• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ ರ ವೇದಿಕೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಸಾರ್ಥಕ

By Staff
|

ಕ ರ ವೇದಿಕೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಸಾರ್ಥಕ
ಕರ್ನಾಟಕ ರಕ್ಷಣಾ ವೇದಿಕೆಯ ಈ ಸಮಾರಂಭಕ್ಕೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕನ್ನಡ ಸೋದರರು, ಗಡಿ ಪ್ರದೇಶದ ಬಳ್ಳಾರಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ನಾಡು - ನುಡಿಯ ರಕ್ಷಣೆಯೆಡೆಗಿನ ತನ್ನ ಬದ್ಧತೆ, ಸಾಮರ್ಥ್ಯಗಳನ್ನು ಈ ಸಮಾವೇಶದ ಮೂಲಕ ಮತ್ತೊಮ್ಮೆ ಪ್ರಕಟಿಸಿತು. ಕನ್ನಡಿಗರು ಸಂಘಟಿತರಾದರೆ ನಮ್ಮ ನಾಡನ್ನು ಸ್ವರ್ಗ ಸದೃಶಗೊಳಿಸುವುದು ಸಾಧ್ಯವೆಂಬ ನಂಬಿಕೆ ಕನ್ನಡಿಗರ ಮನೆ ಮನಗಳಲ್ಲಿ ಹುಟ್ಟು ಹಾಕಿತು.

ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿಯಲ್ಲಿ ಇದೇ ಆಗಸ್ಟ್‌ ತಿಂಗಳ 19 ಮತ್ತು 20ರಂದು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಐದನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶವು ಅಭೂತಪೂರ್ವವಾಗಿತ್ತು. ಬಳ್ಳಾರಿಯ ಇತಿಹಾಸದಲ್ಲೇ ಕಂಡು ಕೇಳರಿಯದ ಬೃಹತ್‌ ಸಮಾರಂಭ ಇದಾಗಿತ್ತು. ನಾಡಿನ ಮೂಲೆಮೂಲೆಗಳ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚುತ್ತಾ, ಕನ್ನಡ - ಕನ್ನಡಿಗ - ಕರ್ನಾಟಕದ ಏಳಿಗೆಯ ಸಂಕಲ್ಪದ ಕಂಕಣ ಕಟ್ಟುತ್ತಾ ಕನ್ನಡಿಗನಲ್ಲಿ ಹೊಸ ಹುರುಪು ತುಂಬುತ್ತಿರುವ ರಕ್ಷಣಾ ವೇದಿಕೆ ಈ ಸಮಾವೇಶಕ್ಕೆ ಬಳ್ಳಾರಿಯನ್ನೇ ಆಯ್ದುಕೊಂಡಿತ್ತಾದರೋ ಏಕೆ?

