಿಹಾಕಿಕೊಂಡ ಕೆಸರಿನ ಹೊಂಡಕ್ಕೆ ಮತ್ತಷ್ಟು ಮಣ್ಣು ತುಂಬಿ, ಒಂದು ಭತ್ತದ ಹೊಟ್ಟಿನ ಚೀಲ ಕೋಣದ ಮುಖಕ್ಕೆ ಸಿಗುವಂತೆ ಹಿಡಿದು ಉದ್ದನೆಯ ಕೋಲೊಂದರಿಂದ ಕೋಣವನ್ನು ತಿವಿದರು. ಕೋಣಕ್ಕೆ ಅದೆಲ್ಲಿತ್ತೋ ಶಕ್ತಿ ಛಂಗನೆ ಜಿಗಿದು ಸಮತಟ್ಟಿನ ಜಾಗಕ್ಕೆ ಬಂದು ಇನ್ನೂ ಮೇಲೆ ಹೇಗೆ ಹತ್ತಲಿ ಎಂದು ಜನರನ್ನು ನೋಡತೊಡಗಿತು. ಅಬ್ಬಾ ಎಂದು ಒಮ್ಮೆಲೆ ಎಲ್ಲರೂ ನಿಟ್ಟುಸಿರು ಬಿಟ್ಟರು.(ಫೋಟೋ 5).

ದೊಡ್ದ ಜೀವ ಅಪಾಯದಿಂದ ಪಾರಾದ ಕೋಣ ಇನ್ನು ಮೇಲೆತ್ತುವುದು ಅಂಥಹಾ ಕಷ್ಟದ ಕೆಲಸವಾಗಿರಲಿಲ್ಲ. ಹಾರೆಯಿಂದ ಮಣ್ಣನ್ನು ಬಾವಿಗೆ ತುಂಬಿದರೆ ಕೋಣ ಮೇಲೆ ಹತ್ತಿ ಬರಬಹುದಾಗಿತ್ತು. ಆದರೆ ಅಷ್ಟರಲ್ಲಿ ಬಾವಿಯ ಒಡೆಯರು ಸಣ್ಣಮಟ್ಟದ ತಕರಾರು ಶುರುವಿಟ್ಟುಕೊಂಡರು. ಜೀವಮಾನವಿಡಿ ಕಷ್ಟಪಟ್ಟು 50 ಸಾವಿರ ರೂಪಾಯಿ ಖರ್ಚುಮಾಡಿ ಬಾವಿ ತೆಗೆಸಿದ್ದೇನೆ. ಈಗ ಅದನ್ನು ನೀವು ಮುಚ್ಚಿ ಮಾಯವಾದರೆ ನನ್ನ ಗತಿಯೇನು?. ನಿಜ ಅವರು ಹೇಳುವುದರಲ್ಲೇನೂ ಅತಿಶಯವಿರಲಿಲ್ಲ. ಅದು ಅವರ ಅನ್ನ.

ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡುವ ಭರವಸೆಯನ್ನಿತ್ತರು. ಸರಿ ಮತ್ತೆ ಬಾವಿ ತುಂಬುವ ಕೆಲಸ ಪ್ರಾರಂಭವಾಯಿತು. ಅರ್ಧ ಬಾವಿ ಮಣ್ಣು ತುಂಬಿತ್ತು, ಕೋಣಕ್ಕೆ ಅದೇನನ್ನಿಸಿತೋ ಒಮ್ಮೆ ಧರೆಯನ್ನು ನೋಡಿ ಮುಂಗಾಲೂರಿ ಮೇಲೆ ಹತ್ತುವ ಯತ್ನ ಮಾಡಿತು. ಇಲ್ಲ ಮತ್ತೆ ವಾಪಸು ಬಾವಿಗೆ ದೊಪ್ಪನೆ ಬಿದ್ದು ಮತ್ತೆ ಎದ್ದುನಿಂತು ಇಲ್ಲ ಇನ್ನೂ ಸ್ವಲ್ಪ ಅಗೆಯಿರಿ ಎನ್ನುವ ಅರ್ಥದಲ್ಲಿ ಮೇಲೆ ನೋಡಿತು ಕೋಣ.(ಫೋಟೋ 6)