ಬಳ್ಳಾರಿ ಜಿಲ್ಲೆ - ಕನ್ನಡಿಗನ ಸಾರ್ವಕಾಲಿಕ ಉತ್ಕೃಷ್ಟತೆಯ ಪ್ರತೀಕವಾದ, ಇಡಿಯ ದಕ್ಷಿಣ ಭಾರತವನ್ನು ಪರಕೀಯರ ದಾಳಿಯಿಂದ ಮೂರು ದಶಕಗಳ ಕಾಲ ಸಂರಕ್ಷಿಸಿದ, ರಾಷ್ಟ್ರೀಯತೆಯ ಉಜ್ವಲ ದೀಪ ಬೆಳಗಿದ ಅನೇಕ ಸಾಹಸಿ ಸಾಮ್ರಾಜ್ಯ ಮತ್ತು ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆಯಾದ, ಧಾರ್ಮಿಕ-ಅಧ್ಯಾತ್ಮಿಕ-ಸೈನಿಕ- ತಂತ್ರಜ್ಞಾನಗಳ ಉನ್ನತ ಸಾಧನೆಯ ತಾಣವಾದ, ರಾಜಾಧಿರಾಜ ಶ್ರೀ ಕೃಷ್ಣದೇವರಾಯನಂತಹ ಧೀರೋದಾತ್ತ ದೊರೆಗಳ ಬೀಡಾದ ವಿಜಯನಗರ ಸಾಮ್ರಾಜ್ಯದ ಮತ್ತು ಅದಕ್ಕೆಲ್ಲ ಸಾಕ್ಷಿಯಾಗಿ ನಿಂತಿರುವ ಹಂಪಿಯ ತವರು. ಕರ್ನಾಟಕದ ಏಕೀಕರಣವಾಗುವುದಕ್ಕೂ ಮೊದಲಿನಿಂದಲೂ ನೆರೆಯ ಆಂಧ್ರದ ಕೈವಶವಾಗುವ ಭೀತಿಯಲ್ಲೇ ಇದ್ದು, ಕನ್ನಡದ ಸಾರ್ವಭೌಮತ್ವಕ್ಕೆ ಕುಂದುಂಟಾಗುವಂತಹ ಘಟನಾವಳಿಗಳಿಗೆ ಮೂಕಸಾಕ್ಷಿಯಾಗಿ ನಿಂತ ಬಳ್ಳಾರಿಯ ಕನ್ನಡಿಗರಲ್ಲಿ ಸ್ವಾಭಿಮಾನದ ಜಾಗೃತಿ, ಇಡಿಯ ನಾಡು ನಿಮ್ಮೊಂದಿಗಿದೆ ಎನ್ನುವ ಭರವಸೆ ನೀಡುತ್ತಾ ಅದೇ ಸಮಯದಲ್ಲಿ ಕನ್ನಡ ದ್ರೋಹಿ ಕೆಲಸಗಳಲ್ಲಿ ತೊಡಗುವ ವಿಚ್ಚಿದ್ರಕಾರಿಗಳಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಈ ಸಮಾವೇಶ ಅತ್ಯಂತ ಅರ್ಥಪೂರ್ಣವಾಗಿಯೂ ಪರಿಣಾಮಕಾರಿಯೂ ಆಗಿತ್ತು.

ಬಳ್ಳಾರಿಯ ನಾಡದೇವತೆ ಕನಕ ದುರ್ಗಮ್ಮನ ಗುಡಿಯ ಪ್ರಾಂಗಣದಿಂದ ಬೆಳಗ್ಗೆ 11:00ಗಂಟೆಗೆ ಕನ್ನಡಿಗರ ಸ್ವಾಭಿಮಾನಿ ಜಾಥ ಆರಂಭವಾಯಿತು. ಬಳ್ಳಾರಿಯ ಲೋಕಸಭಾ ಸದಸ್ಯರಾದ ಕರುಣಾಕರ ರೆಡ್ಡಿಯವರು ಈ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. ಇಡಿಯ ಊರಿನ ತುಂಬ ಕೆಂಪು, ಹಳದಿ ಬಾವುಟಗಳ ತೋರಣ ಕಂಗೊಳಿಸುತ್ತಿತ್ತು. ನಾಡಿನ ನಾನಾ ಪ್ರಕಾರದ ಜಾನಪದ ನೃತ್ಯಗಳು ಜಾಥಾಕ್ಕೆ ಮೆರುಗು ತಂದವು. ಸುಮಾರು ಮೂರು ತಾಸುಗಳ ಸಮಯ, ಸಾವಿರಾರು ಕನ್ನಡಿಗರು ಸಾಗಿದ ಜಾಥಾ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಿತ್ತು. ಕನ್ನಡ ಪರ ಘೋಷಣೆಗಳು ಬಳ್ಳಾರಿಯ ಬೀದಿ ಬೀದಿಗಳಲ್ಲಿ ಮೊಳಗಿದವು. ಕನ್ನಡ ಕಣ್ಮಣಿ ಡಾ.ರಾಜ್‌ಕುಮಾರ್‌ ಹೆಸರಿನ ವೇದಿಕೆಗೆ ಹಂಪೆಯ ವಿರೂಪಾಕ್ಷ ದೇಗುಲದ ಮಾದರಿಯ ದ್ವಾರ ಸ್ವಾಗತ ಕೋರುತ್ತಿತ್ತು.

ಬೆಳಗಿನ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ಪ್ರಾಸ್ತಾವಿಕ ಭಾಷಣ ಮಾಡಿದರು. ತಮ್ಮ ಕಂಚಿನ ಕಂಠದ, ಸ್ಫೂರ್ತಿದಾಯಕವಾದ ನುಡಿಗಳಲ್ಲಿ ಪರಭಾಷಿಕರು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯಲೇಬೇಕೆಂದು ಆಗ್ರಹಿಸಿದರು. ನಾಡು ನುಡಿಯ ರಕ್ಷಣೆ ಮಾಡುವಲ್ಲಿ ಹಿಂದೇಟು ಹಾಕುವ ಜನಪ್ರತಿನಿಧಿಗಳಿಗೆ ನೇರ ಎಚ್ಚರಿಕೆ ನೀಡಿದ ಗೌಡರು ಕನ್ನಡಿಗರ ಸೌಮ್ಯ ಸ್ವಭಾವದ ದುರುಪಯೋಗಕ್ಕೆ ಯತ್ನಿಸಿದರೆ ತಕ್ಕ ಶಾಸ್ತಿಯಾದೀತೆಂದು ಗುಡುಗಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಲಿಂಗಯ್ಯನವರು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುತ್ತಾ ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸಿದರು. ಬಳ್ಳಾರಿ ಜಿಲ್ಲೆಯ ಅನೇಕ ಹಿರಿಯರನ್ನು, ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಲಸಿಗರು ಮುಖ್ಯವಾಹಿನಿಯಲ್ಲಿ ಬೆರೆಯಲೇಬೇಕೆಂದು ಕರುಣಾಕರರೆಡ್ಡಿ ನುಡಿದರು. ಇದೇ ಸಂದರ್ಭದಲ್ಲಿ ಸೊಂಡೂರು ವಿರಕ್ತ ಮಠದ ಸ್ವಾಮಿಗಳು ಸ್ಫೂರ್ತಿಕಿಡಿಗಳ ಮೂಲಕ ನುಡಿ ಆಶೀರ್ವಚನ ನೀಡಿದರು. ಅಮೆರಿಕದ ಅಕ್ಕ ಕನ್ನಡ ಕೂಟದ ಪ್ರಮುಖರಾದ ಅಮರನಾಥಗೌಡರನ್ನೂ ಈ ಸಂದರ್ಭದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.

ಮಧ್ಯಾಹ್ನ ಆಯೋಜಿಸಲಾಗಿದ್ದ ವಿಚಾರ ಸಂಕಿರಣ, ಸಭಿಕರಲ್ಲಿ ಚಿಂತನೆಯ ಹೊಸ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಯಿತು. ಸವಿಗನ್ನಡ ಬಳಗದ ರಾಜ್‌ಕುಮಾರ್‌ರವರು ಹಿಂದಿ ಹೇರಿಕೆಯ ನಾನಾ ರೂಪಗಳು, ವಿಧಾನಗಳ ಬಗ್ಗೆ, ಕೇಂದ್ರ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಒಂದು ಭಾಷೆಯ ಪರವಾಗಿ ತೋರುತ್ತಿರುವ ಪಕ್ಷಪಾತಿ ಧೋರಣೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಶಾಲಾ ಹಂತದಿಂದಲೇ ವ್ಯವಸ್ಥಿತವಾಗಿ ಹಿಂದಿ ಹೇರುತ್ತಿರುವ ಬಗೆಯನ್ನು ಗುರುತಿಸಿ, ಈ ದುರಾಚಾರವನ್ನು ವಿರೋಧಿಸದಿದ್ದರೆ ಕನ್ನಡ ಹೇಗೆ ಸರ್ವನಾಶವಾಗುತ್ತದೆಯೆಂದು ಮನಮುಟ್ಟುವಂತೆ ವಿವರಿಸಿದರು. ನಾಡಿನ ಜನಪದ, ಸಂಸ್ಕೃತಿಯ ಉಳಿವಿನಲ್ಲಿ ಮಹಿಳೆಯ ಪಾತ್ರದ ಬಗ್ಗೆ ಪ್ರತಿಭಾ ನಂದಕುಮಾರ್‌, ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನ ವಿಳಂಬಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಬಗ್ಗೆ ಮೃತ್ಯುಂಜಯ ರುಮಾಲೆಯವರು, ರಾಜ್ಯದ ಅಖಂಡತೆಯನ್ನು ಪ್ರಶ್ನಿಸುತ್ತಿರುವ ಗಡಿ ಸಮಸ್ಯೆಗಳ ಕುರಿತು ಕುಂ.ವೀರಭದ್ರಪ್ಪನವರು, ಜಾಗತೀಕರಣದ ಹಿನ್ನಲೆಯಲ್ಲಿ ರೈತ - ಕನ್ನಡ ಕಾರ್ಮಿಕನ ಉಳಿವಿನ ಬಗ್ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ರವರು ಸಭಿಕರ ಮನ ಮುಟ್ಟುವಂತೆ ವಿಷಯ ಮಂಡನೆ ಮಾಡಿದರು.