ಸರಿ ಮತ್ತೆ ಬಾವಿಗೆ ಮಣ್ಣು ತುಂಬುವ ಕೆಲಸ ಮುಂದುವರೆಯಿತು. ಕಪ್ಪಗೆ ಮಿರಿಮಿರಿ ಮಿಂಚುವ ಕಾಡುಕೋಣದ ಮೈ ಬಣ್ಣ ಕೆಂಪಗಾಗಿತ್ತು. ಆದರೂ ಜೀವ ಉಳಿಯುವುದರ ಮುಂದೆ ಮಣ್ಣೇನು ಧೂಳೇನು, ಕೆಸರೇನು? ಅಲ್ಲವೆ?. ಮತ್ತಷ್ಟು ಮಣ್ಣು ತುಂಬಲಾಯಿತು.

ಈ ಬಾರಿ ಕಾಡು ಕೋಣ ಮೇಲೇರುವ ಯತ್ನ ವಿಫಲವಾಗಲಿಲ್ಲ (ಫೋಟೋ 7). ಸರಸರನೆ ಮೇಲೆ ಹತ್ತಿತು. ಅಲ್ಲಿಯ ತನಕ ಕುತೂಹಲದಿಂದ ನೋಡುತ್ತಿದ್ದ ಜನರು ಕೋಣ ಮೇಲೇರಿಬರುತ್ತಿದ್ದಂತೆ ಜೀವಭಯದಿಂದ ಹೋ.... ಹೋ.... ಎಂದು ಕೂಗುತ್ತಾ ದಿಕ್ಕಾಪಾಲಾಗಿ ಓಡತೊಡಗಿದರು. ಇನ್ನು ಕೆಲವರು ಮರವೇರಿ ನಿಂತರು.

ಆದರೆ ಕಾಡುಕೋಣಕ್ಕೆ ಜನರೆಲ್ಲಾ ಸೇರಿದ್ದು ತನ್ನ ಜೀವವ ಉಳಿಸಲು ಎಂದು ಅರ್ಥವಾಗಿರಬೇಕು. ಮೇಲೆ ಹತ್ತಿ ನಿಂತು ಒಂದು ದೈನ್ಯತಾಭಾವದಿಂದ ಎಲ್ಲರನ್ನೂ ಒಮ್ಮೆ ನೋಡಿ ಶರವೇಗದಲ್ಲಿ ಕಾಡಿನೊಳಗೆ ಬದುಕಿದೆಯಾ ಬಡಜೀವವೇ ಎನ್ನುತ್ತಾ ಮಾಯವಾಯಿತು. ದೈತ್ಯ ಶಕ್ತಿ ಅಸಹಾಯಕ ಪರಿಸ್ಥಿತಿಯಲ್ಲಿ ಯಾವ ಸ್ಥಿತಿ ತಲುಪುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು.

ಓಡಿಹೋಗಿ ಕಾಡಿನ ಗರ್ಭ ಸೇರಿಕೊಂಡ ಕೋಣ ಈ ಹೊತ್ತಿಗೆ ಯಾವುದೋ ಒಂದು ಕೊಳದಲ್ಲಿ ಸ್ನಾನ ಮಾಡಿರಬೇಕು. ಮನಸೋ ಇಚ್ಛೆ ಹಸುರು ಉಂಡು, ಮರದ ಕೆಳಗೆ ಮಲಗಿಕೊಂಡು ಕಳೆದು ಹೋದ ಘಟನೆಗಳನ್ನು ಮೆಲಕುಹಾಕುತ್ತಾ ಇರಬಹುದು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A bison falls into an open well in Talavata, a remote village in Sagara, Shimoga district, Karnataka. Villagers employ indigenous methods to save bison. Did they save the beast? Check out for the tell- tale photo feature by raghavendra sharma in talavata.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more