ಸಂಜೆಯ ಸಮಾರೋಪ ಸಮಾರಂಭಕ್ಕೆ ಸಚಿವರಾದ ಶ್ರೀರಾಮುಲು, ಶಾಸಕರುಗಳಾದ ಜನಾರ್ದನರೆಡ್ಡಿ, ಶ್ರೀ ಕೆ.ಎಸ್‌.ಎಲ್‌ ಸ್ವಾಮಿ ಮೊದಲಾದ ಗಣ್ಯರು ಆಗಮಿಸಿದ್ದರು. ಜೀವಮಾನದ ಕನ್ನಡ ಸಾಧನೆಗಾಗಿ ಹಿರಿಯರಾದ, ಬೆಳಗಾವಿ ನಗರ ಪಾಲಿಕೆಯ ಮೊದಲ ಕನ್ನಡ ಮೇಯರ್‌ ಆಗಿದ್ದಂತಹ ಸಿದ್ಧನಗೌಡ.ಚ.ಪಾಟೀಲರನ್ನು ಸ್ವಾಭಿಮಾನಿ ಕನ್ನಡಿಗ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪಾಟೀಲರು ಮತ್ತೊಮ್ಮೆ ಕನ್ನಡದ ಮೇಯರ್‌ಗಳು ಬೆಳಗಾವಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ನೋಡಬೇಕೆನ್ನುವುದೇ ತಮ್ಮ ಜೀವಮಾನದ ಆಶಯ ಎಂದು ನುಡಿದು ನಾಡಿನ ಸಮಸ್ತ ಕನ್ನಡಿಗರ ಜವಾಬ್ದಾರಿಯನ್ನು ನೆನಪು ಮಾಡಿಕೊಟ್ಟರು.

ಕರ್ನಾಟಕ ರಕ್ಷಣಾ ವೇದಿಕೆಯ ಈ ಸಮಾರಂಭಕ್ಕೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕನ್ನಡ ಸೋದರರು, ಗಡಿ ಪ್ರದೇಶದ ಬಳ್ಳಾರಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ನಾಡು - ನುಡಿಯ ರಕ್ಷಣೆಯೆಡೆಗಿನ ತನ್ನ ಬದ್ಧತೆ, ಸಾಮರ್ಥ್ಯಗಳನ್ನು ಈ ಸಮಾವೇಶದ ಮೂಲಕ ಮತ್ತೊಮ್ಮೆ ಪ್ರಕಟಿಸಿತು. ಕನ್ನಡಿಗರು ಸಂಘಟಿತರಾದರೆ ನಮ್ಮ ನಾಡನ್ನು ಸ್ವರ್ಗ ಸದೃಶಗೊಳಿಸುವುದು ಸಾಧ್ಯವೆಂಬ ನಂಬಿಕೆ ಕನ್ನಡಿಗರ ಮನೆ ಮನಗಳಲ್ಲಿ ಹುಟ್ಟು ಹಾಕಿತು.

(ದಟ್ಸ್‌ ಕನ್ನಡ ವಾರ್ತೆ)


ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more